ಆದಾಯ ತೆರಿಗೆ ಇಲಾಖೆ ಹೊಸ ಪೋರ್ಟಲ್​ನಲ್ಲಿ ಮೊದಲನೇ ದಿನ ತಾಂತ್ರಿಕ ಸಮಸ್ಯೆ; ನಿಲೇಕಣಿಯನ್ನು ಟ್ಯಾಗ್ ಮಾಡಿದ ನಿರ್ಮಲಾ

ಆದಾಯ ತೆರಿಗೆ ಇಲಾಖೆಯ ಹೊಸ ಪೋರ್ಟಲ್​ನಿಂದ ಮೊದಲ ದಿನ ಸಮಸ್ಯೆಗಳ ದೂರು ಬಂದಿದೆ. ಈ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಟ್ವೀಟ್ ಮಾಡಿದ್ದಾರೆ.

ಆದಾಯ ತೆರಿಗೆ ಇಲಾಖೆ ಹೊಸ ಪೋರ್ಟಲ್​ನಲ್ಲಿ ಮೊದಲನೇ ದಿನ ತಾಂತ್ರಿಕ ಸಮಸ್ಯೆ; ನಿಲೇಕಣಿಯನ್ನು ಟ್ಯಾಗ್ ಮಾಡಿದ ನಿರ್ಮಲಾ
ನಿರ್ಮಲಾ ಸೀತಾರಾಮನ್ (ಸಂಗ್ರಹ ಚಿತ್ರ)
Updated By: Srinivas Mata

Updated on: Jun 08, 2021 | 6:27 PM

ಆದಾಯ ತೆರಿಗೆ ಇಲಾಖೆಯ ಹೊಸ ಇ-ಫೈಲಿಂಗ್ ವೆಬ್​ಸೈಟ್​ ಬಗ್ಗೆ ಅಪಾರ ಪ್ರಮಾಣದಲ್ಲಿ ದೂರುಗಳು ಬಂದ ಮೇಲೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇನ್ಫೋಸಿಸ್, ಅದರ ಸಹ ಸಂಸ್ಥಾಪಕ ಹಾಗೂ ಅಧ್ಯಕ್ಷ ನಂದನ್ ನಿಲೇಕಣಿ ಅವರಿಗೆ ಟ್ಯಾಗ್ ಮಾಡಿದ್ದಾರೆ. ಸೋಮವಾರವಷ್ಟೇ ಈ ಪೋರ್ಟಲ್ ಆರಂಭವಾಗಿತ್ತು. ಇನ್ಫೋಸಿಸ್ ಹಾಗೂ ನಿಲೇಕಣಿ ಗುಣಮಟ್ಟದ ಸೇವೆ ಒದಗಿಸುವುದರಲ್ಲಿ ತೆರಿಗೆ ಪಾವತಿದಾರರಿಗೆ ನಿರಾಸೆ ಉಂಟು ಮಾಡಲ್ಲ ಎಂದು ನಿರ್ಮಲಾ ಹೇಳಿದ್ದಾರೆ. “ಬಹು ನಿರೀಕ್ಷಿತ ಇ- ಫೈಲಿಂಗ್ ಪೋರ್ಟಲ್ ಕಳೆದ ರಾತ್ರಿ 20.45 ಗಂಟೆ (ರಾತ್ರಿ 8.45ಕ್ಕೆ) ಆರಂಭವಾಗಿತ್ತು. ಕೊರತೆ ಮತ್ತು ದೂರು- ದುಮ್ಮಾನಗಳನ್ನು ನೋಡಿದೆ. ಇನ್ಫೋಸಿಸ್ ಹಾಗೂ ನಂದನ್ ನಿಲೇಕಣಿ ಗುಣಮಟ್ಟದ ಸೇವೆ ಒದಗಿಸುತ್ತಾರೆ. ತೆರಿಗೆದಾರರಿಗೆ ನಿಯಮಾವಳಿಗಳು ಸುಲಭ ಮಾಡುವುದು ನಮ್ಮ ಆದ್ಯತೆ,” ಎಂದು ನಿರ್ಮಲಾ ಸೀತಾರಾಮನ್ ಟ್ವೀಟ್ ಮಾಡಿದ್ದಾರೆ.

ಮುಂದಿನ ತಲೆಮಾರಿನ ಆದಾಯ ತೆರಿಗೆ ಫೈಲಿಂಗ್ ಸಿಸ್ಟಮ್ ಅಭಿವೃದ್ಧಿ ಪಡಿಸುವ ಸಲುವಾಗಿ 2019ರಲ್ಲಿ ಇನ್ಫೋಸಿಸ್​ಗೆ ಕಾಂಟ್ರ್ಯಾಕ್ಟ್ ನೀಡಲಾಗಿತ್ತು. ಆ ಮೂಲಕ ರಿಟರ್ನ್ಸ್ ಪ್ರಕ್ರಿಯೆ ಸಮಯವನ್ನು 63 ದಿನದಿಂದ 1 ದಿನಕ್ಕೆ ಇಳಿಸಲು ಹಾಗೂ ರೀಫಂಡ್​ಗಳನ್ನು ವೇಗಗೊಳಿಸಲು ತೀರ್ಮಾನಿಸಲಾಯಿತು. ಬೆಂಗಳೂರು ಮೂಲದ ಇನ್ಫೋಸಿಸ್​ನಿಂದ ಸರ್ಕಾರದ ಜಿಎಸ್​ಟಿ ನೆಟ್​ವರ್ಕ್ (ಜಿಎಸ್​ಟಿಎನ್) ಪೋರ್ಟಲ್ ಅಭಿವೃದ್ಧಿ ಮಾಡಲಾಯಿತು. ಈ ವೆಬ್​ಸೈಟ್​ನಲ್ಲಿ ತಾಂತ್ರಿಕ ಸಮಸ್ಯೆಗಳನ್ನು ಎದುರಿಸಿದ್ದರಿಂದ 2017ರಲ್ಲಿ ಟೀಕೆಗಳು ವ್ಯಕ್ತವಾಗಿದ್ದವು. ಹೊಸ ವೆಬ್​ಸೈಟ್ ಯುಆರ್​ಎಲ್​- https://www.incometaxindiaefiling.gov.in/home ಇದಕ್ಕೆ ಭಾರೀ ಪ್ರಮಾಣದಲ್ಲಿ ದಟ್ಟಣೆ ಕಂಡುಬಂತು. ಬಳಕೆದಾರರಿಗೆ ತಾಂತ್ರಿಕ ಸಮಸ್ಯೆಗಳು ಎದುರಾದವು. ಕೆಲವು ಫೀಚರ್​ಗಳು ಹೆಚ್ಚಿನ ಸಮಸ್ಯೆ ತೆಗೆದುಕೊಳ್ಳುತ್ತಿವೆ ಎಂದು ಬಳಕೆದಾರರು ಸೋಷಿಯಲ್ ಮೀಡಿಯಾದಲ್ಲಿ ದೂರಿದ್ದಾರೆ. ಇನ್ನೂ ಕೆಲವರು ಹೊಸ ವ್ಯವಸ್ಥೆಯನ್ನು ಹೊಗಳಿದ್ದಾರೆ.

ಹೊಸ ಪೋರ್ಟಲ್ ತಕ್ಷಣವೇ ಐಟಿಆರ್​ ಪ್ರೊಸೆಸಿಂಗ್ ಮಾಡುವುದಕ್ಕೆ ಇಂಟಿಗ್ರೇಟ್ ಆಗಿದೆ. ಇದರಿಂದ ಶೀಘ್ರ ರೀಫಂಡ್ ಆಗುತ್ತದೆ. ಎಲ್ಲ ಇಂಟರಾಕ್ಷನ್​ಗಳು ಮತ್ತು ಅಪ್​ಲೋಡ್​ಗಳು ಅಥವಾ ಬಾಕಿ ಕಾರ್ಯಗಳು ಸಿಂಗಲ್ ಡ್ಯಾಶ್​ಬೋರ್ಡ್​ನಲ್ಲಿ ಕಾಣಿಸುತ್ತದೆ. ಆ ಮೂಲಕ ತೆರಿಗೆದಾರರಿಗೆ ಅನುಕೂಲ ಆಗುತ್ತದೆ ಎಂದು ಸಿಬಿಡಿಟಿ ಹೇಳಿದೆ. ತೆರಿಗೆ ಪಾವತಿದಾರರು ಎಲ್ಲ ಮೂಲಗಳಿಂದ ಬರುವ ತಮ್ಮ ಎಲ್ಲ ಆದಾಯವನ್ನು ಅಪ್​ಡೇಟ್ ಮಾಡಬಹುದು. ಸಿಬಿಡಿಟಿ ತಿಳಿಸಿರುವಂತೆ, ಆನ್​ಲೈನ್​ ತೆರಿಗೆ ಪಾವತಿ ಮತ್ತು ಮೊಬೈಲ್ ಆ್ಯಪ್ ಜೂನ್ 18ರಂದು ಆ್ಯಕ್ಟಿವೇಟ್ ಆಗುತ್ತದೆ.

ಇದನ್ನೂ ಓದಿ: ITR Filing: ಇಂದಿನಿಂದ ಆದಾಯ ತೆರಿಗೆ ಹೊಸ ಇ ಪೋರ್ಟಲ್; ಆದಾಯ ತೆರಿಗೆ ಪಾವತಿದಾರರಿಗೆ ಗೊತ್ತಿರಬೇಕಾದ 6 ವೈಶಿಷ್ಟ್ಯಗಳು