ನವದೆಹಲಿ, ಮಾರ್ಚ್ 18: ಇವತ್ತು ಉದ್ಯಮಿಗಳಿಗೆ ವಿಪುಲ ಅವಕಾಶಗಳಿವೆ. ಬಹಳಷ್ಟು ಸ್ಟಾರ್ಟಪ್ಗಳು ಶುರುವಾಗುತ್ತಿವೆ. ಕೆಲವೇ ವರ್ಷಗಳಲ್ಲಿ ಯೂನಿಕಾರ್ನ್ ಆಗಿರುವ ಸ್ಟಾರ್ಟಪ್ಗಳೂ ಉಂಟು. ಹಾಗೆಯೇ ಆರಂಭಗೊಂಡ ಭರಾಟೆಯಲ್ಲೇ ಮುರುಟಿಹೋದ ಸ್ಟಾರ್ಟಪ್ಗಳೂ ಹಲವುಂಟು. ಸ್ವಂತ ಉದ್ದಿಮೆ ಸ್ಥಾಪಿಸಬೇಕೆಂದ ಆಸೆ ಎಲ್ಲರಿಗೂ ಇರುತ್ತದೆ. ಆದರೆ, ಹಣ ಮಾಡುವ ಉದ್ದೇಶವೇ ನಿಮ್ಮನ್ನು ಹೊಸ ಕಂಪನಿ ಸ್ಥಾಪನೆಗೆ ಪ್ರೇರೇಪಿಸುತ್ತಿದೆ ಎಂದರೆ ಅದು ಸೋಲಿಗೆ ಸೋಪಾನ ಹಾಕಿದಂತೆ ಎಂಬುದು ತಜ್ಞರ ಅನಿಸಿಕೆ. ಜೊಮಾಟೊ ಸಿಇಒ ದೀಪಿಂದರ್ ಗೋಯಲ್ (Deepinder goyal) ಈ ಮಾತನ್ನು ಅನುಮೋದಿಸುತ್ತಾರೆ. ಒಬ್ಬ ವ್ಯಕ್ತಿ ತನ್ನ ಕನಸಿನ ಕಂಪನಿಯನ್ನು ನಿರ್ಮಿಸಬೇಕಾದರೆ ಆ ವ್ಯವಹಾರ ನಿಮ್ಮ ಮನಸಿಗೆ ಹತ್ತಿರ (passionate) ಇರಬೇಕು. ಪ್ಯಾಶನ್ ಬೇಕು. ಹಣ ಮಾಡುವ ಉದ್ದೇಶ ಮಾತ್ರವೇ ಇದ್ದರೆ ಕೆಟ್ಟ ಆಡಳಿತ ನಿರ್ಧಾರಗಳಿಗೆ ಎಡೆಯಾಗುತ್ತದೆ ಎಂದು ದೀಪಿಂದರ್ ಗೋಯಲ್ ಹೇಳಿದ್ದಾರೆ.
ಸ್ಟಾರ್ಟಪ್ ಮಹಾಕುಂಬ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಗೋಯಲ್, ‘ಬಹಳಷ್ಟು ಜನರು ಕಂಪನಿಗಳನ್ನು ಸ್ಥಾಪಿಸುತ್ತಿರುವುದನ್ನು ನಾನು ಕಾಣುತ್ತಿದ್ದೇನೆ. ಯಾಕೆ ಬಿಸಿನೆಸ್ ಆರಂಭಿಸಿದಿರಿ ಎಂದು ಅವರನ್ನು ಕೇಳಿದ್ದೇನೆ. ನಾನು ಬಹಳಷ್ಟು ಹಣ ಮಾಡಬೇಕು ಎಂಬ ಉತ್ತರ ಬರುತ್ತದೆ. ಹೀಗಾದರೆ ಪ್ರಯೋಜನಕ್ಕೆ ಬಾರುವುದಿಲ್ಲ. ಕೆಟ್ಟ ಆಡಳಿತ ನಿರ್ಧಾರಕ್ಕೆ ಎಡೆಯಾಗುತ್ತದೆ. ನೀವು ಒಂದು ಆರಂಭಿಸಲು ಅದು ಉದ್ದೇಶವಾಗಿರಬಾರದು.
ಇದನ್ನೂ ಓದಿ: ಸರ್ಕಾರಕ್ಕೆ ತೆರಿಗೆ ಕಟ್ಟುವುದು ಶಿಕ್ಷೆ ಎಂದಿದ್ದ ಉದ್ಯಮಿ ಅಶ್ನೀರ್ ಗ್ರೋವರ್ ಈಗ ಪ್ರಾಮಾಣಿಕ ತೆರಿಗೆ ಪಾವತಿದಾರ
‘ಒಂದು ಕೆಲಸದಲ್ಲಿ ನೀವು ಎಷ್ಟು ಉತ್ಕಟತೆ ಹೊಂದಿರಬೇಕೆಂದರೆ, ಅದರಲ್ಲಿ ನಿಮ್ಮ ಜೀವವನ್ನೇ ಪಣಕ್ಕಿಡಲು ಸಿದ್ದರಿರಬೇಕು. ಆಗ ಮಾತ್ರವೇ ನಿಮ್ಮ ಕನಸಿನ ಸಂಸ್ಥೆಯನ್ನು ಕಟ್ಟಲು ಸಾಧ್ಯ. ಪ್ಯಾಶನ್ ಇಟ್ಟುಕೊಂಡು ಮಾಡಬೇಕೆ ಹೊರತು ಹಣಕ್ಕಾಗಿ ಮಾಡಬೇಡಿ ಎಂಬುದೊಂದು ಸಲಹೆ ನೀಡಲು ಬಯಸುತ್ತೇನೆ,’ ಎಂದಿದ್ದಾರೆ ಜೊಮಾಟೊ ಸಿಇಒ.
ಎಲ್ಲಾ ಕಾಲಕ್ಕೂ ಸಲ್ಲಿಕೆಯಾಗುವ ಬಿಸಿನಸ್ ಮಾಡಲ್ ಇಲ್ಲ. ಬಿಸಿನೆಸ್ನಲ್ಲಿ ಇನೋವೇಶನ್ ಬಹಳ ಮುಖ್ಯ. ಯಾವುದೇ ಬಿಸಿನೆಸ್ ಮಾಡಲ್ ಆದರೂ 10ಕ್ಕಿಂತ ಹೆಚ್ಚು ವರ್ಷ ಉಳಿಯಬೇಕಾದರೆ ನಿರಂತರ ಅವಿಷ್ಕಾರ ಬೇಕು ಎಂದು ದೀಪಿಂದರ್ ಗೋಯಲ್ ತಿಳಿಸಿದ್ದಾರೆ.
ಇದನ್ನೂ ಓದಿ: ಅಮೆರಿಕಕ್ಕೆ ಮೇಡ್ ಇನ್ ಇಂಡಿಯಾ ಸ್ಮಾರ್ಟ್ಫೋನ್ಗಳ ರಫ್ತು ಒಂದೇ ವರ್ಷದಲ್ಲಿ ಮೂರು ಪಟ್ಟು ಹೆಚ್ಚಳ; ಭಾರತಕ್ಕೆ 3ನೇ ಸ್ಥಾನ
ಖುಷಿಯಾಗಿರಲು ಮತ್ತು ಆರಾಮವಾಗಿರಲು ಬಿಸಿನೆಸ್ ಆರಂಭಿಸುತ್ತೇನೆಂದು ಹೋದರೆ ಅದು ತಪ್ಪು ಆಯ್ಕೆ. ನೀವು ಯಶಸ್ವಿಯಾಗಬೇಕಾದರೆ ಒತ್ತಡ ನಿಭಾಯಿಸುವುದನ್ನು ಕಲಿಯಬೇಕು ಎಂದು ಗೋಯಲ್ ಸಲಹೆ ನೀಡಿದ್ದಾರೆ.
ಸ್ಟಾರ್ಟಪ್ ಮಹಾಕುಂಭ್ನಲ್ಲಿ ಜೊಮಾಟೊ ಸಿಇಒ ದೀಪಿಂದರ್ ಗೋಯಲ್ ಜೊತೆ ಇನ್ಫೋ ಎಡ್ಜ್ ಸ್ಥಾಪಕ ಸಂಜೀವ್ ಬಿಖಚಂದಾನಿ ಅವರೂ ಕೂಡ ಸಂವಾದದಲ್ಲಿ ಪಾಲ್ಗೊಂಡಿದ್ದರು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ