ದೀಪಾವಳಿಯ ಸಂದರ್ಭದಲ್ಲಿ ಸೂರತ್‌ನ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಉಡುಗೊರೆಯಾಗಿ ನೀಡಿದೆ. ಕಸೂತಿ ಯಂತ್ರಗಳ ವ್ಯಾಪಾರವನ್ನು ನಡೆಸುತ್ತಿರುವ ಕಂಪೆನಿಯಾದ ಅಲೈಯನ್ಸ್ ಸಮೂಹವು ಓಕಿನಾವಾ ಪ್ರೈಸ್‌ಪ್ರೊ ಎಂಬ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ನೀಡಲು ನಿರ್ಧರಿಸಿದೆ, ಇದರ ಬೆಲೆ 76,848 ರೂಪಾಯಿ (ಎಕ್ಸ್ ಶೋ ರೂಂ). “ಹೆಚ್ಚುತ್ತಿರುವ ಇಂಧನ ಬೆಲೆಗಳು ಮತ್ತು ಇತರ ಅಂಶಗಳ ದೃಷ್ಟಿಯಿಂದ ನಾವು ನಮ್ಮ ಉದ್ಯೋಗಿಗಳಿಗೆ ಎಲೆಕ್ಟ್ರಿಕ್ ವಾಹನಗಳನ್ನು ಉಡುಗೊರೆಯಾಗಿ ನೀಡಲು ನಿರ್ಧರಿಸಿದ್ದೇವೆ,” ಎಂದು ಕಂಪೆನಿಯ ನಿರ್ದೇಶಕ ಸುಭಾಷ್ ದಾವರ್ ಹೇಳಿದ್ದಾರೆ.
“ಈ ಸಮಸ್ಯೆಯು ಕೇವಲ ಮಾಧ್ಯಮದ ಮುಖ್ಯಾಂಶಗಳಲ್ಲಿ ಉಳಿದಿಲ್ಲ. ಇದರ ಜತೆಗೆ ಕಂಪೆನಿಯ ಹಣಕಾಸಿನ ಸ್ಥಿತಿಯ ಮೇಲೆ ಪರಿಣಾಮ ಬೀರಿದೆ. ಇದು ಇಂಧನದ ಮೇಲಿನ ವೆಚ್ಚವನ್ನು ಮಾತ್ರ ಉಳಿಸುವುದಿಲ್ಲ. ನಮ್ಮ ಕಂಪೆನಿಯು ಪರಿಸರ ಸಂರಕ್ಷಣೆ ಮತ್ತು ಹಸಿರು ನೋಟಕ್ಕೆ ಕೊಡುಗೆ ನೀಡಲು ಅವಕಾಶ ಮಾಡಿಕೊಡುತ್ತದೆ,” ಎಂದು ಅವರು ಹೇಳಿದ್ದಾರೆ. ಸುಭಾಷ್ ಮುಂದುವರಿದು ಮಾತನಾಡಿ, ನಾನು ಯಾವಾಗಲೂ ಪರಿಸರದ ಸಂಪನ್ನತೆಯನ್ನು ನಂಬುತ್ತೇನೆ ಮತ್ತು ಪ್ರಕೃತಿಯ ಸಹವಾಸದಲ್ಲಿ ಬದುಕಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ. ಪರಿಸರ ಸಂರಕ್ಷಣೆಗೆ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವ ಹಂಬಲ ಇರುವುದಾಗಿ ಕೂಡ ಅವರು ತಿಳಿಸಿದ್ದಾರೆ.
ಕಂಪೆನಿಯು ತನ್ನ ಉದ್ಯೋಗಿಗಳಿಗೆ 35 ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ದೀಪಾವಳಿ ಉಡುಗೊರೆಯಾಗಿ ನೀಡಿದ್ದಾರೆ ಎಂದು ವ್ಯವಹಾರವನ್ನು ನೋಡಿಕೊಳ್ಳುತ್ತಿರುವ ಸುಭಾಷ್ ದಾವರ್ ಅವರ ಮಗ ಚಿರಾಗ್ ದಾವರ್ ಹೇಳಿದ್ದಾರೆ.
ಇದನ್ನೂ ಓದಿ: Indian Railways Bonus: ರೈಲ್ವೆ ಉದ್ಯೋಗಿಗಳಿಗೆ 78 ದಿನಗಳ ವೇತನಕ್ಕೆ ಸಮನಾದ ದೀಪಾವಳಿ ಬೋನಸ್: ಕೇಂದ್ರ ಸಚಿವ ಸಂಪುಟ ನಿರ್ಧಾರ