AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Closing Bell: ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 427 ಪಾಯಿಂಟ್ಸ್, ನಿಫ್ಟಿ 143 ಪಾಯಿಂಟ್ಸ್ ಏರಿಕೆ; ಹಿಂಡಾಲ್ಕೋ ಪ್ರತಿ ಷೇರಿಗೆ 20 ರೂ. ಗಳಿಕೆ

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಜುಲೈ 7ನೇ ತಾರೀಕಿನ ಗುರುವಾರದಂದು ಏರಿಕೆ ದಾಖಲಿಸಿವೆ. ಪ್ರಮುಖವಾಗಿ ಏರಿಕೆ, ಇಳಿಕೆ ದಾಖಲಿಸಿದ ಷೇರುಗಳ ವಿವರ ಇಲ್ಲಿದೆ.

Closing Bell: ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 427 ಪಾಯಿಂಟ್ಸ್, ನಿಫ್ಟಿ 143 ಪಾಯಿಂಟ್ಸ್ ಏರಿಕೆ; ಹಿಂಡಾಲ್ಕೋ ಪ್ರತಿ ಷೇರಿಗೆ 20 ರೂ. ಗಳಿಕೆ
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on: Jul 07, 2022 | 7:07 PM

Share

ಸತತವಾಗಿ ಎರಡನೇ ದಿನ ಕೂಡ ಭಾರತದ ಷೇರು ಮಾರುಕಟ್ಟೆ (Stock Market) ಸೂಚ್ಯಂಕಗಳು ಏರಿಕೆಯಲ್ಲಿ ಮುಕ್ತಾಯ ಕಂಡಿವೆ. ಜುಲೈ 7ನೇ ತಾರೀಕಿನ ಗುರುವಾರದಂದು ನಿಫ್ಟಿ- 50 ಸೂಚ್ಯಂಕವು 16,000 ಪಾಯಿಂಟ್ಸ್​ಗಿಂತ ಮೇಲೆ ವ್ಯವಹಾರ ಮುಗಿಸಿತು. ನಿಫ್ಟಿ ಮಿಡ್​ಕ್ಯಾಪ್ 100, ಸ್ಮಾಲ್​ಕ್ಯಾಪ್ 100 ಸೂಚ್ಯಂಕಗಳು ಸಹ ತಲಾ ಶೇ 1.3ಕ್ಕಿಂತ ಜಾಸ್ತಿ ಮೇಲೇರಿದವು. ಎನ್​ಎಸ್​ಇಯಲ್ಲಿ ಪ್ರತಿ ಒಂದು ಕಂಪೆನಿ ಇಳಿಕೆ ದಾಖಲಿಸಿದರೆ, ಮೂರು ಕಂಪೆನಿ ಷೇರು ಏರಿಕೆ ಕಂಡಿತು. ದಿನದ ಕೊನೆಗೆ ಬಿಎಸ್​ಇ ಸೆನ್ಸೆಕ್ಸ್ 427 ಪಾಯಿಂಟ್ಸ್​ ಹೆಚ್ಚಳವಾಗಿ, 54,178 ಪಾಯಿಂಟ್ಸ್​ನಲ್ಲಿ ಮುಕ್ತಾಯ ಕಂಡಿದ್ದರೆ, ನಿಫ್ಟಿ – 50 ಸೂಚ್ಯಂಕವು 143 ಪಾಯಿಂಟ್ಸ್​ಗೂ ಹೆಚ್ಚು ಮೇಲೇರಿ, 16,133 ಪಾಯಿಂಟ್ಸ್​ನಲ್ಲಿ ವಹಿವಾಟು ಚುಕ್ತಾ ಮಾಡಿದೆ. ಗುರುವಾರದಂದು ಷೇರು ಮಾರುಕಟ್ಟೆ ಸೂಚ್ಯಂಕಗಳ ಏರಿಕೆಗೆ ಕಾರಣವಾದ ಅಂಶಗಳ ಬಗ್ಗೆ ವಿವರಣೆ ಇಲ್ಲಿದೆ.

– ತೈಲ ಬೆಲೆಯಲ್ಲಿನ ತೀಕ್ಷ್ಣ ಇಳಿಕೆಯು ಇಂದಿನ ಷೇರುಪೇಟೆ ಏರಿಕೆಯ ಹಿಂದಿನ ಪ್ರಮುಖ ಕಾರಣವಾಗಿತ್ತು. ಏಕೆಂದರೆ, ದೇಶದ ಒಟ್ಟು ಅಗತ್ಯದ ಶೇ 80- 85ರಷ್ಟು ತೈಲವನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಇದೇ ಕಾರಣಕ್ಕೆ ಹಣಕಾಸು ವರ್ಷ 2023ಕ್ಕೆ ಈ ಹಿಂದೆ ಆರ್​ಬಿಐ ಅಂದಾಜಿಸಿದ್ದ ಶೇ 5.7ರ ಹಣದುಬ್ಬರದಿಂದ ಶೇ 6.7ಕ್ಕೆ ಹೆಚ್ಚಿಸಿತು. ಈ ಲೇಖನ ಸಿದ್ಧವಾಗುವ ಹೊತ್ತಿಗೆ ಬ್ಯಾರೆಲ್ ತೈಲದ ಬೆಲೆ 100.77 ಡಾಲರ್ ಇತ್ತು. ಇನ್ನು ಡಬ್ಲುಟಿಐ ಕಚ್ಚಾ ಫ್ಯೂಚರ್ ಈಗಾಗಲೇ 100 ಯುಎಸ್​ಡಿಗಿಂತ ಕೆಳಗೆ ವಹಿವಾಟು ಮಾಡುತ್ತಿದೆ.

– ಜಾಗತಿಕವಾಗಿ ಮಾರುಕಟ್ಟೆಗಳಿಂದ ಭಾರತದ ದೇಶೀ ಮಾರುಕಟ್ಟೆಗೆ ಬೆಂಬಲ ದೊರೆಯಿತು. ದಕ್ಷಿಣ ಕೊರಿಯಾ, ಜಪಾನ್, ಚೀನಾ, ಹಾಂಕಾಂಗ್, ಅಷ್ಟೇ ಏಕೆ ಚೀನಾ ಮಾರುಕಟ್ಟೆ ಸಹ ಗಳಿಕೆ ದಾಖಲಿಸಿದವು. ಈ ಲೇಖನ ಸಿದ್ಧವಾಗುವ ಹೊತ್ತಿಗೆ ಫ್ರಾನ್ಸ್, ಬ್ರಿಟನ್, ಜರ್ಮನಿ ಮಾರುಕಟ್ಟೆಗಳು ಏರಿಕೆ ಕಂಡಿದ್ದವು.

– ಹಣದುಬ್ಬರ ನಿಯಂತ್ರಿಸುವ ಉದ್ದೇಶದಿಂದ ಅಮೆರಿಕ ಕೇಂದ್ರ ಬ್ಯಾಂಕ್​ 50ರಿಂದ 75 ಬಿಪಿಎಸ್ ದರ ಏರಿಕೆ ಮಾಡಬಹುದು. ಇದು ಈಗಾಗಲೇ ಜಾಗತಿಕ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ ಎನ್ನುತ್ತಾರೆ ತಜ್ಞರು. ಫೆಡ್ ಅಧಿಕಾರಿಗಳು ಹೇಳಿರುವಂತೆ, ಜುಲೈ ಸಭೆಯಲ್ಲಿ 50 ಅಥವಾ 75 ಬೇಸಿಸ್​ ಪಾಯಿಂಟ್ಸ್ ಹೆಚ್ಚಳ ಆಗುವ ಸಾಧ್ಯತೆ ಇದೆ.

– ದೇಶದೊಳಗೆ ವಿದೇಶೀ ಹಣದ ಹರಿವು ಹೆಚ್ಚಿಸಲು ಮತ್ತು ರೂಪಾಯಿ ಮೌಲ್ಯಕ್ಕೆ ಬಲ ತುಂಬಲು ಬುಧವಾರದಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಲವು ಕ್ರಮಗಳನ್ನು ಘೋಷಣೆ ಮಾಡಿದೆ.

– ಎಲ್ಲ ವಲಯಗಳು ಸಹ ಇಂದಿನ ಏರಿಕೆಯಲ್ಲಿ ಪಾಲ್ಗೊಂಡವು. ಲೋಹದ ಸೂಚ್ಯಂಕವು ಅತಿ ಹೆಚ್ಚು ಶೇ 3.8ರಷ್ಟು ಮೇಲೇರಿತು.

– ಅಂತಿಮವಾಗಿ, ವೊಲಟಾಲಿಟಿ (ಏರಿಳಿತ) 20ರ ಗುರುತಿನಿಂದ ಕೆಳಗೆ ಇಳಿದು ಬಂತು. ಇದರಿಂದಾಗಿ “ಗೂಳಿ” (Bulls)ಗಳಿಗೆ ಆರಾಮವಾದಂತೆ ಆಗುತ್ತದೆ.

ನಿಫ್ಟಿಯಲ್ಲಿ ಏರಿಕೆ ಕಂಡ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ

ಹಿಂಡಾಲ್ಕೋ ಶೇ 6.07

ಟೈಟನ್ ಕಂಪೆನಿ ಶೇ 5.66

ಟಾಟಾ ಸ್ಟೀಲ್ ಶೇ 4.88

ಜೆಎಸ್​ಡಬ್ಲ್ಯೂ ಸ್ಟೀಲ್ ಶೇ 3.62

ಲಾರ್ಸನ್ ಶೇ 3.53

ನಿಫ್ಟಿಯಲ್ಲಿ ಇಳಿಕೆ ಕಂಡ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ

ಡಾ.ರೆಡ್ಡೀಸ್ ಲ್ಯಾಬ್ಸ್ ಶೇ -1.22

ಸಿಪ್ಲಾ ಶೇ -1.09

ಭಾರ್ತಿ ಏರ್​ಟೆಲ್ ಶೇ -1.03

ಎಚ್​ಯುಎಲ್ ಶೇ -1.02

ನೆಸ್ಟ್ಲೆ ಶೇ -1.00