EPFO – ESIC Merge: ಸಣ್ಣ ಕಂಪನಿಗಳಿಗೆ ಒಂದೇ ಕಂತಿನಲ್ಲಿ ಪಿಎಫ್​, ಇಎಸ್​ಐ ಪಾವತಿ ಅವಕಾಶ; ಕೇಂದ್ರ ಚಿಂತನೆ

| Updated By: Ganapathi Sharma

Updated on: Nov 29, 2022 | 3:45 PM

10 ಮಂದಿ ಉದ್ಯೋಗಿಗಳಿರುವ ಕಂಪನಿಗಳನ್ನೂ ಇಪಿಎಫ್​ಒ ವ್ಯಾಪ್ತಿಯಡಿ ತರಲೂ ಸರ್ಕಾರ ಚಿಂತನೆ ನಡೆಸಿದೆ. ಈ ಪ್ರಸ್ತಾವನೆಗೆ ತಜ್ಞರ ಸಮಿತಿ ಅನುಮೋದನೆ ನೀಡುವ ನಿರೀಕ್ಷೆ ಇದೆ ಎನ್ನಲಾಗಿದೆ.

EPFO - ESIC Merge: ಸಣ್ಣ ಕಂಪನಿಗಳಿಗೆ ಒಂದೇ ಕಂತಿನಲ್ಲಿ ಪಿಎಫ್​, ಇಎಸ್​ಐ ಪಾವತಿ ಅವಕಾಶ; ಕೇಂದ್ರ ಚಿಂತನೆ
ಸಾಂದರ್ಭಿಕ ಚಿತ್ರ
Follow us on

ನವದೆಹಲಿ: ಉದ್ಯೋಗಿಗಳ ಸಾಮಾಜಿಕ ಭದ್ರತೆ ಯೋಜನೆಯಡಿ (Social Security Payment) ಭವಿಷ್ಯ ನಿಧಿ (PF), ಪಿಂಚಣಿ (Pension) ಮತ್ತು ವಿಮೆಗೆ (Insurance) ಒಂದೇ ಕಂತಿನಲ್ಲಿ ಪಾವತಿಸಲು ಸಣ್ಣ ಕಂಪನಿಗಳಿಗೆ ಅವಕಾಶ ಮಾಡಿಕೊಡುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈ ಮೂಲಕ ಸಣ್ಣ ಕಂಪನಿಗಳ ಕೆಲಸವನ್ನು ಸುಲಭಗೊಳಿಸಲು ಮುಂದಾಗಿದೆ ಎಂದು ವರದಿಯಾಗಿದೆ. ಪ್ರಸ್ತುತ ಇಪಿಎಫ್​ಒ (EPFO) ಉದ್ಯೋಗಿಗಳ ರಾಜ್ಯ ವಿಮಾ ನಿಗಮಕ್ಕೆ (ESIC) ಕಂಪನಿಗಳು ಪ್ರತ್ಯೇಕ ಕಂತುಗಳಲ್ಲಿ ಪಾವತಿ ಮಾಡಬೇಕಿದೆ.

ಪ್ರಸ್ತಾವನೆಯ ಪ್ರಕಾರ, ವೇತನದ ಶೇಕಡಾ 10-12ರಷ್ಟನ್ನು ಒಂದೇ ಕಂತಿನಲ್ಲಿ ಪಿಎಫ್, ಇಎಸ್​ಐ, ಪಿಂಚಣಿ ಮತ್ತು ಇತರ ಸೌಲಭ್ಯಗಳಿಗೆ ಸಣ್ಣ ಕಂಪನಿಗಳು ಪಾವತಿ ಮಾಡಬೇಕು. 10ರಿಂದ 20 ಉದ್ಯೋಗಿಗಳನ್ನು ಹೊಂದಿರುವ ಕಂಪನಿಗಳು ಈ ನಿಯಮದಡಿ ಬರಲಿವೆ. ಈ ಪ್ರಸ್ತಾವನೆಗೆ ತಜ್ಞರ ಸಮಿತಿ ಅನುಮೋದನೆ ನೀಡುವ ನಿರೀಕ್ಷೆ ಇದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರ ಹೇಳಿಕೆ ಉಲ್ಲೇಖಿಸಿ ‘ಎಕಾನಮಿಕ್ ಟೈಮ್ಸ್’ ವರದಿ ಮಾಡಿದೆ.

ಇದನ್ನೂ ಓದಿ: EPFO Clarification: ವೇತನ ರಹಿತ ರಜೆಯಲ್ಲಿದ್ದಾಗ ಮೃತಪಟ್ಟರೂ ಡೆತ್ ಬೆನಿಫಿಟ್​ ಪಡೆಯಬಹುದು; ಇಪಿಎಫ್​ಒ

ಪ್ರಸ್ತಾವಿತ ನಿಯಮ ಅನುಷ್ಠಾನಗೊಳಿಸಿದರೆ ಉದ್ಯೋಗದಾತರು ಮತ್ತು ಉದ್ಯೋಗಿಗಳ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬ ಬಗ್ಗೆ ಇಪಿಎಫ್​ಒ ಮತ್ತು ಇಎಸ್​ಐಸಿ ಮಟ್ಟದಲ್ಲಿ ಬಂಡವಾಳಗಾರರೊಂದಿಗೆ ಮಾತುಕತೆ ನಡೆಯುತ್ತಿದೆ. ಕೊನೆಯಲ್ಲಿ ಏಕೀಕೃತ ದರ ನಿಗದಿಗೆ ತಜ್ಞರ ಸಮಿತಿಯನ್ನು ರಚಿಸಲಾಗುವುದು. ಬಳಿಕ ಕಾರ್ಮಿಕ ಇಲಾಖೆಯು ಅಧಿಸೂಚನೆ ಮೂಲಕ ಮಾಹಿತಿ ನೀಡಲಿದೆ ಎಂದು ವರದಿ ತಿಳಿಸಿದೆ.

ಹೊಸ ನಿಯಮ ರೂಪಿಸಲು ಅನುಮತಿ ಇದೆಯೇ?

ವಿವಿಧ ಸಾಮಾಜಿಕ ಭದ್ರತೆ ಯೋಜನೆಗಳಡಿ ವಿಸ್ತರಿತ ಸೇವೆಯನ್ನು ನೀಡುವುದಕ್ಕಾಗಿ ಸರ್ಕಾರವು ಅಸ್ತಿತ್ವದಲ್ಲಿರುವ ನಿಯಮಗಳಿಗೆ ತಿದ್ದುಪಡಿ ತರಲು ಅಥವಾ ಹೊಸ ನಿಯಮಗಳನ್ನು ಸೇರ್ಪಡೆಗೊಳಿಸಲು 2020ರ ‘ಸಾಮಾಜಿಕ ಭದ್ರತಾ ಕೋಡ್’ ಅಡಿ ಅವಕಾಶವಿದೆ. ಪ್ರಸ್ತುತ 10 ಹಾಗೂ ಅದಕ್ಕಿಂತ ಹೆಚ್ಚಿನ ಉದ್ಯೋಗಿಗಳನ್ನು ಹೊಂದಿರುವ ಕಂಪನಿಗಳು ಇಎಸ್​ಐಸಿ ಯೋಜನೆಯಡಿ ಉದ್ಯೋಗಿಗಳಿಗೆ ಆರೋಗ್ಯ ವಿಮೆ ಸೌಕರ್ಯ ಒದಗಿಸುತ್ತಿವೆ. 20 ಹಾಗೂ ಅದಕ್ಕಿಂತ ಹೆಚ್ಚಿನ ಉದ್ಯೋಗಿಗಳನ್ನು ಹೊಂದಿರುವ ಕಂಪನಿಗಳು ಇಪಿಎಫ್​ಒ ಮೂಲಕ ಪಿಎಫ್, ಪಿಂಚಣಿ ಹಾಗೂ ವಿಮೆ​ ಸೌಲಭ್ಯ ಒದಗಿಸುತ್ತಿವೆ.

10 ಮಂದಿ ಉದ್ಯೋಗಿಗಳಿರುವ ಕಂಪನಿಗಳನ್ನೂ ಇಪಿಎಫ್​ಒ ವ್ಯಾಪ್ತಿಯಡಿ ತರಲೂ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ. ಇಂಥ ಕಂಪನಿಗಳ ಉದ್ಯೋಗಿಗಳಿಗೆ ಇಎಸ್​ಐಸಿ ಅಡಿ ಕೆಲವು ಸೌಕರ್ಯಗಳು ಈಗಾಗಲೇ ದೊರೆಯುತ್ತಿವೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ