ಜೊಮಾಟೋ ಲೆಜೆಂಡ್ಸ್ ಸಂಪೂರ್ಣ ಬಂದ್; ನೀವ್ಯಾವತ್ತಾದ್ರೂ ಬಳಸಿದ್ದೀರಾ ಈ ಸ್ಪೆಷಲ್ ಫೀಚರ್?
Zomato Legends: ಜೊಮಾಟೋ ಆ್ಯಪ್ನ ವಿಶೇಷ ಫೀಚರ್ಗಳಲ್ಲಿ ಒಂದಾದ ಲೆಜೆಂಡ್ಸ್ ಇನ್ನು ಇತಿಹಾಸಪುಟ ಸೇರ್ಪಡೆಯಾಗಿದೆ. ಬೇರೆ ಬೇರೆ ಪ್ರದೇಶಗಳ ವಿಶೇಷ ತಿನಿಸುಗಳನ್ನು ಬುಕ್ ಮಾಡಿ ತರಿಸಬಹುದಾದ ಜೊಮಾಟೊ ಲೆಜೆಂಡ್ಸ್ ಅನ್ನು ನಿಲ್ಲಿಸಲಾಗಿದೆ. ಮಾರುಕಟ್ಟೆಗೆ ಹೊಂದಿಕೆಯಾಗದ, ಅಂದರೆ ಬೇಡಿಕೆ ಪಡೆಯದ ಹಿನ್ನೆಲೆಯಲ್ಲಿ ಇದನ್ನು ನಿಲ್ಲಿಸಲಾಗಿದೆ.
ಬೆಂಗಳೂರು, ಆಗಸ್ಟ್ 23: ಆನ್ಲೈನ್ ಫೂಡ್ ಡೆಲಿವರಿ ಪ್ಲಾಟ್ಫಾರ್ಮ್ ಆಗಿರುವ ಜೊಮಾಟೊ ಹೊಸ ಪ್ರಯೋಗಗಳಿಗೆ ಸದಾ ಯತ್ನಿಸುವಂಥ ಸಂಸ್ಥೆ. ಕೆಲ ಪ್ರಯೋಗ ಯಶಸ್ವಿಯಾಗುತ್ತದೆ, ಕೆಲವು ವಿಫಲವಾಗಬಹುದು. ಇಂಥ ಒಂದು ಪ್ರಯೋಗ ಜೊಮಾಟೋ ಲೆಜೆಂಡ್ಸ್. ಬೇರೆ ಬೇರೆ ನಗರಗಳ ಹೋಟೆಲ್ಗಳಿಂದ ಆರ್ಡರ್ ಬುಕ್ ಮಾಡಿ ತರಿಸಬಹುದಾದ ಜೊಮಾಟೊ ಲೆಜೆಂಡ್ಸ್ ಫೀಚರ್ ಅನ್ನು ಪೂರ್ಣವಾಗಿ ನಿಲ್ಲಿಸಲು ಸಂಸ್ಥೆ ನಿರ್ಧರಿಸಿದೆ. ಜೊಮಾಟೋ ಸಿಇಒ ದೀಪಿಂದರ್ ಗೋಯಲ್ ತಮ್ಮ ಎಕ್ಸ್ ಪೋಸ್ಟ್ನಲ್ಲಿ ಈ ವಿಚಾರವನ್ನು ತಿಳಿಸಿದ್ದಾರೆ.
‘ಮಾರುಕಟ್ಟೆಗೆ ಹೊಂದಿಕೆ ಆಗುತ್ತಿಲ್ಲವಾದ್ದರಿಂದ ಜೊಮಾಟೊ ಲೆಜೆಂಡ್ಸ್ ಅನ್ನು ತತ್ಕ್ಷಣದಿಂದಲೇ ನಿಲ್ಲಿಸಲು ನಿರ್ಧರಿಸಿದ್ದೇವೆ,’ ಎಂದು ದೀಪಿಂದರ್ ಗೋಯಲ್ ಪ್ರಕಟಿಸಿದ್ದಾರೆ.
Update on Zomato Legends – after two years of trying, not finding product market fit, we have decided to shut down the service with immediate effect.
— Deepinder Goyal (@deepigoyal) August 22, 2024
ಇದನ್ನೂ ಓದಿ: ಜಿಡಿಪಿ ಬೆಳವಣಿಗೆ ಈ ವರ್ಷ ಶೇ. 6.5ರಿಂದ 7 ಸಾಧ್ಯತೆ; ಮೊದಲ ಕ್ವಾರ್ಟರ್ನಲ್ಲಿ ಶೇ. 6ಕ್ಕೆ ಸೀಮಿತ?
ಜೊಮಾಟೊ ಲೆಜೆಂಡ್ಸ್ ಅನ್ನು ಎರಡು ವರ್ಷದ ಹಿಂದೆ ಆರಂಭಿಸಲಾಗಿತ್ತು. ಬೇರೊಂದು ಪ್ರದೇಶದಲ್ಲಿರುವ ವಿಶೇಷ ಆಹಾರವನ್ನು ಪಡೆಯುವ ಅವಕಾಶ ಗ್ರಾಹಕರಿಗೆ ಇತ್ತು. ಉದಾಹರಣೆಗೆ, ಹೈದರಾಬಾದ್ ನಗರ ಬಿರ್ಯಾನಿಗೆ ಬಹಳ ಖ್ಯಾತವಾಗಿದೆ. ಆ ನಗರದ ರೆಸ್ಟೋರೆಂಟ್ವೊಂದರಿಂದ ಬೆಂಗಳೂರಿನಲ್ಲಿರುವವರು ಬಿರ್ಯಾನಿ ಆರ್ಡರ್ ಮಾಡಬಹುದಾಗಿತ್ತು. ಹಾಗೆಯೇ, ತಮಿಳುನಾಡಿನ ಮದುರೈನ ಖ್ಯಾತ ತಲಕಪಟ್ಟು ಬಿರ್ಯಾನಿಯನ್ನು ತರಿಸಬಹುದಿತ್ತು. ಬೆಣ್ಣೆ ದೋಸೆಯನ್ನು ನೇರ ದಾವಣಗೆರೆಯಿಂದಲೇ ಪಡೆಯಬಹುದಿತ್ತು. ಕಣ್ಣೂರಿನಿಂದ ಫಿಶ್ ತರಿಸಬಹುದು. ಹೀಗೆ ಬೇರೆ ಬೇರೆ ಊರುಗಳ ವಿಶೇಷ ತಿಂಡಿಗಳನ್ನು ನಾವಿರುವ ಜಾಗಕ್ಕೆ ತರಿಸಿಕೊಂಡು ಸವಿಯುವ ಅವಕಾಶ ನೀಡುವಂಥ ಫೀಚರ್ ಈ ಜೊಮಾಟೋ ಲೆಜೆಂಡ್ಸ್ನದ್ದು.
ಜೊಮಾಟೊ ಲೆಜೆಂಡ್ಸ್ನಲ್ಲಿ ಬೇರೆ ಬೇರೆ ನಗರಗಳ ಅಗ್ರಮಾನ್ಯ ರೆಸ್ಟೋರೆಂಟ್ಗಳನ್ನು ಆಯ್ದು ಪಟ್ಟಿ ಮಾಡಲಾಗಿರುತ್ತದೆ. ಈ ರೆಸ್ಟೋರೆಂಟ್ಗಳಿಂದ ನಿಮಗೆ ಇಷ್ಟವಾಗುವ ಆಹಾರ ಆರ್ಡರ್ ಮಾಡಬಹುದಿತ್ತು.
ಇದನ್ನೂ ಓದಿ: ಪೇಟಿಎಂನ ಎಂಟರ್ಟೈನ್ಮೆಂಟ್ ಟಿಕೆಟ್ ಬಿಸಿನೆಸ್ ಜೊಮಾಟೊಗೆ ಮಾರಲು ನಿರ್ಧಾರ; 2,048 ಕೋಟಿ ರೂಗೆ ಡೀಲ್
ಜೊಮಾಟೋ ಈ ರೀತಿಯ ಪ್ರಯೋಗಗಳಿಗೆ ಹೆಸರುವಾಸಿಯಾಗಿದೆ. ಇತ್ತೀಚೆಗೆ ಪೂರ್ಣವಾಗಿ ವೆಜಿಟೇರಿಯನ್ ಡೆಲಿವರಿ ಸೇವೆ ಆರಂಭಿಸಿತ್ತು. ಇದರಲ್ಲಿ ಡೆಲಿವರಿ ಮಾಡುವ ವ್ಯಕ್ತಿ ತನ್ನ ಚೀಲದಲ್ಲಿ ಕೇವಲ ಸಸ್ಯಾಹಾರ ಪಾರ್ಸಲ್ಗಳನ್ನು ಹೊಂದಿರುತ್ತಾರೆ. ಮಾಂಸಾಹಾರದ ಪ್ಯಾಕೇಜ್ ಇರುವುದಿಲ್ಲ. ಆದರೆ, ಈ ಸೇವೆ ಬಗ್ಗೆ ಆನ್ಲೈನ್ನಲ್ಲಿ ಕೆಲ ವರ್ಗಗಳಿಂದ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ನಿಲ್ಲಿಸಲಾಯಿತು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:14 pm, Fri, 23 August 24