
ನವದೆಹಲಿ, ಆಗಸ್ಟ್ 18: ಕಳೆದ ಕೆಲ ವಾರಗಳಿಂದ ಕಳೆಗುಂದಿದ್ದ ಷೇರು ಮಾರುಕಟ್ಟೆ (stock market) ಇವತ್ತು ಸೋಮವಾರ ಭರ್ಜರಿ ಏರಿಕೆ ಕಂಡಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಗರಿಗೆದರಿವೆ. ಬಿಎಸ್ಇನ ಸೆನ್ಸೆಕ್ಸ್ ಸೋಮವಾರ ಒಂದು ಸಾವಿರಕ್ಕೂ ಹೆಚ್ಚು ಅಂಕಗಳ ಏರಿಕೆ ಕಂಡಿದೆ. ನಿಫ್ಟಿ50 ಸೂಚ್ಯಂಕ ಹಲವು ದಿನಗಳ ಬಳಿಕ 25,000 ಅಂಕಗಳ ಗಡಿ ದಾಟಿದೆ. ಅದರಲ್ಲೂ ಆಟೊಮೊಬೈಲ್ ಮತ್ತು ಕನ್ಸೂಮರ್ ಗೂಡ್ಸ್ ಕ್ಷೇತ್ರಗಳ ಷೇರುಗಳಿಗೆ ಬೇಡಿಕೆ ಹೆಚ್ಚಿದೆ. ಷೇರು ಮಾರುಕಟ್ಟೆ ದಿಢೀರನೇ ಲಂಬವಾಗಿ ಏರಲು ಏನು ಕಾರಣ?
ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಿಎಸ್ಟಿ ಸುಧಾರಣೆಗಳನ್ನು ತರುವುದಾಗಿ ಘೋಷಿಸಿದ್ದರು. ಶೇ. 12 ಮತ್ತು ಶೇ. 28 ಟ್ಯಾಕ್ಸ್ ಸ್ಲಾಬ್ಗಳನ್ನು ತೆಗೆದುಹಾಕಿ, ಕೇವಲ ಶೇ. 5 ಮತ್ತು ಶೇ. 18 ಸ್ಲ್ಯಾಬ್ ಮಾತ್ರ ಉಳಿಸಿಕೊಳ್ಳಲು ಸರ್ಕಾರ ಯೋಜಿಸಿದೆ. ಟ್ಯಾಕ್ಸ್ ದರಗಳು ಸಾಕಷ್ಟು ಕಡಿಮೆ ಆಗಲಿವೆ. ಇದರಿಂದ ಹೆಚ್ಚಿನ ಸರಕುಗಳ ಬೆಲೆ ಇಳಿಕೆ ಆಗಬಹುದು. ಪ್ರಯಾಣಿಕ ವಾಹನಗಳ ಮೇಲಿನ ಜಿಎಸ್ಟಿಯನ್ನೂ ಕಡಿಮೆ ಮಾಡಬಹುದು. ಇದು ಮಾರುಕಟ್ಟೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ.
ಇದನ್ನೂ ಓದಿ: ಸೋಲಾರ್ ಶಕ್ತಿ: ಐತಿಹಾಸಿಕ ಸೆಂಚುರಿ ಭಾರಿಸಿದ ಭಾರತ; 100 ಗಿ.ವ್ಯಾ. ಸೋಲಾರ್ ಪಿವಿ ಮಾಡ್ಯೂಲ್ ತಯಾರಿಕಾ ಸಾಮರ್ಥ್ಯ
ಎಸ್ ಅಂಡ್ ಪಿ ಗ್ಲೋಬಲ್ ರೇಟಿಂಗ್ಸ್ ಸಂಸ್ಥೆ ಭಾರತಕ್ಕೆ ನೀಡಿರುವ ರೇಟಿಂಗ್ ಅನ್ನು ಬಿಬಿಬಿಗೆ ಅಪ್ಗ್ರೇಡ್ ಮಾಡಿದೆ. ಮುಂದಿನ ಎರಡು ಮೂರು ವರ್ಷ ಭಾರತದ ಆರ್ಥಿಕ ಮೂಲಭೂತ ಅಂಶಗಳು ಪ್ರಬಲವಾಗಿರುವುದರಿಂದ ಈ ಅಪ್ಗ್ರೇಡ್ ಕೊಡಲಾಗಿದೆ.
ಜಗತ್ತಿಗೆ ತಲೆಬೇನೆ ತಂದಿದ್ದ ರಷ್ಯಾ ಮತ್ತು ಉಕ್ರೇನ್ ಯುದ್ಧ ಅಂತ್ಯಗೊಳ್ಳುವ ಭರವಸೆಯ ಕಿರಣವೊಂದು ಕಂಡಿದೆ. ವ್ಲಾದಿಮಿರ್ ಪುಟಿನ್ ಮತ್ತು ಝೆಲೆನ್ಸ್ಕಿ ಅವರನ್ನು ಡೊನಾಲ್ಡ್ ಟ್ರಂಪ್ ಪ್ರತ್ಯೇಕವಾಗಿ ಭೇಟಿ ಮಾಡಿದ್ದಾರೆ. ಷೇರು ಮಾರುಕಟ್ಟೆ ಚೇತರಿಕೆ ಪಡೆಯಲು ಇದೂ ಒಂದು ಕಾರಣ ಇರಬಹುದು.
ರಷ್ಯಾದ ತೈಲ ಹೆಚ್ಚಿನ ನಿರ್ಬಂಧ ಹೇರುವ ನಿರ್ಧಾರದಿಂದ ಅಮೆರಿಕ ಹಿಂದಕ್ಕೆ ಸರಿದಿದೆ. ಇದರಿಂದ ಜಾಗತಿಕವಾಗಿ ತೈಲ ಬೆಲೆ ಸ್ವಲ್ಪ ಇಳಿಕೆ ಆಗಿದೆ.
ಚೀನಾ, ತೈವಾನ್, ಜಪಾನ್, ಸೌತ್ ಕೊರಿಯಾ, ಹಾಂಕಾಂಗ್ ಇತ್ಯಾದಿ ದೇಶಗಳ ಷೇರು ಮಾರುಕಟ್ಟೆ ಇವತ್ತು ಹಸಿರು ಬಣ್ಣಕ್ಕೆ ತಿರುಗಿವೆ. ಭಾರತದ ಮಾರುಕಟ್ಟೆಯ ಮೇಲೂ ಇದು ಪಾಸಿಟಿವ್ ಪ್ರಭಾವ ಬೀರಿರಬಹುದು.
ಇದನ್ನೂ ಓದಿ: ಭಾರತದ ಕ್ರೆಡಿಟ್ ರೇಟಿಂಗ್ ಹೆಚ್ಚಳದ ಬಳಿಕ ಎಸ್ಬಿಐ ಸೇರಿದಂತೆ 10 ಬ್ಯಾಂಕುಗಳ ರೇಟಿಂಗ್ ಅಪ್ಗ್ರೇಡ್ ಮಾಡಿದ ಎಸ್ ಅಂಡ್ ಪಿ
ಭಾರತದ ಮೇಲೆ ಹೆಚ್ಚುವರಿಯಾಗಿ ಹಾಕಲಾಗಿದ್ದ ಶೇ. 25 ಟ್ಯಾರಿಫ್ ಅನ್ನು ಅಮೆರಿಕ ಹಿಂಪಡೆಯುವ ಸಾಧ್ಯತೆ ಇದೆ. ಇದು ಮಾರುಕಟ್ಟೆಯ ಉತ್ಸಾಹ ಹೆಚ್ಚಿಸಿದೆ.
ಡಾಲರ್ ಎದುರು ರುಪಾಯಿ ಮೌಲ್ಯ ಏರಿದೆ. ಸೋಮವಾರ 20 ಪೈಸೆಯಷ್ಟು ರುಪಾಯಿ ಮೌಲ್ಯ ಹೆಚ್ಚಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ