ಉತ್ತಮ ರಾಜಕೀಯ ಸುಪರ್ದಿಯಲ್ಲಿ ಆರ್ಥಿಕತೆ; ಮಾರುಕಟ್ಟೆಯೂ ಕೂಡ ಚೇತರಿಕೆ ಹಾದಿಯಲ್ಲಿ: ವರದಿ
Axis Securities CIO memo: ಭಾರತದಲ್ಲಿ ಸ್ಥಿರವಾದ ರಾಜಕೀಯ ಆಡಳಿತ ಇದ್ದು, ಈ ಸುರಕ್ಷಿತ ಪರಿಸ್ಥಿತಿಯಲ್ಲಿ ಆರ್ಥಿಕತೆ ಸುಭದ್ರವಾಗಿದೆ ಎಂದು ಎಕ್ಸಿಸ್ ಸೆಕ್ಯುರಿಟೀಸ್ನ ವರದಿಯೊಂದರಲ್ಲಿ ಅಭಿಪ್ರಾಯಪಡಲಾಗಿದೆ. ಸರ್ಕಾರದಿಂದ ಹೆಚ್ಚಾಗುತ್ತಿರುವ ಬಂಡವಾಳ ವೆಚ್ಚ, ಖಾಸಗಿ ವಲಯದಿಂದಲೂ ಹೆಚ್ಚಲಿರುವ ವೆಚ್ಚ, ಕಾರ್ಪೊರೇಟ್ ಕಂಪನಿಗಳ ಉತ್ತಮ ಕ್ವಾರ್ಟರ್ಲಿ ರಿಸಲ್ಟ್ ಇತ್ಯಾದಿ ಕಾರಣದಿಂದ ಮಾರುಕಟ್ಟೆ ಚೇತರಿಸಿಕೊಳ್ಳುತ್ತಿದೆ ಎಂದಿದೆ ಈ ವರದಿ.

ನವದೆಹಲಿ, ಫೆಬ್ರುವರಿ 17: ಇತ್ತೀಚಿನ ವಿಧಾನಸಭಾ ಚುನಾವಣೆಗಳಲ್ಲಿನ ಪೂರಕ ಫಲಿತಾಂಶದಿಂದ ರಾಜಕೀಯ ಪರಿಸ್ಥಿತಿ ಸ್ಥಿರವಾಗಿದೆ. ಉತ್ತಮ ಬಜೆಟ್ ಕೂಡ ಮಂಡನೆ ಆಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಆರ್ಥಿಕತೆಯು ಸುರಕ್ಷಿತ ವಾತಾವರಣದಲ್ಲಿದೆ ಎಂದು ವರದಿಯೊಂದರಲ್ಲಿ ವಿಶ್ಲೇಷಿಸಲಾಗಿದೆ. ಸರ್ಕಾರದ ಬಂಡವಾಳ ವೆಚ್ಚ ಹೆಚ್ಚಲಿದ್ದು, ಕಾರ್ಪೊರೇಟ್ ಕಂಪನಿಗಳ ತ್ರೈಮಾಸಿಕ ಆದಾಯಗಳು ಉತ್ತಮಗೊಳ್ಳುವ ನಿರೀಕ್ಷೆ ಇದೆ. ಖಾಸಗಿ ವಲಯದಿಂದಲೂ ಬಂಡವಾಳ ವೆಚ್ಚ ಹೆಚ್ಚಾಗುವ ಸಾಧ್ಯತೆ ಕಾಣುತ್ತಿದೆ ಎಂದು ಎಕ್ಸಿಸ್ ಸೆಕ್ಯೂರಿಟೀಸ್ನ ಫೆಬ್ರುವರಿ ತಿಂಗಳ ಸಿಐಒ ಮೆಮೋ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.
ಮಾರುಕಟ್ಟೆ ಚೇತರಿಕೆ ಕಾಣುವ ಹಾದಿಯಲ್ಲಿ….
ಮಾರುಕಟ್ಟೆ ಸಾಕಷ್ಟು ಮಾರಾಟ ಕಂಡಿದೆ. ದೇಶೀಯ ಸಾಂಸ್ಥಿಕ ಹೂಡಿಕೆದಾರರಿಂದ ಜನವರಿಯಲ್ಲಿ ಮಾರುಕಟ್ಟೆಗೆ ಒಳ ಹರಿವು ಉತ್ತಮ ರೀತಿಯಲ್ಲಿ ಮುಂದುವರಿದಿದೆ. ಮಾರುಕಟ್ಟೆ ಯಾವ ಕ್ಷಣದಲ್ಲಾದರೂ ಸಕಾರಾತ್ಮಕ ಸ್ಥಿತಿಗೆ ಬರಬಹುದು. ಈ ವರ್ಷಾಂತ್ಯದೊಳಗೆ ಷೇರು ಮಾರುಕಟ್ಟೆ ಹೊಸ ಎತ್ತರ ತಲುಪಬಹುದು ಎಂದು ಸಿಐಒ ಮೆಮೋದಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ಇಂದಿನಿಂದ ಫಾಸ್ಟ್ಟ್ಯಾಗ್ ಹೊಸ ನಿಯಮ: ಏನು ಬದಲಾಗಿದೆ?, ಯಾವುದಕ್ಕೆ ದಂಡ?, ಇಲ್ಲಿದೆ ಸಂಪೂರ್ಣ ಮಾಹಿತಿ
ಒಟ್ಟಾರೆ ಆರ್ಥಿಕತೆಯ ರಚನೆ ಭದ್ರವಾಗಿದೆ. ಮಾರುಕಟ್ಟೆಯ ಈಗಿನ ಸ್ಥಿತಿ ಗಮನಿಸಿದರೆ ಹೂಡಿಕೆಗೆ ಒಳ್ಳೆಯ ಅವಕಾಶ ಸಿಕ್ಕಿದೆ. ಈಕ್ವಿಟಿಗಳಿಂದ ಒಳ್ಳೆಯ ರಿಟರ್ನ್ಸ್ ನಿರೀಕ್ಷಿಸಬಹುದು ಎಂದು ಎಕ್ಸಿಸ್ ಸೆಕ್ಯೂರಿಟೀಸ್ ಸಂಸ್ಥೆಯ ಈ ವರದಿಯಲ್ಲಿ ತಿಳಿಸಲಾಗಿದೆ.
ಸದ್ಯದ ಜಾಗತಿಕ ಸ್ಥೂಲ ಆರ್ಥಿಕ ವಾತಾವರಣವು ಡೊನಾಲ್ಡ್ ಟ್ರಂಪ್ ಅವರಿಂದ ಪ್ರಭಾವಿತವಾಗದ್ದಂತಿದೆ. ಸದ್ಯೋಭವಿಷ್ಯದಲ್ಲಿ ಟ್ಯಾರಿಫ್ ಪರಿಣಾಮವಾಗಿ ಮಾರುಕಟ್ಟೆಯ ಅಲುವಾಟು ಮುಂದುವರಿಯಲಿದೆ. ಆದರೆ ಮಧ್ಯಮಾವಧಿಯಿಂದ ದೀರ್ಘಾವಧಿಯವರೆಗೆ ಈಕ್ವಿಟಿಗಳು ಚೇತರಿಕೆ ಪಡೆಯಲಿವೆ ಎಂದಿದೆ.
ಇದನ್ನೂ ಓದಿ: ಬೆಂಗಳೂರಿನ ಹೈಪ್ರಿಕ್ಸ್; ಭಾರತದಲ್ಲಿ ಸೂಪರ್ಸೋನಿಕ್ ರಾಮ್ಜೆಟ್ ಎಂಜಿನ್ ನಿರ್ಮಿಸಿದ ಮೊದಲ ಖಾಸಗಿ ಕಂಪನಿ
ಈಗಾಗಲೇ ಸಾಕಷ್ಟು ಮಾರ್ಕೆಟ್ ಕರೆಕ್ಷನ್ ಆಗಿದೆ. ನಮ್ಮ ಹೆಚ್ಚಿನ ಷೇರುಗಳಲ್ಲಿ ಉತ್ತಮ ಮೌಲ್ಯ ಕಾಣುತ್ತಿದೆ. ಈ ಕಂಪನಿಗಳೂ ಕೂಡ ಉತ್ತಮ ಆದಾಯ ತೋರಿಸಿವೆ ಎಂದು ಎಕ್ಸಿಸ್ ಸೆಕ್ಯೂರಿಟೀಸ್ ಸಂಸ್ಥೆಯ ವರದಿಯು ಅಭಿಪ್ರಾಯಪಟ್ಟಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




