ಅಮೆರಿಕಕ್ಕೆ ಮೇಡ್ ಇನ್ ಇಂಡಿಯಾ ಸ್ಮಾರ್ಟ್ಫೋನ್ಗಳ ರಫ್ತು ಒಂದೇ ವರ್ಷದಲ್ಲಿ ಮೂರು ಪಟ್ಟು ಹೆಚ್ಚಳ; ಭಾರತಕ್ಕೆ 3ನೇ ಸ್ಥಾನ
Smartphone export market: ಭಾರತದಲ್ಲಿ ಐಫೋನ್ ಮೊದಲಾದ ಸ್ಮಾರ್ಟ್ಫೋನ್ಗಳ ಉತ್ಪಾದನೆ ಹೆಚ್ಚುತ್ತಿದೆ. ಅಮೆರಿಕಕ್ಕೆ ರಫ್ತಾಗುತ್ತಿರುವ ಫೋನ್ಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. 2023ರ ಏಪ್ರಿಲ್ನಿಂದ ಡಿಸೆಂಬರ್ವರೆಗಿನ 9 ತಿಂಗಳ ಅವಧಿಯಲ್ಲಿ 3.53 ಬಿಲಿಯನ್ ಡಾಲರ್ ಮೌಲ್ಯದ ಫೋನ್ಗಳು ಭಾರತದಿಂದ ಅಮೆರಿಕಕ್ಕೆ ಎಕ್ಸ್ಪೋರ್ಟ್ ಆಗಿವೆ. ಇದರೊಂದಿಗೆ ಅಮೆರಿಕಕ್ಕೆ ಸ್ಮಾರ್ಟ್ಫೋನ್ ರಫ್ತಿನಲ್ಲಿ ಭಾರತ 3ನೇ ಸ್ಥಾನಕ್ಕೆ ಏರಿದೆ. ಚೀನಾ ಮತ್ತು ವಿಯೆಟ್ನಾಂ ದೇಶಗಳು ಮೊದಲೆರಡು ಸ್ಥಾನ ಉಳಿಸಿಕೊಂಡರೂ ಫೋನ್ ರಫ್ತು ಪ್ರಮಾಣ ಕಡಿಮೆ ಆಗಿದೆ.
ನವದೆಹಲಿ, ಮಾರ್ಚ್ 18: ಅಮೆರಿಕಕ್ಕೆ ಭಾರತದಿಂದ ರಫ್ತಾಗುತ್ತಿರುವ ಸ್ಮಾರ್ಟ್ಫೋನ್ಗಳ (smarphone exports) ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ವಾಣಿಜ್ಯ ಸಚಿವಾಲಯ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ 2023-24ರ ಹಣಕಾಸು ವರ್ಷದ ಏಪ್ರಿಲ್ನಿಂದ ಡಿಸೆಂಬರ್ವರೆಗಿನ ಅವಧಿಯಲ್ಲಿ ಅಮೆರಿಕಕ್ಕೆ ರಫ್ತಾದ ಮೇಡ್ ಇನ್ ಇಂಡಿಯಾ ಸ್ಮಾರ್ಟ್ಫೋನ್ಗಳ ಮೌಲ್ಯ 3.53 ಬಿಲಿಯನ್ ಡಾಲರ್ ಎನ್ನಲಾಗಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಭಾರತದಿಂದ ಅಮೆರಿಕಕ್ಕೆ 998 ಮಿಲಿಯನ್ ಡಾಲರ್ ಮೌಲ್ಯದ ಸ್ಮಾರ್ಟ್ಫೋನ್ ರಫ್ತಾಗಿತ್ತು. ಮೂರು ಪಟ್ಟಿಗೂ ಹೆಚ್ಚು ಮೌಲ್ಯದಷ್ಟು ಮೊಬೈಲ್ ಫೋನ್ಗಳು ಭಾರತದಿಂದ ಅಮೆರಿಕಕ್ಕೆ ಹೋಗಿವೆ.
ಅಮೆರಿಕದ ಮಾರುಕಟ್ಟೆಯಲ್ಲಿ ಮೇಡ್ ಇನ್ ಇಂಡಿಯಾ ಫೋನ್ಗಳ ಉಪಸ್ಥಿತಿ ಹೆಚ್ಚಿದೆ. ಕಳೆದ ವರ್ಷ ಅಮೆರಿಕದಲ್ಲಿ ಶೇ. 2ರಷ್ಟು ಮಾರುಕಟ್ಟೆ ಪಾಲು ಹೊಂದಿದ್ದ ಭಾರತೀಯ ಸ್ಮಾರ್ಟ್ಫೋನ್ಗಳು ಈ ವರ್ಷ ಶೇ. 7.76ರಷ್ಟು ಮಾರುಕಟ್ಟೆ ಆಕ್ರಮಿಸಿವೆ. ಭಾರತದಲ್ಲಿ ಐಫೋನ್ ಉತ್ಪಾದನೆ ನಡೆಯುತ್ತಿರುವುದರ ಪರಿಣಾಮ ಇದು.
ಅಮೆರಿಕದ ಇತರ ಅಗ್ರಗಣ್ಯ ಮೊಬೈಲ್ ರಫ್ತುದಾರ ದೇಶಗಳೆಂದರೆ ಚೀನಾ ಮತ್ತು ವಿಯೆಟ್ನಾಂ. ಆದರೆ, 2023ರ ಎಪ್ರಿಲ್ನಿಂದ ಡಿಸೆಂಬರ್ವರೆಗಿನ ಅವಧಿಯಲ್ಲಿ ಈ ದೇಶಗಳಿಂದ ಅಮೆರಿಕಕ್ಕೆ ರಫ್ತಾದ ಸ್ಮಾರ್ಟ್ಫೋನ್ಗಳ ಮೊತ್ತದಲ್ಲಿ ಇಳಿಕೆ ಆಗಿದೆ.
ಇದನ್ನೂ ಓದಿ: ಅದಾನಿ ಗ್ರೂಪ್ ವಿರುದ್ಧ ಲಂಚ ಆರೋಪ; ಅಮೆರಿಕದಲ್ಲಿ ತನಿಖೆ; ಷೇರುಪೇಟೆಯಲ್ಲಿ ಮತ್ತೆ ಹಿನ್ನಡೆ
2023ರ ಏಪ್ರಿಲ್ನಿಂದ ಡಿಸೆಂಬರ್ವರೆಗೆ ಅಮೆರಿಕಕ್ಕೆ ಮಾಡಲಾದ ಮೊಬೈಲ್ ರಫ್ತು
- ಚೀನಾ: 35.1 ಬಿಲಿಯನ್ ಡಾಲರ್
- ವಿಯೆಟ್ನಾಂ: 5.47 ಬಿಲಿಯನ್ ಡಾಲರ್
- ಭಾರತ: 3.53 ಬಿಲಿಯನ್ ಡಾಲರ್
- ಸೌತ್ ಕೊರಿಯಾ: 858 ಮಿಲಿಯನ್ ಡಾಲರ್
- ಹಾಂಕಾಂಗ್: 112 ಮಿಲಿಯನ್ ಡಾಲರ್
ಭಾರತದ ಒಟ್ಟಾರೆ ಸ್ಮಾರ್ಟ್ಫೋನ್ ರಫ್ತು
2022-23ರ ಇಡೀ ಹಣಕಾಸು ವರ್ಷದಲ್ಲಿ ಭಾರತದಿಂದ ಬೇರೆ ಬೇರೆ ದೇಶಗಳಿಗೆ ರಫ್ತಾದ ಸ್ಮಾರ್ಟ್ಫೋನ್ಗಳ ಮೊತ್ತ 10.95 ಬಿಲಿಯನ್ ಡಾಲರ್ನಷ್ಟಿದೆ. ಈ ಹಣಕಾಸು ವರ್ಷದ ಮೊದಲ ಒಂಬತ್ತು ತಿಂಗಳಲ್ಲೇ 10.5 ಬಿಲಿಯನ್ ಡಾಲರ್ನಷ್ಟು ಆಗಿದೆ.
ಇದನ್ನೂ ಓದಿ: ಸರ್ಕಾರಕ್ಕೆ ತೆರಿಗೆ ಕಟ್ಟುವುದು ಶಿಕ್ಷೆ ಎಂದಿದ್ದ ಉದ್ಯಮಿ ಅಶ್ನೀರ್ ಗ್ರೋವರ್ ಈಗ ಪ್ರಾಮಾಣಿಕ ತೆರಿಗೆ ಪಾವತಿದಾರ
ಜಾಗತಿಕವಾಗಿಯೂ ಸ್ಮಾರ್ಟ್ಫೋನ್ ರಫ್ತಿನಲ್ಲಿ ಭಾರತ ನಾಲ್ಕನೇ ಸ್ಥಾನ ಪಡೆದಿರುವ ಸಾಧ್ಯತೆ ಇದೆ. ಚೀನಾ, ವಿಯೆಟ್ನಾಂ ಮತ್ತು ಹಾಂಕಾಂಗ್ ದೇಶಗಳೇ ಮೊದಲ ಮೂರು ಸ್ಥಾನದಲ್ಲಿವೆ. ಅತಿದೊಡ್ಡ ಮೊಬೈಲ್ ರಫ್ತುದಾರ ದೇಶಗಳೆನಿಸಿವೆ. 2023ರಲ್ಲಿ ಭಾರತ ನಾಲ್ಕನೇ ಅತಿದೊಡ್ಡ ಸ್ಮಾರ್ಟ್ಫೋನ್ ರಫ್ತುದಾರ ದೇಶ ಎನಿಸಿರಬಹುದು. ಚೆಕ್ ರಿಪಬ್ಲಿಕ್, ಅಮೆರಿಕ, ಸೌತ್ ಕೊರಿಯಾ, ಆಸ್ಟ್ರಿಯಾ ಜರ್ಮನಿ, ನೆದರ್ಲ್ಯಾಂಡ್ಸ್, ಇಟಲಿ, ಸ್ಲೊವಾಕಿಯಾ ಮೊದಲಾದವು ಇತರ ಪ್ರಮುಖ ಮೊಬೈಲ್ ರಫ್ತು ದೇಶಗಳೆನಿಸಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ