ನವದೆಹಲಿ, ಮಾರ್ಚ್ 11: ನಾಲ್ಕು ದೇಶಗಳ ಐರೋಪ್ಯ ಮುಕ್ತ ವ್ಯಾಪಾರ ಸಂಘಟನೆಯೊಂದಿಗೆ (EFTA- European Free Trade Association) ಭಾರತ ನಿನ್ನೆ ಒಪ್ಪಂದ ಮಾಡಿಕೊಂಡಿದ್ದು ಮಹತ್ವದ ಬೆಳವಣಿಗೆ ಎಂದು ಪರಿಗಣಿಸಲಾಗಿದೆ. ಸ್ವಿಟ್ಜರ್ಲ್ಯಾಂಡ್, ಐಸ್ಲ್ಯಾಂಡ್, ನಾರ್ವೆ ಮತ್ತು ಲಿಕ್ಸ್ಟನ್ಸ್ಟೈನ್ (Liechtenstein) ದೇಶಗಳು ಈ ಗುಂಪಿನಲ್ಲಿವೆ. ಈ ದೇಶಗಳ ಜೊತೆ ಭಾರತ ಮೊದಲಿಂದಲೂ ವ್ಯಾಪಾರ ವಹಿವಾಟು ನಡೆಸುತ್ತಾ ಬಂದಿದೆಯಾದರೂ ಈ ಒಪ್ಪಂದದ ಬಳಿಕ ವ್ಯಾಪಾರವು ಬಹುತೇಕ ಅನಿರ್ಬಂಧಿತವಾಗಿರಲಿದೆ. ಅಂದರೆ, ಆ ನಾಲ್ಕು ದೇಶಗಳಿಂದ ಆಮದು ಮಾಡಿಕೊಳ್ಳಲಾಗುವ ಬಹುತೇಕ ಸರಕುಗಳಿಗೆ ಯಾವುದೇ ಸುಂಕ ವಿಧಿಸುವುದಿಲ್ಲ. ಅಥವಾ ತೀರಾ ಕಡಿಮೆ ಆಮದು ಸುಂಕ ಇರುತ್ತದೆ. ಈ ನಾಲ್ಕು ದೇಶಗಳು, ಅದರಲ್ಲೂ ಸ್ವಿಟ್ಜರ್ಲ್ಯಾಂಡ್ ದೇಶ ಉತ್ಕೃಷ್ಟ ಗುಣಮಟ್ಟದ ಉತ್ಪನ್ನಗಳಿಗೆ ಹೆಸರುವಾಸಿಯಾಗಿದೆ. ಭಾರತಕ್ಕೆ ಇನ್ಮುಂದೆ ಕಡಿಮೆ ಬೆಲೆಗೆ ಈ ಉತ್ಪನ್ನಗಳು ಲಭಿಸಲಿವೆ.
ಸ್ವಿಸ್ ವಾಚುಗಳು ವಿಶ್ವಾದ್ಯಂತ ಹೆಸರುವಾಸಿಯಾಗಿವೆ. ಬಹಳ ಉತ್ಕೃಷ್ಟ ಗುಣಮಟ್ಟದ ವಾಚುಗಳಾಗಿರುತ್ತವೆ. ಹಾಗೆಯೇ ಸ್ವಿಸ್ ಚಾಕೊಲೇಟ್ಗಳೂ ಕೂಡ ಬಹಳ ಜನಪ್ರಿಯವಾಗಿವೆ. ಭಾರತದಲ್ಲಿ ಚಾಕೊಲೇಟ್ ಆಮದಿನ ಮೇಲೆ ಶೇ. 30ರಷ್ಟು ಸುಂಕ ಹಾಕಲಾಗುತ್ತದೆ. ಹಾಗೆಯೇ, ಸ್ವಿಸ್ ವಾಚುಗಳಿಗೆ ಶೇ. 20ರಷ್ಟು ಆಮದು ಸುಂಕ ಇರುತ್ತದೆ. ಈಗ ಮುಕ್ತ ವ್ಯಾಪಾರ ಒಪ್ಪಂದ ಆಗಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಸ್ವಿಸ್ ವಾಚು, ಚಾಕೊಲೇಟ್ ಇತ್ಯಾದಿಗಳಿಗೆ ಆಮದು ಸುಂಕ ಇರುವುದಿಲ್ಲ.
ಇದನ್ನೂ ಓದಿ: ಯೂರೋಪಿಯನ್ ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಭಾರತದಿಂದ ಸಹಿ; ಇದು ಎಲ್ಲರಿಗೂ ಗೆಲುವು ತರುವಂಥದ್ದು ಎಂದ ಪ್ರಧಾನಿ ಮೋದಿ
ಸ್ವಿಟ್ಜರ್ಲ್ಯಾಂಡ್ ಹಾಗು ಇತರ ಇಎಫ್ಟಿಎ ದೇಶಗಳಿಂದ ಭಾರತ ಆಮದು ಮಾಡಿಕೊಳ್ಳುವ ಇತರ ಪ್ರಮುಖ ಉತ್ಪನ್ನಗಳೆಂದರೆ ಚಿನ್ನ, ಔಷಧ, ಹಡಗು, ದೋಣಿ ಮೊದಲಾದವು ಸೇರಿವೆ.
ಭಾರತ ಈ ನಾಲ್ಕು ದೇಶಗಳಿಗೆ ಒಡವೆ, ಹರಳು, ರಾಸಾಯನಿಕ ಇತ್ಯಾದಿಯನ್ನು ರಫ್ತು ಮಾಡುತ್ತದೆ. ಆದರೆ, ಭಾರತಕ್ಕೆ ಇರುವ ವ್ಯಾಪಾರ ಕೊರತೆ ತೀರಾ ಹೆಚ್ಚಿದೆ. ಅದರಲ್ಲೂ ಸ್ವಿಟ್ಜರ್ಲ್ಯಾಂಡ್ ಜೊತೆಗಿನ ಭಾರತದ ವ್ಯಾಪಾರದಲ್ಲಿ ಕೊಳ್ಳುವುದೇ ಹೆಚ್ಚು. ಈ ಎರಡು ದೆಶಗಳ ನಡುವೆ ದ್ವಿಪಕ್ಷೀಯ ವ್ಯಾಪಾರ 2022-23ರಲ್ಲಿ 17.14 ಬಿಲಿಯನ್ ಡಾಲರ್ ಇತ್ತು. ಇದರಲ್ಲಿ ಭಾರತ ರಫ್ತು ಮಾಡಿದ್ದು 1.34 ಬಿಲಿಯನ್ ಡಾಲರ್ನಷ್ಟಾದರೆ, ಆಮದು ಮಾಡಿಕೊಂಡಿದ್ದು 15.79 ಬಿಲಿಯನ್ ಡಾಲರ್.
ಇದನ್ನೂ ಓದಿ: ಸರ್ಕಾರದಿಂದ ನಡೆಸಲಾಗುವ ಪಿಪಿಎಫ್ನಿಂದ ಲಾಭಗಳೇನು?; 15 ವರ್ಷದಲ್ಲಿ ಸಿಗುವ ರಿಟರ್ನ್, ಇತ್ಯಾದಿ ವಿವರ ತಿಳಿಯಿರಿ
ಮುಕ್ತ ವ್ಯಾಪಾರ ಒಪ್ಪಂದದ ಬಳಿಕ ಭಾರತಕ್ಕೆ ಹೂಡಿಕೆ ಹರಿದುಬರುವ ನಿರೀಕ್ಷೆ ಇದ್ದು, ಇಲ್ಲಿಯೇ ಉತ್ಪಾದನೆ ಹೆಚ್ಚಾಗುವ ಸಾಧ್ಯತೆ ಇದೆ. ನಿರೀಕ್ಷಿಸಿದಂತೆ ಇದು ಆದಲ್ಲಿ ಭಾರತ ಆಮದು ಪ್ರಮಾಣವನ್ನು ಕಡಿಮೆ ಮಾಡುವ ಅವಕಾಶ ಸಿಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ