ಮಾ. 8ರ ವಾರದಲ್ಲಿ ಭಾರತದ ಫಾರೆಕ್ಸ್ ರಿಸರ್ವ್ಸ್ 636 ಬಿಲಿಯನ್ ಡಾಲರ್​ಗೆ ಏರಿಕೆ; ಒಂದು ವಾರದಲ್ಲಿ 10.47 ಬಿಲಿಯನ್ ಡಾಲರ್​ನಷ್ಟು ಹೆಚ್ಚಳ

Foreign Exchange Reserves of India: ಭಾರತದ ಫಾರೀನ್ ಎಕ್ಸ್​ಚೇಂಜ್ ರಿಸರ್ವ್ಸ್ ಮೊತ್ತ ಇತ್ತೀಚಿನ ವಾರದಲ್ಲಿ 10.47 ಬಿಲಿಯನ್ ಡಾಲರ್​ನಷ್ಟು ಹೈಜಂಪ್ ಮಾಡಿದೆ. ಈ ಏರಿಕೆಯೊಂದಿಗೆ ಭಾರತದ ಫಾರೆಕ್ಸ್ ಮೀಸಲು ಸಂಪತ್ತು ಬರೋಬ್ಬರಿ 636.1 ಬಿಲಿಯನ್ ಡಾಲರ್​ಗೆ ಏರಿದೆ. 2021ರ ಅಕ್ಟೋಬರ್ ತಿಂಗಳಲ್ಲಿ ಫಾರೆಕ್ಸ್ ರಿಸರ್ವ್ಸ್ 645 ಬಿಲಿಯನ್ ಡಾಲರ್ ಇತ್ತು. ಅದು ಈವರೆಗಿನ ಗರಿಷ್ಠ ಮೊತ್ತವಾಗಿದೆ. ಈಗ ಆ ಎತ್ತರಕ್ಕೆ ಸಮೀಪಕ್ಕೆ ಸಂಪತ್ತು ಹೆಚ್ಚುತ್ತಿದೆ.

ಮಾ. 8ರ ವಾರದಲ್ಲಿ ಭಾರತದ ಫಾರೆಕ್ಸ್ ರಿಸರ್ವ್ಸ್ 636 ಬಿಲಿಯನ್ ಡಾಲರ್​ಗೆ ಏರಿಕೆ; ಒಂದು ವಾರದಲ್ಲಿ 10.47 ಬಿಲಿಯನ್ ಡಾಲರ್​ನಷ್ಟು ಹೆಚ್ಚಳ
ಫೋರೆಕ್ಸ್ ರಿಸರ್ವ್ಸ್
Follow us
|

Updated on: Mar 15, 2024 | 6:18 PM

ನವದೆಹಲಿ, ಮಾರ್ಚ್ 15: ಭಾರತದ ವಿದೇಶ ವಿನಿಮಯ ಮೀಸಲು ನಿಧಿ (Forex reserves) ಸತತವಾಗಿ ಏರುತ್ತಿದೆ. ಮಾರ್ಚ್ 8ಕ್ಕೆ ಅಂತ್ಯಗೊಂಡ ವಾರದಲ್ಲಿ ಫಾರೆಕ್ಸ್ ರಿಸರ್ವ್ಸ್ ಮೊತ್ತ 10.47 ಬಿಲಿಯನ್ ಡಾಲರ್​ನಷ್ಟು ಏರಿಕೆ ಆಗಿದೆ. ಇದರೊಂದಿಗೆ ಭಾರತದ ಇತ್ತೀಚಿನ ಫಾರೆಕ್ಸ್ ರಿಸರ್ವ್ಸ್ 636.1 ಬಿಲಿಯನ್ ಡಾಲರ್ ಆಗಿದೆ. ಆರ್​ಬಿಐ (RBI) ಶುಕ್ರವಾರ ದತ್ತಾಂಶದಲ್ಲಿ ಬಿಡುಗಡೆ ಮಾಡಿದೆ. ಹಿಂದಿನ ವಾರದಲ್ಲಿ, ಅಂದರೆ ಮಾರ್ಚ್ 1ರಂದು ಅಂತ್ಯಗೊಂಡ ವಾರದಲ್ಲಿ ಫಾರೆಕ್ಸ್ ರಿಸರ್ವ್ಸ್ 6.55 ಬಿಲಿಯನ್ ಡಾಲರ್​ನಷ್ಟು ಹೆಚ್ಚಾಗಿತ್ತು. ಭಾರತದ ಈಗಿನ ಫಾರೆಕ್ಸ್ ರಿಸರ್ವ್ಸ್ ಸತತವಾಗಿ ಹೆಚ್ಚುತ್ತಿದ್ದು ಎರಡು ವರ್ಷದ ಹಿಂದಿನ ಗರಿಷ್ಠ ಮಟ್ಟಕ್ಕೆ ಸಮೀಪಿಸುತ್ತಿದೆ.

ಆರ್​ಬಿಐ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, ಮಾರ್ಚ್ 8ರ ವಾರದಲ್ಲಿ ಏರಿಕೆಯಾದ 10.47 ಬಿಲಿಯನ್ ಡಾಲರ್ ಫಾರೆಕ್ಸ್ ರಿಸರ್ವ್ಸ್ ಏರಿಕೆಯಲ್ಲಿ ವಿದೇಶೀ ಕರೆನ್ಸಿ ಆಸ್ತಿ ಹೆಚ್ಚಳವೇ ಅಧಿಕ. ಈ ಫಾರೀನ್ ಕರೆನ್ಸಿ ಅಸೆಟ್​ಗಳು 8.12 ಬಿಲಿಯನ್ ಡಾಲರ್​ನಷ್ಟು ಏರಿವೆ. ಚಿನ್ನದ ಮೀಸಲು ಸಂಪತ್ತು 2.3 ಬಿಲಿಯನ್ ಡಾಲರ್​ನಷ್ಟು ಹಿಗ್ಗಿದೆ. ಇನ್ನು, ಸ್ಪೆಷಲ್ ಡ್ರಾಯಿಂಗ್ ರೈಟ್ಸ್ 31 ಮಿಲಿಯನ್ ಡಾಲರ್, ಐಎಂಎಫ್​ನಲ್ಲಿನ ನಿಧಿ 19 ಮಿಲಿಯನ್ ಡಾಲರ್​ನಷ್ಟು ಹೆಚ್ಚಿದೆ.

ಇದನ್ನೂ ಓದಿ: ಮಾಲ್ಡೀವ್ಸ್​ಗೆ ಹೋಗೋದು ಬಿಟ್ಟ ಭಾರತೀಯರು; ದ್ವೀಪ ರಾಷ್ಟ್ರದ ಪ್ರವಾಸೋದ್ಯಮಕ್ಕೆ ಭಾರೀ ಹೊಡೆತ

ಮಾರ್ಚ್ 8ರಂದು ಅಂತ್ಯಗೊಂಡ ವಾರದಲ್ಲಿ ಭಾರತದ ಫಾರೆಕ್ಸ್ ರಿಸರ್ವ್ಸ್ ಮೊತ್ತ

ಒಟ್ಟು ಫಾರೆಕ್ಸ್ ರಿಸರ್ವ್ಸ್ ನಿಧಿ: 636.1 ಬಿಲಿಯನ್ ಡಾಲರ್

  • ವಿದೇಶೀ ಕರೆನ್ಸಿ ಸಂಪತ್ತು: 562.35 ಬಿಲಿಯನ್ ಡಾಲರ್
  • ಗೋಲ್ಡ್ ರಿಸರ್ವ್ಸ್: 50.72 ಬಿಲಿಯನ್ ಡಾಲರ್
  • ಎಸ್​ಡಿಆರ್ 18.21 ಬಿಲಿಯನ್ ಡಾಲರ್
  • ಐಎಂಎಫ್​ನಲ್ಲಿನ ನಿಧಿ: 4.82 ಬಿಲಿಯನ್ ಡಾಲರ್

2021ರಲ್ಲಿ ಇದ್ದ 645 ಬಿಲಿಯನ್ ಡಾಲರ್ ಫಾರೆಕ್ಸ್ ರಿಸರ್ವ್ಸ್ ಸಂಪತ್ತು

ಭಾರತದ ವಿದೇಶೀ ವಿನಿಮಯ ಮೀಸಲು ನಿಧಿ 2021ರ ಅಕ್ಟೋಬರ್ ತಿಂಗಳಲ್ಲಿ 645 ಬಿಲಿಯನ್ ಡಾಲರ್​ನಷ್ಟಿತ್ತು. ಅದು ಭಾರತದ ಈವರೆಗಿನ ಸಾರ್ವಕಾಲಿಕ ಗರಿಷ್ಠ ಫೋರೆಕ್ಸ್ ರಿಸರ್ವ್ಸ್ ಮೊತ್ತವೆನಿಸಿದೆ. ಈಗ ಮತ್ತೆ ಆ ಎತ್ತರಕ್ಕೆ ಏರುತ್ತಿರುವಂತಿದೆ.

ಇದನ್ನೂ ಓದಿ: ವೈದ್ಯರಿಗೆ ಗಿಫ್ಟ್, ಉಚಿತ ಟೂರ್ ಪ್ಯಾಕೇಜ್ ಇತ್ಯಾದಿ ಕೊಡುವಂತಿಲ್ಲ; ಫಾರ್ಮಾ ಕಂಪನಿಗಳಿಗೆ ಸರ್ಕಾರ ಲಕ್ಷ್ಮಣರೇಖೆ

ಬೇರೆ ದೇಶಗಳು ಎಷ್ಟು ಫಾರೆಕ್ಸ್ ಮೀಸಲು ನಿಧಿ ಹೊಂದಿವೆ?

ಅತಿ ಹೆಚ್ಚು ಫಾರೆಕ್ಸ್ ರಿಸರ್ವ್ಸ್ ಸಂಗ್ರಹದಲ್ಲಿ ಭಾರತ ವಿಶ್ವದಲ್ಲೇ ನಾಲ್ಕನೇ ಸ್ಥಾನದಲ್ಲಿದೆ. ಚೀನಾ ಬರೋಬ್ಬರಿ 3.4 ಟ್ರಿಲಿಯನ್ ಡಾಲರ್​ನಷ್ಟು ಫಾರೆಕ್ಸ್ ರಿಸರ್ವ್ಸ್ ಹೊಂದಿದೆ. ಜಪಾನ್ 1.2 ಟ್ರಿಲಿಯನ್ ಡಾಲರ್, ಸ್ವಿಟ್ಜರ್​ಲ್ಯಾಂಡ್ 818 ಬಿಲಿಯನ್ ಡಾಲರ್​ನಷ್ಟು ಫಾರೆಕ್ಸ್ ಸಂಪತ್ತು ಹೊಂದಿದ್ದು, ಭಾರತಕ್ಕಿಂತ ಮೇಲಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ