ಅನಿಲ್ ಅಂಬಾನಿಗೆ 5 ವರ್ಷ ನಿರ್ಬಂಧ; ಯಾವುದೇ ಲಿಸ್ಟೆಡ್ ಕಂಪನಿಯಲ್ಲಿ ಪ್ರಮುಖ ಹುದ್ದೆ ಹೊಂದುವಂತಿಲ್ಲ

Anil Ambani banned by SEBI: ನಿಯಮ ಮೀರಿ ಸಾಲ ಮಂಜೂರು ಮಾಡಿರುವ ಆರೋಪ ಹೊತ್ತಿರುವ ಅನಿಲ್ ಅಂಬಾನಿ ಸೇರಿದಂತೆ 25 ಮಂದಿಗೆ ಸೆಕ್ಯೂರಿಟೀಸ್ ಮಾರ್ಕೆಟ್​ನಲ್ಲಿ ಪಾಲ್ಗೊಳ್ಳದಂತೆ 5 ವರ್ಷ ನಿಷೇಧ ಹೇರಲಾಗಿದೆ. ಸೆಬಿ ಅಂಬಾನಿಗೆ 25 ಕೋಟಿ ದಂಡ ಹಾಕಿದೆ. ಐದು ವರ್ಷ ಲಿಸ್ಟೆಡ್ ಕಂಪನಿಗಳಲ್ಲಿ ಯಾವುದೇ ಪ್ರಮುಖ ಹುದ್ದೆ ಅಲಂಕರಿಸಬಾರದು ಎಂದು ನಿರ್ಬಂಧ ಹಾಕಿದೆ.

ಅನಿಲ್ ಅಂಬಾನಿಗೆ 5 ವರ್ಷ ನಿರ್ಬಂಧ; ಯಾವುದೇ ಲಿಸ್ಟೆಡ್ ಕಂಪನಿಯಲ್ಲಿ ಪ್ರಮುಖ ಹುದ್ದೆ ಹೊಂದುವಂತಿಲ್ಲ
ಅನಿಲ್ ಅಂಬಾನಿ
Follow us
|

Updated on: Aug 23, 2024 | 3:09 PM

ನವದೆಹಲಿ, ಆಗಸ್ಟ್ 23: ಅಕ್ರಮವಾಗಿ ಸಾಲ ಹಂಚಿಕೆ ಮಾಡಿರುವ ಆರೋಪ ಸಂಬಂಧ ಅನಿಲ್ ಅಂಬಾನಿ ಹಾಗೂ ಇತರ 24 ಮಂದಿ ಮೇಲೆ ಸೆಬಿ ಕ್ರಮ ಜರುಗಿಸಿದೆ. ಷೇರು ಮಾರುಕಟ್ಟೆಯಲ್ಲಿ ಐದು ವರ್ಷ ಪಾಲ್ಗೊಳ್ಳದಂತೆ ಇವರನ್ನು ನಿಷೇಧಿಸಲಾಗಿದೆ. ರಿಲಾಯನ್ಸ್ ಹೋಮ್ ಫೈನಾನ್ಸ್ (ಆರ್​ಎಚ್​ಎಫ್​ಎಲ್) ಸಂಸ್ಥೆಯಿಂದ ಅಕ್ರಮ ರೀತಿಯಲ್ಲಿ ಸಾಲಗಳ ಮೂಲಕ ಹಣವನ್ನು ವರ್ಗಾಯಿಸಲಾಗಿದ್ದು ಇದರಿಂದ ಹೂಡಿಕೆದಾರರಿಗೆ ತೀವ್ರ ನಷ್ಟಕ್ಕೆ ಕಾರಣವಾಗಿದೆ ಎನ್ನುವ ಆರೋಪ ಕೇಳಿಬಂದಿತ್ತು. ಈ ಸಂಬಂಧ ಸೆಬಿ ತನಿಖೆ ನಡೆಸಿದ ಬಳಿಕ ಈಗ ಅನಿಲ್ ಅಂಬಾನಿ ಮತ್ತಿತರರನ್ನು ನಿಷೇಧಿಸುವ ಕ್ರಮ ಕೈಗೊಂಡಿದೆ. ನಿಷೇಧಿತರಾದವರಲ್ಲಿ ಆರ್​ಎಚ್​ಎಫ್​ಎಲ್​ನ ಹಿರಿಯ ಅಧಿಕಾರಿಗಳೂ ಒಳಗೊಂಡಿದ್ದಾರೆ.

ಅನಿಲ್ ಅಂಬಾನಿ ಅವರಿಗೆ ನಿಷೇಧದ ಜೊತೆಗೆ 25 ಕೋಟಿ ರೂ ದಂಡ ಹಾಕಲಾಗಿದೆ. ಐದು ವರ್ಷ ಷೇರು ಮಾರುಕಟ್ಟೆ ವ್ಯವಹಾರದಲ್ಲಿ ಪಾಲ್ಗೊಳ್ಳದಂತೆ ನಿಷೇಧಿಸಿರುವ ಜೊತೆಗೆ ಐದು ವರ್ಷ ಯಾವುದೇ ಲಿಸ್ಟೆಡ್ ಕಂಪನಿಗಳಲ್ಲಿ ನಿರ್ದೇಶಕ ಸ್ಥಾನವನ್ನೋ ಅಥವಾ ಪ್ರಮುಖ ಹುದ್ದೆಯನ್ನೋ ಪಡೆಯದಂತೆಯೂ ನಿರ್ಬಂಧ ಹಾಕಲಾಗಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಸೆಪ್ಟಂಬರ್ ತಿಂಗಳು ಬ್ಯಾಂಕ್​ಗಳಿಗೆ 8 ರಜಾದಿನಗಳು; ಗಣೇಶ ಚತುರ್ಥಿ, ಈದ್ ಮಿಲಾದ್ ಮೊದಲಾದ ದಿನ ರಜೆ

ಅನರ್ಹ ಸಂಸ್ಥೆಗಳಿಗೆ ಅಕ್ರಮವಾಗಿ ಸಾಲ ವಿತರಣೆ ಮಾಡಿದ ಆರೋಪ

2017-18 ಮತ್ತು 2018-19ರ ಹಣಕಾಸು ವರ್ಷದಲ್ಲಿ ರಿಲಾಯನ್ಸ್ ಹೋಮ್ ಫೈನಾನ್ಸ್ ಸಂಸ್ಥೆ ಸಾವಿರಾರು ಕೋಟಿ ರೂ ಮೊತ್ತದ ಜಿಪಿಸಿ (ಗ್ಯಾರಂಟೀಡ್ ಪೇಮೆಂಟ್ ಕ್ರೆಡಿಟ್) ಸಾಲಗಳನ್ನು ವಿತರಿಸಿದೆ. ಆದರೆ, ತೀರಾ ನಗಣ್ಯವಾದ ಆಸ್ತಿ ಹೊಂದಿರುವ ಮತ್ತು ಸಾಲ ತೀರಿಸುವ ಯಾವುದೇ ಪ್ರಮುಖ ಆದಾಯ ಇಲ್ಲದ ಸಣ್ಣಪುಟ್ಟ ಸಂಸ್ಥೆಗಳಿಗೆ ಈ ಸಾಲಗಳನ್ನು ನೀಡಲಾಗಿತ್ತು. ಯಾವುದೇ ಅಡಮಾನ ಅಥವಾ ಸೆಕ್ಯೂರಿಟಿಯನ್ನಾಗಲೀ ಯಾವುದನ್ನೂ ಪಡೆಯದೆಯೇ ನಿಯಮ ಉಲ್ಲಂಘಿಸಲಾಗಿದೆ.

ಆರ್​ಎಚ್​ಎಫ್​ಎಲ್​ನಲ್ಲಿ ಸಾಲ ಕೊಡುವ ಮುನ್ನ ಆಂತರಿಕವಾಗಿ ಕ್ರೆಡಿಟ್ ರೇಟಿಂಗ್ಸ್ ಪರಿಶೀಲಿಸಲಾಗುತ್ತದೆ. ಈ ನಿಯಮ ಪಾಲಿಸದೇ ನೇರವಾಗಿ ಸಾಲ ಮಂಜೂರು ಮಅಡಲಾಗಿದೆ. ವಿಚಿತ್ರ ಎಂದರೆ 2019ರ ಫೆಬ್ರುವರಿ 11ರಂದು ಆರ್​ಎಚ್​ಎಫ್​ಎಲ್​ನ ನಿರ್ದೇಶಕರ ಮಂಡಳಿಯು ಈ ಸಾಲ ವಿತರಣೆ ನಿಲ್ಲಿಸುವಂತೆ ನೇರ ಆದೇಶ ಹೊರಡಿಸಿತ್ತಂತೆ. ಅದಕ್ಕೂ ಕೂಡ ಮ್ಯಾನೇಜ್ಮೆಂಟ್ ಕಿವಿಗೊಟ್ಟಿಲ್ಲ. ಗ್ರೂಪ್ ಮುಖ್ಯಸ್ಥರಾದ ಅನಿಲ್ ಅಂಬಾನಿ ನೇರವಾಗಿ ಪ್ರಭಾವ ಬೀರಿ ಈ ಸಾಲಗಳನ್ನು ಮಂಜೂರು ಮಾಡಿಸಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಜೊಮಾಟೋ ಲೆಜೆಂಡ್ಸ್ ಸಂಪೂರ್ಣ ಬಂದ್; ನೀವ್ಯಾವತ್ತಾದ್ರೂ ಬಳಸಿದ್ದೀರಾ ಈ ಸ್ಪೆಷಲ್ ಫೀಚರ್?

ಈ ಸಾಲಗಳನ್ನು ಪಡೆದ ಅನರ್ಹ ಸಂಸ್ಥೆಗಳೆಲ್ಲವೂ ಅನಿಲ್ ಅಂಬಾನಿ ಮೊದಲಾದ ಪ್ರಮೋಟರ್ಸ್​​ಗೆ ಸಂಬಂಧಿಸಿದವುಗಳೇ ಆಗಿವೆ. ಈ ಕಾರಣಕ್ಕೆ ಇಲಾಖೆ ನೇಮಿತ ಆಡಿಟರ್ ಕೂಡ 2019ರ ಜೂನ್​ನಲ್ಲಿ ರಾಜೀನಾಮೆ ಕೊಟ್ಟು ಹೋಗಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ