ನವದೆಹಲಿ, ಮಾರ್ಚ್ 19: ಟಿಸಿಎಸ್ ಸಂಸ್ಥೆಯಲ್ಲಿರುವ ತನ್ನ ಕೆಲ ಷೇರುಪಾಲನ್ನು ಟಾಟಾ ಸನ್ಸ್ (Tata Sons) ಮಾರುವುದಾಗಿ ಹೇಳಿದ ಬೆನ್ನಲ್ಲೇ ಇದೀಗ ಟಿಸಿಎಸ್ ಷೇರು ಶೇ. 3ಕ್ಕಿಂತಲೂ ಹೆಚ್ಚು ಕುಸಿತ ಕಂಡಿದೆ. ಪ್ರತೀ ಷೇರಿಗೆ 4,001 ರೂ ಬೆಲೆಯಂತೆ 2.34 ಕೋಟಿ ಷೇರುಗಳು ಅಥವಾ ಶೇ. 0.65ರಷ್ಟು ಷೇರುಗಳನ್ನು ಟಾಟಾ ಸನ್ಸ್ ಮಾರಲು ನಿರ್ಧರಿಸಿತ್ತು. ವರದಿ ಪ್ರಕಾರ, ಬ್ಲಾಕ್ ಡೀಲ್ನಲ್ಲಿ ಇವತ್ತು ಟಾಟಾ ಸನ್ಸ್ ಈ ಷೇರುಗಳನ್ನು ಮಾರುತ್ತಿದೆ. ಇದರ ಪರಿಣಾಮವಾಗಿ ಟಿಸಿಎಸ್ ಷೇರುಬೆಲೆ (TCS share price) ಇಳಿಕೆ ಆಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಷೇರುಗಳನ್ನು ಯಾರು ಖರೀದಿಸಿದ್ದಾರೆ ಎಂಬ ಮಾಹಿತಿ ಗೊತ್ತಾಗಿಲ್ಲ.
ಟಾಟಾ ಸನ್ಸ್ ತನ್ನ ಟಿಸಿಎಸ್ ಷೇರುಗಳನ್ನು ಮಾರುವುದಾಗಿ ಹೇಳಿದ್ದು ನಿನ್ನೆ. ಸೋಮವಾರ ದಿನಾಂತ್ಯದಲ್ಲಿ ಟಿಸಿಎಸ್ ಷೇರುಬೆಲೆ 4,144.25 ರೂ ಇತ್ತು. 4,0001 ರೂಗೆ ಷೇರು ಮಾರಲು ನಿರ್ಧರಿಸಲಾಗಿತ್ತು. ಅಂದರೆ, ಶೇ. 3.45ರಷ್ಟು ಕಡಿಮೆ ಬೆಲೆಗೆ ಷೇರು ಮಾರಾಟಕ್ಕಿಡಲಾಗಿದೆ. ಎಕನಾಮಿಕ್ ಟೈಮ್ಸ್ ಮತ್ತು ನ್ಯೂಸ್18 ವರದಿಗಳ ಪ್ರಕಾರ ಬ್ಲಾಕ್ ಡೀಲ್ನಲ್ಲಿ ಈ ಎಲ್ಲಾ ಷೇರುಗಳನ್ನು ಮಾರಲಾಗಿದೆ. ಈ ವರದಿ ಬರೆಯುವ ಹೊತ್ತಿಗೆ ಟಿಸಿಎಸ್ ಷೇರುಬೆಲೆ 4,025ಕ್ಕೆ ಇಳಿದಿತ್ತು. ಒಂದು ಹಂತದಲ್ಲಿ 4,015 ರೂಗೆ ಬೆಲೆ ಇಳಿದಿತ್ತು.
ಇದನ್ನೂ ಓದಿ: ಚೀನಾ ಕಂಡಂತಹ ಆರ್ಥಿಕ ಬೆಳವಣಿಗೆಯ ವೇಗ ಭಾರತದಿಂದ ಅಸಾಧ್ಯ: ಮಾರ್ಗನ್ ಸ್ಟಾನ್ಲೀ
ಟಾಟಾ ಗ್ರೂಪ್ಗೆ ಸೇರಿದ ಟಿಸಿಎಸ್ ಭಾರತದ ಅತಿದೊಡ್ಡ ಐಟಿ ಸರ್ವಿಸ್ ಸಂಸ್ಥೆಯಾಗಿದೆ. ರಿಲಾಯನ್ಸ್ ಇಂಡಸ್ಟ್ರೀಸ್ ಬಿಟ್ಟರೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಅತಿಹೆಚ್ಚು ಮಾರುಕಟ್ಟೆ ಬಂಡವಾಳ (market capitalization) ಇರುವ ಭಾರತೀಯ ಕಂಪನಿಯಾಗಿದೆ. ಟಿಸಿಎಸ್ನಲ್ಲಿ ಟಾಟಾ ಸನ್ಸ್ ಶೇ. 72.38ರಷ್ಟು ಷೇರುಪಾಲು ಹೊಂದಿದೆ. ಈಗ ಶೇ. 0.65ರಷ್ಟು ಷೇರುಪಾಲನ್ನು ಮಾರುವ ಮೂಲಕ ಸುಮಾರು 9,000 ಕೋಟಿ ರೂ ಹಣ ಗಳಿಸಲಿದೆ. ಈ ಹಣವನ್ನು ಟಾಟಾ ಗ್ರೂಪ್ ಮಟ್ಟದಲ್ಲಿ ಇರುವ ಸಾಲ ತೀರಿಸಲು ಬಳಕೆ ಆಗಬಹುದು.
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಸಂಸ್ಥೆ ಉತ್ತಮ ಆದಾಯದಲ್ಲಿದೆ. ಷೇರುಮಾರುಕಟ್ಟೆಯಲ್ಲಿ ಇದರ ಬೆಳವಣಿಗೆ ವೇಗ ಬಹುತೇಕ ಸ್ಥಿರವಾಗಿದೆ. 2020ರಲ್ಲಿ ಇದರ ಷೇರುಬೆಲೆ 1,766 ರೂ ಇತ್ತು. ಈಗ 4,000 ರೂಗೂ ಹೆಚ್ಚು ಮಟ್ಟಕ್ಕೆ ಹೋಗಿದೆ.
ಇದನ್ನೂ ಓದಿ: ನಾಲ್ಕು ತಿಂಗಳ ಮೊಮ್ಮಗನಿಗೆ 240 ಕೋಟಿ ರೂ ಮೌಲ್ಯದ ಷೇರುಗಳನ್ನು ಗಿಫ್ಟ್ ಆಗಿ ಕೊಟ್ಟ ಇನ್ಫೋಸಿಸ್ ನಾರಾಯಣಮೂರ್ತಿ
ಶೇರ್ಖಾನ್ ಎಂಬ ಬ್ರೋಕರಿಂಗ್ ಸಂಸ್ಥೆ ಟಿಸಿಎಸ್ಗೆ ಟಾರ್ಗೆಟ್ ಪ್ರೈಸ್ ಆಗಿ 4,750 ರೂ ಎಂದಿದೆ. ಅಂದರೆ, ಕೆಲವೇ ತಿಂಗಳಲ್ಲಿ ಟಿಸಿಎಸ್ ಷೇರುಬೆಲೆ 4,750 ರೂ ತಲುಪುವ ಸಾಧ್ಯತೆ ಇದೆ ಎಂಬುದು ಪರಿಣಿತರ ಅಂದಾಜು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ