Sensex Today: ಪಾತಾಳಕ್ಕೆ ಕುಸಿದ ಷೇರು ಮಾರುಕಟ್ಟೆ; ಹೂಡಿಕೆದಾರರಿಗೆ ಇಂದು 15 ಲಕ್ಷ ಕೋಟಿ ರೂ. ನಷ್ಟ

|

Updated on: Aug 05, 2024 | 4:53 PM

ಷೇರು ಮಾರುಕಟ್ಟೆಯಲ್ಲಿ ಹಾವು-ಏಣಿಯ ಆಟ ಸಾಮಾನ್ಯ. ದಿನವೂ ಸೆನ್ಸೆಕ್ಸ್​ ಬದಲಾಗುತ್ತಲೇ ಇರುತ್ತದೆ. ಆದರೆ, ಇಂದು (ಸೋಮವಾರ) ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ ಉಂಟಾಗಿದ್ದು, ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ. ಇಂದು ಒಂದೇ ದಿನದಲ್ಲಿ ಹೂಡಿಕೆದಾರರಿಗೆ 17 ಲಕ್ಷ ಕೋಟಿ ರೂ. ನಷ್ಟವಾಗಿದೆ.

Sensex Today: ಪಾತಾಳಕ್ಕೆ ಕುಸಿದ ಷೇರು ಮಾರುಕಟ್ಟೆ; ಹೂಡಿಕೆದಾರರಿಗೆ ಇಂದು 15 ಲಕ್ಷ ಕೋಟಿ ರೂ. ನಷ್ಟ
ಷೇರು ಮಾರುಕಟ್ಟೆ
Follow us on

ನವದೆಹಲಿ: ಇಂದು ಷೇರು ಮಾರುಕಟ್ಟೆಯ ವಹಿವಾಟು ಆರಂಭವಾಗುತ್ತಿದ್ದಂತೆ ಬೆಳಗ್ಗೆಯೇ ಸೆನ್ಸೆಕ್ಸ್ ಭಾರೀ ಕುಸಿತ ಕಂಡಿದೆ. ಭಾರತೀಯ ಷೇರು ಮಾರುಕಟ್ಟೆಯ ಮಾನದಂಡಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ 50 ಇಂದು ಸುಮಾರು ಶೇ. 3ರಷ್ಟು ಕುಸಿದಿದೆ. ಯುಎಸ್ ಆರ್ಥಿಕ ಹಿಂಜರಿತದ ಭಯದಿಂದ ಅಮೆರಿಕಾ ಷೇರು ಮಾರುಕಟ್ಟೆ ಕುಸಿಯುತ್ತಿದ್ದಂತೆ ಜಾಗತಿಕವಾಗಿ ಅದು ಷೇರು ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿತು. ಇದರಿಂದ ಭಾರತದಲ್ಲೂ ಷೇರು ಮಾರುಕಟ್ಟೆಯಲ್ಲಿ ಮಹಾಕುಸಿತ ಉಂಟಾಯಿತು.

ಇಂದು ಬೆಳಗ್ಗೆ ವಹಿವಾಟು ಆರಂಭವಾಗುತ್ತಿದ್ದಂತೆ ಹೂಡಿಕೆದಾರರು ತಮ್ಮ ಷೇರುಗಳ ಮಾರಾಟಕ್ಕೆ ಮುಂದಾದರು. ಇದರಿಂದಾಗಿ ಷೇರುಪೇಟೆ ಸೂಚ್ಯಂಕ ಇಂದು ಮಧ್ಯಾಹ್ನದ ವೇಳೆಗೆ 2100 ಅಂಕಗಳ ಕುಸಿತ ಕಂಡಿದೆ. ಸೆನ್ಸೆಕ್ಸ್‌ಗೆ ಅಡ್ಡಾದಿಡ್ಡಿ ಷೇರುಗಳ ಮಾರಾಟವು ತೀವ್ರ ಹೊಡೆತ ನೀಡಿತು. ಸೆನ್ಸೆಕ್ಸ್ ತನ್ನ ಹಿಂದಿನ ಮುಕ್ತಾಯದ 80,981.95 ಬದಲು 78,588.19ನಲ್ಲಿ ಪ್ರಾರಂಭವಾಯಿತು. ಬಳಿಕ ಶೇ. 3.3 ಮಟ್ಟಕ್ಕೆ ಕುಸಿಯಿತು. ಮತ್ತೊಂದೆಡೆ, ನಿಫ್ಟಿ 50 ಅದರ ಹಿಂದಿನ ಮುಕ್ತಾಯದ 24,717.70 ಬದಲು 24,302.85ನಲ್ಲಿ ಪ್ರಾರಂಭವಾಯಿತು. ಬಳಿಕ ಶೇ. 3.3ರಷ್ಟು ಕುಸಿಯಿತು.

ಇದನ್ನೂ ಓದಿ: ಫಸ್ಟ್ ಕ್ರೈ ಐಪಿಒ; ನಷ್ಟದ ಭೀತಿಯಲ್ಲಿ ಸಚಿನ್ ತೆಂಡೂಲ್ಕರ್; ಐಪಿಒಗೆ ಮುಂಚೆಯೇ 2 ಲಕ್ಷ ಷೇರು ಖರೀದಿಸಿದ್ದ ಮಾಸ್ಟರ್ ಬ್ಲಾಸ್ಟರ್

ಷೇರು ಮಾರುಕಟ್ಟೆ ಆರಂಭವಾಗುತ್ತಿದ್ದಂತೆ ಬೆಳಗ್ಗೆಯಿಂದಲೇ ಹೂಡಿಕೆದಾರರು ಷೇರು ಮಾರಾಟಕ್ಕೆ ಮುಂದಾಗಿದ್ದರಿಂದ ಆರಂಭದಲ್ಲೇ ಸೆನ್ಸೆಕ್ಸ್ 2,393.76 ಕುಸಿದು, 78,588.19 ಅಂಕಗಳಿಂದ ಆರಂಭವಾಯಿತು. ಮಧ್ಯಾಹ್ನದ ವೇಳೆಗೆ ಅಲ್ಪ ಸುಧಾರಣೆ ಕಂಡು ಮತ್ತೆ 78,865.81 ಅಂಕಗಳಿಗೆ ಏರಿಕೆಯಾಗಿದೆ. ನಿಫ್ಟಿ 50 ಕೂಡ ಮಧ್ಯಾಹ್ನದ ವೇಳೆಗೆ 645.85 (2.25%) ಕುಸಿತ ಕಂಡಿದೆ.

ಷೇರು ಮಾರುಕಟ್ಟೆ ಕುಸಿತಕ್ಕೆ ಕಾರಣವೇನು?:

ಯುಎಸ್ ಮಾರುಕಟ್ಟೆಯಲ್ಲಿ ಉದ್ಯೋಗ ಕಡಿತದಿಂದಾಗಿ ಅದು ಆರ್ಥಿಕ ಬೆಳವಣಿಗೆಯನ್ನು ನಿಧಾನಗೊಳಿಸುವ ಆತಂಕ ಎದುರಾಗಿದೆ. ಇದು ಷೇರು ಮಾರುಕಟ್ಟೆಯ ಮೇಲೂ ಪರಿಣಾಮ ಬೀರುವುದರಿಂದ ಹೂಡಿಕೆದಾರರು ಜಾಗತಿಕ ಆರ್ಥಿಕ ಹಿಂಜರಿತದ ಭೀತಿಯಿಂದ ಷೇರುಗಳನ್ನು ಮಾರಲು ಮುಂದಾದರು. ಯುಎಸ್‌ ಮಾರುಕಟ್ಟೆ ವಿಶ್ವದ ಬಲವಾದ ಆರ್ಥಿಕತೆ ಹೊಂದಿರುವ ಕಾರಣ, ಈ ದೇಶದ ಆರ್ಥಿಕ ಏರಿಳಿತಗಳು ಜಾಗತಿಕ ಷೇರು ಮಾರುಕಟ್ಟೆಗಳ ಮೇಲೆ ಪ್ರಭಾವ ಬೀರುತ್ತವೆ.

ಯಾರಿಗೆ ಲಾಭ?:

ಕೇವಲ ಐದು ಷೇರುಗಳು ಎಂದು ಉತ್ತಮ ಮೌಲ್ಯದಲ್ಲಿವೆ. ಹಿಂದೂಸ್ತಾನ್ ಯೂನಿಲಿವರ್ (ಶೇ. 1.02), ಟಾಟಾ ಕನ್​ಸ್ಯೂಮರ್ (ಶೇ. 0.70), ನೆಸ್ಲೆ (ಶೇ. 0.68), ಬ್ರಿಟಾನಿಯಾ (ಶೇ. 0.51), ಮತ್ತು ಎಚ್‌ಡಿಎಫ್‌ಸಿ ಲೈಫ್ (ಶೇ. 0.21 ಏರಿಕೆ) ನಿಫ್ಟಿ 50 ಸೂಚ್ಯಂಕದಲ್ಲಿ ಇಂದು ಲಾಭ ಗಳಿಸಿವೆ.

ಇದನ್ನೂ ಓದಿ: ಸೂಪರ್​ಸ್ಟಾರ್ ಆಗಿದ್ದ ಎಚ್​ಎಎಲ್​ನ ಷೇರುಬೆಲೆ ಸತತವಾಗಿ ಕುಸಿಯುತ್ತಿರುವುದು ಯಾಕೆ? ಇಲ್ಲಿದೆ ಕಾರಣ

ಯಾರಿಗೆ ನಷ್ಟ?:

ಟಾಟಾ ಮೋಟಾರ್ಸ್ (ಶೇ. 7.40 ಕುಸಿತ), ಒಎನ್‌ಜಿಸಿ (ಶೇ. 6.39 ಕುಸಿತ) ಮತ್ತು ಅದಾನಿ ಪೋರ್ಟ್ಸ್ (ಶೇ. 5.92 ಕುಸಿತ) ಷೇರುಗಳು ಸೂಚ್ಯಂಕದಲ್ಲಿ ಅತಿ ಹೆಚ್ಚು ನಷ್ಟ ಅನುಭವಿಸಿವೆ.

ಇಂದು ಸೆನ್ಸೆಕ್ಸ್ 2,223 ಪಾಯಿಂಟ್‌ಗಳು ಅಥವಾ ಶೇಕಡಾ 2.74 ರಷ್ಟು ಇಳಿಕೆಯಾಗಿ 78,759.40 ಕ್ಕೆ ಕೊನೆಗೊಂಡರೆ, ನಿಫ್ಟಿ 50 662 ಪಾಯಿಂಟ್ ಅಥವಾ 2.68 ರಷ್ಟು ಕಡಿಮೆಯಾಗಿ 24,055.60 ಕ್ಕೆ ಕೊನೆಗೊಂಡಿತು. ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕ ಶೇ.3.60ರಷ್ಟು ಕುಸಿದಿದ್ದು, ಸ್ಮಾಲ್‌ಕ್ಯಾಪ್ ಸೂಚ್ಯಂಕ ಶೇ.4.21ರಷ್ಟು ಕುಸಿದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 4:52 pm, Mon, 5 August 24