ಅಮೆರಿಕದ ಮಾರುಕಟ್ಟೆಗೆ ಪರ್ಯಾಯ ಕಷ್ಟ; ಚೀನೀ ಕಂಪನಿಗಳಿಗೆ ಸಂಕಷ್ಟಗಳ ಮೇಲೆ ಸಂಕಷ್ಟ
China vs USA: ಚೀನಾದ ಸರಕುಗಳಿಗೆ ಅಮೆರಿಕ ಹೆಚ್ಚಿನ ಆಮದು ಸುಂಕ ವಿಧಿಸಿದೆ. ರಫ್ತು ಮೇಲೆ ಅವಲಂಬಿತವಾಗಿರುವ ಚೀನಾ ಆರ್ಥಿಕತೆ ಈಗ ನಿಜವಾದ ಕಷ್ಟಕ್ಕೆ ಸಿಲುಕಬಹುದು. ಸಿಕ್ಕಾಪಟ್ಟೆ ಉತ್ಪಾದನೆ ಮಾಡುವ ಚೀನೀ ಕಂಪನಿಗಳಿಗೆ ತಮ್ಮ ಸರಕುಗಳನ್ನು ಮಾರುವುದು ಎಲ್ಲಿ ಮತ್ತು ಹೇಗೆ ಎನ್ನುವ ಯಕ್ಷಪ್ರಶ್ನೆ ಉದ್ಭವವಾಗಿದೆ. ತಮ್ಮ ಸಂಕಷ್ಟಕ್ಕೆ ಪರಿಹಾರ ಹುಡುಕಬೇಕೆಂದು ಅಲ್ಲಿನ ಉದ್ಯಮಗಳು ಸರ್ಕಾರದ ದುಂಬಾಲು ಬೀಳುತ್ತಿವೆ.

ನವದೆಹಲಿ, ಫೆಬ್ರುವರಿ 16: ಈಗಿನ ಆರ್ಥಿಕ ವಾತಾವರಣವು ಚೀನಾಕ್ಕೆ ಒಂದು ರೀತಿಯಲ್ಲಿ ಅಗಿಯಲು ಆಗದ, ನುಂಗಲೂ ಆಗದ ಪರಿಸ್ಥಿತಿ ತಂದೊಡ್ಡಿದೆ. ವಿಶ್ವದ ಫ್ಯಾಕ್ಟರಿ ಎನಿಸುವಷ್ಟು ಬೆಳೆದಿರುವ ಚೀನಾದಲ್ಲಿ ಉತ್ಪಾದನೆ ಮಿತಿಮೀರಿ ಹೆಚ್ಚಾಗಿದೆ. ದೇಶೀಯವಾಗಿ ಜನರ ಅನುಭೋಗ ಕಡಿಮೆ ಆಗಿದೆ. ಈ ಗಾಯಕ್ಕೆ ಬರೆ ಎಳೆಯುವಂತೆ ಅಮೆರಿಕ ಆಮದು ಸುಂಕ ಹೆಚ್ಚಿಸಿದೆ. ಹಲವು ದೇಶಗಳೂ ಕೂಡ ಚೀನೀ ಸರಕುಗಳಿಗೆ ಟ್ಯಾರಿಫ್ ಬರೆ ಹಾಕುತ್ತಿವೆ. ಈಗ ಚೀನೀ ಕಂಪನಿಗಳಿಗೆ ತಮ್ಮ ಸರಕುಗಳನ್ನು ಯಾರಿಗೆ ಮಾರುವುದು ಎನ್ನುವುದೇ ದೊಡ್ಡ ಚಿಂತೆಯ ವಿಷಯವಾಗಿದೆ.
ಚೀನಾದ ಮ್ಯಾನುಫ್ಯಾಕ್ಚರಿಂಗ್ ಉದ್ಯಮ ಬಹಳ ದೊಡ್ಡದು. ವಿಶ್ವದಲ್ಲೇ ಅತಿ ದೊಡ್ಡ ಇಂಡಸ್ಟ್ರಿ ಅದು. ಒಂದು ಸರಕು ಉತ್ಪಾದನೆ ಮತ್ತು ರಫ್ತಿಗೆ ಹಲವು ಚೀನೀ ಕಂಪನಿಗಳ ಮಧ್ಯೆಯೇ ಪೈಪೋಟಿ ಇದೆ. ಅಮೆರಿಕದ ಅಧಿಕ ಆಮದು ಸುಂಕವನ್ನು ತಪ್ಪಿಸಿಕೊಳ್ಳಬೇಕಾದರೆ ಬೇರೆ ದೇಶಗಳ ಮಾರುಕಟ್ಟೆ ಪ್ರವೇಶಿಸುವುದು ಅನಿವಾರ್ಯ. ಇಲ್ಲೂ ಕೂಡ ಎಲ್ಲಾ ಚೀನೀ ಕಂಪನಿಗಳೊಳಗೆಯೇ ಸ್ಪರ್ಧೆ ಇದೆ. ಜೊತೆಗೆ ಈ ದೇಶಗಳ ಸ್ಥಳೀಯ ಉತ್ಪಾದಕರನ್ನು ಉಳಿಸಲು ಅಲ್ಲಿಯೂ ಚೀನೀ ಸರಕುಗಳಿಗೆ ಆಮದು ಸುಂಕ ವಿಧಿಸುವುದು ಅನಿವಾರ್ಯವಾಗಬಹುದು.
ಇದನ್ನೂ ಓದಿ: ಭಾರತದ ಫಾರೆಕ್ಸ್ ಮೀಸಲು ನಿಧಿ 638 ಬಿಲಿಯನ್ ಡಾಲರ್; ಸತತ ಮೂರನೇ ವಾರ ಏರಿಕೆ
ಚೀನೀ ಕಂಪನಿಗಳಿಗೆ ಈ ಒಂದೇ ಆಯ್ಕೆ ಇರುವುದು. ಅವು ತಮ್ಮ ಲಾಭದ ಮಾರ್ಜಿನ್ ಅನ್ನು ಕಡಿಮೆ ಮಾಡಿಕೊಳ್ಳಬೇಕು. ಹಾಗೊಂದು ವೇಳೆ ಲಾಭ ಬಿಟ್ಟುಕೊಟ್ಟರೆ ಕಂಪನಿಗಳು ವೆಚ್ಚ ಕಡಿತದ ಮಾರ್ಗ ಅನುಸರಿಸಬೇಕಾಗುತ್ತದೆ. ಆಗ ಮೊದಲು ಕತ್ತರಿ ಬೀಳುವುದು ಉದ್ಯೋಗಗಳಿಗೆ. ನಿರುದ್ಯೋಗ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದ ಪ್ರತಿಕೂಲ ಆರ್ಥಿಕ ಪರಿಣಾಮಗಳು ಚೀನಾವನ್ನು ಬಾಧಿಸಲಿವೆ.
ಅಮೆರಿಕದಂತಹ ಮಾರುಕಟ್ಟೆಗೆ ವಿಶ್ವದಲ್ಲೇ ಪರ್ಯಾಯ ಇಲ್ಲ. ಅಮೆರಿಕ ಪಕ್ಕಾ ಅನುಭೋಗ ದೇಶ. ಚೀನಾ ವರ್ಷಕ್ಕೆ 400 ಬಿಲಿಯನ್ ಡಾಲರ್ನಷ್ಟು ಸರಕು ಮತ್ತು ಸೇವೆಗಳನ್ನು ಅಮೆರಿಕಕ್ಕೆ ರಫ್ತು ಮಾಡುತ್ತದೆ. ಇಷ್ಟು ದೊಡ್ಡ ಮಾರುಕಟ್ಟೆಯನ್ನು ಚೀನಾ ಬೇರೆಡೆ ಸೃಷ್ಟಿಸುವುದು ಬಹಳ ಕಷ್ಟ. ಸಂಪೂರ್ಣ ಸಪ್ಲೈ ಚೈನ್ ಹೊಂದಿರುವ ದೊಡ್ಡ ಕಂಪನಿಗಳು ಹೇಗೋ ಬಿಸಿನೆಸ್ ಗಿಟ್ಟಿಸಬಹುದು. ಆದರೆ, ಸಣ್ಣ ಚೀನೀ ಕಂಪನಿಗಳಿಗೆ ನಿಜವಾದ ಆತಂಕ ಇರುವುದು.
ಇದನ್ನೂ ಓದಿ: BSNL: 17 ವರ್ಷಗಳ ಬಳಿಕ ನಷ್ಟದಿಂದ ಮೇಲೆದ್ದ ಬಿಎಸ್ಎನ್ಎಲ್; ಈ ಬಾರಿ 262 ಕೋಟಿ ರೂ. ಲಾಭ
ಅಡಕತ್ತರಿಗೆ ಸಿಲುಕಿದಂತಿರುವ ಚೀನೀ ಕಂಪನಿಗಳು ಈಗ ಹೆಚ್ಚುವರಿಯಾಗಿರುವ ತಮ್ಮ ಉತ್ಪನ್ನಗಳನ್ನು ವಿಲೇವಾರಿ ಮಾಡುವ ಮಾರ್ಗ ಹುಡುಕುವಂತೆ ಸರ್ಕಾರದ ದುಂಬಾಲು ಬೀಳುವುದು ಅನಿವಾರ್ಯವಾಗಿದೆ. ಚೀನಾ ಸರ್ಕಾರ ರಾಜತಾಂತ್ರಿಕವಾಗಿ ಯಾವುದಾದರೂ ದಾರಿ ಹುಡುಕಲು ಯತ್ನಿಸಬಹುದು. ಅಮೆರಿಕದ ಉದ್ಯಮಗಳಿಗೆ ಅತ್ಯಗತ್ಯವಾಗಿ ಬೇಕಾಗಿರುವ ಕಚ್ಚಾ ಸಾಮಗ್ರಿಗಳು ಚೀನಾ ಬಳಿ ಇವೆ. ಇವುಗಳ ರಫ್ತನ್ನು ಚೀನಾ ಮೊಟಕುಗೊಳಿಸಿದರೆ ಅಮೆರಿಕಕ್ಕೂ ಕಷ್ಟಕರವೇ. ಅಮೆರಿಕ ಮತ್ತು ಚೀನಾ ನಡುವಿನ ಈ ಪರೋಕ್ಷ ಕೋಲ್ಡ್ ವಾರ್ ಎಲ್ಲಿಗೆ ಹೋಗಿ ಮುಟ್ಟುತ್ತದೋ ಹೇಳುವುದು ಕಷ್ಟ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




