
ನವದೆಹಲಿ, ಫೆಬ್ರುವರಿ 17: ಈ ಹಣಕಾಸು ವರ್ಷದ (2024-25) ಮೊದಲ 10 ತಿಂಗಳಲ್ಲಿ ಭಾರತದಿಂದ ರಫ್ತಾದ ಸ್ಮಾರ್ಟ್ಫೋನ್ಗಳ ಮೌಲ್ಯ ಒಂದೂವರೆ ಲಕ್ಷ ಕೋಟಿ ರೂ ಗಡಿ ದಾಟಿದೆ. ವರದಿ ಪ್ರಕಾರ ಏಪ್ರಿಲ್ನಿಂದ ಜನವರಿವರೆಗಿನ ಅವಧಿಯಲ್ಲಿ 1.55 ಲಕ್ಷ ಕೋಟಿ ರೂ ಮೌಲ್ಯದ ಸ್ಮಾರ್ಟ್ಫೋನ್ಗಳು ರಫ್ತಾಗಿವೆ. ಜನವರಿ ತಿಂಗಳಲೊಂದರಲ್ಲೇ 25,000 ಕೋಟಿ ರೂ ಮೌಲ್ಯದ ಸ್ಮಾರ್ಟ್ಫೋನ್ ರಫ್ತಾಗಿದೆ. ಕಳೆದ ವರ್ಷದ (2024) ಜನವರಿಗೆ ಹೋಲಿಸಿದರೆ ಈ ಬಾರಿ ಸ್ಮಾರ್ಟ್ಫೋನ್ ರಫ್ತಿನಲ್ಲಿ ಶೇ. 140ರಷ್ಟು ಹೆಚ್ಚಳ ಆಗಿದೆ.
2023-24ರ ಹಣಕಾಸು ವರ್ಷದಲ್ಲಿ 1.31 ಲಕ್ಷ ಕೋಟಿ ರೂ ಮೊತ್ತದಷ್ಟು ಸ್ಮಾರ್ಟ್ಫೋನ್ಗಳು ಭಾರತದಿಂದ ರಫ್ತಾಗಿದ್ದವು. 2023ರ ಏಪ್ರಿಲ್ನಿಂದ 2024ರ ಜನವರಿವರೆಗಿನ 10 ತಿಂಗಳಲ್ಲಿ 99,120 ಕೋಟಿ ರೂ ಮೌಲ್ಯದ ಸ್ಮಾರ್ಟ್ಫೋನ್ಗಳು ಎಕ್ಸ್ಪೋರ್ಟ್ ಆಗಿದ್ದವು. ಇದಕ್ಕೆ ಹೋಲಿಸಿದರೆ ಈ ಹಣಕಾಸು ವರ್ಷದ 10 ತಿಂಗಳಲ್ಲಿ ಶೇ. 56ರಷ್ಟು ಹೆಚ್ಚು ರಫ್ತಾಗಿರುವುದು ಗಮನಾರ್ಹ. ಈ ಟ್ರೆಂಡ್ ಹೀಗೇ ಮುಂದುವರಿದರೆ ಈ ವರ್ಷದ ಸ್ಮಾರ್ಟ್ಫೋನ್ ರಫ್ತು 2 ಲಕ್ಷ ಕೋಟಿ ರೂ ಮೈಲಿಗಲ್ಲು ಮುಟ್ಟಿದರೂ ಅಚ್ಚರಿ ಇಲ್ಲ. ಆದರೆ ಸಚಿವ ಡಾ. ಎ ವೈಷ್ಣವ್ ಅಂದಾಜು ಪ್ರಕಾರ ಈ ಇಡೀ ಹಣಕಾಸು ವರ್ಷದಲ್ಲಿ ಸ್ಮಾರ್ಟ್ಫೋನ್ ರಫ್ತು 1.70 ಲಕ್ಷ ಕೋಟಿ ರೂ ಅಥವಾ 20 ಬಿಲಿಯನ್ ಡಾಲರ್ ಮಟ್ಟ ಮುಟ್ಟಬಹುದು.
ಇದನ್ನೂ ಓದಿ: ಜವಳಿ ಕ್ಷೇತ್ರಕ್ಕೆ 9 ಲಕ್ಷ ಕೋಟಿ ರೂ ರಫ್ತು ಟಾರ್ಗೆಟ್ ಇಟ್ಟ ಪಿಎಂ ಮೋದಿ
ಭಾರತದಿಂದ ರಫ್ತಾಗುತ್ತಿರುವ ಸ್ಮಾರ್ಟ್ಫೋನ್ಗಳಲ್ಲಿ ಹೆಚ್ಚಿನವು ಆ್ಯಪಲ್ ಕಂಪನಿಯ ಐಫೋನ್ಗಳೇ ಆಗಿದೆ. ಈ ಐಫೋನ್ ರಫ್ತಿನಲ್ಲಿ ಫಾಕ್ಸ್ಕಾನ್ ಕೊಡುಗೆ ಶೇ. 70ರಷ್ಟಿದೆ. ಕೋಲಾರದಲ್ಲಿರುವ ಟಾಟಾ ಎಲೆಕ್ಟ್ರಾನಿಕ್ಸ್ ಘಟಕದಿಂದ ಸಾಕಷ್ಟು ಐಫೋನ್ಗಳು ವಿದೇಶಗಳಿಗೆ ಸರಬರಾಜಾಗುತ್ತಿವೆ.
ಐಫೋನ್ ಬಿಟ್ಟರೆ ಹೆಚ್ಚು ರಫ್ತಾಗುವ ಸ್ಮಾರ್ಟ್ಫೋನ್ ಸ್ಯಾಮ್ಸುಂಗ್ನದ್ದಾಗಿದೆ. ಭಾರತದ ಒಟ್ಟಾರೆ ಸ್ಮಾರ್ಟ್ಫೋನ್ ರಫ್ತಿನಲ್ಲಿ ಸ್ಯಾಮ್ಸುಂಗ್ ಫೋನ್ ಪ್ರಮಾಣ ಶೇ. 20ರಷ್ಟಿದೆ.
ಇದನ್ನೂ ಓದಿ: ಉತ್ತಮ ರಾಜಕೀಯ ಸುಪರ್ದಿಯಲ್ಲಿ ಆರ್ಥಿಕತೆ; ಮಾರುಕಟ್ಟೆಯೂ ಕೂಡ ಚೇತರಿಕೆ ಹಾದಿಯಲ್ಲಿ: ವರದಿ
ದಶಕದ ಹಿಂದೆ ಸ್ಮಾರ್ಟ್ಫೋನ್ ರಫ್ತಿನಲ್ಲಿ ಭಾರತ 67ನೇ ಸ್ಥಾನದಲ್ಲಿತ್ತು. ಭಾರತದಲ್ಲಿ ಬಳಸುವ ಸ್ಮಾರ್ಟ್ಫೋನ್ಗಳನ್ನು ಬೇರೆ ದೇಶಗಳಿಂದ ತರಿಸಿಕೊಳ್ಳಲಾಗುತ್ತಿತ್ತು. 2020ರಲ್ಲಿ ಪಿಎಲ್ಐ ಸ್ಕೀಮ್ ಜಾರಿಗೆ ಬಂದ ಬಳಿಕ ಸ್ಮಾರ್ಟ್ಫೋನ್ ರಫ್ತಿನಲ್ಲಿ ಗಣನೀಯ ಏರಿಕೆ ಆಗಿದೆ. ವರ್ಷದಿಂದೊರ್ಷಕ್ಕೆ ರಫ್ತು ಹೆಚ್ಚಾಗುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ