Tatva Chintan Pharma IPO: ತತ್ವ ಚಿಂತನ್ ಕೆಮ್ ಐಪಿಒ ಮೊದಲ ದಿನದ ಒಂದು ಗಂಟೆಯಲ್ಲೇ ಪೂರ್ತಿ ಸಬ್​ಸ್ಕ್ರೈಬ್

| Updated By: Srinivas Mata

Updated on: Jul 16, 2021 | 4:47 PM

ತತ್ವ ಚಿಂತನ್ ಫಾರ್ಮಾ ಕೆಮ್​ನ ಐಪಿಒ ಜುಲೈ 16ನೇ ತಾರೀಕು ಆರಂಭವಾಗಿದ್ದು, ಮೊದಲ ದಿನದ ಆರಂಭದ ಒಂದು ಗಂಟೆಯಲ್ಲೇ ಪೂರ್ತಿಯಾಗಿ ಸಬ್​ಸ್ಕ್ರೈಬ್ ಆಗಿದೆ.

Tatva Chintan Pharma IPO: ತತ್ವ ಚಿಂತನ್ ಕೆಮ್ ಐಪಿಒ ಮೊದಲ ದಿನದ ಒಂದು ಗಂಟೆಯಲ್ಲೇ ಪೂರ್ತಿ ಸಬ್​ಸ್ಕ್ರೈಬ್
ಸಾಂದರ್ಭಿಕ ಚಿತ್ರ
Follow us on

ತತ್ವ ಚಿಂತನ್ ಫಾರ್ಮಾ ಕೆಮ್​ನ ಐಪಿಒಗೆ ಭರ್ಜರಿ ಬೇಡಿಕೆ ಕಂಡುಬಂದಿದೆ. ಐಪಿಒ ಆರಂಭದ ಮೊದಲ ದಿನದ ಆರಂಭದ ಒಂದು ಗಂಟೆಯಲ್ಲೇ ಪೂರ್ತಿಯಾಗಿ ಸಬ್​ಸ್ಕ್ರೈಬ್ ಆಗಿದೆ. ಝೊಮ್ಯಾಟೋ ನಂತರ ಇದೀಗ ಮತ್ತೊಂದು ಐಪಿಒಗೆ ಹೂಡಿಕೆದಾರರಿಂದ ಉತ್ಸಾಹದ ಪ್ರತಿಕ್ರಿಯೆ ಕಂಡುಬಂದಿದೆ. ಜುಲೈ 16ನೇ ತಾರೀಕು 2.53 ಪಟ್ಟು ಹೆಚ್ಚು ಸಬ್​ಸ್ಕ್ರೈಬ್ ಆಗಿದೆ. 32.61 ಲಕ್ಷ ಈಕ್ವಿಟಿ ಷೇರುಗಳನ್ನು ಆಫರ್ ಮಾಡಿದರೆ ಅದಕ್ಕೆ 82.58 ಲಕ್ಷ ಬೇಡಿಕೆ ಬಂದಿದೆ ಎಂದು ಎಕ್ಸ್​ಚೇಂಜ್​ನ ದತ್ತಾಂಶಗಳು ತೋರಿಸುತ್ತಿವೆ. ಈ ಸ್ಪೆಷಾಲಿಟಿ ಕೆಮಿಕಲ್ ಕಂಪೆನಿಯ ಷೇರುಗಳಿಗೆ ರೀಟೇಲ್ ಹೂಡಿಕೆದಾರರಿಂದ ಪ್ರಬಲಬಾದ ಬೇಡಿಕೆ ಬಂದಿದ್ದು, ರೀಟೇಲ್ ಹೂಡಿಕೆದಾರರಿಗೆ ಮೀಸಲಿಟ್ಟ ಷೇರಿನ ಪ್ರಮಾಣಕ್ಕಿಂತ 4.89 ಪಟ್ಟು ಹೆಚ್ಚು ಬೇಡಿಕೆ ಬಂದಿದೆ. ನಾನ್ ಇನ್​ಸ್ಟಿಟ್ಯೂಷನಲ್ ಹೂಡಿಕೆದಾರರಿಗಾಗಿ ಮೀಸಲಿಟ್ಟ ಭಾಗವು ಶೇ 40ರಷ್ಟು ಬೇಡಿಕೆ ಪಡೆದರೆ, ಕ್ವಾಲಿಫೈಡ್ ಇನ್​ಸ್ಟಿಟ್ಯೂಷನಲ್​ ಖರೀದಿದಾರರ ಭಾಗದ್ದು ಶೇ 1ರಷ್ಟು ಸಬ್​ಸ್ಕ್ರೈಬ್ ಆಗಿದೆ.

ಪ್ರತಿ ಷೇರಿಗೆ 1073ರಿಂದ 1083 ರೂಪಾಯಿಯ ದರದ ಬ್ಯಾಂಡ್​ನಲ್ಲಿ ಜುಲೈ 15ನೇ ತಾರೀಕಿನಂದು ಆಂಕರ್ ಬುಕ್ ಮೂಲಕವಾಗಿ ತತ್ವ ಚಿಂತನ್ 150 ಕೋಟಿ ರೂಪಾಯಿಯನ್ನು ಸಂಗ್ರಹ ಮಾಡಿದೆ. ಒಟ್ಟಾರೆ ಷೇರು ಇಶ್ಯೂ ಗಾತ್ರ 500 ಕೋಟಿ ರೂಪಾಯಿ ಆಗಿದೆ. ಈ ಐಪಿಒನಲ್ಲಿ ಹೊಸದಾಗಿ 225 ಕೋಟಿ ರೂಪಾಯಿಗೆ ಹಾಗೂ ಆಫರ್ ಫಾರ್ ಸೇಲ್ (ಒಎಫ್​ಎಸ್) ಮೂಲಕ 275 ಕೋಟಿ ರೂಪಾಯಿಯ ಷೇರು ವಿತರಣೆ ಮಾಡಲಾಗುತ್ತಿದೆ. ಈ ವಿತರಣೆಯ ನಂತರ ಪ್ರವರ್ತಕರು ಪ್ರವರ್ತಕರ ಗುಂಪಿನ (ಪ್ರಮೋಟರ್ ಅಂಡ್ ಪ್ರಮೋಟರ್ ಗ್ರೂಪ್) ಷೇರು ಪ್ರಮಾಣ ಶೇ 79.2ರಷ್ಟಾಗುತ್ತದೆ. ಹೊಸದಾಗಿ ಷೇರು ವಿತರಣೆ ಆಗುವುದರಿಂದ ಬರುವ ಹಣವನ್ನು ದಹೇಜ್ ಉತ್ಪಾದನಾ ಫೆಸಿಲಿಟಿ ವಿಸ್ತರಣೆ ಹಾಗೂ ವಡೋದರಾದಲ್ಲಿ ಆರ್​ ಅಂಡ್ ಡಿ ವ್ಯವಸ್ಥೆ ಮೇಲ್ದರ್ಜೆಗೆ ಏರಿಸಲು ಬಳಸಲಾಗುತ್ತದೆ.

ತತ್ವ್ ಚಿಂತನ್ ಫಾರ್ಮಾ ಕೆಮ್ ಎಂಬುದು ಸ್ಪೆಷಾಲಿಟಿ ಕೆಮಿಕಲ್ಸ್ ಕಂಪೆನಿ. ವೈವಿಧ್ಯಮಯ ಉತ್ಪನ್ನಗಳನ್ನು ತಯಾರು ಮಾಡುತ್ತದೆ. ಅದರಲ್ಲಿ ಎಲೆಕ್ಟ್ರೋಲೈಟ್ ಸಾಲ್ಟ್​ನಿಂದ ಕೆಪಾಸಿಟರಿ ಬ್ಯಾಟರೀಸ್ ಮತ್ತಿತರವುಗಳನ್ನು ಒಳಗೊಂಡಿವೆ. 2019ರಿಂದ 21ರ ತನಕದ ಹಣಕಾಸು ವರ್ಷದಲ್ಲಿ ತತ್ವದಿಂದ ಶೇ 21.7ರಷ್ಟು ಸಿಎಜಿಆರ್ ಬೆಳವಣಿಗೆ ದಾಖಲಾಗಿದೆ. ಎಲ್ಲ ಸೆಗ್ಮೆಂಟ್​ಗಳಲ್ಲೂ ಭಾರೀ ಬೆಳವಣಿಗೆ ದಾಖಲಾಗಿದೆ. ತತ್ವ ಚಿಂತನ್​ನ ಉತ್ಪನ್ನಗಳನ್ನು 25ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡಲಾಗುತ್ತದೆ. ಅದರಲ್ಲಿ ಅಮೆರಿಕ, ಯು.ಕೆ., ಚೀನಾ ಸಹ ಒಳಗೊಂಡಿವೆ. ಕಂಪೆನಿಗೆ ಬರುವ ಒಟ್ಟಾರೆ ಆದಾಯದಲ್ಲಿ ಶೇ 75ರಷ್ಟು ರಫ್ತಿನಿಂದಲೇ ಬರುತ್ತದೆ.

ತತ್ವ ಚಿಂತನ್ ಐಪಿಒ ವಿತರಣೆ ಮಾಹಿತಿ:
ಒಟ್ಟು ಸಂಗ್ರಹ ಮಾಡಲಿರುವ ಮೊತ್ತ- 500 ಕೋಟಿ ರೂಪಾಯಿ
ದರ ಬ್ಯಾಂಡ್- ರೂ. 1073ರಿಂದ ರೂ. 1083
ಕನಿಷ್ಠ ಹೂಡಿಕೆ ಮೊತ್ತ- ರೂ. 14,079
ಸಬ್​ಸ್ಕ್ರಿಪ್ಷನ್ ಆರಂಭ- ಜುಲೈ 16, 2021
ಸಬ್​ಸ್ಕ್ರಿಪ್ಷನ್ ಕೊನೆ- ಜುಲೈ 20, 2021
ಕನಿಷ್ಠ ಷೇರು ಖರೀದಿ- 13 (ಅದಕ್ಕಿಂತ ಹೆಚ್ಚಿಗೆ ಬೇಕಾದಲ್ಲಿ 13ರ ಗುಣಕದಲ್ಲಿ ಖರೀದಿಸಬೇಕು)

ಇದನ್ನೂ ಓದಿ: Zomato IPO: ಝೊಮ್ಯಾಟೋ ಐಪಿಒಗೆ ಭರ್ಜರಿ ಬೇಡಿಕೆ; ಶೇ 60ರಷ್ಟು ಅರ್ಜಿದಾರರು 30 ವರ್ಷದ ಒಳಗಿನವರು

(Tatva Chintan Pharma Chem IPO fully subscribed within an hour on day 1)