ನವದೆಹಲಿ, ಜನವರಿ 22: ಜಪಾನ್ನ ಸೋನಿ ಗ್ರೂಪ್ ಸಂಸ್ಥೆಯ ಭಾರತೀಯ ವ್ಯವಹಾರಗಳನ್ನು ಝೀ ಎಂಟರ್ಟೈನ್ಮೆಂಟ್ ಸಂಸ್ಥೆ (ZEEL- Zee Entertainment Enterprises Ltd) ಜೊತೆ ವಿಲೀನ ಕಾರ್ಯ ನಡೆಯುವುದಿಲ್ಲ. ಸೋನಿ ಗ್ರೂಪ್ ಈ ಡೀಲ್ನಿಂದ ಹೊರನಡೆದಿದೆ. ವಿಲೀನಗೊಳಿಸುವ ಪ್ಲಾನ್ ಅನ್ನು ಕೈಬಿಡುತ್ತಿರುವುದಾಗಿ ಝೀ ಎಂಟರ್ಟೈನ್ಮೆಂಟ್ ಎಂಟರ್ಪ್ರೈಸಸ್ ಸಂಸ್ಥೆಗೆ ಸೋನಿ (Sony Group) ಪತ್ರ ಬರೆದಿದೆ ಎಂದು ಬ್ಲೂಮ್ಬರ್ಗ್ ಸುದ್ದಿಸಂಸ್ಥೆ ಇಂದು ವರದಿ ಮಾಡಿದೆ. ಇಂದು ಸೋಮವಾರ ಬೆಳಗ್ಗೆ ಟರ್ಮಿನೇಶನ್ ಲೆಟರ್ ಅನ್ನು ಝೀಗೆ ಕಳುಹಿಸಿರುವುದು ತಿಳಿದುಬಂದಿದೆ.
ಕೆಲ ದಿನಗಳ ಹಿಂದೆಯೇ ಮಾಧ್ಯಮಗಳಲ್ಲಿ ಈ ಡೀಲ್ ಅಂತ್ಯಗೊಳ್ಳುವ ಸಾಧ್ಯತೆ ಇದೆ ಎನ್ನುವ ಸುದ್ದಿ ದಟ್ಟವಾಗಿ ಕೇಳಿಬಂದಿತ್ತು. ಆದರೆ, ಝೀ ಸಂಸ್ಥೆ ಆ ಸುದ್ದಿಯನ್ನು ಅಲ್ಲಗಳೆದಿತ್ತು. ಈಗ ಸೋನಿ ಸಂಸ್ಥೆಯೇ ಅಧಿಕೃತವಾಗಿ ಟರ್ಮಿನೇಶನ್ ಲೆಟರ್ ಕಳುಹಿಸಿದೆ. ವರದಿ ಪ್ರಕಾರ ವಿಲೀನ ಒಪ್ಪಂದದ ಕೆಲ ನಿಬಂಧನಗಳಿಗೆ ಝೀ ಬದ್ಧವಾಗಿಲ್ಲ ಎಂಬುದು ಸೋನಿ ಹೊರನಡೆಯಲು ಕಾರಣ ಎನ್ನಲಾಗಿದೆ.
ಎರಡು ವರ್ಷದ ಹಿಂದೆ ಸೋನಿಯ ಭಾರತೀಯ ವ್ಯವಹಾರಗಳನ್ನು ಝೀ ಸಂಸ್ಥೆ ಜೊತೆ ವಿಲೀನಗೊಳಿಸುವ ಒಪ್ಪಂದವಾಗಿತ್ತು. ಹಲವು ನಿಯಮ ಮತ್ತು ನಿಬಂಧನೆಗಳಿಗೆ ಈ ಒಪ್ಪಂದ ಒಳಪಟ್ಟಿತ್ತು. ಡಿಸೆಂಬರ್ ಕೊನೆಯ ವಾರದೊಳಗೆ ಒಪ್ಪಂದಕ್ಕೆ ಅಂಕಿತ ಬೀಳಬೇಕಿತ್ತು. ಆದರೆ, ಒಪ್ಪಂದದ ಕೆಲ ಅಂಶಗಳ ಮೇಲೆ ಎರಡೂ ಸಂಸ್ಥೆಗಳು ಒಮ್ಮತಕ್ಕೆ ಬರಲಾಗಿಲ್ಲ. ಅದಾಗಿ 30 ದಿನಗಳ ಗ್ರೇಸ್ ಪೀರಿಯಡ್ ಅಥವಾ ಹೆಚ್ಚುವರಿ ಕಾಲಾವಕಾಶ (grace period) ಕೂಡ ಮುಗಿದು ಹೋಗಿದೆ. ಹೀಗಾಗಿ, ಸೋನಿ ಕಾರ್ಪೊರೇಶನ್ ಅಧಿಕೃತವಾಗಿ ಟರ್ಮಿನೇಶನ್ ನೋಟೀಸ್ ಅನ್ನು ಝೀಗೆ ಕಳುಹಿಸಿದೆ. ಇವತ್ತೇ ಷೇರು ವಿನಿಮಯ ಕೇಂದ್ರಕ್ಕೆ ಸಲ್ಲಿಸುವ ಫೈಲಿಂಗ್ನಲ್ಲಿ ಸೋನಿ ಈ ವಿಚಾರವನ್ನು ತಿಳಿಸುವ ಸಾಧ್ಯತೆ ಇದೆ.
ಸೋನಿ ಇಂಡಿಯಾ ಮತ್ತು ಝೀ ವಿಲೀನವು 10 ಬಿಲಿಯನ್ ಡಾಲರ್ ಮೌಲ್ಯದ್ದಾಗಿತ್ತು. ವಿಲೀನದ ನಂತರದ ಕಂಪನಿಗೆ ಯಾರು ಸಿಇಒ ಆಗಬೇಕು ಎಂಬುದು ಕೊನೆಯವರೆಗೂ ಪ್ರಶ್ನೆಯಾಗಿಯೇ ಉಳಿದಿದೆ. ಝೀ ಎಂಟರ್ಟೈನ್ಮೆಂಟ್ ಲಿಮಿಟೆಡ್ನ ಸಿಇಒ ಪುನೀತ್ ಗೋಯಂಕಾ ಅವರೇ ಹೊಸ ಸಂಸ್ಥೆಗೆ ಸಿಇಒ ಆಗಬೇಕು ಎಂಬುದು ಝೀ ಕಡೆಯಿಂದ ಇದ್ದ ಅಭಿಪ್ರಾಯ. ಆದರೆ, ಕೋರ್ಟ್ ಕೇಸ್ ಎದುರಿಸುತ್ತಿರುವ ಪುನೀತ್ ಗೋಯಂಕಾ ಸಿಇಒ ಆಗಬಾರದು ಎಂಬುದು ಸೋನಿ ಪಟ್ಟು. ಈ ವಿಷಯದಲ್ಲಿ ಒಮ್ಮತ ಮೂಡಿಲ್ಲ ಎನ್ನಲಾಗಿದೆ.
ಸೋನಿ ಈ ಡೀಲ್ ಅನ್ನು ಟರ್ಮಿನೇಟ್ ಮಾಡಿರುವ ಸುದ್ದಿಯ ಬಗ್ಗೆ ಝೀ ವತಿಯಿಂದ ಇನ್ನೂ ಪ್ರತಿಕ್ರಿಯೆ ಬಂದಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ