Kingfisher Airlines Case: ಕಿಂಗ್‌ಫಿಷರ್ ಪ್ರಕರಣದಲ್ಲಿ 792 ಕೋಟಿ ರೂ. ಪಡೆದ ಎಸ್ಬಿಐ ನೇತೃತ್ವದ ಒಕ್ಕೂಟ
ವಿಜಯ್ ಮಲ್ಯ ನೇತೃತ್ವದ ಕಿಂಗ್ ಫಿಷರ್ ಏರ್‌ಲೈನ್ಸ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಹಸ್ತಾಂತರಿಸಿದ ಷೇರುಗಳನ್ನು ಮಾರಾಟ ಮಾಡುವ ಮೂಲಕ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಸಾಲಗಾರರ ಒಕ್ಕೂಟವು 792 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ವಸೂಲು ಮಾಡಿದೆ
ನವದೆಹಲಿ: ಕಿಂಗ್‌ಫಿಷರ್ ಏರ್‌ಲೈನ್ಸ್ (Kingfisher Airlines) ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಎನ್‌ಫೋರ್ಸ್‌ಮೆಂಟ್ ಡೈರೆಕ್ಟೊರೇಟ್ -ಇಡಿ) ಹಸ್ತಾಂತರಿಸಿದ ಷೇರುಗಳನ್ನು ಮಾರಾಟ ಮಾಡುವ ಮೂಲಕ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ನೇತೃತ್ವದ ಸಾಲಗಾರರ ಒಕ್ಕೂಟವು 792 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ವಸೂಲು ಮಾಡಿದೆ ಎಂದು ತನಿಖಾ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಬ್ಯಾಡ್ ಲೋನ್ ವಸೂಲಿಯ ಭಾಗವಾಗಿ ಈ ನಡೆ ಇಟ್ಟಿದೆ.
ತನಿಖಾ ಸಂಸ್ಥೆಯಿಂದ ಮುಟ್ಟುಗೋಲು ಹಾಕಿಕೊಂಡ ಯುನೈಟೆಡ್ ಬ್ರೂವರೀಸ್ ಲಿಮಿಟೆಡ್‌ನಲ್ಲಿನ ಷೇರುಗಳ ಮಾರಾಟದಿಂದ ಈ ಒಕ್ಕೂಟವು ಸುಮಾರು 800 ಕೋಟಿ ರೂಪಾಯಿಗಳನ್ನು ದೊರೆಯುವ ನಿರೀಕ್ಷೆಯಿದೆ ಎಂದು ಇ.ಡಿ. ಜೂನ್‌ನಲ್ಲಿ ತಿಳಿಸಿತ್ತು. ಸಾಲ ನೀಡಿದ ಸಂಸ್ಥೆಗಳು ಈ ಹಿಂದೆ ಆಸ್ತಿಗಳನ್ನು ಮಾರಾಟ ಮಾಡಿ, 7,181.5 ಕೋಟಿ ವಸೂಲಿ ಮಾಡಿದ್ದರು ಮತ್ತು ಅಕ್ರಮ ಹಣ ವರ್ಗಾವಣೆ ವಿರೋಧಿ ಕಾಯ್ದೆ ಅಡಿಯಲ್ಲಿ ಇ.ಡಿ.ಯಿಂದ ಮುಟ್ಟುಗೋಲು ಹಾಕಿಕೊಂಡ ಸ್ವತ್ತುಗಳ ಮಾರಾಟದ ಮೂಲಕ ಒಟ್ಟು 9,041.5 ಕೋಟಿ ರೂಪಾಯಿ ಗಳಿಸುವ ನಿರೀಕ್ಷೆಯಿದೆ.
ದೇಶದಿಂದ ಪರಾರಿ ಆಗಿರುವ ಆರ್ಥಿಕ ಅಪರಾಧಿ ವಿಜಯ್ ಮಲ್ಯರನ್ನು ಯುಕೆಯಿಂದ ಹಸ್ತಾಂತರಿಸಲು ನರೇಂದ್ರ ಮೋದಿ ನೇತೃತ್ವದ ಆಡಳಿತವು ಎಲ್ಲ ಪ್ರಯತ್ನಗಳನ್ನು ಮಾಡುತ್ತಿರುವ ಸಮಯದಲ್ಲಿ ಈ ಬೆಳವಣಿಗೆ ಆಗಿದೆ. ದೇಶಭ್ರಷ್ಟ ಆರ್ಥಿಕ ಕಾಯ್ದೆ ಅಡಿಯಲ್ಲಿ ಪರಾರಿಯಾದ ಆರ್ಥಿಕ ಅಪರಾಧಿಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಮತ್ತು ಯಾವುದೇ ನಾಗರಿಕ ಹಕ್ಕನ್ನು ಸಮರ್ಥಿಸಿಕೊಳ್ಳಲು ಆಗದಂತೆ ಅಪರಾಧಿಯನ್ನು ನಿರಾಕರಿಸಲಾಗುವುದು.
ಜಾರಿ ನಿರ್ದೇಶನಾಲಯ ಹೇಳಿರುವ ಪ್ರಕಾರ, ಪಂಜಾಬ್ ನ್ಯಾಷನಲ್ ಬ್ಯಾಂಕ್ – ನೀರವ್ ಮೋದಿ ಪ್ರಕರಣದಲ್ಲಿ ದೇಶಭ್ರಷ್ಟ ಆರ್ಥಿಕ ಅಪರಾಧ ನ್ಯಾಯಾಲಯವು 1,060 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಮಾರಾಟ ಮಾಡಲು ಬ್ಯಾಂಕ್‌ಗಳಿಗೆ ಅನುಮತಿಸಲಾಗಿದೆ ಮತ್ತು ತನಿಖಾ ಸಂಸ್ಥೆಗಳು ದೇಭ್ರಷ್ಟ ಆರ್ಥಿಕ ಅಪರಾಧಿಗಳ ಕಾಯ್ದೆಯಡಿ 329.67 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ ಅಥವಾ ಅಕ್ರಮ ಹಣ ವರ್ಗಾವಣೆ ವಿರೋಧಿ ಕಾನೂನು ಅಡಿಯಲ್ಲಿ 18,217.27 ಕೋಟಿ ರೂಪಾಯಿ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ವಿಜಯ್ ಮಲ್ಯ ಆಸ್ತಿ, ಸೆಕ್ಯೂರಿಟೀಸ್ ಹರಾಜಿಗೆ ಬ್ಯಾಂಕ್‌ಗಳಿಗೆ ಅನುಮತಿ ನೀಡಿದ ಪಿಎಂಎಲ್ಎ ಕೋರ್ಟ್
(SBI led consortium gets Rs 792 crore in Kingfisher Airlines case. Here is the details)