ನವದೆಹಲಿ: ಜಾಗತಿಕ ಆರ್ಥಿಕ ಹಿಂಜರಿತದ (Global recession) ಹೊರತಾಗಿಯೂ ಭಾರತವು 2023-24ನೇ ಸಾಲಿನಲ್ಲಿ ಶೇಕಡಾ 6ರಿಂದ 7ರ ಆರ್ಥಿಕ ಬೆಳವಣಿಗೆ ಸಾಧಿಸಲಿದೆ ಎಂದು ನೀತಿ ಆಯೋಗದ (NITI Aayog) ಮಾಜಿ ಉಪಾಧ್ಯಕ್ಷ ರಾಜೀವ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಕಳೆದ ತಿಂಗಳು ಅಂತಾರಾಷ್ಟ್ರೀಯ ಹಣಕಾಸು ನಿಧಿ (International Monetary Fund) ಭಾರತದ 2022-23ನೇ ಸಾಲಿನ ಆರ್ಥಿಕ ಬೆಳವಣಿಗೆ ದರ ಶೇಕಡಾ 6.8ರಿಂದ 7.4ರಷ್ಟಿರಲಿದೆ ಎಂದು ಪರಿಷ್ಕೃತ ಅಂದಾಜಿನಲ್ಲಿ ತಿಳಿಸಿತ್ತು. ರಷ್ಯಾ-ಉಕ್ರೇನ್ ಸಂಘರ್ಷ ಮುಂದುವರಿದಿರುವುದು ಮತ್ತು ಹಣದುಬ್ಬರ ಪ್ರಮಾಣ ಹೆಚ್ಚಿರುವುದು ಭಾರತದ ಆರ್ಥಿಕ ಬೆಳವಣಿಗೆ ದರದ ಅಂದಾಜನ್ನು ಪರಿಷ್ಕರಿಸಲು ಕಾರಣ ಎಂದು ಐಎಂಎಫ್ ತಿಳಿಸಿತ್ತು.
ಈ ಮಧ್ಯೆ, ಭಾರತದ ಹಣದುಬ್ಬರ ಪ್ರಮಾಣ ಅಕ್ಟೋಬರ್ನಲ್ಲಿ ಶೇಕಡಾ 6.77ಕ್ಕೆ ಇಳಿಕೆಯಾಗಿದೆ. ದೇಶದ ಸಗಟು ಹಣದುಬ್ಬರ ಪ್ರಮಾಣ ಶೇಕಡಾ 8.39ಕ್ಕೆ ಇಳಿಕೆಯಾಗಿದೆ.
‘ಹಣದುಬ್ಬರ ಸ್ಥಿರವಾಗಿರಲಿದೆ’
ದರ ಏರಿಕೆಯ ಸೂಚಕವಾಗಿರುವ ಹಣದುಬ್ಬರ ಪ್ರಮಾಣ ಶೇಕಡಾ 6ರಿಂದ 7ರ ಆಸುಪಾಸಿನಲ್ಲಿ ಕೆಲವು ಸಮಯ ಮುಂದುವರಿಯಲಿದೆ. ಗರಿಷ್ಠ ಮಟ್ಟ ತಲುಪಿದ ಬಳಿಕ ಇನ್ನೀಗ ಹಣದುಬ್ಬರ ಕಡಿಮೆಯಾಗಲಿದೆ ಎಂದು ರಾಜೀವ್ ಕುಮಾರ್ ‘ಪಿಟಿಐ’ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಉಕ್ರೇನ್ ಸಂಘರ್ಷ ಮುಂದುವರಿದಿರುವುದು ಜಾಗತಿಕ ತೈಲ ಬೆಲೆ ಹೆಚ್ಚಳಕ್ಕೆ ಕಾರಣವಾಗಲಿದೆ. ಇದು ಭಾರತದ ಹಣದುಬ್ಬರದ ಮೇಲೆ ಬೀರುತ್ತಿರುವ ಪರಿಣಾಮವೂ ಮುಂದುವರಿಯಲಿದೆ ಎಂದು ಅವರು ಹೇಳಿದ್ದಾರೆ.
‘ರಫ್ತು ಹೆಚ್ಚಿಸಲು ನೀತಿ ರೂಪಿಸಬೇಕು’
ದೇಶದ ಸರಕು ರಫ್ತು ಅಕ್ಟೋಬರ್ನಲ್ಲಿ ಶೇಕಡಾ 17ರಷ್ಟು ಕಡಿಮೆಯಾಗಿರುವುದು ವಾಣಿಜ್ಯ ಸಚಿವಾಲಯ ಇತ್ತೀಚೆಗೆ ಬಿಡುಗಡೆ ಮಾಡಿರುವ ದತ್ತಾಂಶಗಳಿಂದ ತಿಳಿದುಬಂದಿದೆ. ಸೆಪ್ಟೆಂಬರ್ನಲ್ಲಿ ಸುಮಾರು 2.8 ಲಕ್ಷ ಕೋಟಿ ರೂ. ಮೌಲ್ಯದ ಸರಕು ರಫ್ತು ಮಾಡಲಾಗಿದ್ದರೆ ಅಕ್ಟೋಬರ್ನಲ್ಲಿ ಸುಮಾರು 2.4 ಲಕ್ಷ ಕೋಟಿ ರೂ. ಮೌಲ್ಯದ ಸರಕುಗಳನ್ನು ರಫ್ತು ಮಾಡಲಾಗಿದೆ. ಆಮದು ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ರಫ್ತು ಬೆಳವಣಿಗೆ ಕುಂಠಿತವಾಗುತ್ತಿರುವುದನ್ನು ತಡೆಯಲು ಸರ್ಕಾರ ಸ್ಪಷ್ಟ ನೀತಿ ರೂಪಿಸಬೇಕಿದೆ ಎಂದು ರಾಜೀವ್ ಕುಮಾರ್ ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ