ಟಿಸಿಎಸ್ನಿಂದ ಈ ವರ್ಷದೊಳಗೆ 12,000 ಮಂದಿ ಲೇ ಆಫ್: ಐಟಿ ಉದ್ಯೋಗಿಗಳಿಗೆ ಶಾಕ್
Tata Consultancy Services to layoff Over 12,000 employees: ಭಾರತದ ನಂಬರ್ ಒನ್ ಐಟಿ ಸರ್ವಿಸ್ ಕಂಪನಿಯಾದ ಟಿಸಿಎಸ್ ಶೇ 2ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುತ್ತಿದೆ. 2026ರ ಮಾರ್ಚ್ 31ರಷ್ಟರಲ್ಲಿ 12,000ಕ್ಕೂ ಅಧಿಕ ಉದ್ಯೋಗಿಗಳ ಲೇ ಆಫ್ ಆಗಬಹುದು. ಟಿಸಿಎಸ್ ಇತ್ತೀಚೆಗೆ ಜಾರಿಗೆ ತಂದಿರುವ ನೂತನ ಬೆಂಚ್ ನೀತಿಗೂ ಈ ಲೇ ಆಫ್ಗೂ ಸಂಬಂಧ ಇದೆಯಾ ಎಂಬುದು ಗೊತ್ತಿಲ್ಲ.

ನವದೆಹಲಿ, ಜುಲೈ 27: ಭಾರತದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಸಂಸ್ಥೆ (TCS) ಈ ಹಣಕಾಸು ವರ್ಷ ಮುಗಿಯುವುದರೊಳಗೆ ಶೇ. 2ರಷ್ಟು ಲೇ ಆಫ್ ಮಾಡಲು ಯೋಜಿಸಿದೆ. 2026ರ ಮಾರ್ಚ್ನಷ್ಟರಲ್ಲಿ ಟಿಸಿಎಸ್ನ 12,000ಕ್ಕೂ ಅಧಿಕ ಉದ್ಯೋಗಿಗಳಿಗೆ ಕೆಲಸ ಹೋಗುವ ಸಾಧ್ಯತೆ ಇದೆ. ಎಐ ತಂತ್ರಜ್ಞಾನ ಅಳವಡಿಕೆಯಿಂದಾಗಿ ಉದ್ಯೋಗನಷ್ಟ ಆಗುತ್ತಿಲ್ಲ ಎಂಬುದನ್ನು ಟಿಸಿಎಸ್ ಮೂಲಗಳು ಸ್ಪಷ್ಟಪಡಿಸಿವೆ. ತಂತ್ರಜ್ಞಾನ ಬದಲಾವಣೆಯ ವೇಗಕ್ಕೆ ಅನುಗುಣವಾಗಿ ಕಂಪನಿಯ ಕಾರ್ಯವೈಖರಿ ಮತ್ತು ತಂಡಗಳ ಸ್ವರೂಪ ಬದಲಾಯಿಸುವ ನಿಟ್ಟಿನಲ್ಲಿ ಈ ಲೇ ಆಫ್ ನಡೆಯುತ್ತಿದೆ ಎನ್ನಲಾಗಿದೆ.
‘ಹೊಸ ತಂತ್ರಜ್ಞಾನಗಳು ಅಡಿ ಇಟ್ಟಿವೆ. ಕೆಲಸ ಮಾಡುವ ವಿಧಾನಗಳು ಬದಲಾಗುತ್ತಿವೆ. ನಾವು ಭವಿಷ್ಯಕ್ಕೆ ಸಜ್ಜಾಗಿರಬೇಕು. ಎಐ ಅನ್ನು ವ್ಯಾಪಕವಾಗಿ ನಿಯೋಜಿಸುತ್ತಿದ್ದೇವೆ. ಭವಿಷ್ಯಕ್ಕೆ ಬೇಕಾದ ಕೌಶಲ್ಯಗಳನ್ನು ಅವಲೋಕಿಸುತ್ತಿದ್ದೇವೆ. ಮರುನಿಯೋಜನೆಯಿಂದ ಪ್ರಯೋಜನ ಆಗದಂತಹ ಕೆಲಸಗಳು ಇನ್ನೂ ಇವೆ. ನಮ್ಮ ಜಾಗತಿಕ ಶೇ. 2ರಷ್ಟು ಉದ್ಯೋಗಿಗಳಿಗೆ ಸಂಕಷ್ಟ ಇದೆ’ ಎಂದು ಟಿಸಿಎಸ್ನ ಸಿಇಒ ಕೆ ಕೃತಿವಾಸನ್ ಹೇಳಿದ್ದಾರೆ.
ಇದನ್ನೂ ಓದಿ: ಟಿಸಿಎಸ್ ಬೆಂಚ್ ಪಾಲಿಸಿ: ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ಶೇ 15 ಉದ್ಯೋಗಿಗಳು?
ಭಾರತದ ನಂಬರ್ ಒನ್ ಐಟಿ ಸರ್ವಿಸ್ ಕಂಪನಿ ಎನಿಸಿದ ಟಿಸಿಎಸ್ನಲ್ಲಿ ಆರು ಲಕ್ಷಕ್ಕೂ ಅಧಿಕ ಉದ್ಯೋಗಿಗಳಿದ್ದಾರೆ. ಇವರಲ್ಲಿ ಶೇ 2 ಎಂದರೆ ಸುಮಾರು 12,200 ಉದ್ಯೋಗಿಗಳಿಗೆ ಕೆಲಸ ಹೋಗಬಹುದು. ಕಂಪನಿಯ ಸಿಇಒ ಹೇಳಿಕೆ ಪ್ರಕಾರ ಕೆಲಸ ಕಳೆದುಕೊಳ್ಳುವ ಹೆಚ್ಚಿನವರು ಮಧ್ಯಮ ಮತ್ತು ಹಿರಿಯ ಸ್ಥಾನದಲ್ಲಿ ಇರುವಂಥವರೆ.
‘ಎಐನಿಂದಾಗಿ ಈ ಲೇ ಆಫ್ ನಡೆಯುತ್ತಿಲ್ಲ. ಆದರೆ, ಭವಿಷ್ಯದ ಕೌಶಲ್ಯಗಳ ಅವಶ್ಯಕತೆ ಹಿನ್ನೆಲೆಯಲ್ಲಿ ಈ ಕ್ರಮ ತರಲಾಗುತ್ತಿದೆ. ಕಡಿಮೆ ಜನರು ಸಾಕು ಎನ್ನುವುದಕ್ಕಿಂತ ಹೆಚ್ಚಾಗಿ, ಉಪಯುಕ್ತತೆಯ ಪ್ರಶ್ನೆ ಇದೆ’ ಎಂದು ಟಿಸಿಎಸ್ ಸಿಇಒ ಹೇಳಿದ್ದಾರೆ.
ಟಿಸಿಎಸ್ ಕೆಲ ತಿಂಗಳ ಹಿಂದೆ ಹೊಸ ಬೆಂಚ್ ನೀತಿ ಜಾರಿಗೆ ತಂದಿದೆ. ಇದರ ಪ್ರಕಾರ ವರ್ಷದಲ್ಲಿ ಒಬ್ಬ ಉದ್ಯೋಗಿ 225 ಬಿಲ್ಲಿಂಗ್ ದಿನ ಕರ್ತವ್ಯ ಹೊಂದಿರಬೇಕು. 35ಕ್ಕಿಂತ ಹೆಚ್ಚು ದಿನ ಬೆಂಚ್ನಲ್ಲಿ ಇರಬಾರದು ಎನ್ನುವಂತಹ ನೀತಿ ಇದೆ. ಇಲ್ಲಿ ಬಿಲ್ಲಿಂಗ್ ದಿನ ಎಂದರೆ ಬ್ಯುಸಿನೆಸ್ ನೀಡುವ ಕ್ಲೈಂಟ್ಗಳ ಸೇವೆಯಲ್ಲಿ ಕೆಲಸ ಮಾಡುತ್ತಿರಬೇಕು. ಅಂದರೆ, ಒಂದು ದಿನ ಮಾಡಿದ ಕೆಲಸವು ಕಂಪನಿಗೆ ಆದಾಯ ತರುವಂತಿರಬೇಕು ಅಥವಾ ಬ್ಯುಸಿನೆಸ್ ಆಗಿರಬೇಕು.
ಇದನ್ನೂ ಓದಿ: ಇಂಟೆಲ್ನಿಂದ 24,500 ಮಂದಿ ಲೇ ಆಫ್? ಬದುಕಲು ಹೆಣಗಾಡುತ್ತಿದೆ ಚಿಪ್ ಕಂಪನಿ
ಕಂಪನಿಯ ಯಾವುದೇ ಪ್ರಾಜೆಕ್ಟ್ಗಳಲ್ಲಿ ಸ್ಥಾನ ಪಡೆಯದ ಉದ್ಯೋಗಿಗಳನ್ನು ಬೆಂಚ್ ಸಿಟ್ಟರ್ಸ್ ಎನ್ನುತ್ತಾರೆ. ವರ್ಷದಲ್ಲಿ 35ಕ್ಕಿಂತ ಹೆಚ್ಚು ದಿನ ಬೆಂಚ್ ಸಿಟ್ಟಿಂಗ್ ಇರುವ ಉದ್ಯೋಗಿಗಳನ್ನು ಟಿಸಿಎಸ್ ಕೆಲಸದಿಂದ ತೆಗೆಯುತ್ತಿದೆ. ಈಗ ಶೇ. 2ರಷ್ಟ ಲೇ ಆಫ್ ಮಾಡುತ್ತಿರುವುದು ಈ ಹೊಸ ಬೆಂಚ್ ಪಾಲಿಸಿಯಿಂದಲಾ ಎಂಬುದು ಗೊತ್ತಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




