ದೇಶದ ಅತಿ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು (State Bank Of India) 2022ರ ಮಾರ್ಚ್ 10ರಿಂದ ಜಾರಿಗೆ ಬರುವಂತೆ 2 ಕೋಟಿ ರೂಪಾಯಿಗಿಂತ ಹೆಚ್ಚಿನ ಮೊತ್ತದ ನಿಶ್ಚಿತ ಠೇವಣಿಗಳ (Fixed Deposits) ಮೇಲಿನ ಬಡ್ಡಿದರಗಳನ್ನು 20ರಿಂದ 40 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ ಎಂದು ಎಸ್‌ಬಿಐ ವೆಬ್ಸೈಟ್ನಲ್ಲಿ ತಿಳಿಸಲಾಗಿದೆ. 211 ದಿನಗಳಿಂದ 356 ದಿನಗಳಿಗಿಂತ ಕಡಿಮೆ ಅವಧಿಗೆ ರೂ. 2 ಕೋಟಿಗಿಂತ ಹೆಚ್ಚಿನ ಮೌಲ್ಯದ ಎಫ್ಡಿಗಳ ಮೇಲಿನ ಬಡ್ಡಿ ದರವನ್ನು 20 ಬೇಸಿಸ್ ಪಾಯಿಂಟ್‌ಗಳಷ್ಟು ಏರಿಸಲಾಗಿದೆ . ಈ ವರ್ಷದ ಮಾರ್ಚ್ 10ರಿಂದ ಜಾರಿಗೆ ಬರುವಂತೆ, ಈ ಎಫ್‌ಡಿಗಳು ಈಗ ಶೇ 3.30ರಷ್ಟು ಗಳಿಸುತ್ತದೆ. ಈ ಹಿಂದೆ ಶೇ 3.10ರಷ್ಟು ಬರುತ್ತಿತ್ತು. ಇನ್ನು ಹಿರಿಯ ನಾಗರಿಕರು ಈ ಹಿಂದೆ ಬರುತ್ತಿದ್ದ ಶೇ 3.60ರಿಂದ ಶೇ 3.80ರಷ್ಟು ಗಳಿಸುತ್ತಾರೆ.
1 ವರ್ಷದಿಂದ 10 ವರ್ಷಗಳವರೆಗಿನ ಅವಧಿಗೆ ದರಗಳನ್ನು 40 ಬೇಸಿಸ್ ಪಾಯಿಂಟ್‌ಗಳಿಂದ ಶೇ 3.10ರಿಂದ ಶೇ 3.60ಕ್ಕೆ ಹೆಚ್ಚಿಸಲಾಗಿದೆ ಎಂದು ಬ್ಯಾಂಕ್ ಹೇಳಿದ್ದು. ಹಿರಿಯ ನಾಗರಿಕರು ಶೇ 3.60ರಿಂದ ಶೇ 4.10ರಷ್ಟು ಗಳಿಸುತ್ತಾರೆ. ಪರಿಷ್ಕೃತ ಬಡ್ಡಿದರಗಳು ಈಗ ಹೊಸ ಠೇವಣಿಗಳಿಗೆ ಮತ್ತು ಮೆಚ್ಯೂರಿಂಗ್ ಠೇವಣಿಗಳ ರಿನೀವಲ್ಗೆ ಅನ್ವಯಿಸುತ್ತವೆ ಎಂದು ಎಸ್‌ಬಿಐ ಹೇಳಿದೆ. NRO ಟರ್ಮ್ ಡೆಪಾಸಿಟ್ ಬಡ್ಡಿ ದರಗಳು ದೇಶೀಯ ಅವಧಿಯ ಠೇವಣಿ ಬಡ್ಡಿ ದರಗಳೊಂದಿಗೆ ಹೊಂದಾಣಿಕೆ ಆಗುತ್ತವೆ. ಈ ಬಡ್ಡಿ ದರಗಳು ಸಹಕಾರಿ ಬ್ಯಾಂಕ್‌ಗಳು ಹೊಂದಿರುವ ದೇಶೀಯ ಟರ್ಮ್ ಡೆಪಾಸಿಟ್ಗಳಿಗೂ ಅನ್ವಯಿಸುತ್ತವೆ.
ಫಿಕ್ಸೆಡ್ ಡೆಪಾಸಿಟ್ಸ್ ಬಡ್ಡಿ ದರಗಳು: 2 ಕೋಟಿಗಿಂತ ಕಡಿಮೆ ಮೊತ್ತಕ್ಕೆ
ಎರಡು ವರ್ಷದಿಂದ ಮೂರು ವರ್ಷಕ್ಕಿಂತ ಕಡಿಮೆ ಅವಧಿಯ ಎಫ್‌ಡಿ ಅವಧಿಗೆ ಬಡ್ಡಿ ದರವನ್ನು 10 ಬೇಸ್ ಪಾಯಿಂಟ್‌ಗಳಿಂದ ಶೇ 5.20ಗೆ ಹೆಚ್ಚಿಸಲಾಗಿದ್ದು, ಮೂರು ವರ್ಷದಿಂದ ಐದು ವರ್ಷಕ್ಕಿಂತ ಕಡಿಮೆ ಅವಧಿಗೆ 15 ಬೇಸಿಸ್ ಪಾಯಿಂಟ್‌ಗಳಿಂದ ಶೇ 5.45ಕ್ಕೆ ಹೆಚ್ಚಿಸಲಾಗಿದೆ ಎಂದು ಎಸ್‌ಬಿಐ ವೆಬ್‌ಸೈಟ್ ತಿಳಿಸಿದೆ.
ಐದು ವರ್ಷಗಳು ಮತ್ತು 10 ವರ್ಷಗಳವರೆಗಿನ ಎಫ್‌ಡಿ ಅವಧಿಗೆ ಈ ವರ್ಷದ ಫೆಬ್ರವರಿ 15 ರಿಂದ ಜಾರಿಗೆ ಬರುವಂತೆ ಬಡ್ಡಿ ದರವನ್ನು 10 ಬೇಸಿಸ್ ಪಾಯಿಂಟ್‌ಗಳಿಂದ ಶೇ 5.50ಗೆ ಹೆಚ್ಚಿಸಲಾಗಿದೆ.
ಅಲ್ಲದೆ, ದೀರ್ಘ ಅವಧಿಯ ಠೇವಣಿಗಳಿಗೆ ಅಕಾಲಿಕ ಪೆನಾಲ್ಟಿಗಳು ಎಲ್ಲ ಅವಧಿಗಳಿಗೆ ಶೇ 1 ಆಗಿರುತ್ತದೆ. ಇದು ಎಲ್ಲ ಹೊಸ ಠೇವಣಿಗಳಿಗೆ ಮತ್ತು ರಿನೀವಲ್ಗಳಿಗೆ ಅನ್ವಯಿಸುತ್ತದೆ ಎಂದು ಎಸ್‌ಬಿಐ ಹೇಳಿದೆ.
ಟರ್ಮ್ ಡೆಪಾಸಿಟ್ನ ಅಕಾಲಿಕ ಹಿಂಪಡೆಯುವಿಕೆಗೆ ದಂಡವನ್ನು ಬ್ಯಾಂಕಿನ ವಿವೇಚನೆಯಿಂದ ಕಡಿಮೆಗೊಳಿಸಲಾಗುವುದಿಲ್ಲ ಅಥವಾ ಮನ್ನಾ ಮಾಡಲಾಗುವುದಿಲ್ಲ.
ಹಿರಿಯ ನಾಗರಿಕರಿಗೆ ಎಫ್‌ಡಿ ಬಡ್ಡಿ ದರಗಳು
ಹಿರಿಯ ನಾಗರಿಕರು ಎಲ್ಲ ಅವಧಿಗಳಲ್ಲಿ ಸಾಮಾನ್ಯ ದರಕ್ಕಿಂತ ಹೆಚ್ಚಿನ ಶೇ 0.50ರಷ್ಟು ಪಡೆಯುತ್ತಾರೆ. ಇತ್ತೀಚಿನ ಪರಿಷ್ಕರಣೆ ನಂತರ ಏಳು ದಿನಗಳಿಂದ 10 ವರ್ಷ ಮುಕ್ತಾಯಗೊಳ್ಳುವ ಠೇವಣಿಗಳ ಮೇಲೆ ಹಿರಿಯ ನಾಗರಿಕರು ಈಗ ಶೇ 3.5ರಿಂದ ಶೇ 4.10 ಬಡ್ಡಿದರವನ್ನು ಪಡೆಯುತ್ತಾರೆ.
ಇದನ್ನೂ ಓದಿ: TDS: ಬ್ಯಾಂಕ್ ಠೇವಣಿ ಮೇಲೆ ಬರುವ ಬಡ್ಡಿಗೆ ಪರಿಶಿಷ್ಟ ಪಂಗಡವರಿಗೆ ಟಿಡಿಎಸ್ ಕಡಿತವಿಲ್ಲ; ಕೇಂದ್ರದ ಅಧಿಸೂಚನೆ