ಮೃದು ಹೃದಯಿಗಳಿಗಲ್ಲ ಆ ಕಂಪನಿ; 11 ವರ್ಷ ಟೆಸ್ಲಾದಲ್ಲಿ ದುಡಿದು ಹೊರಬಂದ ಶ್ರೀಲಾ ವೆಂಟರತ್ನಂ ಹೇಳಿಕೆ

Sreela Venkataratnam leaves Tesla after woking for 11 years: ಇಲಾನ್ ಮಸ್ಕ್ ಮಾಲಕತ್ವದ ಟೆಸ್ಲಾ ಬಹಳ ಕಟ್ಟುನಿಟ್ಟಿನ ಕೆಲಸ ವಾತಾವರಣ ಹೊಂದಿರುವ ಕಂಪನಿಯಾಗಿದೆ. ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸುವ ಈ ಕಂಪನಿಯಲ್ಲಿ ಹೆಚ್ಚು ವರ್ಷ ಕೆಲಸ ಮಾಡುವುದೇ ದೊಡ್ಡ ಸಾಧನೆ. ಭಾರತ ಮೂಲದ ಶ್ರೀಲಾ ವೆಂಕಟರತ್ನ ಎಂಬುವರು 11 ವರ್ಷ ಕೆಲಸ ಮಾಡಿ ವಿಪಿ ಹುದ್ದೆವರೆಗೂ ಬೆಳೆದು ಈಗ ಹೊರಬಂದಿದ್ದಾರೆ. ಅವರ ಅನುಭವದ ಮಾತುಗಳು ಇಲ್ಲಿವೆ...

ಮೃದು ಹೃದಯಿಗಳಿಗಲ್ಲ ಆ ಕಂಪನಿ; 11 ವರ್ಷ ಟೆಸ್ಲಾದಲ್ಲಿ ದುಡಿದು ಹೊರಬಂದ ಶ್ರೀಲಾ ವೆಂಟರತ್ನಂ ಹೇಳಿಕೆ
ಟೆಸ್ಲಾ ಕಾರು ತಯಾರಕ ಘಟಕ
Follow us
|

Updated on: Aug 25, 2024 | 1:22 PM

ಕ್ಯಾಲಿಫೋರ್ನಿಯಾ, ಆಗಸ್ಟ್ 25: ಉದ್ಯೋಗಿಗಳಿಗೆ ಕೆಲಸ ಮಾಡಲು ಅತ್ಯಂತ ಕಠಿಣ ವಾತಾರಣ ಇರುವ ಮತ್ತು ಅತ್ಯಂತ ಒತ್ತಡಯುಕ್ತ ಕೆಲಸದ ವಾತಾವರಣ ಇರುವ ಕಂಪನಿಗಳಲ್ಲಿ ಟೆಸ್ಲಾ ಒಂದು. ಅದಕ್ಕೆ ಕಾರಣ ಇಲಾನ್ ಮಸ್ಕ್ ಅವರಿಗೆ ಕೆಲಸದ ಬಗ್ಗೆ ಇರುವ ಒಂದು ನಿಲುವು. ಯಾವುದೇ ಕೆಲಸಕ್ಕೆ ಅವರು ಅಸಾಧ್ಯತೆ ಅಥವಾ ಕಷ್ಟಸಾಧ್ಯದ ಗುರಿ ಇಡುತ್ತಾರೆ. ಇಡೀ ಉದ್ಯೋಗಿಗಳು ಶತಾಯ ಗತಾಯ ಆ ಡೆಡ್​ಲೈನ್​ನಲ್ಲಿ ಕೆಲಸ ಮಾಡಬೇಕು. ಹೀಗಾಗಿ, ಟೆಸ್ಲಾದಲ್ಲಿ ಸಂದವರು ಜಗತ್ತಿನಲ್ಲಿ ಎಲ್ಲಿಯೂ ಸಲ್ಲುತ್ತಾರೆ. ಇತ್ತೀಚೆಗೆ ಟೆಸ್ಲಾದಿಂದ ಹೊರಬಂದ ಅದರ ವೈಸ್ ಪ್ರೆಸಿಡೆಂಟ್ ಶ್ರೀಲಾ ವೆಂಕಟರತ್ನಂ ಅವರು ತಮ್ಮ ಕೆಲಸ ಅನುಭವ ಹಂಚಿಕೊಂಡಿದ್ದಾರೆ. ಅವರ ಅನಿಸಿಕೆಯು ಟೆಸ್ಲಾ ಬಗ್ಗೆ ಇರುವ ಸಾಮಾನ್ಯ ಅನಿಸಿಕೆಯನ್ನು ಪುಷ್ಟೀಕರಿಸುತ್ತದೆ. ಟೆಸ್ಲಾ ಕಂಪನಿಯಲ್ಲಿ ಕೆಲಸ ಮಾಡುವುದು ಮೃದು ಹೃದಯಿಗಳಿಗಲ್ಲ ಎನ್ನುತ್ತಾರೆ ಅವರು.

ಭಾರತ ಮೂಲದ ಶ್ರೀಲಾ ವೆಂಕಟರತ್ನಂ 11 ವರ್ಷ ಟೆಸ್ಲಾದಲ್ಲಿ ಕೆಲಸ ಮಾಡಿ, ವೈಸ್ ಪ್ರೆಸಿಡೆಂಟ್ ಹುದ್ದೆಯವರೆಗೂ ಬೆಳೆದವರು. ಆ ಕಂಪನಿಯಲ್ಲಿ ಇದ್ದ ಇಬ್ಬರೇ ಇಬ್ಬರು ಮಹಿಳಾ ವಿಪಿಗಳಲ್ಲಿ ಅವರೂ ಒಬ್ಬರು ಎಂಬುದು ಅವರ ಪ್ರತಿಭೆಗೆ ಕನ್ನಡಿ ಹಿಡಿಯುತ್ತದೆ. ಟೆಸ್ಲಾದಲ್ಲಿ ತಮ್ಮ ಕೆಲಸದ ಬಗ್ಗೆ ಅವರು ಪೂರ್ಣ ತೃಪ್ತಿ ವ್ಯಕ್ತಪಡಿಸಿದ್ದಾರೆ ಸೋಷಿಯಲ್ ಮೀಡಿಯಾದಲ್ಲಿ.

ಇದನ್ನೂ ಓದಿ: ಅನಿಲ್ ಅಂಬಾನಿಗೆ 5 ವರ್ಷ ನಿರ್ಬಂಧ; ಯಾವುದೇ ಲಿಸ್ಟೆಡ್ ಕಂಪನಿಯಲ್ಲಿ ಪ್ರಮುಖ ಹುದ್ದೆ ಹೊಂದುವಂತಿಲ್ಲ

‘ಟೆಸ್ಲಾದ ವಾರ್ಷಿಕ ಆದಾಯ 100 ಬಿಲಿಯನ್ ಡಾಲರ್​ನಷ್ಟಾಗಿದೆ. ಅದರ ಮಾರುಕಟ್ಟೆ ಸಂಪತ್ತು 700 ಬಿಲಿಯನ್ ಡಾಲರ್ ಆಗಿದೆ. ವರ್ಷಕ್ಕೆ 18 ಲಕ್ಷಕ್ಕೂ ಹೆಚ್ಚು ಕಾರುಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡಲಾಗುತ್ತಿದೆ. ಈ ಮಟ್ಟದಲ್ಲಿ ವೈಸ್ ಪ್ರೆಸಿಡೆಂಟ್ ಆಗಿ ಕಂಪನಿಯನ್ನು ತೊರೆಯುತ್ತಿದ್ದೇನೆ. ನಾವು ಒಟ್ಟಿಗೆ ಮಾಡಿರುವ ಸಾಧನೆ ಬಗ್ಗೆ ನನಗೆ ಹೆಮ್ಮೆ ಇದೆ,’ ಎಂದು ಲಿಂಕ್ಡ್ ಇನ್ ಪೋಸ್ಟ್​ನಲ್ಲಿ ಶ್ರೀಲಾ ಬರೆದಿದ್ದಾರೆ.

ಟೆಸ್ಲಾದ ಮಾಜಿ ಸಿಇಒ ಜೇಸನ್ ವ್ಹೀಲರ್ ಅವರು ಶ್ರೀಲಾಗೆ ವಿಶ್ ಮಾಡುತ್ತಾ, ‘ಸರಿಯಾಗಿ ಮಾಡಿದ್ದೀರಿ. ಕೆಲಸ ಮಾಡಲು ಸುಲಭವಲ್ಲದ ಕಂಪನಿಯಲ್ಲಿ ನಿಮ್ಮ ಕೆಲಸ ಶ್ಲಾಘನೀಯ’ ಎಂದಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಶ್ರೀಲಾ ವೆಂಕಟರತ್ನಂ, ಟೆಸ್ಲಾದಲ್ಲಿ ಕೆಲಸ ಮಾಡುವುದು ಮೃದು ಹೃದಯಿಗಳಿಗಂತೂ ಖಂಡಿತ ಅಲ್ಲ. ಆ ಕಷ್ಟದ ದಿನಗಳಲ್ಲಿ ಕೆಲಸ ಮಾಡಿರುವುದು, ಅದರಲ್ಲೂ ತಮ್ಮ ಜೊತೆ ಆ ಸಂದರ್ಭದಲ್ಲಿ ಕೆಲಸ ಮಾಡಿರುವುದು ನಿಜಕ್ಕೂ ಅದ್ಭುತ ಎಂದು ಹೇಳಿದ್ದಾರೆ.

ಇದನ್ನೂ ಓದಿ: ತನಿಖಾ ಸಂಸ್ಥೆಗಳ ಉಪಟಳ; ಭಾರತದಿಂದ ಕಾಲ್ಕಿತ್ತು ಸಿಂಗಾಪುರ, ದುಬೈಗೆ ಹೋಗುತ್ತಿರುವ ಉದ್ಯಮಿಗಳು: ರುಚಿರ್ ಶರ್ಮಾ

ಟೆಸ್ಲಾದಲ್ಲಿ ಇತ್ತೀಚೆಗೆ ಬಹಳಷ್ಟು ಲೇ ಆಫ್ ನಡೆದಿದೆ. ಇಲಾನ್ ಮಸ್ಕ್ ತಮ್ಮ ಸಂಸ್ಥೆಯನ್ನು ಸಾಧ್ಯವಾದಷ್ಟೂ ಕಿರಿದುಗೊಳಿಸಿ ಪ್ರಬಲಗೊಳಿಸುವ ಇರಾದೆ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಇತ್ತೀಚೆಗೆ ಶೇ. 10ರಷ್ಟು ಜನರಿಗೆ ಕೆಲಸ ಹೋಗಿದೆ. ಬಹಳಷ್ಟು ಹಿರಿಯ ಹುದ್ದೆಗಳಲ್ಲಿದ್ದವರು ತೊರೆದು ಹೋಗಿದ್ದಾರೆ. ಪಬ್ಲಿಕ್ ಪಾಲಿಸಿ ಮತ್ತು ಬಿಸಿನೆಸ್ ಡೆವಲಪ್ಮೆಂಟ್ ವಿಭಾಗದ ವೈಸ್ ಪ್ರೆಸಿಡೆಂಟ್ ಆಗಿದ್ದ ಭಾರತೀಯ ಮೂಲದ ರೋಹನ್ ಪಟೇಲ್ ಅವರೂ ಕೆಲಸ ಬಿಟ್ಟಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ