
ನವದೆಹಲಿ, ಜೂನ್ 23: ಇಲಾನ್ ಮಸ್ಕ್ ಅವರ ಟೆಸ್ಲಾ ಕಂಪನಿ ಕೊನೆಗೂ ತನ್ನ ಬಹುನಿರೀಕ್ಷಿತ ರೋಬೋಟ್ಯಾಕ್ಸಿ ಸೇವೆಯನ್ನು (Robotaxi service) ಆರಂಭಿಸಿದೆ. ಟೆಸ್ಲಾದ ಮುಖ್ಯ ಕಚೇರಿ ಇರುವ ಆಸ್ಟಿನ್ ನಗರದಲ್ಲಿ ಅದರ ಡ್ರೈವರ್ಲೆಸ್ ಕಾರ್ಗಳು (driverless vehicles) ಸಂಚರಿಸಲು ಆರಂಭಿಸಿವೆ. ಸೋಷಿಯಲ್ ಮೀಡಿಯಾದಲ್ಲಿ ಕೆಲವರು ರೋಬೋಟ್ಯಾಕ್ಸಿಯಲ್ಲಿ ಪ್ರಯಾಣಿಸಿದ ಫೋಟೋ, ವಿಡಿಯೋ, ಅನುಭವ ಹಂಚಿಕೊಂಡಿದ್ದಾರೆ.
ಇಲಾನ್ ಮಸ್ಕ್ ತಮ್ಮ ಎಕ್ಸ್ ಅಕೌಂಟ್ನಿಂದ ರೋಬೋಟ್ಯಾಕ್ಸಿ ಸೇವೆ ಆರಂಭವಾಗಿರುವುದನ್ನು ಪ್ರಕಟಿಸಿದ್ದಾರೆ. ಪ್ರತೀ ಟ್ರಿಪ್ಗೆ 4.20 ಡಾಲರ್ (ಸುಮಾರು 360 ರೂ) ದರ ನಿಗದಿ ಮಾಡಿರುವುದನ್ನು ತಿಳಿಸಿದ್ದಾರೆ. ನಿರ್ದಿಷ್ಟ ಜಿಯೋಫೆನ್ಸ್ಡ್ ಪ್ರದೇಶದಲ್ಲಿ ಇದರ ಸಂಚಾರ ಇರಲಿದೆ. ಜಿಯೋಫೆನ್ಸ್ಡ್ ಎಂದರೆ ನಿಗದಿತ ಭೂಭಾಗವಾಗಿರಬಹುದು.
ಗೂಗಲ್ ಮತ್ತು ಊಬರ್ ಸಂಸ್ಥೆಗಳು ಜಂಟಿಯಾಗಿ ವೇಮೋ ಸರ್ವಿಸ್ ಅನ್ನು ಕಳೆದ ವರ್ಷ ಆರಂಭಿಸಿದ್ದವು. ವೇಮೋ ಎನ್ನುವ ಈ ಸರ್ವಿಸ್ ಪರಿಣಾಮಕಾರಿಯಾಗಿದೆಯಾದರೂ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದೆ. ಅಮೆರಿಕದ ಲಾಸ್ ಏಂಜಲಿಸ್, ಆಸ್ಟಿನ್, ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಫೀನಿಕ್ಸ್ ನಗರಗಳಲ್ಲಿ 1,500ಕ್ಕೂ ಅಧಿಕ ಚಾಲಕರಹಿತ ವಾಹನಗಳು ಓಡಾಟ ನಡೆಸುತ್ತಿವೆ.
ಇದನ್ನೂ ಓದಿ: ಪಿಎಂ ಸೋಲಾರ್: ಕಡಿಮೆ ಅಳವಡಿಕೆ ರಾಜ್ಯಗಳಲ್ಲಿ ಕರ್ನಾಟಕ; ಮನೆ ಮೇಲಿನ ಸೌರಯೋಜನೆ ಬಗ್ಗೆ ಮಾಹಿತಿ
ಹಾಗೆಯೆ, ಅಮೇಜನ್ ಕಂಪನಿಯ ಝೂಕ್ಸ್ (Zoox) ಕೂಡ ಇತ್ತೀಚೆಗೆ ಟ್ರಯಲ್ ರನ್ ಆರಂಭಿಸಿದೆ.
ಅಮೆರಿಕದಂತಹ ಸ್ಪಷ್ಟ ಹಾಗೂ ಉತ್ತಮ ಇನ್ಫ್ರಾಸ್ಟ್ರಕ್ಚರ್ ಇರುವ ರಸ್ತೆಗಳಲ್ಲಿ ಡ್ರೈವರ್ಲೆಸ್ ಕಾರುಗಳು ಕೆಲ ಸಮಸ್ಯೆಗಳನ್ನು ಎದುರಿಸುತ್ತಿವೆ ಎಂದರೆ, ಭಾರತದಂತಹ ಕ್ಲಿಷ್ಟಕರ ಸೌಕರ್ಯ ವ್ಯವಸ್ಥೆಯಲ್ಲಿ ಅವುಗಳಿಗೆ ಸಾಧ್ಯವಾ ಎನ್ನುವ ಪ್ರಶ್ನೆ ಇದೆ.
ರಸ್ತೆಯಲ್ಲಿ ಸರಿಯಾದ ಚಿಹ್ನೆಗಳಿಲ್ಲದಿರುವುದು, ಲೇನ್ ವರ್ಗೀಕರಣ ಇಲ್ಲದಿರುವುದು ಇತ್ಯಾದಿ ನಾನಾ ಸಮಸ್ಯೆಗಳಿವೆ. ಅವುಗಳ ಮಧ್ಯೆ ಹಲವು ಕಂಪನಿಗಳು ಮತ್ತು ಸ್ಟಾರ್ಟಪ್ಗಳು ಡ್ರೈವರ್ಲೆಸ್ ವಾಹನಗಳ ಪ್ರಯೋಗ ನಡೆಸುತ್ತಿವೆ. ಸರ್ಕಾರ ಕೂಡ ಈ ನಿಟ್ಟಿನಲ್ಲಿ ಕಾನೂನು ತಿದ್ದುಪಡಿ ತಂದಿದೆ.
ಇದನ್ನೂ ಓದಿ: Sahkari Taxi: ಕೇಂದ್ರದಿಂದ ‘ಸಹಕಾರ ಟ್ಯಾಕ್ಸಿ’; ಚಾಲಕರಿಗೆ ಡಬಲ್ ಧಮಾಕ; ಆದಾಯದಲ್ಲಿ ಸಿಂಹಪಾಲು ಜೊತೆಗೆ ಷೇರುಪಾಲು
ಬೆಂಗಳೂರಿನ ಮೈನಸ್ ಝೀರೋ ಎನ್ನುವ ಸ್ಟಾರ್ಟಪ್ ಮತ್ತು ಅಶೋಕ್ ಲೇಲ್ಯಾಂಡ್ ಸಂಸ್ಥೆ ಜಂಟಿಯಾಗಿ ಡ್ರೈವರ್ಲೆಸ್ ವಾಹನ ಅಭಿವೃದ್ಧಿಪಡಿಸುತ್ತಿವೆ. ಟಾಟಾ ಮೋಟಾರ್ಸ್, ಟೆಕ್ ಮಹೀಂದ್ರ, ಬೆಂಗಳೂರಿನ ಸ್ವಾಯತ್ ರೋಬೋಸ್, ನಯನ್ ಟೆಕ್ನಾಲಜೀಸ್, ರೋಸ್ಎಐ ಮೊದಲಾದ ಕೆಲವಾರು ಸ್ಟಾರ್ಟಪ್ಗಳು ಮತ್ತು ಕಂಪನಿಗಳು ಆಟೊಮೋಟಿವ್ ವಾಹನಗಳ ಅಭಿವೃದ್ಧಿಯಲ್ಲಿ ತೊಡಗಿವೆ. ಸಮುದ್ರದ ಬಂದರು, ಫ್ಯಾಕ್ಟರಿ ಅಂಗಣ ಇತ್ಯಾದಿ ಕಡೆ ಈ ಚಾಲಕರಹಿತ ವಾಹನಗಳನ್ನು ಓಡಿಸಲಾಗುತ್ತಿದೆ. ಬೆಂಗಳೂರಿನಂಥ ಭಾರೀ ಟ್ರಾಫಿಕ್ ಇರುವ ನಗರಗಳಲ್ಲಿ ಇವುಗಳು ಸುಲಭವಾಗಿ ಓಡಾಡುವಂತಾಗಲು ದಶಕವಾದರೂ ಬೇಕಾಗಬಹುದು ಎನ್ನುತ್ತಾರೆ ಪರಿಣಿತರು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ