AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಹೈಪ್ರಿಕ್ಸ್; ಭಾರತದಲ್ಲಿ ಸೂಪರ್​ಸೋನಿಕ್ ರಾಮ್​ಜೆಟ್ ಎಂಜಿನ್ ನಿರ್ಮಿಸಿದ ಮೊದಲ ಖಾಸಗಿ ಕಂಪನಿ

Tezz, India's first privately built supersonic ramjet engine: ಬೆಂಗಳೂರಿನ ಹೈಪ್ರಿಕ್ಸ್ ಎನ್ನುವ ಹೊಸ ಸ್ಟಾರ್ಟಪ್​ವೊಂದು ಸೂಪರ್​ಸೋನಿಕ್ ರಾಮ್​ಜೆಟ್ ಎಂಜಿನ್ ಅಭಿವೃದ್ಧಿಪಡಿಸಿದೆ. ಈ ಸಾಧನೆ ಮಾಡಿದ ಭಾರತದ ಮೊದಲ ಖಾಸಗಿ ಸಂಸ್ಥೆ ಎನಿಸಿದೆ. ಕೇವಲ ಐದು ತಿಂಗಳಲ್ಲಿ ತೇಜ್ ಹೆಸರಿನ ಈ ಎಂಜಿನ್ ತಯಾರಿಸಿರುವುದ ಗಮನಾರ್ಹ. ಹೈಪ್ರಿಕ್ಸ್ ಸಂಸ್ಥೆ ಈಗ ಕಿರಾ ಎಂ1 ಎನ್ನುವ ಆರ್ಟಿಲರಿ ಶೆಲ್​ಗಳನ್ನು ನಿರ್ಮಿಸಲು ಮುಂದಾಗಿದೆ.

ಬೆಂಗಳೂರಿನ ಹೈಪ್ರಿಕ್ಸ್; ಭಾರತದಲ್ಲಿ ಸೂಪರ್​ಸೋನಿಕ್ ರಾಮ್​ಜೆಟ್ ಎಂಜಿನ್ ನಿರ್ಮಿಸಿದ ಮೊದಲ ಖಾಸಗಿ ಕಂಪನಿ
ಹೈಪ್ರಿಕ್ಸ್ ಸೂಪರ್​ಸೋನಿಕ್ ರಾಮ್​ಜೆಟ್ ಎಂಜಿನ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Feb 16, 2025 | 7:58 PM

Share

ಬೆಂಗಳೂರು, ಫೆಬ್ರುವರಿ 16: ಸ್ಟಾರ್ಟಪ್ ನಗರಿ ಎಂದು ಖ್ಯಾತವಾಗಿರುವ ಬೆಂಗಳೂರಿನಲ್ಲಿ ನಾನಾ ಕ್ಷೇತ್ರಗಳ ನವೋದ್ಯಮಗಳು ನೆಲೆ ನಿಂತಿವೆ. ಏರೋಸ್ಪೇಸ್ ಸೆಕ್ಟರ್​ನಲ್ಲಿ ಒಂದು ವರ್ಷದ ಹಿಂದೆ ಆರಂಭವಾದ ಹೈಪ್ರಿಕ್ಸ್ ಎನ್ನುವ ಸ್ಟಾರ್ಟಪ್ ಬಹಳ ವೇಗವಾಗಿ ಸಾಧನೆಯ ಮೆಟ್ಟಿಲುಗಳನ್ನು ಹತ್ತತೊಡಗಿದೆ. ಸೂಪರ್​ಸಾನಿಕ್ ಸ್ಪೀಡ್​ನಲ್ಲಿ ಸಾಗಲು ಪುಷ್ಟಿ ನೀಡಬಲ್ಲ ರಾಮ್​ಜೆಟ್ ಎಂಜಿನ್​ಗಳನ್ನು ಈ ಕಂಪನಿ ಅಭಿವೃದ್ಧಿಪಡಿಸಿದೆ. ಭಾರತದ ಯಾವೊಂದು ಖಾಸಗಿ ಕಂಪನಿ ಮಾಡದ ಸಾಧನೆಯನ್ನು ಹೈಪ್ರಿಕ್ಸ್ ಮಾಡಿದೆ. ತೇಜ್ ಹೆಸರಿನ ಅವರ ರಾಮ್​ಜೆಟ್ ಎಂಜಿನ್ ಅನ್ನು ಈ ಸಂಸ್ಥೆ ಕೇವಲ ಐದು ತಿಂಗಳಲ್ಲೇ ಅಭಿವೃದ್ಧಿಪಡಿಸಿರುವುದು ಗಮನಾರ್ಹ. ಸೂಪರ್​ಸಾನಿಕ್ ಸ್ಪೀಡ್ ಎಂದರೆ ಶಬ್ದದ ವೇಗಕ್ಕಿಂತ ಹೆಚ್ಚಿನದ್ದು. ಈ ರಾಮ್​ಜೆಟ್ ಎಂಜಿನ್​ನ ವಾಹನಗಳು ಮ್ಯಾಕ್-4 ವೇಗದಲ್ಲಿ ಸಾಗಬಲ್ಲುವು.

ರಾಮ್​ಜೆಟ್ ಎಂಜಿನ್​ಗಳು ಜೆಟ್ ಹಾರುವಾಗಲೇ ಒಳಬರುವ ಗಾಳಿಯನ್ನು ಒತ್ತಿ, ಇಂಧನದೊಂದಿಗೆ ಸೇರಿ ಮುಂದೆ ಸಾಗಲು ಅನುವು ಮಾಡಿಕೊಡುತ್ತದೆ. ಈ ರೀತಿಯ ಎಂಜಿನ್ ಅನ್ನು ಕ್ಷಿಪ್ರ ಅವಧಿಯಲ್ಲಿ ತಯಾರಿಸುವುದು ಕನಸಿನ ಮಾತೇ ಆಗಿತ್ತು. ದೇವಮಾಲ್ಯ ಬಿಸವಾಸ್ ಮತ್ತು ದಿವ್ಯಾಂಶು ಮಂಡೋವರ ಎಂಬಿಬ್ಬರು ಯುವ ಸ್ನೇಹಿತರು ಛಲದಿಂದ ಈ ಸಾಧನೆ ಮಾಡಿ ತೋರಿಸಿದ್ದಾರೆ.

ಇದನ್ನೂ ಓದಿ: ಎಐನಿಂದ ಕೋಡಿಂಗ್ ಕೆಲಸಕ್ಕೆ ಕತ್ತರಿ; ಭಾರತದ ಐಟಿ ಸೆಕ್ಟರ್ ಕಥೆ ಹೇಗೆ? ಸಾಫ್ಟ್​ವೇರ್ ಕಂಪನಿಗಳ ಮುಂದಿನ ದಾರಿ ಏನು?

ಮುಂದಿನ ತಲೆಮಾರಿನ ಕ್ಷಿಪಣಿಗಳ ತಯಾರಿಕೆಗೆ ತೇಜ್ ಎಂಜಿನ್ ಬಹಳ ಉಪಯೋಗಕ್ಕೆ ಬರುತ್ತದೆ ಎಂದು ಹೇಳಲಾಗುತ್ತದೆ. ಕ್ಷಿಪಣಿ ಮಾತ್ರವಲ್ಲ, ಫೈಟರ್ ಜೆಟ್, ಆರ್ಟಿಲರಿ ಶೆಲ್​ಗಳ ತಯಾರಿಕೆಗೆ ಈ ಎಂಜಿನ್​ಗಳು ಉಪಯುಕ್ತ ಎನಿಸುತ್ತವೆ.

ಸರ್ಕಾರದಿಂದ ಹೆಚ್ಚಿನ ನೆರವು ಇಲ್ಲದಿದ್ದರೂ ಮತ್ತು ಖಾಸಗಿ ಹೂಡಿಕೆದಾರರ ನೆರವಿಲ್ಲದಿದ್ದರೂ ಹೈಪ್ರಿಕ್ಸ್ ಹಲವು ಅಡೆತಡೆಗಳನ್ನು ದಾಟಿ, ಸೀಮಿತ ಬಜೆಟ್​ನಲ್ಲಿ ಈ ಎಂಜಿನ್ ನಿರ್ಮಿಸಿದೆ.

ಕಿರಾ ಎಂ1 ಎನ್ನುವ ಆರ್ಟಿಲರಿ ಶೆಲ್ ನಿರ್ಮಿಸುತ್ತಿರುವ ಹೈಪ್ರಿಕ್ಸ್

ಬೆಂಗಳೂರಿನ ಈ ಡಿಫೆನ್ಸ್ ಮತ್ತು ಏರೋಸ್ಪೇಸ್ ಕಂಪನಿಯು ತೇಜ್ ಎಂಜಿನ್ ಬಲಿಕ ಈಗ ಕಿರಾ ಎಂ1 ಎನ್ನುವ ಹೆಸರಿನ ಆರ್ಟಿಲರಿ ಶೆಲ್​ಗಳನ್ನು ತಯಾರಿಸುತ್ತಿದೆ. ಈ ಶೆಲ್​ಗಳಿಗೆ ರಾಮ್​ಜೆಟ್ ಎಂಜಿನ್ ಶಕ್ತಿ ಇರಲಿದೆ.

ಇದನ್ನೂ ಓದಿ: ಅಮೆರಿಕದ ಮಾರುಕಟ್ಟೆಗೆ ಪರ್ಯಾಯ ಕಷ್ಟ; ಚೀನೀ ಕಂಪನಿಗಳಿಗೆ ಸಂಕಷ್ಟಗಳ ಮೇಲೆ ಸಂಕಷ್ಟ

ಆರ್ಟಿಲರಿ ಶೆಲ್​ಗಳು ಸೇನೆಗೆ ಬಹಳ ಮುಖ್ಯ. ಗನ್​ಗಳ ಮೂಲಕ ಮಿಸೈಲ್ ರೀತಿಯ ದೊಡ್ಡ ಬಾಂಬ್​ಗಳನ್ನು ಹಾರಿಸಬಹುದು. ಭಾರತದಲ್ಲಿ ಸದ್ಯ ಒಂದು ವರ್ಷದಲ್ಲಿ ಮೂರು ಲಕ್ಷದಷ್ಟು ಆರ್ಟಿಲರಿ ಶೆಲ್​ಗಳನ್ನು ನಿರ್ಮಿಸುವ ಸಾಮರ್ಥ್ಯ ಇದೆ. ಆದರೆ, ಯುದ್ಧಕಾಲದಲ್ಲಿ 18 ಲಕ್ಷ ಶೆಲ್​ಗಳ ಅವಶ್ಯಕತೆ ಇರುತ್ತದೆ. ಈ ಕೊರತೆ ನೀಗಬೇಕೆಂದರೆ ಹೆಚ್ಚೆಚ್ಚು ಸಂಸ್ಥೆಗಳು ಆರ್ಟಿಲರಿ ಶೆಲ್​ಗಳನ್ನು ತಯಾರಿಸುವಂತಾಗಬೇಕು. ಈ ಹಿನ್ನೆಲೆಯಲ್ಲಿ ಹೈಪ್ರಿಕ್ಸ್​ಗೆ ಉತ್ತಮ ಬಿಸಿನೆಸ್ ಅವಕಾಶಗಳಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:55 pm, Sun, 16 February 25