ನವದೆಹಲಿ, ನವೆಂಬರ್ 17: ಈರುಳ್ಳಿಯಂತೆ ಭಾರತದಲ್ಲಿ ಅತೀ ಸಾಮಾನ್ಯ ಬಳಕೆಯ ತರಕಾರಿಗಳಲ್ಲಿ ಒಂದಾದ ಟೊಮೆಟೋದ ಬೆಲೆ ಹತೋಟಿ ಮೀರದಂತೆ ಸರ್ಕಾರ ಈ ಬಾರಿ ಎಚ್ಚರ ವಹಿಸಿದೆ. ಟೊಮೆಟೊ ಬೆಲೆ ಈ ವಾರ ಕಿಲೋಗೆ 52 ರೂಗೆ ಇಳಿಕೆ ಆಗಿದೆ. ಕಳೆದ ತಿಂಗಳ ಇದೇ ಅವಧಿಗೆ ಹೋಲಿಸಿದರೆ ಟೊಮೆಟೊ ಬೆಲೆಯಲ್ಲಿ ಶೇ. 22ರಷ್ಟು ಇಳಿಕೆ ಆಗಿದೆ. ಅಕ್ಟೋಬರ್ 14ರಂದು 67.50 ರೂ ಇದ್ದ ದರ ನವೆಂಬರ್ 14ರಂದು 52.35 ರೂಗೆ ಬಂದಿದೆ. ಇದು ಸರಾಸರಿ ದರವಾಗಿದ್ದು, ಬೆಂಗಳೂರು ಹಾಗೂ ಕರ್ನಾಟಕ ಹಲವೆಡೆ ಟೊಮೆಟೋ ಬೆಲೆ ಇನ್ನೂ ಕಡಿಮೆ ಇದೆ.
ದೆಹಲಿಯ ಆಜಾದ್ಪುರ್ ಮಂಡಿಯಲ್ಲಿ ಟೊಮೆಟೋ ಬೆಲೆ ಅರ್ಧಕರ್ಧ ಕಡಿಮೆ ಆಗಿದೆ. ಕ್ವಿಂಟಾಲ್ಗೆ 5,883 ರೂ ಇದ್ದ ಹೋಲ್ಸೇಲ್ ಬೆಲೆ ಈಗ 2,969 ರೂಗೆ ಇಳಿದಿದೆ. ಟೊಮೆಟೋ ಬೆಲೆಗಳ ಇಳಿಕೆಗೆ ಪ್ರಮುಖ ಕಾರಣವೆಂದರೆ, ಈ ತರಕಾರಿ ಇಳಿವರಿ ಹೆಚ್ಚಾಗಿರುವುದು, ಮತ್ತು ಎಲ್ಲೆಡೆ ಸರಾಗವಾಗಿ ಸರಬರಾಜು ಆಗಿರುವುದು.
ಇದನ್ನೂ ಓದಿ: ಮ್ಯಾನೇಜ್ಮೆಂಟ್ ಸ್ಕೂಲ್ಗಳಲ್ಲಿ ಕಲಿತವರನ್ನು ಐಎಎಸ್, ಐಪಿಎಸ್ ಹುದ್ದೆಗೆ ನೇಮಿಸಲಿ: ಇನ್ಫೋಸಿಸ್ ನಾರಾಯಣಮೂರ್ತಿ ಸಲಹೆ
ಮಹಾರಾಷ್ಟ್ರದ ಪಿಂಪಲಗಾಂವ್, ಆಂಧ್ರದ ಮದನಪಲ್ಲೆ ಮತ್ತು ಕರ್ನಾಟಕದ ಕೋಲಾರದಂತಹ ಪ್ರಮುಖ ಟೊಮೆಟೋ ಮಾರುಕಟ್ಟೆಗಳಲ್ಲೂ ಬೆಲೆ ಇಳಿಕೆ ಗಣನೀಯವಾಗಿ ಆಗಿದೆ. ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಗುಜರಾತ್ ರಾಜ್ಯಗಳಿಂದ ಟೊಮೆಟೋಗಳು ಎಲ್ಲೆಡೆ ಸಮರ್ಪಕವಾಗಿ ಸರಬರಾಜು ಆಗುತ್ತಿದೆ. ಹೀಗಾಗಿ ಈ ಮಾರುಕಟ್ಟೆಗಳಲ್ಲಿ ಟೊಮೆಟೋ ಬೆಲೆ ನಿಯಂತ್ರಣಕ್ಕೆ ಬಂದಿದೆ.
ಟೊಮೆಟೋ ಸರ್ವ ಋತು ಬೆಳೆಯಾಗಿದೆ. ವರ್ಷದ ಎಲ್ಲಾ ದಿನಗಳಲ್ಲೂ ಟೊಮೆಟೋ ಬೆಳೆಯಲಾಗುತ್ತದೆ. ಆದರೆ, ಪ್ರತಿಕೂಲ ಹವಾಮಾನ ಇದ್ದಾಗ ಸಹಜವಾಗಿ ಇಳುವರಿ ತಗ್ಗುತ್ತದೆ. ಬರ, ಮಳೆ, ಪ್ರವಾಹಗಳಿಗೆ ಟೊಮೆಟೋ ಬೇಗ ಈಡಾಗಿ ಹೋಗುತ್ತದೆ. ಆಂಧ್ರ ಮತ್ತು ಕರ್ನಾಟಕದ ಹಲವೆಡೆ ತೀವ್ರ ಮಳೆಯಾದ್ದರಿಂದ ಸಾಕಷ್ಟು ಬೆಳೆನಾಶವಾಗಿ ಟೊಮೆಟೋ ದಾಸ್ತಾನು ಕಡಿಮೆ ಆಗಿತ್ತು. ಹೀಗಾಗಿ ಬೆಲೆ ಹೆಚ್ಚಳವಾಗಿತ್ತು.
ಈಗ ಬೇರೆ ಪ್ರಮುಖ ರಾಜ್ಯಗಳಲ್ಲಿ ನಿಯಂತ್ರಿತ ರೀತಿಯಲ್ಲಿ ಮಳೆಯಾದ್ದರಿಂದ ಟೊಮೆಟೋ ಬೆಲೆ ಉತ್ತಮವಾಗಿ ಬಂದಿದೆ. ಒಂದು ಅಂದಾಜು ಪ್ರಕಾರ 2023-24ರಲ್ಲಿ ಭಾರತದಲ್ಲಿ ಟೊಮೆಟೋ ಉತ್ಪಾದನೆ 213.20 ಲಕ್ಷ ಟನ್ಗೆ (ಶೇ. 4ರಷ್ಟು ಹೆಚ್ಚಳ) ಏರಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ