ನವದೆಹಲಿ, ಆಗಸ್ಟ್ 3: ಸರಕು ಮತ್ತು ಸೇವಾ ತೆರಿಗೆ ಮಂಡಳಿ (GST Council) ಆನ್ಲೈನ್ ಗೇಮ್ಗಳು, ಜೂಜು ಮತ್ತು ಕುದುರೆ ರೇಸ್ ಇತ್ಯಾದಿ ಅದೃಷ್ಟದಾಟಗಳಿಗೆ ಶೇ. 28ರಷ್ಟು ಜಿಎಸ್ಟಿ ವಿಧಿಸುವುದನ್ನು ಹಿಂಪಡೆಯದಿರಲು ನಿರ್ಧರಿಸಿವೆ. ಅಕ್ಟೋಬರ್ 1ರಂದು ಆನ್ಲೈನ್ ಗೇಮಿಂಗ್ಗೆ ನೂತನ ಜಿಎಸ್ಟಿ ದರವನ್ನು ಜಾರಿಗೊಳಿಸಲು ಆಗಸ್ಟ್ 2ರಂದು ನಡೆದ ಜಿಎಸ್ಟಿ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ವಿಡಿಯೋ ಕಾನ್ಫೆರೆನ್ಸ್ ಮೂಲಕ ನಡೆದ ಈ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್, ಆನ್ಲೈನ್ ಗೇಮಿಂಗ್ಗೆ ಅಕ್ಟೋಬರ್ 1ರಿಂದ ಶೇ. 28ರಷ್ಟು ಜಿಎಸ್ಟಿ ವಿಧಿಸಲಾಗುವುದು. ಅದಾಗಿ 6 ತಿಂಗಳ ಬಳಿಕ ಪರಾಮರ್ಶಿಸಲಾಗುವುದು ಎಂದು ತಿಳಿಸಿದ್ದಾರೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಬುಧವಾರ ನಡೆದ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಎಲ್ಲಾ ರಾಜ್ಯಗಳ ಹಣಕಾಸು ಸಚಿವರುಗಳು ಭಾಗವಹಿಸಿದ್ದರು. ಈ ವೇಳೆ ಶೇ. 28ರಷ್ಟು ಜಿಎಸ್ಟಿಯನ್ನು ಗೇಮಿಂಗ್ ಉದ್ಯಮಕ್ಕೆ ವಿಧಿಸುವ ತೀರ್ಮಾನಕ್ಕೆ ಬದ್ಧವಾಗಿ ನಿರ್ಣಯ ಹೊರಡಿಸಲಾಯಿತು. ಈ ವೇಳೆ ದೆಹಲಿ, ಗೋವಾ ಮತ್ತು ಸಿಕ್ಕಿ ರಾಜ್ಯಗಳು ಮಂಡಳಿ ನಿರ್ಧಾರವನ್ನು ವಿರೋಧಿಸಿದವಾದರೂ ನಿರ್ಣಯ ವಿರುದ್ಧ ಮತಚಲಾಯಿಸುವ ಮಟ್ಟಕ್ಕೆ ಹೋಗಲಿಲ್ಲ.
ಇದನ್ನೂ ಓದಿ: Foxconn: ಕರ್ನಾಟಕದಲ್ಲಿ ಫಾಕ್ಸ್ಕಾನ್ನಿಂದ ಐಫೋನ್ ಕೇಸಿಂಗ್ ಮತ್ತು ಚಿಪ್ ಟೂಲ್ ತಯಾರಿಕಾ ಘಟಕಗಳು
ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ತೆಗೆದುಕೊಳ್ಳಲಾದ ತೀರ್ಮಾನವು ಆನ್ಲೈನ್ ಗೇಮಿಂಗ್ ಉದ್ಯಮ ನಿಟ್ಟುಸಿರು ಬಿಡುವಂತೆ ಮಾಡಿದೆ. ಆನ್ಲೈನ್ ಗೇಮಿಂಗ್ ಮತ್ತು ಕ್ಯಾಸಿನೋದಲ್ಲಿ ಆಟಗಾರ ಗೆದ್ದ ಹಣಕ್ಕೆ ಶೇ. 28ರಷ್ಟು ಜಿಎಸ್ಟಿ ವಿಧಿಸುವ ಪ್ರಸ್ತಾಪವನ್ನು ಮಂಡಳಿ ಕೈಬಿಟ್ಟಿದೆ. ಹಾಗೆಯೇ, ಹಿಂದಿನ ಜಿಎಸ್ಟಿ ಸಭೆಯಲ್ಲಿ ತೀರ್ಮಾನಿಸಲಾದಂತೆ ಆಟಗಾರನ ಬೆಟ್ಟಿಂಗ್ನ ಪೂರ್ಣ ಮೌಲ್ಯಕ್ಕೆ ತೆರಿಗೆ ವಿಧಿಸುವ ಪ್ರಸ್ತಾಪವನ್ನೂ ಕೈಬಿಡಲಾಗಿದೆ. ಅದರ ಬದಲು, ಆನ್ಲೈನ್ ಗೇಮಿಂಗ್ ಮತ್ತು ಕ್ಯಾಸಿನೋದಲ್ಲಿ ಆರಂಭಿಕ ಬೆಟ್ಟಿಂಗ್ ಹಣಕ್ಕೆ ಮಾತ್ರ ಜಿಎಸ್ಟಿ ವಿಧಿಸಲು ನಿರ್ಧರಿಸಲಾಗಿದೆ. ಅಂದರೆ, ಮೊದಲ ಬೆಟ್ಟಿಂಗ್ ಮೊತ್ತಕ್ಕೆ ಮಾತ್ರ ತೆರಿಗೆ ಇರುತ್ತದೆ. ಆಟ ಮುಂದುವರಿಸಿ ಇನ್ನಷ್ಟು ಬೆಟ್ಟಿಂಗ್ಗಳನ್ನು ಕಟ್ಟಿದರೆ ಅದಕ್ಕೆ ತೆರಿಗೆ ಇರುವುದಿಲ್ಲ.
ನಿನ್ನೆ ನಡೆದ 51ನೇ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಬಹುತೇಕ ಎಲ್ಲಾ ರಾಜ್ಯಗಳೂ ಪಾಲ್ಗೊಂಡಿದ್ದವು. ಆನ್ಲೈನ್ ಗೇಮಿಂಗ್ಗೆ ಶೇ. 28ರಷ್ಟು ಜಿಎಸ್ಟಿ ವಿಧಿಸುವ ಪ್ರಸ್ತಾಪವನ್ನು ಮರುಪರಿಶೀಲಿಸಬೇಕೆಂದು ದೆಹಲಿ, ಗೋವಾ ಮತ್ತು ಸಿಕ್ಕಿಂ ಒತ್ತಾಯಿಸಿವೆ ಎಂದು ನಿರ್ಮಲಾ ಸೀತಾರಾಮನ್ ಮಾಹಿತಿನೀಡಿದ್ದಾರೆ.
ಇದನ್ನೂ ಓದಿ: DA Hike: ಸರ್ಕಾರಿ ನೌಕರರಿಗೆ ಮತ್ತೆ ಗುಡ್ ನ್ಯೂಸ್; ಈ ಬಾರಿಯೂ ಶೇ. 4 ಡಿಎ ಹೆಚ್ಚಳ ಸಾಧ್ಯತೆ
ಮಹಾರಾಷ್ಟ್ರ, ಗುಜರಾತ್, ಛತ್ತೀಸ್ಗಡ, ಪಶ್ಚಿಮ ಬಂಗಾಳ ಮತ್ತು ಬಿಹಾರ ಮೊದಲಾದ ರಾಜ್ಯಗಳು ಆದಷ್ಟೂ ಬೇಗ ನೂತನ ಜಿಎಸ್ಟಿ ಜಾರಿಯಾಗಲಿ ಎಂದು ಒತ್ತಾಯಿಸಿರುವುದು ತಿಳಿದುಬಂದಿದೆ.
ತಮಿಳುನಾಡಿನಲ್ಲಿ ಜೂಜುಗಳಿಗೆ ನಿಷೇಧ ಹಾಕಲಾಗಿದೆ. ಕರ್ನಾಟಕ ಸರ್ಕಾರ ಕೂಡ ಜೂಜು ಇತ್ಯಾದಿ ಗೇಮ್ಗಳನ್ನು ನಿಷೇಧಿಸುವ ಇರಾದೆಯಲ್ಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ