ಕೋಲಾರದಲ್ಲಿ ಟಾಟಾ ನಿರ್ಮಿತ ಮಿಲಿಟರಿ ಸೆಟಿಲೈಟ್ ಅಮೆರಿಕದ ಸ್ಪೇಸ್​ಎಕ್ಸ್ ರಾಕೆಟ್ ಮುಖಾಂತರ ಭೂಕಕ್ಷೆಗೆ

|

Updated on: Apr 09, 2024 | 3:47 PM

TSAT-1A satellite made for Indian Army: ಟಾಟಾ ಗ್ರೂಪ್​ನ ಟಿಎಎಸ್ ನಿರ್ಮಿಸಿದ ಟಿಸ್ಯಾಟ್-1ಎ ಸೆಟಿಲೈಟ್ ಅನ್ನು ಅಮೆರಿಕದ ಫಾಲ್ಕನ್9 ರಾಕೆಟ್ ಮೂಲಕ ಭೂಕಕ್ಷೆಗೆ ಕಳುಹಿಸಲಾಗಿದೆ. ಕೋಲಾರದ ವೇಮಗಲ್​ನಲ್ಲಿರುವ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಘಟಕವೊಂದರಲ್ಲಿ ಈ ಸೆಟಿಲೈಟ್ ತಯಾರಿಸಲಾಗಿದೆ. ಇದು ಭಾರತದ ಮೊದಲ ಖಾಸಗಿ ನಿರ್ಮಾಣದ ಮಿಲಿಟರಿ ದರ್ಜೆಯ ಜಿಯೋಸ್ಪಾಶಿಯಲ್ ಸೆಟಿಲೈಟ್ ಆಗಿದೆ. ಬಹಳ ಹೈರೆಲ್ಯೂಶನ್ ಚಿತ್ರಗಳನ್ನು ಸೆರೆಹಿಡಿಯಬಲ್ಲ ಈ ಸೆಟಿಲೈಟ್ ಭಾರತದ ಸೇನೆಗೆ ಸ್ಪೈ ಉಪಗ್ರಹವಾಗಿ ಕೆಲಸ ಮಾಡಬಹುದು.

ಕೋಲಾರದಲ್ಲಿ ಟಾಟಾ ನಿರ್ಮಿತ ಮಿಲಿಟರಿ ಸೆಟಿಲೈಟ್ ಅಮೆರಿಕದ ಸ್ಪೇಸ್​ಎಕ್ಸ್ ರಾಕೆಟ್ ಮುಖಾಂತರ ಭೂಕಕ್ಷೆಗೆ
ಸೆಟಿಲೈಟ್​ನ ಸಾಂದರ್ಭಿಕ ಚಿತ್ರ
Follow us on

ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಸಂಸ್ಥೆ ನಿರ್ಮಿಸಿದ ಮಿಲಿಟರಿ ಗ್ರೇಡ್ ಜಿಯೋ ಸ್ಪೇಶಿಯಲ್ ಸೆಟಿಲೈಟ್ ಆದ ಟಿಸ್ಯಾಟ್-1ಎ (TSAT-1A) ಅನ್ನು ಯಶಸ್ವಿಯಾಗಿ ಭೂಕಕ್ಷೆಗೆ ಸೇರಿಸಲಾಗಿದೆ. ಬಹಳ ಅಧಿಕ ರೆಸಲ್ಯೂಶನ್ ಹೊಂದಿರುವ ಭೂ ವೀಕ್ಷಣಾ ಉಪಗ್ರಹ (earth observation satellite) ಇದಾಗಿದೆ. ಅಮೆರಿಕದ ಇಲಾನ್ ಮಸ್ಕ್ ಮಾಲಕತ್ವದ ಸ್ಪೇಸ್​ಎಕ್ಸ್​ನ ಫಾಲ್ಕನ್9 ರಾಕೆಟ್ (SpaceX Falcon9 rocket) ಮೂಲಕ ಟಾಟಾರವರ ಟಿಸ್ಯಾಟ್-1ಎ ಸೆಟಿಲೈಟ್ ಅನ್ನು ಉಡಾವಣೆ ಮಾಡಲಾಯಿತು. ಫ್ಲೋರಿಡಾ ರಾಜ್ಯದ ಕೆನಡಿ ಸ್ಪೇಸ್ ಸೆಂಟರ್​ನಲ್ಲಿ ಫಾಲ್ಕನ್9 ರಾಕೆಟ್ ಟಾಟಾದ ಈ ಸೆಟಿಲೈಟ್ ಸೇರಿದಂತೆ ವಿವಿಧ ಉಪಗ್ರಹಗಳನ್ನು ನಭಕ್ಕೆ ಕೊಂಡೊಯ್ದಿತು. ಅಂದಹಾಗೆ, ಟಿಸ್ಯಾಟ್-1ಎ ಸಂಪೂರ್ಣ ಖಾಸಗಿ ಸಂಸ್ಥೆ ನಿರ್ಮಿಸಿದ ಮೊದಲ ಮಿಲಿಟರಿ ಗ್ರೇಡ್ ಜಿಯೋಸ್ಪೇಶಿಯಲ್ ಸೆಟಿಲೈಟ್ ಆಗಿದೆ.

ಕೋಲಾರದ ವೇಮಗಲ್​ನಲ್ಲಿರುವ ಟಾಟಾ ಘಟಕದಲ್ಲಿ ಈ ಸೆಟಿಲೈಟ್ ಅನ್ನು ತಯಾರಿಸಲಾಗಿದೆ. 50 ಕಿಲೋಗಿಂತಲೂ ಕಡಿಮೆ ತೂಕ ಇದೆ. ಪಿಕ್ಸೆಲ್​ಗೆ ಒಂದು ಮೀಟರ್​ಗಿಂತಲೂ ನಿಖರತೆಯ ಹೈರೆಸಲ್ಯೂಶನ್ ಚಿತ್ರಗಳನ್ನು ಈ ಸೆಟಿಲೈಟ್ ನೀಡಬಲ್ಲುದು. ಸದ್ಯ ನಿಗದಿತ ಕಕ್ಷೆಗೆ ಇದನ್ನು ಯಶಸ್ವಿಯಾಗಿ ಸೇರಿಸಲಅಗಿದೆ. ಮುಂಬರುವ ದಿನಗಳಲ್ಲಿ ಇದು ಎಷ್ಟು ಪರಿಣಾಮಕಾರಿಯಾಗಿ ಕಾರ್ಯಾಚರಿಸಬಲ್ಲುದು ಎಂಬುದನ್ನು ಪರೀಕ್ಷಿಸಿದ ಬಳಿಕ ಅದರ ನೈಜ ಉದ್ದೇಶಕ್ಕೆ ಬಳಸಿಕೊಳ್ಳುವ ಸಾಧ್ಯತೆ ಇದೆ.

ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ತಯಾರಿಸಿರುವ ಈ ಸೆಟಿಲೈಟ್​ನ ಸೇವೆ ಸದ್ಯಕ್ಕೆ ಸರ್ಕಾರ ಹಾಗೂ ಸೇನಾಪಡೆಗಳಿಗೆ ಸೀಮಿತವಾಗಿರಲಿದೆ. ಇದರ ನಿಖರ ಇಮೇಜಿಂಗ್ ಸಾಮರ್ಥ್ಯವು ಸೇನೆಗೆ ಬಹಳ ಉಪಯುಕ್ತವಾಗಬಹುದು. ಸ್ಪೈ ಸೆಟಿಲೈಟ್​ನಂತೆ ಇದನ್ನು ಸೇನೆ ಬಳಸಿಕೊಳ್ಳಬಹುದು.

ಇದನ್ನೂ ಓದಿ: ಗಾಳಿಯಿಂದ ನೀರು ತಯಾರಿಸುವ ಬೆಂಗಳೂರಿನ ಉರವು ಲ್ಯಾಬ್ಸ್; ನೀರಿನ ಸಮಸ್ಯೆಗೆ ಸ್ಟಾರ್ಟಪ್ ಪರಿಹಾರ

ಇಸ್ರೋ ಕೆಲವಿಷ್ಟು ಮಿಲಿಟರಿ ಸ್ಪೈ ಸೆಟಿಲೈಟ್​ಗಳನ್ನು ಆಗಸಕ್ಕೆ ಕಳುಹಿಸಿದೆ. ಖಾಸಗಿ ವಲಯದಿಂದಲೂ ಸರ್ಕಾರಕ್ಕೆ ಗೂಢಚಾರಿ ಉಪಗ್ರಹಗಳು ಈಗ ಲಭ್ಯವಾಗತೊಡಗಿದೆ. ಗಡಿಭಾಗದಲ್ಲಿ ಚೀನಾದಿಂದ ಹಿಂದೆಂದಿಗಿಂತಲೂ ಅಪಾಯ ಹೆಚ್ಚಲಿರುವುದರಿಂದ ಈ ಗೂಢಚಾರಿ ಉಪಗ್ರಹಗಳು ಸೇನೆಗೆ ವರದಾನವಾಗಬಹುದು. ಟಾಟಾ ಸಂಸ್ಥೆ ಇಂಥ ಮಿಲಿಟರಿ ಗ್ರೇಡ್ ಜಿಯೋ ಸ್ಪೇಶಿಯಲ್ ಸೆಟಿಲೈಟ್​ಗಳ ಒಂದು ಸಮೂಹವನ್ನೇ ಆಕಾಶಕ್ಕೆ ಸೇರಿಸುವ ಪ್ಲಾನ್ ಹೊಂದಿದೆ. ವೇಮಗಲ್​ನಲ್ಲಿರುವ ಅದರ ಘಟಕದಲ್ಲಿ ವರ್ಷಕ್ಕೆ 25 ಸೆಟಿಲೈಟ್​​ಗಳನ್ನು ತಯಾರಿಸುವಷ್ಟು ಸಾಮರ್ಥ್ಯ ಹೊಂದಿದೆ.

ಈ ಸೆಟಿಲೈಟ್​ಗಳನ್ನು ಸರ್ಕಾರಕ್ಕೆ ಮಾತ್ರವಲ್ಲ, ವಾಣಿಜ್ಯಾತ್ಮಕವಾಗಿಯೂ ಬಳಕೆ ಮಾಡಿಕೊಳ್ಳಲು ಟಾಟಾ ಉದ್ದೇಶಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ