ನವದೆಹಲಿ: ಪ್ರಮುಖ ಖಾಸಗಿ ಇನ್ಷೂರೆನ್ಸ್ ಕಂಪನಿ ಟಾಟಾ ಎಐಎ ಲೈಫ್ ಇನ್ಷೂರೆನ್ಸ್ (Tata AIA Life Insurance) ಜೂನ್ 21ರಂದು ತನ್ನ ಪಾಲಿಸಿದಾರರಿಗೆ ಭರ್ಜರಿ ಗಿಫ್ಟ್ ಕೊಡುತ್ತಿದೆ. 2022-23ರ ಹಣಕಾಸು ವರ್ಷಕ್ಕೆ 1,183 ಕೋಟಿ ರೂ ಮೊತ್ತದ ಬೋನಸ್ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದೆ. ಟಾಟಾ ಎಐಎಯಿಂದ ಬಿಡುಗಡೆ ಆದ ಅತಿಹೆಚ್ಚು ಬೋನಸ್ ಇದಾಗಿರಲಿದೆ. ಕಳೆದ ಬಾರಿಯ ಹಣಕಾಸು ವರ್ಷಕ್ಕೆ (2021-22) ಹೋಲಿಸಿದರೆ ಈ ಬಾರಿ ಶೇ. 37ರಷ್ಟು ಹೆಚ್ಚು ಬೋನಸ್ ಕೊಡುತ್ತಿದೆ ಟಾಟಾ ಎಐಎ. ಹೆಚ್ಚೂಕಡಿಮೆ ಏಳೂವರೆ ಲಕ್ಷ ಪಾಲಿಸಿದಾರರಿಗೆ ಈ ಬೋನಸ್ ಹಂಚಿಕೆ ಆಗಲಿದೆ. ಟಾಟಾ ಎಐಎ ಲೈಫ್ ಇನ್ಷೂರೆನ್ಸ್ ಸಂಸ್ಥೆ ನೀಡಿದ ಹೇಳಿಕೆ ಪ್ರಕಾರ 7,49,229 ಪಾರ್ಟಿಸಿಪೇಟಿಂಗ್ ಪಾಲಿಸಿಗಳು ಈ ಬೋನಸ್ಗೆ ಅರ್ಹವಾಗಿವೆ.
ಟಾಟಾ ಎಐಎ ಸಂಸ್ಥೆಯ ಪಾರ್ಟಿಸಿಪೇಟಿಂಗ್ ಲೈಫ್ ಇನ್ಷೂರೆನ್ಸ್ ಪಾಲಿಸಿಗಳ ಜನಪ್ರಿಯತೆ ಹೆಚ್ಚುತ್ತಿದೆ. ಇವು ಜೀವ ವಿಮೆ ಒದಗಿಸುವುದಲ್ಲದೇ, ನಿಶ್ಚಿತ ಆದಾಯ ತರುತ್ತದೆ. ಜೊತೆಗೆ ಬೋನ್ ರೂಪದಲ್ಲಿ ಹೆಚ್ಚುವರಿ ಲಾಭವನ್ನೂ ಕೊಡುತ್ತದೆ. ಎಲ್ಐಸಿ ಸೇರಿದಂತೆ ಎಲ್ಲಾ ಇನ್ಷೂರೆನ್ಸ್ ಸಂಸ್ಥೆಗಳೂ ಕೂಡ ವಿವಿಧ ಪಾರ್ಟಿಸಿಪೇಟಿಂಗ್ ಇನ್ಷೂರೆನ್ಸ್ ಸ್ಕೀಮ್ಗಳನ್ನು ಗ್ರಾಹಕರಿಗೆ ಆಫರ್ ಮಾಡುತ್ತವೆ.
ಪಾರ್ಟಿಸಿಪೇಟಿಂಗ್ ಅಥವಾ ಪಾರ್ ಸ್ಕೀಮ್ಗಳು ಇನ್ಷೂರೆನ್ಸ್ ಸಂಸ್ಥೆಯ ಲಾಭದಲ್ಲಿ ಒಂದಷ್ಟು ಪಾಲನ್ನು ಪಾಲಿಸಿದಾರರಿಗೆ ಹಂಚುತ್ತವೆ. ಕಂಪನಿ ನಷ್ಟವಾದರೆ ಮಾತ್ರ ಬೋನಸ್ ಸಿಕ್ಕೋದಿಲ್ಲ. ಈ ಬೋನಸ್ ಜೊತೆಗೆ ಪಾಲಿಸಿಯಲ್ಲಿ ಭರವಸೆ ಕೊಡಲಾದ ಬೇರೆಲ್ಲಾ ರಿಟರ್ನ್ಗಳು ಗ್ರಾಹಕರಿಗೆ ಸಿಗುತ್ತದೆ. ಬೋನಸ್ ಎಂಬುದು ಹೆಚ್ಚುವರಿಯಾಗಿ ಸಿಗುವ ಒಂದು ಅಂಶ.
ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಪಾರ್ಟಿಸಿಪೇಟಿಂಗ್ ಪಾಲಿಸಿಯು ಷೇರುಪೇಟೆಗೆ ಜೋಡಿತವಾದ ಮಾರ್ಕೆಟ್ ಲಿಂಕ್ಡ್ ಪಾಲಿಸಿಗಿಂತ ಭಿನ್ನ. ಮಾರ್ಕೆಟ್ ಲಿಂಕ್ಡ್ ಪಾಲಿಸಿಯಾದರೆ ಸಂಸ್ಥೆಯು ವಿವಿಧ ಷೇರುಗಳ ಮೇಲೆ ಮಾಡಿದ ಹೂಡಿಕೆಯಿಂದ ಸಿಗುವ ಲಾಭ ಅಥವಾ ನಷ್ಟದ ಮೇಲೆ ಅವಲಂಬಿತವಾಗಿರುತ್ತದೆ. ಷೇರು ಹೂಡಿಕೆಗಳಿಂದ ಎಷ್ಟು ಲಾಭ ಬರುತ್ತದೆಯೋ ಅಷ್ಟೂ ಪಾಲಿಸಿದಾರರಿಗೆ ವರ್ಗವಾಗುತ್ತದೆ. ನಷ್ಟವಾದರೆ ಅದೂ ಕೂಡ ಗ್ರಾಹಕರಿಗೆ ವರ್ಗಾವಣೆ ಆಗುತ್ತದೆ.
ಟಾಟಾ ಎಐಎ ಇನ್ಷೂರೆನ್ಸ್ ಕಂಪನಿ ಹಲವು ವರ್ಷಗಳಿಂದ ತನ್ನ ಪಾಲಿಸಿದಾರರಿಗೆ ಬೋನಸ್ಗಳನ್ನು ಒದಗಿಸುತ್ತಿದೆ. 2021-22ರ ಹಣಕಾಸು ವರ್ಷದಲ್ಲಿ 861 ಕೋಟಿ ರೂ ಬೋನಸ್ ಕೊಟ್ಟಿದ್ದು ದಾಖಲೆಯಾಗಿತ್ತು. 2022-23ರ ಹಣಕಾಸು ವರ್ಷದಲ್ಲಿ ಅದನ್ನೂ ಮೀರಿಸಿ ಹೊಸ ದಾಖಲೆ ಬೋನಸ್ ಕೊಟ್ಟಿದೆ. ಈ ಸಂಸ್ಥೆ ಒಟ್ಟು 71 ಸಾವಿರ ಕೋಟಿ ರೂ ಮೊತ್ತದ ಜನರ ಹೂಡಿಕೆಗಳನ್ನು ನಿರ್ವಹಿಸುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ