ನವದೆಹಲಿ, ನವೆಂಬರ್ 8: ಈ ತಿಂಗಳು ಎರಡು ದಿನ ಷೇರು ಮಾರುಕಟ್ಟೆಗೆ ರಜೆ ಇದೆ. ಇದು ಶನಿವಾರ ಮತ್ತು ಭಾನುವಾರದ ಮಾಮೂಲಿಯ ರಜಾ ದಿನಗಳನ್ನು ಹೊರತುಪಡಿಸಿ ಇರುವ ರಜೆಯಾಗಿದೆ. ನವೆಂಬರ್ 15, ಶುಕ್ರವಾರ ಮತ್ತು ನವೆಂಬರ್ 20, ಬುಧವಾದಂದು ಷೇರು ಮಾರುಕಟ್ಟೆ ಮುಚ್ಚಲಿದೆ. ನವೆಂಬರ್ 15ರಂದು ಗುರು ನಾನಕ್ ಜಯಂತಿ ನಿಮಿತ್ತ ಮಾರುಕಟ್ಟೆ ಬಂದ್ ಆಗಿರುತ್ತದೆ. ನವೆಂಬರ್ 20ರಂದು ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಇರುವುದರಿಂದ ಅಂದು ಪೇಟೆ ವ್ಯವಹಾರ ಇರುವುದಿಲ್ಲ.
ಭಾರತದ ಷೇರು ಮಾರುಕಟ್ಟೆಯಲ್ಲಿ ಬಿಎಸ್ಇ ಮತ್ತು ಎನ್ಎಸ್ಇ ಎರಡು ಪ್ರಮುಖ ಷೇರು ವಿನಿಮಯ ಕೇಂದ್ರಗಳು. ಇವೆರಡೂ ಕೂಡ ಇರುವುದು ಮುಂಬೈನಲ್ಲೇ. ನವೆಂಬರ್ 20ರಂದು ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಇದೆ. ಅಂದು ಸ್ಥಳೀಯರು ಮತದಾನ ಮಾಡಲು ಅನುವು ಮಾಡಿಕೊಡಲು ಸಾರ್ವತ್ರಿಕ ರಜೆ ಘೋಷಿಸಲಾಗಿದೆ. ಹೀಗಾಗಿ, ಮುಂಬೈನಲ್ಲಿ ಯಾವುದೇ ಚುನಾವಣೆ ನಡೆದರೂ ಅಂದು ಷೇರು ಮಾರುಕಟ್ಟೆ ಕಾರ್ಯನಿರ್ವಹಿಸುವುದಿಲ್ಲ. ಪಾಲಿಕೆ ಚುನಾವಣೆ ಇರಲಿ, ವಿಧಾನಸಭಾ ಚುನಾವಣೆ ಇರಲಿ, ಲೋಕಸಭಾ ಚುನಾವಣೆ ಇರಲಿ, ಮುಂಬೈನಲ್ಲಿ ಮತದಾನ ನಡೆಯುವ ದಿನದಂದು ಷೇರು ಮಾರುಕಟ್ಟೆ ಬಂದ್ ಆಗಿರುತ್ತದೆ.
ಇದನ್ನೂ ಓದಿ: ಟ್ರಂಪ್ ಬಂದದ್ದೇ ರಿನಿವಬಲ್ ಎನರ್ಜಿ ಷೇರುಗಳಿಗೆ ನಡುಕ; ಸೂಪರ್ಹಿಟ್ ವಾರೀ ಎನರ್ಜೀಸ್ಗೂ ಹೊಡೆತ
ಆರ್ಬಿಐನ ಬ್ಯಾಂಕ್ ರಜಾ ದಿನಗಳ ಕ್ಯಾಲಂಡರ್ನಂತೆ ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಮತ್ತು ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಕೂಡ ಪ್ರತೀ ವರ್ಷದ ರಜಾ ದಿನಗಳ ಕ್ಯಾಲಂಡರ್ ನಿಗದಿ ಮಾಡುತ್ತದೆ. ಅದರ ಪ್ರಕಾರ 2024ರಲ್ಲಿ ಶನಿವಾರ ಮತ್ತು ಭಾನುವಾರ ಹೊರತಪಡಿಸಿ ಬೇರೆ 14 ದಿನ ರಜೆ ಘೋಷಿಸಲಾಗಿದೆ. ಈ ವರ್ಷ ಮೇ 20ರಂದು ಲೋಕಸಭಾ ಚುನಾವಣೆ ನಿಮಿತ್ತ ಮುಂಬೈನಲ್ಲಿ ಮತದಾನ ಇದ್ದರಿಂದ ಅಂದು ರಜೆ ನೀಡಲಾಗಿತ್ತು. ದೀಪಾವಳಿ ಹಬ್ಬಕ್ಕೆಂದು ನವೆಂಬರ್ 1ರಂದು ರಜೆ ಇತ್ತಾದರೂ ಅಂದು ಸಂಜೆ ಒಂದು ಗಂಟೆ ಮುಹೂರ್ತ ಟ್ರೇಡಿಂಗ್ ನಡೆದಿತ್ತು.
ಗಣರಾಜ್ಯೋತ್ಸವ, ಮಹಾಶಿವರಾತ್ರಿ, ಹೋಳಿ, ಗುಡ್ಫ್ರೈಡೆ, ಈದ್, ರಾಮನವಮಿ, ಬಕ್ರೀದ್, ಮೊಹರಂ, ಹೀಗೆ 14 ಹಬ್ಬ ಹರಿದಿನ, ವಿಶೇಷ ದಿನಾಚರಣೆಗಳಿಗೆ ರಜೆ ನೀಡಲಾಗಿತ್ತು. ಮಾರ್ಚ್ ತಿಂಗಳಲ್ಲಿ ಮೂರು ರಜೆಗಳಿದ್ದವು. ಒಂದು ತಿಂಗಳಲ್ಲಿ ಅತಿ ಹೆಚ್ಚು ರಜೆ ಇದ್ದದ್ದು ಮಾರ್ಚ್ನಲ್ಲಿ. ನವೆಂಬರ್ 1 ಅನ್ನು ರಜೆ ಎಂದು ಪರಿಗಣಿಸಿದರೆ ಈ ತಿಂಗಳೂ ಕೂಡ ಮೂರು ರಜಾ ದಿನಗಳಿವೆ.
ಇದನ್ನೂ ಓದಿ: ಜಿಡಿಪಿ ದತ್ತಾಂಶ ಬಿಡುಗಡೆ ಘಳಿಗೆ ಹಿಂದೂಡಿದ ಸರ್ಕಾರ; ಬದಲಾದ ಸಮಯ, ಕಾರಣ ಇತ್ಯಾದಿ ವಿವರ
ಈಗ ನವೆಂಬರ್ 20ರ ಬಳಿಕ ಈ ವರ್ಷ ಷೇರು ಮಾರುಕಟ್ಟೆಗೆ ರಜೆ ಇರುವ ದಿನ ಡಿಸೆಂಬರ್ 25, ಕ್ರಿಸ್ಮಸ್ ಹಬ್ಬಕ್ಕೆ ಮಾತ್ರವೇ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:16 pm, Fri, 8 November 24