ಅದಾನಿ ಗ್ರೂಪ್ನ ವಿವಿಧ ಕಂಪನಿಗಳಲ್ಲಿ 2024-25ರಲ್ಲಿ 1.2 ಲಕ್ಷ ಕೋಟಿ ರೂ ಹೂಡಿಕೆ ಸಾಧ್ಯತೆ
Adani Group's Investment Plan: ಅದಾನಿ ಗ್ರೂಪ್ ತನ್ನ ಪೋರ್ಟ್ಫೋಲಿಯೋ ಕಂಪನಿಗಳಲ್ಲಿ 2024-25ರ ಹಣಕಾಸು ವರ್ಷದಲ್ಲಿ 1.2 ಲಕ್ಷ ಕೋಟಿ ರೂ ಹೂಡಿಕೆ ಮಾಡಲು ಯೋಜಿಸಿದೆ. ತನ್ನ ಹಸಿರು ಬಿಸಿನೆಸ್ ಕಂಪನಿಗಳಲ್ಲಿ ಶೇ. 70ರಷ್ಟು ಬಂಡವಾಳ ವೆಚ್ಚ ಮಾಡುವ ಸಾಧ್ಯತೆ ಇದೆ. ಏರ್ಪೋರ್ಟ್, ಬಂದರು ಇತ್ಯಾದಿ ವ್ಯವಹಾರಗಳಿಗೆ ಇನ್ನುಳಿದ ಶೇ. 30ರಷ್ಟು ಬಂಡವಾಳ ವ್ಯಯಿಸಲು ಅದಾನಿ ಗ್ರೂಪ್ ಲೆಕ್ಕ ಹಾಕಿದೆ ಎಂದು ಪಿಟಿಐ ಸುದ್ದಿಸಂಸ್ಥೆ ಹೇಳಿದೆ.
ನವದೆಹಲಿ, ಮಾರ್ಚ್ 18: ಅದಾನಿ ಗ್ರೂಪ್ ಮುಂಬರುವ ಹಣಕಾಸು ವರ್ಷಕ್ಕೆ ಭರ್ಜರಿ ಹೂಡಿಕೆ ಪ್ಲಾನ್ (Adani group investment plan) ಹಾಕಿದೆ. ತನ್ನ ವಿವಿಧ ಕಂಪನಿಗಳಲ್ಲಿ 1.2 ಲಕ್ಷ ಕೋಟಿ ರೂಗೂ ಹೆಚ್ಚು ಮೊತ್ತವನ್ನು ಹೂಡಿಕೆ ಮಾಡಲು ಯೋಜಿಸಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಬಂದರು, ಇಂದನ, ವಿಮಾನ ನಿಲ್ದಾಣ, ಸಿಮೆಂಟ್ ಮತ್ತು ಮೀಡಿಯಾ ಬಿಸಿನೆಸ್ ಇರುವ ಅದಾನಿ ಗ್ರೂಪ್ನ ವಿವಿಧ ಪೋರ್ಟ್ಫೋಲಿಯೋ ಕಂಪನಿಗಳಲ್ಲಿ ಈ ಹೂಡಿಕೆ ನಡೆಯಲಿದೆ. ಇದರಲ್ಲಿ ಹೆಚ್ಚಿನ ಹೂಡಿಕೆ ಪರಿಸರಪೂರಕ ಇಂಧನ ಕ್ಷೇತ್ರಗಳಿಗೆ ವ್ಯಯವಾಗಲಿದೆ. ವರದಿ ಪ್ರಕಾರ ಅದಾನಿ ಸಂಸ್ಥೆ ಯೋಜಿಸಿರುವ ಬಂಡವಾಳ ವೆಚ್ಚದಲ್ಲಿ ಮರುಬಳಕೆ ಶಕ್ತಿ, ಗ್ರೀನ್ ಹೈಡ್ರೋಜನ್ ಮತ್ತು ಗ್ರೀನ್ ಇವಾಕ್ಯುವೇಶನ್ (ಗ್ರಿಡ್ಗಳಿಗೆ ವಿದ್ಯುತ್ ವಿತರಣೆ) ಇತ್ಯಾದಿ ಅದರ ಪರಿಸರಪೂರಕ ಕ್ಷೇತ್ರಗಳಿಗೆ ಶೇ. 70ರಷ್ಟು ವ್ಯಯವಾಗಲಿದೆ. ಇನ್ನುಳಿದ ಶೇ. 30ರಷ್ಟು ವೆಚ್ಚವನ್ನು ಏರ್ಪೋರ್ಟ್ ಮತ್ತು ಪೋರ್ಟ್ ವ್ಯವಹಾರಗಳಿಗೆ ಮೀಸಲಿಡುವ ಸಾಧ್ಯತೆ ಇದೆ.
ಕಳೆದ ಡಿಸೆಂಬರ್ ತಿಂಗಳಲ್ಲಿ ವೈಬ್ರೆಂಟ್ ಗುಜರಾತ್ ಸಮಾವೇಶದಲ್ಲಿ ಗೌತಮ್ ಅದಾನಿ ಅವರು ಮುಂದಿನ 7ರಿಂದ 10 ವರ್ಷದ ಅವಧಿಯಲ್ಲಿ 100 ಬಿಲಿಯನ್ ಡಾಲರ್ ಮೊತ್ತದಷ್ಟು ಬಂಡವಾಳ ವೆಚ್ಚ ಮಾಡುವುದಾಗಿ ಹೇಳಿದ್ದರು.
ಇದನ್ನೂ ಓದಿ: ಸರ್ಕಾರಕ್ಕೆ ತೆರಿಗೆ ಕಟ್ಟುವುದು ಶಿಕ್ಷೆ ಎಂದಿದ್ದ ಉದ್ಯಮಿ ಅಶ್ನೀರ್ ಗ್ರೋವರ್ ಈಗ ಪ್ರಾಮಾಣಿಕ ತೆರಿಗೆ ಪಾವತಿದಾರ
2023ರ ಕ್ಯಾಲಂಡರ್ ವರ್ಷದಲ್ಲಿ ಅದಾನಿ ಗ್ರೂಪ್ನ ಪೋರ್ಟ್ಫೋಲಿಯೋ ಅಥವಾ ಲಿಸ್ಟೆಡ್ ಕಂಪನಿಗಳು ಭರ್ಜರಿ ಸಾಧನೆ ಮಾಡಿವೆ. 9.5 ಬಿಲಿಯನ್ ಡಾಲರ್ನಷ್ಟು EBITDA ಗಳಿಸಿದೆ. ಇಲ್ಲಿ EBITDA ಎಂದರೆ ಬಡ್ಡಿ, ತೆರಿಗೆ, ಡಿಪ್ರಿಶಿಯೇಶನ್ (ಸವಕಳಿ) ಇತ್ಯಾದಿಗಿಂತ ಮುಂಚೆ ಬಂದ ಗಳಿಕೆ. ಈ EBITDA 2022ಕ್ಕೆ ಹೋಲಿಸಿದರೆ ಶೇ. 34.4ರಷ್ಟು ಹೆಚ್ಚಾಗಿದೆ. 9.5 ಬಿಲಿಯನ್ EBITDA ಅದರ ಸರ್ವೋತ್ಕೃಷ್ಟ ಮಟ್ಟವಾಗಿದೆ.
2023ರ ಮಾರ್ಚ್ನಿಂದ ಸೆಪ್ಟೆಂಬರ್ವರೆಗಿನ ಅವಧಿಯಲ್ಲಿ ಅದಾನಿ ಗ್ರೂಪ್ ಪೋರ್ಟ್ಫೋಲಿಯೋದ ನಿವ್ವಳ ಸಾಲ ಕೂಡ ಶೇ. 4ರಷ್ಟು ಕಡಿಮೆ ಆಗಿದೆ. ಕಳೆದ 12 ತಿಂಗಳ ಈ ಸಾಧನೆಯು ಅದಾನಿ ಗ್ರೂಪ್ಗೆ ತನ್ನ ಪೋರ್ಟ್ಫೋಲಿಯೋ ಕಂಪನಿಗಳ ಮೇಲಿನ ವಿಶ್ವಾಸ ಹೆಚ್ಚಿಸಿದೆ. ತಂತ್ರಾತ್ಮಕ ಹೂಡಿಕೆಗಳಿಗೆ (strategic investments) ಇದು ಸಕಾಲ ಎಂಬುದು ಗ್ರೂಪ್ನ ಅಭಿಪ್ರಾಯ.
ಅದಾನಿ ಗ್ರೂಪ್ ಬಳಿ ಬಹಳ ದೊಡ್ಡ ದೊಡ್ಡ ಸಂಸ್ಥೆಗಳಿವೆ. ಎರಡನೇ ಅತಿದೊಡ್ಡ ಸೋಲಾರ್ ಪವರ್ ಕಂಪನಿ, ಅತಿದೊಡ್ಡ ಏರ್ಪೋರ್ಟ್ ಆಪರೇಟರ್, ಅತಿದೊಡ್ಡ ಪೋರ್ಟ್ ಮತ್ತು ಲಾಜಿಸ್ಟಿಕ್ಸ್ ಕಂಪನಿ, ಎರಡನೇ ಅತಿದೊಡ್ಡ ಸಿಮೆಂಟ್ ಕಂಪನಿಗಳು ಅದಾನಿ ಗ್ರೂಪ್ ಬಳಿ ಇವೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಮದರ್ ಡೈರಿಯಿಂದ ಹಣ್ಣು ಸಂಸ್ಕರಣಾ ಘಟಕ; ಮಹಾರಾಷ್ಟ್ರದಲ್ಲಿ ಬೃಹತ್ ಡೈರಿ; ಒಟ್ಟು 750 ರೂ ಹೂಡಿಕೆ
ವಿಶ್ವದ ಅತಿದೊಡ್ಡ ರಿನಿವಬಲ್ ಪಾರ್ಕ್
ಗುಜರಾತ್ನ ಖಾವಡ ಬಳಿ ಅದಾನಿ ಗ್ರೂಪ್ 530 ಚದರ ಕಿಮೀಗೂ ಹೆಚ್ಚಿನ ಪ್ರದೇಶದಲ್ಲಿ ಮರುಬಳಕೆ ಇಂಧನ ಪಾರ್ಕ್ ನಿರ್ಮಿಸುತ್ತಿದೆ. ಇದು ವಿಶ್ವದ ಅತಿದೊಡ್ಡ ರಿನಿವಬಲ್ ಎನರ್ಜಿ ಪಾರ್ಕ್ ಎನಿಸಲಿದೆ. ಇದರ ಒಟ್ಟು ವಿಸ್ತೀರ್ಣವು ಪ್ಯಾರಿಸ್ ನಗರಕ್ಕಿಂತ ಐದು ಪಟ್ಟು ಹೆಚ್ಚಿನದ್ದಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ