ಸೆನ್ಸೆಕ್ಸ್ 1,400 ಅಂಕ ಏರಿಕೆ; ಹೂಡಿಕೆದಾರರಿಗೆ 9 ಲಕ್ಷ ಕೋಟಿ ರೂ ಲಾಭದ ಹಿಗ್ಗು; ಷೇರುಪೇಟೆ ಖುಷಿಯಲ್ಲಿರುವುದು ಯಾಕೆ?
Indian stock market updates: ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳು ಇವತ್ತು ಬಹುತೇಕ ಶೇ. 2ರಷ್ಟು ಏರಿಕೆಗೊಂಡಿವೆ. ಹೂಡಿಕೆದಾರರಿಗೆ 9 ಲಕ್ಷ ಕೋಟಿ ರೂ ಲಾಭದ ಹಿಗ್ಗು ಸಿಕ್ಕಿದೆ. ಬಜಾರು ಇವತ್ತು ಸೂಪರ್ ಎನಿಸಲು ಹಲವು ಕಾರಣಗಳಿವೆ. ಅಮೆರಿಕ ಇರಾನ್ ಮಧ್ಯೆ ಮತ್ತೆ ಮಾತುಕತೆ ಆರಂಭಗೊಳ್ಳುವ ಸಾಧ್ಯತೆ ಇರುವುದೂ ಸೇರಿದಂತೆ ಮಾರುಕಟ್ಟೆಗೆ ಖುಷಿ ಕೊಟ್ಟಿರುವ ಕಾರಣಗಳೇನು ಎನ್ನುವ ವಿವರ ಇಲ್ಲಿದೆ.

ನವದೆಹಲಿ, ಏಪ್ರಿಲ್ 15: ಭಾರತದ ಷೇರು ಮಾರುಕಟ್ಟೆ (stock market) ಇವತ್ತು ಒಟ್ಟಾರೆಯಾಗಿ ಭರ್ಜರಿ ಓಟದಲ್ಲಿದೆ. ಬಿಎಸ್ಇ ಮತ್ತು ಎನ್ಎಸ್ಇನ ಸೆನ್ಸೆಕ್ಸ್ ಮತ್ತು ನಿಫ್ಟಿ ಸೇರಿ ಹೆಚ್ಚಿನ ಸೂಚ್ಯಂಕಗಳು ಪಾಸಿಟಿವ್ ಇವೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಕೂಡ ಇವತ್ತು ಶೇ. 2ರವರೆಗೆ ಹಿಗ್ಗಿವೆ. ಬಿಎಸ್ಇ ಸೆನ್ಸೆಕ್ಸ್ ಇವತ್ತು ಒಂದು ಹಂತದಲ್ಲಿ 1,400 ಅಂಕಗಳಷ್ಟು ಏರಿಕೆ ಕಂಡಿತ್ತು. ನಿಫ್ಟಿ 400 ಅಂಕಗಳು ಜಿಗಿದಿತ್ತು. 24,280ರ ಮಟ್ಟಕ್ಕೆ ಹೋಗಿತ್ತು. ಸದ್ಯ 384 ಅಂಕಗಳ ಹೆಚ್ಚಳದೊಂದಿಗೆ 24,163ರ ಮಟ್ಟದಲ್ಲಿದೆ. ಬಿಎಸ್ಇನಲ್ಲಿ ಲಿಸ್ಟ್ ಆಗಿರುವ ಎಲ್ಲಾ ಕಂಪನಿಗಳ ಒಟ್ಟೂ ಮಾರುಕಟ್ಟೆ ಆಸ್ತಿಮೌಲ್ಯ 449 ಲಕ್ಷ ಕೋಟಿ ರುನಿಂದ 458 ಲಕ್ಷ ಕೋಟಿ ರೂಗೆ ಏರಿದೆ. ಇವತ್ತು 9 ಲಕ್ಷ ಕೋಟಿ ರೂನಷ್ಟು ಸಂಪತ್ತು ಹಿಗ್ಗಿದೆ. ಷೇರು ಮಾರುಕಟ್ಟೆಯ ಇವತ್ತಿನ ರಂಗಿಗೆ ಏನು ಕಾರಣಗಳು?
ಅಮೆರಿಕ ಇರಾನ್ ಮಾತುಕತೆ ಪುನಾರಂಭಗೊಳ್ಳುವ ಸಾಧ್ಯತೆ
ಜಗತ್ತಿಗೆ ತಲೆನೋವಾಗಿರುವುದು ಇರಾನ್ ಅಮೆರಿಕ ಯುದ್ಧ. ಸದ್ಯ ಕದನ ವಿರಾಮ ಇದೆ. ಈ ನಡುವೆ ಮೊದಲ ಸುತ್ತಿನ ಸಂಧಾನ ಮಾತುಕತೆ ಮುರಿಬಿದ್ದದ್ದು ಚಿಂತೆಯ ಸಂಗತಿಯಾಗಿತ್ತು. ಈಗ ಪಾಕಿಸ್ತಾನದಲ್ಲೇ ಎರಡನೇ ಸುತ್ತಿನ ಸಂಧಾನ ಸಭೆ ನಡೆಯಬಹುದು ಎನ್ನಲಾಗಿದೆ. ಇನ್ನೆರಡು ದಿನದಲ್ಲಿ ಮಾತುಕತೆ ಪುನಾರಂಭಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಇದು ಮಾರುಕಟ್ಟೆಯ ಖುಷಿಗೆ ಕಾರಣವಾಗಿರುವುದು.
ಇದನ್ನೂ ಓದಿ: ಎನ್ವಿಡಿಯಾದ ಭಾರತೀಯ ಉದ್ಯೋಗಿಗಳಿಗೆ ಭರ್ಜರಿ ಕೊಡಗೆ; ಒಂದು ಕೋಟಿ ರೂವರೆಗೆ ಸ್ಟಾಕ್ ಗ್ರಾಂಟ್
ಕಚ್ಚಾ ತೈಲ ಬೆಲೆಯಲ್ಲಿ ಇಳಿಮುಖ
ಬ್ಯಾರಲ್ಗೆ 100 ಡಾಲರ್ಗಿಂತ ಹೆಚ್ಚಿಗೆ ಏರಿದ್ದ ಕಚ್ಚಾ ತೈಲ ಬೆಲೆ ಈಗ 95 ಡಾಲರ್ಗಿಂತ ಕಡಿಮೆಗೆ ಇಳಿದಿದೆ. ಇದು ಷೇರು ಬಜಾರಿಗೆ ಡಬಲ್ ಧಮಾಕ ಕೊಟ್ಟಿರುವ ಸಂಗತಿ.
ಜಾಗತಿಕ ಮಾರುಕಟ್ಟೆಯೂ ಹುರುಪಿನಲ್ಲಿ
ಜಾಗತಿಕ ಷೇರು ಮಾರುಕಟ್ಟೆಗಳೂ ಕೂಡ ಬುಧವಾರ ಗರಿಗೆದರಿವೆ. ಜಪಾನ್ನ ನಿಕ್ಕೀ, ಸೌತ್ ಕೊರಿಯಾದ ಕೊಸ್ಪಿ, ಅಮೆರಿಕದ ನಾಸ್ಡಾಕ್, ಎಸ್ ಅಂಡ್ ಪಿ ಇತ್ಯಾದಿ ಮಾರುಕಟ್ಟೆಗಳು ಉತ್ಸಾಹದಲ್ಲಿವೆ. ಇದು ಭಾರತದ ಮಾರುಕಟ್ಟೆಯ ಮೇಲೂ ಪ್ರಭಾವ ಬೀರಿರಬಹುದು.
ಇದನ್ನೂ ಓದಿ: ಒತ್ತಡದ ನಡುವೆಯೂ ಏರದ ಪೆಟ್ರೋಲ್ ಬೆಲೆ; ಪೆಟ್ರೋಲಿಯಂ ಕಂಪನಿಗಳಿಗೆ ಒಂದು ಲೀಟರ್ ಪೆಟ್ರೋಲ್ಗೆ ಆಗುತ್ತಿರುವ ನಷ್ಟವೆಷ್ಟು ಗೊತ್ತಾ?
ರುಪಾಯಿ ಬಲವರ್ಧನೆ
ಡಾಲರ್ ಎದುರು ರುಪಾಯಿ ಮೌಲ್ಯ ಏರಿಕೆ ಕಂಡಿದೆ. ಇವತ್ತಿನ ಟ್ರೇಡಿಂಗ್ನಲ್ಲಿ ರುಪಾಯಿ ಮೌಲ್ಯ 12 ಪೈಸೆಯಷ್ಟು ಹೆಚ್ಚಳವಾಗಿದೆ. ಕಚ್ಚಾ ತೈಲ ಬೆಲೆ ಕಡಿಮೆಗೊಂಡಿದ್ದರಿಂದ ಆಮದು ವೆಚ್ಚವೂ ಕಡಿಮೆಯಾಗಿ ರುಪಾಯಿಯ ಮೇಲಿನ ಒತ್ತಡ ತಗ್ಗುವಂತಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




