Bengaluru House Rent: ಬೆಂಗಳೂರಿನ ಬಾಡಿಗೆ ನಿವಾಸಿಗಳಿಗೆ ದರ ಏರಿಕೆಯ ಶಾಕ್; ಮನೆ ಬಾಡಿಗೆ ಶೇ 45ರವರೆಗೆ ಹೆಚ್ಚಳ

| Updated By: Ganapathi Sharma

Updated on: Dec 21, 2022 | 4:14 PM

House Rent Hike in Bengaluru; ಸೆಪ್ಟೆಂಬರ್​ನಲ್ಲಿ ಬೆಂಗಳೂರಿನ ಹಲವೆಡೆ ಉಂಟಾದ ಪ್ರವಾಹ ಪರಿಸ್ಥಿತಿಯೂ ರಿಯಲ್ ಎಸ್ಟೇಟ್ ಕ್ಷೇತ್ರದ ಮೇಲೆ ಪರಿಣಾಮ ಬೀರಿದೆ. ಹೊಸದಾಗಿ ಮನೆ ಕೊಂಡುಕೊಳ್ಳುವವರು ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದಾರೆ ಎಂದು ರಿಯಲ್ ಎಸ್ಟೇಟ್ ಕಂಪನಿಗಳು ತಿಳಿಸಿವೆ.

Bengaluru House Rent: ಬೆಂಗಳೂರಿನ ಬಾಡಿಗೆ ನಿವಾಸಿಗಳಿಗೆ ದರ ಏರಿಕೆಯ ಶಾಕ್; ಮನೆ ಬಾಡಿಗೆ ಶೇ 45ರವರೆಗೆ ಹೆಚ್ಚಳ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಕೋವಿಡ್ (Covid-19) ಸಾಂಕ್ರಾಮಿಕದ ನಂತರ ಸಹಜ ಸ್ಥಿತಿಗೆ ಮರಳುತ್ತಿದ್ದಂತೆಯೇ ಬೆಂಗಳೂರು (Bengaluru) ನಗರದ ಬಹುತೇಕ ಕಡೆಗಳಲ್ಲಿ ಮನೆ ಬಾಡಿಗೆ (House Rent) ದರ ಗಣನೀಯವಾಗಿ ಹೆಚ್ಚಾಗಿರುವುದು ವರದಿಯಾಗಿದೆ. ಈ ಹಿಂದೆ ಉಪನಗರಗಳೆಂದು (Suburbs) ಪರಿಗಣಿಸಲಾಗಿದ್ದ ಪ್ರದೇಶಗಳಲ್ಲಿಯೂ ಮನೆ ಬಾಡಿಗೆ ಹೆಚ್ಚಳವಾಗಿದೆ. ಕೆಲವು ಕಡೆಗಳಲ್ಲಿ ಶೇಕಡಾ 45ರ ವರೆಗೆ ಬಾಡಿಗೆ ದರ ಹೆಚ್ಚಳವಾಗಿದೆ ಎಂದು ವಿವಿಧ ಮೂಲಗಳನ್ನು ಉಲ್ಲೇಖಿಸಿ ‘ಮನಿ ಕಂಟ್ರೋಲ್ ಡಾಟ್​ಕಾಂ’ ವರದಿ ಮಾಡಿದೆ. ಸಾಂಕ್ರಾಮಿಕದ ನಂತರ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿರುವುದು ಮನೆಗಳ ಬೇಡಿಕೆ ಹೆಚ್ಚಿಸಿದೆ. ಜತೆಗೆ, ಅಪಾರ್ಟ್​​ಮೆಂಟ್ ಕಾಮಗಾರಿ ಮತ್ತು ಫ್ಲ್ಯಾಟ್​​ಗಳ ವಿತರಣೆಯಲ್ಲಿ ವಿಳಂಬವಾಗುತ್ತಿದೆ. ಈ ಎಲ್ಲ ಅಂಶಗಳು ಮನೆ ಬಾಡಿಗೆ ದರ ಹೆಚ್ಚಳಕ್ಕೆ ಕಾರಣ ಎಂದು ವರದಿ ಉಲ್ಲೇಖಿಸಿದೆ.

2021ರ ಡಿಸೆಂಬರ್​ನಲ್ಲಿ ಐಟಿ ಉದ್ಯೋಗಿಯೊಬ್ಬರು ಮುನ್ನೆಕೊಲ್ಲಾಲದಲ್ಲಿ ಒಂದು ಬಿಎಚ್​ಕೆ ಅಪಾರ್ಟ್​​ಮೆಂಟ್​ನಲ್ಲಿ ವಾಸ ಆರಂಭಿಸಿದ್ದರು. ಆಗ ಅವರು 11,000 ರೂ. ಬಾಡಿಗೆ ಪಾವತಿಸಲು ಒಪ್ಪಂದ ಮಾಡಿಕೊಂಡಿದ್ದರು. ಕಳೆದ ಮಾರ್ಚ್​​ನಲ್ಲಿ 13,000 ರೂ. ಬಾಡಿಗೆ ಪಾವತಿಸುವಂತೆ ಮಾಲೀಕರು ಹೇಳಿದ್ದರು. ಅಕ್ಟೋಬರ್​ನಲ್ಲಿ 16,000 ರೂ. ಬಾಡಿಗೆ ನೀಡುವಂತೆ ಮಾಲೀಕರು ಸೂಚಿಸಿದ್ದರು. ಈ ಕುರಿತು ಪ್ರಶ್ನಿಸಿದಾಗ, ನೀವು ಮನೆ ಖಾಲಿ ಮಾಡಿದರೆ ಹೆಚ್ಚು ಬಾಡಿಗೆಗೆ ಜನ ಬರುತ್ತಾರೆ ಎಂದು ಮಾಲೀಕರು ಹೇಳಿದರು ಎಂಬುದಾಗಿ ಐಟಿ ಉದ್ಯೋಗಿ ಹೇಳಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮತ್ತೊಬ್ಬ ವ್ಯಕ್ತಿ 6 ತಿಂಗಳ ಹಿಂದೆ ನಗರಕ್ಕೆ ಬಂದಿದ್ದು, ಎಚ್​ಎಸ್​ಆರ್ ಲೇಯೌಟ್​​​ನಲ್ಲಿ 1 ಬಿಎಚ್​ಕೆ ನಿವಾಸವನ್ನು ಬಾಡಿಗೆಗೆ ಪಡೆದಿದ್ದರು. ಇವರಿಗೆ 15,000 ರೂ. ಬಾಡಿಗೆ ಮತ್ತು 1 ಲಕ್ಷ ರೂ. ಡಿಪಾಸಿಟ್ ಇಡಲು ಸೂಚಿಸಲಾಗಿತ್ತು. ಕನಿಷ್ಠ 60,000 ರೂ. ಡಿಪಾಸಿಟ್ ನೀಡುವಂತೆ ಹೇಳಲಾಗಿತ್ತು ಎಂಬುದಾಗಿ ವರದಿ ತಿಳಿಸಿದೆ.

ಗಗನಕ್ಕೇರುತ್ತಿರುವ ಮನೆ ಬಾಡಿಗೆ

ಕೋರಮಂಗಲ ಬ್ಲಾಕ್ 3, ಬ್ಲಾಕ್ 4 ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಬಾಡಿಗೆಯನ್ನು ಶೇಕಡಾ 20ರಷ್ಟು ಹೆಚ್ಚಿಸಿರುವುದಾಗಿ ಚೆನ್ನೈ ಮೂಲದ ರಿಯಲ್ ಎಸ್ಟೇಟ್ ಕಂಪನಿ ‘ಹನು ರೆಡ್ಡಿ ರಿಯಲ್ಟಿ’ಯ ಉಪಾಧ್ಯಕ್ಷ ಕಿರಣ್ ಕುಮಾರ್ ತಿಳಿಸಿದ್ದಾರೆ. ಕಂಪನಿಯು ಬೆಂಗಳೂರು, ಹೈದರಾಬಾದ್, ಪುಣೆ ಹಾಗೂ ಇತರೆಡೆಗಳಲ್ಲಿ ಕಚೇರಿಗಳನ್ನು ಹೊಂದಿದೆ. ಬೆಂಗಳೂರಿನ ಈ ಭಾಗದಲ್ಲಿ ಪೂರೈಕೆ ಕಡಿಮೆ ಇದೆ. 2 ಬಿಎಚ್​ಕೆ ಅಪಾರ್ಟ್​ಮೆಂಟ್​​ಗೆ 30,000 ರೂ.ನಿಂದ 40,000 ರೂ.ವರೆಗೆ ಬಾಡಿಗೆ ಇದೆ. ಹಿಂದೆ ಇದು 25,000 ರೂ. ಇತ್ತು ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Attention PAN Card Holders: ಪ್ಯಾನ್ ಕಾರ್ಡ್ ಬಳಸುವಾಗ ಈ ತಪ್ಪುಗಳನ್ನು ಮಾಡಬೇಡಿ; 10,000 ರೂ. ದಂಡ ಪಾವತಿಸಬೇಕಾಗಬಹುದು

ಕೋರಮಂಗಲದ ಪ್ರಮುಖ ಪ್ರದೇಶಗಳಲ್ಲಿ ಬಾಡಿಗೆ ದರವನ್ನು ಶೇಕಡಾ 20ರಿಂದ 30ರಷ್ಟು ಹೆಚ್ಚಿಸಿರುವುದಾಗಿ ಅಮೆರಿಕದ ರಿಯಲ್​ ಎಸ್ಟೇಟ್ ಕನ್ಸಲ್ಟೆಂಟ್​ನ ಸ್ಥಳೀಯ ವ್ಯವಸ್ಥಾಪಕ ಪಾಲುದಾರ ಬಾಲಾಜಿ ಬದರಿನಾಥ್ ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ. ಈ ಪ್ರದೇಶದಲ್ಲಿ ಫರ್ನಿಶ್ಡ್ 2 ಬಿಎಚ್​ಕೆ ಮನೆಗೆ 30,000 ರೂ.ನಿಂದ 40,000 ರೂ.ವರೆಗೆ ಬಾಡಿಗೆ ಇದೆ ಎಂದು ಅವರು ಹೇಳಿದ್ದಾರೆ.

ಯಾವ ಪ್ರದೇಶದಲ್ಲಿ ಮನೆ ಬಾಡಿಗೆ ಅತಿಹೆಚ್ಚು?

ಬಿಟಿಎಂ ಸ್ಟೇಜ್ 4, ಎಸ್​ಎಸ್​ಆರ್ ಲೇಯೌಟ್, ಬೆಳ್ಳಂದೂರು, ಸರ್ಜಾಪುರ ಸೇರಿದಂತೆ ಕೆಲವು ಮೈಕ್ರೊ ಮಾರುಕಟ್ಟೆ ಪ್ರದೇಶಗಳು ಹಾಗೂ ರಿಯಲ್ ಎಸ್ಟೇಟ್ ಉದ್ಯಮ ಬೆಳವಣಿಗೆ ಹೊಂದುತ್ತಿರುವ ಕಡೆಗಳಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡಾ 100ರಷ್ಟು ಬಾಡಿಗೆ ಹೆಚ್ಚಳವಾಗಿದೆ ಎಂದು ಬಾಲಾಜಿ ಬದರಿನಾಥ್ ಮಾಹಿತಿ ನೀಡಿದ್ದಾರೆ.

ಪ್ರವಾಹವೂ ಕಾರಣ!

ಸೆಪ್ಟೆಂಬರ್​ನಲ್ಲಿ ಬೆಂಗಳೂರಿನ ಹಲವೆಡೆ ಉಂಟಾದ ಪ್ರವಾಹ ಪರಿಸ್ಥಿತಿಯೂ ರಿಯಲ್ ಎಸ್ಟೇಟ್ ಕ್ಷೇತ್ರದ ಮೇಲೆ ಪರಿಣಾಮ ಬೀರಿದೆ. ಹೊಸದಾಗಿ ಮನೆ ಕೊಂಡುಕೊಳ್ಳುವವರು ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದಾರೆ ಎಂದು ರಿಯಲ್ ಎಸ್ಟೇಟ್ ಕಂಪನಿಗಳು ತಿಳಿಸಿವೆ. ನೀರು ನಿಲ್ಲುವಂಥ ಪ್ರದೇಶಗಳನ್ನು ಹೊರತುಪಡಿಸಿ ಇತರ ಕಡೆಗಳಲ್ಲಿ ಬಾಡಿಗೆಗೆ ಮನೆ ಒದಗಿಸುವಂತೆ ಜನ ಕೇಳುತ್ತಿದ್ದಾರೆ. ಇದು ವಸತಿ ಮಾರಾಟದ ಮೇಲೂ ಪರಿಣಾಮ ಬೀರುವುದರ ಜತೆಗೆ ಮನೆ ಬಾಡಿಗೆ ದರದ ಮೇಲೂ ಪ್ರಭಾವ ಬೀರಿದೆ ಎಂದು ರಿಯಲ್ ಎಸ್ಟೇಟ್ ಉದ್ಯಮಿಗಳು ತಿಳಿಸಿದ್ದಾರೆ.

ವಸತಿ ಪೂರೈಕೆ, ಬೇಡಿಕೆಯಲ್ಲಿ ಅಸಮತೋಲನ

ಕಳೆದ ಎರಡು ವರ್ಷಗಳಿಂದ ಹೊಸ ಅಪಾರ್ಟ್​ಮೆಂಟ್​ಗಳ ಹಾಗೂ ವಸತಿ ಕಟ್ಟಡದ ನಿರ್ಮಾಣ ಕಾರ್ಯಗಳು ನಿಧಾನಗತಿಯಲ್ಲಿ ಸಾಗಿವೆ. ಬೇಡಿಕೆಗೆ ತಕ್ಕಂತೆ ಪೂರೈಕೆಯಾಗುತ್ತಿಲ್ಲ ಎಂದು ಆನ್​ಲೈನ್ ರಿಯಲ್ ಎಸ್ಟೇಟ್ ಕನ್ಸಲ್ಟೆನ್ಸಿ ‘ನೋಬ್ರೋಕರ್​’ನ ಸಂಸ್ಥಾಪಕ ಸೌರಭ್ ಗಾರ್ಗ್ ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ. ಸಾಂಕ್ರಾಮಿಕದ ಕಾರಣ ನಿರ್ಮಾಣ ಚಟುವಟಿಕೆಗಳು ಸ್ಥಗಿತಗೊಂಡಿದ್ದರಿಂದ ಹೊಸ ಅಪಾರ್ಟ್​ಮೆಂಟ್​ಗಳ ಪೂರೈಕೆಯಾಗಿಲ್ಲ. ಇದು ಬಾಡಿಗೆ ದರ ಹೆಚ್ಚಳಕ್ಕೂ ಕಾರಣವಾಗಿದೆ. ಬೆಂಗಳೂರಿನಲ್ಲಿ ಒಟ್ಟಾರೆಯಾಗಿ ಮನೆ ಬಾಡಿಗೆಯಲ್ಲಿ ಶೇಕಡಾ 18ರಷ್ಟು ಹೆಚ್ಚಳವಾಗಿದೆ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ