Tatva Chintan Pharma IPO: ತತ್ವ ಚಿಂತನ್ ಕೆಮ್ ಐಪಿಒ ಮೊದಲ ದಿನದ ಒಂದು ಗಂಟೆಯಲ್ಲೇ ಪೂರ್ತಿ ಸಬ್ಸ್ಕ್ರೈಬ್
ತತ್ವ ಚಿಂತನ್ ಫಾರ್ಮಾ ಕೆಮ್ನ ಐಪಿಒ ಜುಲೈ 16ನೇ ತಾರೀಕು ಆರಂಭವಾಗಿದ್ದು, ಮೊದಲ ದಿನದ ಆರಂಭದ ಒಂದು ಗಂಟೆಯಲ್ಲೇ ಪೂರ್ತಿಯಾಗಿ ಸಬ್ಸ್ಕ್ರೈಬ್ ಆಗಿದೆ.
ತತ್ವ ಚಿಂತನ್ ಫಾರ್ಮಾ ಕೆಮ್ನ ಐಪಿಒಗೆ ಭರ್ಜರಿ ಬೇಡಿಕೆ ಕಂಡುಬಂದಿದೆ. ಐಪಿಒ ಆರಂಭದ ಮೊದಲ ದಿನದ ಆರಂಭದ ಒಂದು ಗಂಟೆಯಲ್ಲೇ ಪೂರ್ತಿಯಾಗಿ ಸಬ್ಸ್ಕ್ರೈಬ್ ಆಗಿದೆ. ಝೊಮ್ಯಾಟೋ ನಂತರ ಇದೀಗ ಮತ್ತೊಂದು ಐಪಿಒಗೆ ಹೂಡಿಕೆದಾರರಿಂದ ಉತ್ಸಾಹದ ಪ್ರತಿಕ್ರಿಯೆ ಕಂಡುಬಂದಿದೆ. ಜುಲೈ 16ನೇ ತಾರೀಕು 2.53 ಪಟ್ಟು ಹೆಚ್ಚು ಸಬ್ಸ್ಕ್ರೈಬ್ ಆಗಿದೆ. 32.61 ಲಕ್ಷ ಈಕ್ವಿಟಿ ಷೇರುಗಳನ್ನು ಆಫರ್ ಮಾಡಿದರೆ ಅದಕ್ಕೆ 82.58 ಲಕ್ಷ ಬೇಡಿಕೆ ಬಂದಿದೆ ಎಂದು ಎಕ್ಸ್ಚೇಂಜ್ನ ದತ್ತಾಂಶಗಳು ತೋರಿಸುತ್ತಿವೆ. ಈ ಸ್ಪೆಷಾಲಿಟಿ ಕೆಮಿಕಲ್ ಕಂಪೆನಿಯ ಷೇರುಗಳಿಗೆ ರೀಟೇಲ್ ಹೂಡಿಕೆದಾರರಿಂದ ಪ್ರಬಲಬಾದ ಬೇಡಿಕೆ ಬಂದಿದ್ದು, ರೀಟೇಲ್ ಹೂಡಿಕೆದಾರರಿಗೆ ಮೀಸಲಿಟ್ಟ ಷೇರಿನ ಪ್ರಮಾಣಕ್ಕಿಂತ 4.89 ಪಟ್ಟು ಹೆಚ್ಚು ಬೇಡಿಕೆ ಬಂದಿದೆ. ನಾನ್ ಇನ್ಸ್ಟಿಟ್ಯೂಷನಲ್ ಹೂಡಿಕೆದಾರರಿಗಾಗಿ ಮೀಸಲಿಟ್ಟ ಭಾಗವು ಶೇ 40ರಷ್ಟು ಬೇಡಿಕೆ ಪಡೆದರೆ, ಕ್ವಾಲಿಫೈಡ್ ಇನ್ಸ್ಟಿಟ್ಯೂಷನಲ್ ಖರೀದಿದಾರರ ಭಾಗದ್ದು ಶೇ 1ರಷ್ಟು ಸಬ್ಸ್ಕ್ರೈಬ್ ಆಗಿದೆ.
ಪ್ರತಿ ಷೇರಿಗೆ 1073ರಿಂದ 1083 ರೂಪಾಯಿಯ ದರದ ಬ್ಯಾಂಡ್ನಲ್ಲಿ ಜುಲೈ 15ನೇ ತಾರೀಕಿನಂದು ಆಂಕರ್ ಬುಕ್ ಮೂಲಕವಾಗಿ ತತ್ವ ಚಿಂತನ್ 150 ಕೋಟಿ ರೂಪಾಯಿಯನ್ನು ಸಂಗ್ರಹ ಮಾಡಿದೆ. ಒಟ್ಟಾರೆ ಷೇರು ಇಶ್ಯೂ ಗಾತ್ರ 500 ಕೋಟಿ ರೂಪಾಯಿ ಆಗಿದೆ. ಈ ಐಪಿಒನಲ್ಲಿ ಹೊಸದಾಗಿ 225 ಕೋಟಿ ರೂಪಾಯಿಗೆ ಹಾಗೂ ಆಫರ್ ಫಾರ್ ಸೇಲ್ (ಒಎಫ್ಎಸ್) ಮೂಲಕ 275 ಕೋಟಿ ರೂಪಾಯಿಯ ಷೇರು ವಿತರಣೆ ಮಾಡಲಾಗುತ್ತಿದೆ. ಈ ವಿತರಣೆಯ ನಂತರ ಪ್ರವರ್ತಕರು ಪ್ರವರ್ತಕರ ಗುಂಪಿನ (ಪ್ರಮೋಟರ್ ಅಂಡ್ ಪ್ರಮೋಟರ್ ಗ್ರೂಪ್) ಷೇರು ಪ್ರಮಾಣ ಶೇ 79.2ರಷ್ಟಾಗುತ್ತದೆ. ಹೊಸದಾಗಿ ಷೇರು ವಿತರಣೆ ಆಗುವುದರಿಂದ ಬರುವ ಹಣವನ್ನು ದಹೇಜ್ ಉತ್ಪಾದನಾ ಫೆಸಿಲಿಟಿ ವಿಸ್ತರಣೆ ಹಾಗೂ ವಡೋದರಾದಲ್ಲಿ ಆರ್ ಅಂಡ್ ಡಿ ವ್ಯವಸ್ಥೆ ಮೇಲ್ದರ್ಜೆಗೆ ಏರಿಸಲು ಬಳಸಲಾಗುತ್ತದೆ.
ತತ್ವ್ ಚಿಂತನ್ ಫಾರ್ಮಾ ಕೆಮ್ ಎಂಬುದು ಸ್ಪೆಷಾಲಿಟಿ ಕೆಮಿಕಲ್ಸ್ ಕಂಪೆನಿ. ವೈವಿಧ್ಯಮಯ ಉತ್ಪನ್ನಗಳನ್ನು ತಯಾರು ಮಾಡುತ್ತದೆ. ಅದರಲ್ಲಿ ಎಲೆಕ್ಟ್ರೋಲೈಟ್ ಸಾಲ್ಟ್ನಿಂದ ಕೆಪಾಸಿಟರಿ ಬ್ಯಾಟರೀಸ್ ಮತ್ತಿತರವುಗಳನ್ನು ಒಳಗೊಂಡಿವೆ. 2019ರಿಂದ 21ರ ತನಕದ ಹಣಕಾಸು ವರ್ಷದಲ್ಲಿ ತತ್ವದಿಂದ ಶೇ 21.7ರಷ್ಟು ಸಿಎಜಿಆರ್ ಬೆಳವಣಿಗೆ ದಾಖಲಾಗಿದೆ. ಎಲ್ಲ ಸೆಗ್ಮೆಂಟ್ಗಳಲ್ಲೂ ಭಾರೀ ಬೆಳವಣಿಗೆ ದಾಖಲಾಗಿದೆ. ತತ್ವ ಚಿಂತನ್ನ ಉತ್ಪನ್ನಗಳನ್ನು 25ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡಲಾಗುತ್ತದೆ. ಅದರಲ್ಲಿ ಅಮೆರಿಕ, ಯು.ಕೆ., ಚೀನಾ ಸಹ ಒಳಗೊಂಡಿವೆ. ಕಂಪೆನಿಗೆ ಬರುವ ಒಟ್ಟಾರೆ ಆದಾಯದಲ್ಲಿ ಶೇ 75ರಷ್ಟು ರಫ್ತಿನಿಂದಲೇ ಬರುತ್ತದೆ.
ತತ್ವ ಚಿಂತನ್ ಐಪಿಒ ವಿತರಣೆ ಮಾಹಿತಿ: ಒಟ್ಟು ಸಂಗ್ರಹ ಮಾಡಲಿರುವ ಮೊತ್ತ- 500 ಕೋಟಿ ರೂಪಾಯಿ ದರ ಬ್ಯಾಂಡ್- ರೂ. 1073ರಿಂದ ರೂ. 1083 ಕನಿಷ್ಠ ಹೂಡಿಕೆ ಮೊತ್ತ- ರೂ. 14,079 ಸಬ್ಸ್ಕ್ರಿಪ್ಷನ್ ಆರಂಭ- ಜುಲೈ 16, 2021 ಸಬ್ಸ್ಕ್ರಿಪ್ಷನ್ ಕೊನೆ- ಜುಲೈ 20, 2021 ಕನಿಷ್ಠ ಷೇರು ಖರೀದಿ- 13 (ಅದಕ್ಕಿಂತ ಹೆಚ್ಚಿಗೆ ಬೇಕಾದಲ್ಲಿ 13ರ ಗುಣಕದಲ್ಲಿ ಖರೀದಿಸಬೇಕು)
ಇದನ್ನೂ ಓದಿ: Zomato IPO: ಝೊಮ್ಯಾಟೋ ಐಪಿಒಗೆ ಭರ್ಜರಿ ಬೇಡಿಕೆ; ಶೇ 60ರಷ್ಟು ಅರ್ಜಿದಾರರು 30 ವರ್ಷದ ಒಳಗಿನವರು
(Tatva Chintan Pharma Chem IPO fully subscribed within an hour on day 1)