
ಬೆಂಗಳೂರು, ಜುಲೈ 3: ಆನ್ಲೈನ್ನಲ್ಲಿ ಪೂಜಾ ಸಾಮಗ್ರಿಗಳನ್ನು ಖರೀದಿಸಲು, ನಿರ್ದಿಷ್ಟ ದೇವಸ್ಥಾನಗಳಲ್ಲಿ ವಿವಿಧ ಪೂಜೆಗಳನ್ನು ಬುಕ್ ಮಾಡುವುದು ಇತ್ಯಾದಿ ಕಾರ್ಯಗಳಿಗೆ ಆನ್ಲೈನ್ ವೇದಿಕೆಯಾಗಿರುವ ಶ್ರೀ ಮಂದಿರ್ ಆ್ಯಪ್ ಬಗ್ಗೆ ನೀವು ಕೇಳಿರಬಹುದು. ಈ ಆ್ಯಪ್ ಅನ್ನು ನಿರ್ಮಿಸಿದ್ದು ಆ್ಯಪ್ಸ್ಫಾರ್ಭಾರತ್ (AppsForBharat) ಎನ್ನುವ ಬೆಂಗಳೂರು ಮೂಲದ ಸ್ಟಾರ್ಟಪ್. ಈಗ ಈ ಕಂಪನಿ ತನ್ನ ಬ್ಯುಸಿನೆಸ್ ಹಾಗೂ ಕಾರ್ಯವ್ಯಾಪ್ತಿಯನ್ನು ಹೆಚ್ಚಿಸುತ್ತಿದ್ದು ಅದಕ್ಕಾಗಿ ಹೊಸದಾಗಿ ಬಂಡವಾಳ ಪಡೆದಿದೆ.
ಸೀರೀಸ್ ಸಿ ಫಂಡಿಂಗ್ ಸುತ್ತಿನಲ್ಲಿ ಆ್ಯಪ್ಸ್ ಫಾರ್ ಭಾರತ್ ಕಂಪನಿಯು 175 ಕೋಟಿ ರೂ ಫಂಡಿಂಗ್ ಪಡೆದಿದೆ. ಸುಸ್ಕೆನ್ನಾ ಏಷ್ಯಾ ವಿಸಿ (Susquehanna Asia VC) ಎನ್ನುವ ವೆಂಚರ್ ಕ್ಯಾಪಿಟಲ್ ಹಾಗೂ ಇತರ ಕೆಲ ಕಂಪನಿಗಳು ಆ್ಯಪ್ಸ್ ಫಾರ್ ಭಾರತ್ಗೆ ಬಂಡವಾಳ ನೀಡಿವೆ. ಈ ಹಿಂದಿನ ಫಂಡಿಂಗ್ ರೌಂಡ್ನಲ್ಲಿ ಬಂಡವಾಳ ಕೊಟ್ಟಿದ್ದ ನಂದನ್ ನಿಲೇಕಣಿ ಅವರ ಫಂಡಮೆಂಟಮ್, ಎಲಿವೇಶನ್ ಕ್ಯಾಪಿಟಲ್ ಮತ್ತು ಪೀಕ್ ಎಕ್ಸ್ವಿ ಪಾರ್ಟ್ನರ್ಸ್ ಕಂಪನಿಗಳು ಸೀರೀಸ್ ಸಿ ಫಂಡಿಂಗ್ ರೌಂಡ್ನಲ್ಲೂ ಪಾಲ್ಗೊಂಡು ಬಂಡವಾಳ ಕೊಟ್ಟಿವೆ. ಇಲ್ಲಿಯವರೆಗೆ ಈ ಸ್ಟಾರ್ಟಪ್ 53 ಮಿಲಿಯನ್ ಡಾಲರ್ನಷ್ಟು (452 ಕೋಟಿ ರೂ) ಫಂಡಿಂಗ್ ಪಡೆದಿದೆ.
ಇದನ್ನೂ ಓದಿ: ಹೊಸ ದ್ವೀಪ ಖರೀದಿಸಿ ಟೆಕ್ಕಿಗಳಿಗೆಂದೇ ಹೊಸ ದೇಶ ಕಟ್ಟಲು ಹೊರಟ ಭಾರತೀಯ ಅಮೆರಿಕನ್ ಉದ್ಯಮಿ ಬಾಲಾಜಿ ಶ್ರೀನಿವಾಸನ್
ಪ್ರಶಾಂತ್ ಸಚನ್ ಎನ್ನುವ ಯುವಕ 2020ರಲ್ಲಿ ಸ್ಥಾಪನೆ ಮಾಡಿದ ಆ್ಯಪ್ಸ್ ಫಾರ್ ಭಾರತ್ ಎನ್ನುವ ಈ ಸ್ಟಾರ್ಟಪ್, ತನಗೆ ಸಿಕ್ಕಿರುವ ಈ 175 ಕೋಟಿ ರೂ ಫಂಡಿಂಗ್ ಉಪಯೋಗಿಸಿ 20ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ತನ್ನ ಕಾರ್ಯಚಟುವಟಿಕೆ ವಿಸ್ತರಿಸಲು ಯೋಜಿಸಿದೆ. ಅಯೋಧ್ಯ, ವಾರಾಣಸಿ, ಉಜ್ಜೈನಿ, ಹರಿದ್ವಾರ ಮೊದಲಾದ ದೇವಸ್ಥಾನಗಳಲ್ಲಿ ಪ್ರಸಾದ ಮತ್ತು ಪೂಜಾ ಸಾಮಗ್ರಿಗಳನ್ನು ಪೂರೈಸಲು ಬೇಕಾದ ವ್ಯವಸ್ಥೆಗಳನ್ನು ಮಾಡಲಿದೆ.
ಆ್ಯಪ್ಸ್ ಫಾರ್ ಭಾರತ್ ಕಂಪನಿಯ ಪ್ರಮುಖ ಆ್ಯಪ್ ಎಂದರೆ ಶ್ರೀ ಮಂದಿರ್. ಇದು 4 ಕೋಟಿಗೂ ಅಧಿಕ ಡೌನ್ಲೋಡ್ ಕಂಡಿದೆ. ಈ ಆ್ಯಪ್ ಮೂಲಕ ಭಕ್ತರು ಆನ್ಲೈನ್ ಪೂಜೆಗಳನ್ನು ಬುಕ್ ಮಾಡಬಹುದು, ಪ್ರಸಾದ ಸ್ವೀಕರಿಸಬಹುದು. ಭಜನೆ, ಕಥೆ, ಮಂತ್ರ, ಇತ್ಯಾದಿ ಕಂಟೆಂಟ್ಗಳನ್ನು ಈ ಪ್ಲಾಟ್ಫಾರ್ಮ್ನಲ್ಲಿ ನೋಡಬಹುದು.
ಇದನ್ನೂ ಓದಿ: ಮೈಕ್ರೋಸಾಫ್ಟ್ನಿಂದ ಮತ್ತೆ ಲೇ ಆಫ್ ಭೂತ; 9,100 ಉದ್ಯೋಗಿಗಳಿಗೆ ಕೆಲಸ ಹೋಗುವ ಸಾಧ್ಯತೆ
ಕಳೆದ ಒಂದು ವರ್ಷದಲ್ಲಿ 12 ಲಕ್ಷಕ್ಕೂ ಹೆಚ್ಚು ಜನರು ಈ ಆ್ಯಪ್ ಬಳಸಿ 70ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ 52 ಲಕ್ಷ ಪೂಜಾ ವಿಧಿ ವಿಧಾನಗಳನ್ನು ಪೂರ್ಣಗೊಳಿಸಿದ್ದಾರೆ. 2025ರ ಮಹಾಕುಂಭದಲ್ಲಿ ವೇದಾಶ್ರಮ್ ಟ್ರಸ್ಟ್ಗೆ ಶ್ರೀಮಂದಿರ್ ಅಧಿಕೃತ ಡಿಜಿಟಲ್ ಪಾರ್ಟ್ನರ್ ಕೂಡ ಆಗಿತ್ತು. ಅಲ್ಲಿ 3 ಲಕ್ಷಕ್ಕೂ ಅಧಿಕ ಭಕ್ತರಿಗೆ ಆನ್ಲೈನ್ ಮತ್ತು ಆಫ್ಲೈನ್ ಎರಡೂ ಸೇವೆಗಳನ್ನು ನೀಡಿತ್ತು.
ಭಕ್ತರಿಗೆ ದೇವಸ್ಥಾನ ಅನುಭವದ ಡಿಜಿಟಲ್ ಟಚ್ ಕೊಡುವ ಒಂದು ಕಂಪನಿಗೆ ಇಷ್ಟು ಕಾರ್ಪೊರೇಟ್ ಬಂಡವಾಳ ಸಿಗುತ್ತಿರುವುದು ಈ ಕ್ಷೇತ್ರದ ಅಗಾಧತೆಯನ್ನು ತೋರಿಸುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ