ಕೊರೊನಾ ಪ್ರಕರಣಗಳನ್ನು ನಿಯಂತ್ರಿಸಲು ತೆಗೆದುಕೊಂಡ ಕ್ರಮಗಳು ಹಾಗೂ ಲಸಿಕೆ ಹಾಕುವುದಕ್ಕೆ ವೇಗ ನೀಡಿರುವುದರಿಂದ ಜಾಗತಿಕ ಬೆಂಬಲ ಸಿಕ್ಕಿದ್ದರಿಂದಾಗಿ ಕಳೆದ ಮೂರು ದಿನದಲ್ಲಿ ಹೂಡಿಕೆದಾರರ ಸಂಪತ್ತು 6.39 ಲಕ್ಷ ಕೋಟಿ ರೂಪಾಯಿ ಹೆಚ್ಚಳವಾಗಿದೆ. ಕಳೆದ ಮೂರು ದಿನದಲ್ಲಿ ಬೆಂಚ್ಮಾರ್ಕ್ ಸೂಚ್ಯಂಕ ಸೆನ್ಸೆಕ್ಸ್ 1855.39 ಪಾಯಿಂಟ್ಸ್ ಅಥವಾ ಶೇ 3.88 ಹೆಚ್ಚಳವಾಗಿ 49,733.84 ಪಾಯಿಂಟ್ನೊಂದಿಗೆ ವಹಿವಾಟು ಮುಗಿದಿದೆ. ಇನ್ನು ನಿಫ್ಟಿ 532.2 ಪಾಯಿಂಟ್ಸ್ ಅಥವಾ ಶೇ 3.65ರಷ್ಟು ಮೇಲೇರಿ 14,864.55 ಪಾಯಿಂಟ್ಸ್ನೊಂದಿಗೆ ವ್ಯವಹಾರವನ್ನು ಚುಕ್ತಾ ಮಾಡಿದೆ. ಈ ಏರಿಕೆ ಕಾರಣಕ್ಕೆ ಮೂರು ದಿನಗಳಲ್ಲಿ ಬಿಎಸ್ಇ- ಲಿಸ್ಟೆಡ್ ಕಂಪೆನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯವು 6.39 ಲಕ್ಷ ಕೋಟಿ ರೂಪಾಯಿ ಏರಿಕೆಯಾಗಿ, 208.76 ಲಕ್ಷ ಕೋಟಿ ರೂಪಾಯಿಯನ್ನು ಮುಟ್ಟಿದೆ.
“ಸತತ ಮೂರು ಸೆಷನ್ಗಳ ಏರಿಕೆಯಿಂದಾಗಿ ಮಾರುಕಟ್ಟೆಯು ಗಳಿಕೆ ವಿಸ್ತರಿಸಿಕೊಂಡಿದೆ. ಇದು ಕಂಪೆನಿಗಳ ಆದಾಯಗಳ ಫಲಿತಾಂಶ ಘೋಷಣೆ ಋತುವಾದ್ದರಿಂದ ಅದರ ಬೆಂಬಲ ಸಿಕ್ಕಿದೆ. ಜಾಗತಿಕ ಮಾರ್ಕೆಟ್ಗಳು ಎಚ್ಚರಿಕೆ ಹೆಜ್ಜೆಯ ಹೊರತಾಗಿ ಫೆಡರಲ್ ಓಪನ್ ಮಾರ್ಕೆಟ್ ಕಮಿಟಿ (FOMC)ಸಭೆಯ ಪೂರ್ವಭಾವಿಯಾಗಿ ಬೆಂಚ್ಮಾರ್ಕ್ ಸೂಚ್ಯಂಕ ಏರಿಕೆಯೊಂದಿಗೆ ದಿನದ ಆರಂಭ ಮಾಡಿದೆ ಮತ್ತು ಅದೇ ಹೆಚ್ಚಳ ಮುಂದುವರಿದಿದೆ. ಗುರುವಾರದಂದು ಮೊದಲಿಗೆ ಮಾರುಕಟ್ಟೆಯು FOMC ಸಭೆಗೆ ಪ್ರತಿಕ್ರಿಯಿಸಲಿದೆ. ಆ ನಂತರ ತಿಂಗಳ ಡೆರಿವೇಟಿವ್ಸ್ ಎಕ್ಸ್ಪೈರಿ (ಅವಧಿ ಮುಕ್ತಾಯ) ಮತ್ತು ಗಳಿಕೆಗೆ ಪ್ರತಿಕ್ರಿಯಿಸಲು ಬದಲಾಗಲಿದೆ,” ಎಂದು ರೆಲಿಗೇರ್ ಬ್ರೋಕಿಂಗ್ ಲಿ. ಹೇಳಿದೆ.
ಸೆನ್ಸೆಕ್ಸ್ನಲ್ಲಿ ಬಜಾಜ್ ಫೈನಾನ್ಸ್ ಪ್ರಮುಖ ಗೇಯ್ನರ್ ಆಗಿತ್ತು. ಶೇ 8.32ರಷ್ಟು ಏರಿಕೆ ಕಂಡಿತು. ಇಂಡಸ್ ಇಂಡ್ ಬ್ಯಾಂಕ್ ಶೇ 5.08, ಬಜಾಜ್ ಫಿನ್ಸರ್ವ್ (ಶೇ 4.03), ಐಸಿಐಸಿಐ ಬ್ಯಾಂಕ್ (ಶೇ 3.72) ಹಾಗೂ ಕೊಟಕ್ ಮಹೀಂದ್ರಾ ಬ್ಯಾಂಕ್ (ಶೇ 3.52) ಕಂಪೆನಿ ಷೇರುಗಳು ಏರಿಕೆ ಕಂಡವು. ಮತ್ತೊಂದು ಕಡೆ ನೆಸ್ಟ್ಲೆ ಇಂಡಿಯಾ, ಎಚ್ಸಿಎಲ್ ಟೆಕ್, ಲಾರ್ಸನ್ ಅಂಡ್ ಟೂಬ್ರೋ, ಟಿಸಿಎಸ್, ಡಾ ರೆಡ್ಡೀಸ್ ಮತ್ತು ಐಟಿಸಿ ಇಳಿಕೆ ಕಂಡಿವೆ. ಬಿಎಸ್ಇ ಮಿಡ್ಕ್ಯಾಪ್ ಮತ್ತು ಸ್ಮಾಲ್ಕ್ಯಾಪ್ ಕ್ರಮವಾಗಿ ಶೇ 0.99 ಮತ್ತು ಶೇ 0.71ರಷ್ಟು ಇಳಿಕೆಯಾಗಿವೆ.
ಇದನ್ನೂ ಓದಿ: ಷೇರು ಮಾರ್ಕೆಟ್ನಲ್ಲಿ ಹಣ ಮಾಡುವುದು ಹೇಗೆ ಎಂಬುದಕ್ಕೆ ಇಲ್ಲಿವೆ 10 ಸಿಂಪಲ್ ಟಿಪ್ಸ್
(Indian stock market investors wealth increased by Rs 6.39 lakh crore in 3 days)