ಕರ್ನಾಟಕದಲ್ಲಿ ಮದರ್ ಡೈರಿಯಿಂದ ಹಣ್ಣು ಸಂಸ್ಕರಣಾ ಘಟಕ; ಮಹಾರಾಷ್ಟ್ರದಲ್ಲಿ ಬೃಹತ್ ಡೈರಿ; ಒಟ್ಟು 750 ರೂ ಹೂಡಿಕೆ
Mother Dairy New Units In Maharashtra and Karnataka: ನ್ಯಾಷನಲ್ ಡೈರಿ ಡೆವಲಪ್ಮೆಂಟ್ ಬೋರ್ಡ್ನ ಮದರ್ ಡೈರಿ ಸಂಸ್ಥೆ ತನ್ನ ಹಾಲು ಉತ್ಪಾದನೆ ಮತ್ತು ಹಣ್ಣು ಸಂಸ್ಕರಣಾ ಸಾಮರ್ಥ್ಯ ಹೆಚ್ಚಿಸಲು 750 ಕೋಟಿ ರೂ ಹೂಡಿಕೆ ಮಾಡುತ್ತಿದೆ. ಮಹಾರಾಷ್ಟ್ರದ ನಾಗಪುರದಲ್ಲಿ ದಿನಕ್ಕೆ 10 ಲಕ್ಷ ಲೀಟರ್ ಹಾಲು ಸಂಸ್ಕರಣೆ ಮಾಡಬಲ್ಲಂತಹ ಡೈರಿಯನ್ನು 525 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಕರ್ನಾಟಕದಲ್ಲಿ 125 ಕೋಟಿ ರೂ ವೆಚ್ಚದಲ್ಲಿ ಹೊಸ ಹಣ್ಣು ಸಂಸ್ಕರಣಾ ಘಟಕ ಸ್ಥಾಪಿಸಲಿದೆ. ಈಗಾಗಲೇ ಇರುವ ಹಲವು ಘಟಕಗಳನ್ನೂ ಮೇಲ್ದರ್ಜೆಗೆ ಏರಿಸಲಿದೆ.
ನವದೆಹಲಿ, ಮಾರ್ಚ್ 17: ಕೇಂದ್ರ ಸರ್ಕಾರದ ಎನ್ಡಿಡಿಬಿಯಿಂದ (NDDB) ನಿರ್ವಹಿಸಲಾಗುವ ಮದರ್ ಡೈರಿ (Mother Dairy) ಸಂಸ್ಥೆ 750 ಕೋಟಿ ರೂ ಬಂಡವಾಳದಲ್ಲಿ ಎರಡು ಹೊಸ ಹಾಲು (Milk dairy) ಮತ್ತು ಹಣ್ಣು, ತರಕಾರಿ ಸಂಸ್ಕರಣಾ ಘಟಕಗಳನ್ನು (fruit processing unit) ಸ್ಥಾಪಿಸಲಿದೆ. ಈಗ ಇರುವ ಘಟಕಗಳನ್ನು ಮೇಲ್ದರ್ಜೆಗೇರಿಸಲಿದೆ. ವರದಿ ಪ್ರಕಾರ ಮಹಾರಾಷ್ಟ್ರದಲ್ಲಿ ಬೃಹತ್ ಹಾಲಿನ ಡೈರಿ ಸ್ಥಾಪನೆ ಮಾಡಲಿದೆ. ಇದಕ್ಕೆ 525 ಕೋಟಿ ರೂ ಹೂಡಿಕೆ ಮಾಡಲಿದೆ. ಕರ್ನಾಟಕದಲ್ಲಿ ಮದರ್ ಡೈರಿಯಿಂದ ಹಣ್ಣು ಮತ್ತು ತರಕಾರಿ ಸಂಸ್ಕರಣಾ ಘಟಕ ಸ್ಥಾಪನೆಯಾಗಲಿದ್ದು, ಇದರಲ್ಲಿ 125 ಕೋಟಿ ರೂ ಹೂಡಿಕೆ ಆಗಲಿದೆ. ಇದರ ಜೊತೆಗೆ 100 ಕೋಟಿ ರೂ ಹೂಡಿಕೆಯಲ್ಲಿ ಈಗ ಇರುವ ಘಟಕಗಳ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲಿದೆ.
ನಾಗಪುರದಲ್ಲಿ ದಿನಕ್ಕೆ 10 ಲಕ್ಷ ಲೀಟರ್ ಹಾಲು ಉತ್ಪಾದಿಸಬಲ್ಲ ಘಟಕ
ಮದರ್ ಡೈರಿ ಸಂಸ್ಥೆ ಮಹಾರಾಷ್ಟ್ರದ ನಾಗಪುರ ನಗರದಲ್ಲಿ ಬೃಹತ್ ಹಾಲಿನ ಡೈರಿ ನಿರ್ಮಿಸಲಿದ್ದು, ಇದರಲ್ಲಿ ದಿನಕ್ಕೆ 6 ಲಕ್ಷ ಲೀಟರ್ನಷ್ಟು ಹಾಲಿನ ಸಂಸ್ಕರಣೆಯ ಸಾಮರ್ಥ್ಯ ಇರಲಿದೆ. ದಿನಕ್ಕೆ 10 ಲಕ್ಷ ಲೀಟರ್ ಹಾಲಿನ ಸಂಸ್ಕರಣೆ ಸಾಧ್ಯವಾಗುವಂತೆ ಸಾಮರ್ಥ್ಯ ಹೆಚ್ಚಿಸಬಹುದು.
ಮದರ್ ಡೈರಿ ಹಾಲುಗಳು ದೆಹಲಿ ಮಾರುಕಟ್ಟೆಯಲ್ಲಿ ಹೆಚ್ಚು ಇದೆ. ಈಗ ನಾಗಪುರದಲ್ಲಿ ಹಾಲಿನ ಡೈರಿ ನಿರ್ಮಾಣವಾದರೆ ದೇಶದ ಮಧ್ಯ ಮತ್ತು ದಕ್ಷಿಣ ಭಾಗಗಳಿಗೆ ಹಾಲಿನ ಪೂರೈಕೆ ನಡೆಸಬಹುದು. ಕರ್ನಾಟಕಕ್ಕೂ ಮದರ್ ಡೈರಿ ಹಾಲು ಬಂದು ಕೆಎಂಎಫ್ ನಂದಿನಿ ಹಾಲಿಗೆ ಸ್ಪರ್ಧೆ ಒಡ್ಡಬಹುದು.
ಇದನ್ನೂ ಓದಿ: ಭೂಮಿಯಲ್ಲಿ ಎಲ್ಲೇ ಅಡಗಿದರೂ ಕಣ್ತಪ್ಪಿಸಿಕೊಳ್ಳಲಾಗದು: ಅಮೆರಿಕದ ಸ್ಪೇಸ್ಎಕ್ಸ್ನಿಂದ ನೂರಾರು ಸೀಕ್ರೆಟ್ ಸೆಟಿಲೈಟ್ಗಳು
ಇನ್ನು, ಕರ್ನಾಟಕದಲ್ಲಿ ಹೊಸ ಹಣ್ಣು ಸಂಸ್ಕರಣಾ ಘಟಕವನ್ನೂ ಮದರ್ ಡೈರಿ ನಿರ್ಮಿಸಲಿದೆ. ಸಫಲ್ ಬ್ರ್ಯಾಂಡ್ ಅಡಿಯಲ್ಲಿ 125 ಕೋಟಿ ರೂ ಹೂಡಿಕೆಯಲ್ಲಿ ಈ ಘಟಕ ಸಿದ್ಧವಾಗಲಿದೆ. ಮಹಾರಾಷ್ಟ್ರದಲ್ಲಿ ಹೊಸ ಮದರ್ ಡೈರಿ ಹಾಗೂ ಕರ್ನಾಟಕದಲ್ಲಿ ಸಫಲ್ ಹಣ್ಣು ಸಂಸ್ಕರಣಾ ಘಟಕ ಇನ್ನೆರಡು ವರ್ಷದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಎಪ್ಪತ್ತರ ದಶಕದಲ್ಲಿ ಆರಂಭಗೊಂಡ ಮದರ್ ಡೈರಿ ಸಂಸ್ಥೆ ಒಟ್ಟು ಒಂಬತ್ತು ಹಾಲಿನ ಡೈರಿಗಳನ್ನು ಹೊಂದಿದೆ. ದಿನಕ್ಕೆ 50 ಲಕ್ಷ ಲೀಟರ್ ಹಾಲು ಉತ್ಪಾದನಾ ಸಾಮರ್ಥ್ಯ ಹೊಂದಿದೆ.
ಹಣ್ಣು ಮತ್ತು ತರಕಾರಿ ಸಂಸ್ಕರಣೆಗೆ ಮದರ್ ಡೈರಿ ನಾಲ್ಕು ಘಟಕಗಳನ್ನು ಹೊಂದಿದೆ. ಎಣ್ಣೆ ಸಂಸ್ಕರಣೆಗೆ 15 ಘಟಕಗಳಿವೆ. ಮದರ್ ಡೈರಿಯ ಸಫಲ್ ಈಗಾಗಲೇ ಬೆಂಗಳೂರಿನಲ್ಲಿ ಹಣ್ಣು ಸಂಸ್ಕರಣಾ ಘಟಕವನ್ನು ಹೊಂದಿದೆ. ಅಮೆರಿಕ, ಯೂರೋಪ್ ಸೇರಿದಂತೆ 40 ದೇಶಗಳಲ್ಲಿ ಸಫಲ್ ಮಾರುಕಟ್ಟೆ ಹೊಂದಿದೆ.
ದೆಹಲಿ ಎನ್ಸಿಆರ್ ಪ್ರದೇಶದಲ್ಲಿ ದಿನಕ್ಕೆ 30 ಲಕ್ಷ ಲೀಟರ್ ಹಾಲುಗಳನ್ನು ಮದರ್ ಡೈರಿ ಮಾರುತ್ತದೆ. ಕೋಕ ಕೋಲ, ಪೆಪ್ಸಿ, ನೆಸ್ಲೆ ಇತ್ಯಾದಿ ಕಂಪನಿಗಳಿಗೂ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಒದಗಿಸುತ್ತದೆ.
15,000 ಕೋಟಿ ರೂ ವಹಿವಾಟು
ಮದರ್ ಡೈರಿ 2022-23ರ ಹಣಕಾಸು ವರ್ಷದಲ್ಲಿ ಸುಮಾರು 14,500 ಕೋಟಿ ರೂ ಟರ್ನೋವರ್ ಹೊಂದಿದೆ. 2023-24ರಲ್ಲಿ ಶೇ. 7ರಿಂದ 8ರಷ್ಟು ಹೆಚ್ಚು ವಹಿವಾಟು ಆಗುವ ನಿರೀಕ್ಷೆ ಇದೆ.
ಮತ್ತೊಂದು ಬೃಹತ್ ಹಾಲಿನ ಉತ್ಪನ್ನ ತಯಾರಕ ಸಂಸ್ಥೆ ಅಮೂಲ್ 2023ರಲ್ಲಿ 55,000 ಕೋಟಿ ರೂ ಟರ್ನೋವರ್ ಹೊಂದಿದೆ. ಅಮೂಲ್ ನಂತರ ದೇಶದ ಎರಡನೇ ಅತಿದೊಡ್ಡ ಹಾಲು ಸಹಕಾರಿ ಸಂಘ ಎನಿಸಿರುವ ಕರ್ನಾಟಕದ ಕೆಎಂಎಫ್ 2022-23ರಲ್ಲಿ 19,784 ಕೋಟಿ ರೂ ಟರ್ನೋವರ್ ಹೊಂದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ