ಸ್ಟಾಕ್ಹಾಮ್, ಸ್ವೀಡನ್, ಅಕ್ಟೋಬರ್ 14: ಅಮೆರಿಕದ ಆರ್ಥಿಕ ತಜ್ಞರಾದ ಡೆರೋನ್ ಅಸಿಮೋಗ್ಲು (Daron Asimoglu), ಸಿಮೋನ್ ಜಾನ್ಸನ್ (Simon Johnson) ಮತ್ತು ಜೇಮ್ಸ್ ಎ ರಾಬಿನ್ಸನ್ (James Robinson) ಅವರಿಗೆ 2024ರ ಸಾಲಿನ ಸ್ವೆರಿಜೆಸ್ ರಿಕ್ಸ್ಬ್ಯಾಂಕ್ (Sveriges Riksbank) ಪ್ರಶಸ್ತಿ ಸಿಕ್ಕಿದೆ. ಇದು ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ಎಂದೂ ಕರೆಯಲ್ಪಡುತ್ತದೆ. ಆಲ್ಫ್ರೆಡ್ ನೊಬೆಲ್ ಸ್ಮರಣಾರ್ಥ ಸ್ವೆರಿಜೆಸ್ ರಿಕ್ಸ್ಬ್ಯಾಂಕ್ನಿಂದ ನೀಡಲಾಗುವ ಪ್ರಶಸ್ತಿ ಇದಾಗಿದೆ. ಈ ಬಾರಿ ಪ್ರಶಸ್ತಿ ಪಡೆದಿರುವ ಅಮೆರಿಕದ ಮೂವರು ಆರ್ಥಿಕ ತಜ್ಞರು, ಸಾಮಾಜಿಕ ಸಂಸ್ಥೆಗಳು ಹೇಗೆ ರಚನೆ ಆಗುತ್ತವೆ, ಹಾಗೂ ಅವುಗಳಿಂದ ಪ್ರಗತಿ ಮೇಲೆ ಏನು ಪರಿಣಾಮ ಎಂಬುದನ್ನು ತಮ್ಮ ಅಧ್ಯಯನಗಳಿಂದ ವಿವರಿಸಿದ್ದಾರೆ. ಇವರ ಈ ಸಾಧನೆಗಾಗಿ ನೊಬೆಲ್ ಪುರಸ್ಕಾರ ಲಭಿಸಿದೆ.
ಆಲ್ಫ್ರೆಡ್ ನೊಬೆಲ್ ಎಂಬ ಸ್ವೀಡಿಶ್ ವಿಜ್ಞಾನಿ ಮತ್ತು ಉದ್ಯಮಿಯ ಸಾವಿನ ನಂತರ ಅವರ ಅಭಿಲಾಷೆಯಂತೆ ಭೌತ ವಿಜ್ಞಾನ, ರಾಸಾಯನಿಕ ವಿಜ್ಞಾನ, ಔಷಧ ವಿಜ್ಞಾನ, ಸಾಹಿತ್ಯ ಮತ್ತು ಶಾಂತಿ ಈ ಐದು ವಿಭಾಗಗಳಲ್ಲಿ ಸಾಧಕರಿಗೆ ನೊಬೆಲ್ ಬಹುಮಾನ ನೀಡುತ್ತಾ ಬರಲಾಗಿದೆ. ಆದರೆ, ಸ್ವೀಡನ್ನ ಸ್ವೆರಿಗೆಸ್ ರಿಕ್ಸ್ಬ್ಯಾಂಕ್ 1969ರಿಂದ ಆರ್ಥಿಕ ವಿಜ್ಞಾನ ವಿಭಾಗದಲ್ಲೂ ಪ್ರಶಸ್ತಿ ನೀಡುತ್ತಿದೆ. ಇದಕ್ಕೆ ನೊಬೆಲ್ ಫೌಂಡೇಶನ್ನ ಅನುಮೋದನೆ ಇದೆಯಾದ್ದರಿಂದ ನೊಬೆಲ್ ಬಹುಮಾನ ಎಂದು ಪರಿಗಣಿಸಲಾಗುತ್ತದೆ. ಆದರೆ, ಇದು ಅಧಿಕೃತ ನೊಬೆಲ್ ಪುರಸ್ಕಾರ ಎನಿಸುವುದಿಲ್ಲ.
BREAKING NEWS
The Royal Swedish Academy of Sciences has decided to award the 2024 Sveriges Riksbank Prize in Economic Sciences in Memory of Alfred Nobel to Daron Acemoglu, Simon Johnson and James A. Robinson “for studies of how institutions are formed and affect prosperity.”… pic.twitter.com/tuwIIgk393— The Nobel Prize (@NobelPrize) October 14, 2024
ಇದನ್ನೂ ಓದಿ: Nobel Peace Prize 2024: ಜಪಾನಿನ ನಿಹಾನ್ ಹಿಡಾಂಕ್ಯೊ ಸಂಸ್ಥೆಗೆ ಶಾಂತಿ ನೊಬೆಲ್ ಪ್ರಶಸ್ತಿ
2024ರ ಸಾಲಿನ ಎಕನಾಮಿಕ್ಸ್ ನೊಬೆಲ್ ಬಹುಮಾನ ಪಡೆದ ಡಾರೋನ್ ಅಸೆಮೋಗ್ಲು, ಸಿಮೋನ್ ಜಾನ್ಸನ್ ಮತ್ತು ಜೇಮ್ಸ್ ರಾಬಿನ್ಸನ್ ಈ ಮೂವರೂ ಕೂಡ ಅಮೆರಿಕನ್ ಆರ್ಥಿಕತಜ್ಞರಾಗಿದ್ದಾರೆ. ಡೆರನ್ ಮತ್ತು ಸಿಮೋನ್ ಜಾನ್ಸನ್ ಅವರು ಮೆಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸಂಶೋಧಕರಾಗಿದ್ದಾರೆ. ಜೇಮ್ಸ್ ಎ ರಾಬಿನ್ಸನ್ ಅವರು ಚಿಕಾಗೋ ಯೂನಿವರ್ಸಿಟಿಯಲ್ಲಿ ರಿಸರ್ಚ್ ನಡೆಸುತ್ತಾರೆ.
ವಿವಿಧ ದೇಶಗಳ ನಡುವೆ ಶ್ರೀಮಂತಿಕೆಯಲ್ಲಿ ಯಾಕೆ ದೊಡ್ಡ ಅಂತರ ಇದೆ ಎನ್ನುವ ಪ್ರಶ್ನೆ ಇಟ್ಟುಕೊಂಡು ಈ ಮೂವರು ಆರ್ಥಿಕ ತಜ್ಞರು ಸಂಶೋಧನೆ ನಡೆಸಿದ್ದಾರೆ. ಸಾಮಾಜಿಕ ಸಂಸ್ಥೆಗಳ ರಚನೆಯ ಸ್ವರೂಪ ಮತ್ತು ಅವುಗಳಿಂದ ಆರ್ಥಿಕ ಬೆಳವಣಿಗೆಯ ಮೇಲಾಗುವ ಪರಿಣಾಮ, ಇವುಗಳನ್ನು ವಿವರಿಸುತ್ತಾ ಇವರು ಒಂದು ಚೌಕಟ್ಟನ್ನು ಪ್ರಸ್ತುಪಡಿಸಿದ್ದಾರೆ.
ಒಂದು ದೇಶದ ಸಮೃದ್ಧಿಗೆ ಸಾಮಾಜಿಕ ಸಂಸ್ಥೆಗಳ ಮಹತ್ವ ಏನು ಎಂಬುದನ್ನು ಅವರು ಮೂರು ಪ್ರಮುಖ ಅಂಶಗಳಲ್ಲಿ ವಿವರಿಸಿದ್ದಾರೆ. ಸಮಾಜದಲ್ಲಿ ಸಂಪನ್ಮೂಲಗಳು ಹೇಗೆ ನಿಯೋಜನೆ ಆಗುತ್ತವೆ. ಅವುಗಳನ್ನು ನಿರ್ಧರಿಸುವ ಅಧಿಕಾರ ಯಾರಿಗೆ ಇರುತ್ತದೆ ಎನ್ನುವುದು ಮೊದಲ ಅಂಶ. ಜನಸಮುದಾಯದವರು ಒಗ್ಗೂಡಿ, ಆಡಳಿತಾರೂಢ ವರ್ಗಕ್ಕೆ ಸೆಡ್ಡು ಹೊಡೆಯುವ ಅಧಿಕಾರ ಬಳಸುವುದು ಎರಡನೇ ಅಂಶ.
ಇದನ್ನೂ ಓದಿ: ರಸಾಯನಶಾಸ್ತ್ರದಲ್ಲಿ ಡೇವಿಡ್ ಬೇಕರ್ , ಡೆಮಿಸ್ ಹಸ್ಸಾಬಿಸ್, ಜಾನ್ ಎಂ. ಜಂಪರ್ಗೆ ನೊಬೆಲ್ ಪ್ರಶಸ್ತಿ
ಮೂರನೇ ಅಂಶವೆಂದರೆ, ಅಧಿಕಾರ ಅನುಭವಿಸುವ ಮೇಲ್ಮಟ್ಟದ ಜನರು ಸಂಪನ್ಮೂಲ ಹಂಚಿಕೆಯ ಅಧಿಕಾರವನ್ನು ಜನಸಾಮಾನ್ಯರಿಗೆ ಒಪ್ಪಿಸುವ ಅನಿವಾರ್ಯ ಸ್ಥಿತಿ ಬರುವುದು. ಈ ಮೇಲಿನ ಮೂರು ಅಂಶಗಳು ಒಂದು ದೇಶದ ಸಮೃದ್ಧತೆಯ ಮೇಲೆ ಪರಿಣಾಮ ಬೀರಬಲ್ಲುದು ಎನ್ನುವ ಥಿಯರಿಯನ್ನು ಡೆರೋನ್ ಅಸಿಮೋಗ್ಲು, ಸಿಮೋನ್ ಜಾನ್ಸನ್ ಮತ್ತು ಜೇಮ್ಸ್ ಎ ರಾಬಿನ್ಸನ್ ಅವರು ತಮ್ಮ ಅಧ್ಯಯನದಲ್ಲಿ ನಿರೂಪಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:59 pm, Mon, 14 October 24