ಜವಳಿ ಕ್ಷೇತ್ರಕ್ಕೆ 9 ಲಕ್ಷ ಕೋಟಿ ರೂ ರಫ್ತು ಟಾರ್ಗೆಟ್ ಇಟ್ಟ ಪಿಎಂ ಮೋದಿ
Indian textile exports target: ಮೂರು ಲಕ್ಷ ಕೋಟಿ ರೂ ಇರುವ ಜವಳಿ ರಫ್ತು ಪ್ರಮಾಣವನ್ನು ಇನ್ನೈದು ವರ್ಷದಲ್ಲಿ ಒಂಬತ್ತು ಲಕ್ಷ ಕೋಟಿ ರೂಗೆ ಹೆಚ್ಚಿಸುವ ಗುರಿ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನವದೆಹಲಿಯಲ್ಲಿ ಭಾನುವಾರ ನಡೆದ ಭಾರತ್ ಟೆಕ್ಸ್ 2025 ಸಮ್ಮೇಳನದಲ್ಲಿ ಮಾತನಾಡುತ್ತಿದ್ದ ಪಿಎಂ, ಈ ಕಾರ್ಯಕ್ರಮ ಈಗ ಜಾಗತಿಕ ಜವಳಿ ಕಾರ್ಯಕ್ರಮವಾಗಿ ಬೆಳೆದಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ನವದೆಹಲಿ, ಫೆಬ್ರುವರಿ 17: ಭಾರತದಿಂದ ಜವಳಿ ರಫ್ತು ಮೂರು ಲಕ್ಷ ಕೋಟಿ ರೂ ಮಟ್ಟ ಮುಟ್ಟಿದೆ. 2030ರೊಳಗೆ ಈ ಕ್ಷೇತ್ರದಿಂದ ಜವಳಿ ರಫ್ತು ಪ್ರಮಾಣ 9 ಲಕ್ಷ ಕೋಟಿ ರೂ ತಲುಪಬೇಕೆನ್ನುವುದು ಗುರಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರಾಷ್ಟ್ರ ರಾಜಧಾನಿ ನಗರಿಯಲ್ಲಿ ನಡೆದ ಭಾರತ್ ಜವಳಿ ಮೇಳದಲ್ಲಿ (Bharat Tex 2025) ಮಾತನಾಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿ, ‘ಇವತ್ತು ಭಾರತ ವಿಶ್ವದ ಆರನೇ ಅತಿದೊಡ್ಡ ಜವಳಿ ರಫ್ತುದಾರ ದೇಶ ಎನಿಸಿದೆ. ನಮ್ಮ ಜವಳಿ ರಫ್ತು ಈಗ ಮೂರು ಲಕ್ಷ ಕೋಟಿ ರೂ ಮುಟ್ಟಿದೆ. 2030ರೊಳಗೆ ಇದು ಒಂಬತ್ತು ಲಕ್ಷ ಕೋಟಿ ರೂ ಮುಟ್ಟಬೇಕು ಎನ್ನುವುದು ನಮ್ಮ ಗುರಿ. ಇವತ್ತಿ ಕಂಡು ಬರುತ್ತಿರುವ ಉತ್ಸಾಹ ನೋಡಿದರೆ ನಾವು ನಿರೀಕ್ಷಿಸಿದುದಕ್ಕಿಂತಲೂ ಬೇಗನೇ ಗುರಿ ಮುಟ್ಟಬಹುದು ಎನಿಸುತ್ತಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಭಾರತ್ ಟೆಕ್ಸ್ ಸಮ್ಮೇಳನದ ಬಗ್ಗೆ ಪ್ರಧಾನಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ‘ನಾವು ನೆಟ್ಟ ಬೀಜ ಇವತ್ತು ವೇಗವಾಗಿ ಬೆಳವಣಿಗೆ ಕಾಣುತ್ತಿದ್ದು, ದೊಡ್ಡ ಆಲದ ಮರವಾಗಿ ಬೆಳೆಯುತ್ತಿದೆ. ಭಾರತ್ ಟೆಕ್ಸ್ ಈಗ ಬೃಹತ್ ಜಾಗತಿಕ ಜವಳಿ ಕಾರ್ಯಕ್ರಮವಾಗುತ್ತಿದೆ. ಇದರಲ್ಲಿ ಭಾಗಿಯಾಗಿರುವ ಎಲ್ಲರ ಪ್ರಯತ್ನಗಳೂ ಶ್ಲಾಘನೀಯ’ ಎಂದು ಅವರು ಹೇಳಿದ್ದಾರೆ.
‘ಇವತ್ತು 120ಕ್ಕೂ ಹೆಚ್ಚು ದೇಶಗಳು ಭಾರತ್ ಟೆಕ್ಸ್ನಲ್ಲಿ ಪಾಲ್ಗೊಂಡಿವೆ. ಇಲ್ಲಿಗೆ ಬಂದಿರುವ ಉದ್ದಿಮೆದಾರರಿಗೆ 120 ದೇಶಗಳ ಸಂಸ್ಕೃತಿ ಮತ್ತು ಸಾಂಸ್ಕೃತಿಕ ಅಗತ್ಯಗಳೇನು ಎಂಬುದರ ಅರಿವು ಸಿಗಲಿದೆ. ಲೋಕಲ್ನಿಂದ ಗ್ಲೋಬಲ್ ಮಟ್ಟಕ್ಕೆ ಬಿಸಿನೆಸ್ ಬೆಳೆಸುವ ಅವಕಾಶ ಸಿಕ್ಕಿದೆ. ಭಾರತ್ ಟೆಕ್ಸ್ನಲ್ಲಿ ನಮ್ಮ ಸಂಸ್ಕೃತಿಯ ಹೂರಣ ಮಾತ್ರವಲ್ಲ, ವಿಕಸಿತ ಭಾರತ ನಿರ್ಮಾಣದ ಕುರುಹೂ ಕಾಣುತ್ತಿದೆ’ ಎಂದು ನರೇಂದ್ರ ಮೋದಿ ತಿಳಿಸಿದ್ದಾರೆ.
ಇದನ್ನೂ ಓದಿ: ಉತ್ತಮ ರಾಜಕೀಯ ಸುಪರ್ದಿಯಲ್ಲಿ ಆರ್ಥಿಕತೆ; ಮಾರುಕಟ್ಟೆಯೂ ಕೂಡ ಚೇತರಿಕೆ ಹಾದಿಯಲ್ಲಿ: ವರದಿ
ಈ ಬಾರಿಯ ಬಜೆಟ್ನಲ್ಲಿ ಹತ್ತಿ ಉತ್ಪಾದನೆಯ ಯೋಜನೆಯನ್ನು (Mission for Cotton Productivity) ಘೋಷಿಸಲಾಯಿತು. ಈ ಐದು ವರ್ಷದ ಮಿಷನ್ನಲ್ಲಿ, ಹತ್ತಿ ಕೃಷಿಯ ಉತ್ಪಾದನೆ ಮತ್ತು ಸುಸ್ಥಿರತೆ ಹೆಚ್ಚಿಸಲು ಗಮನ ಕೊಡಲಾಗುತ್ತಿದೆ. ಈ ಬಗ್ಗೆ ಮಾತನಾಡಿದ ಮೋದಿ, ‘ಫಾರ್ಮ್, ಫೈಬರ್, ಫ್ಯಾಬ್ರಿಕ್, ಫ್ಯಾಷನ್ ಮತ್ತು ಫಾರೀನ್ನ ತತ್ವವು ಭಾರತಕ್ಕೆ ಒಂದು ಮಿಷನ್ ಆಗಿ ಬದಲಾಗಿದೆ. ರೈತರು, ನೇಕಾರರು, ವಿನ್ಯಾಸಗಾರರು ಮತ್ತು ವ್ಯಾಪಾರಸ್ಥರಿಗೆ ಹೊಸ ಅವಕಾಶಗಳು ನಿರ್ಮಿತವಾಗುತ್ತಿದೆ. ಕಳೆದ ವರ್ಷ ಭಾರತದ ಜವಳಿ ಮತ್ತು ಉಡುಪು ರಫ್ತು ಶೇ. 7ರಷ್ಟು ಬೆಳವಣಿಗೆ ಕಂಡಿದೆ’ ಎಂದು ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




