Toyota Motor’s: ಭಾರತದ ಟೊಯೋಟಾ ಗ್ರಾಹಕರ ವೈಯಕ್ತಿಕ ವಿವರ ಸೋರಿಕೆ ಆತಂಕ

| Updated By: Ganapathi Sharma

Updated on: Jan 04, 2023 | 9:47 AM

‘ಟೊಯೋಟಾ ಕಿರ್ಲೋಸ್ಕರ್ ಮೋಟರ್​ ಗ್ರಾಹಕರ ವೈಯಕ್ತಿಕ ವಿವರಗಳು ಅಂತರ್ಜಾಲದಲ್ಲಿ ಸೋರಿಕೆಯಾಗಿರುವ ಸಾಧ್ಯತೆ ಬಗ್ಗೆ ಸೇವಾ ಪೂರೈಕೆದಾರರು ಕಂಪನಿಗೆ ಮಾಹಿತಿ ನೀಡಿದ್ದಾರೆ’ ಎಂದು ಟೊಯೋಟಾ ಕಿರ್ಲೋಸ್ಕರ್ ಮೋಟರ್ ಇ-ಮೇಲ್ ಪ್ರಕಟಣೆಯಲ್ಲಿ ತಿಳಿಸಿದೆ.

Toyota Motors: ಭಾರತದ ಟೊಯೋಟಾ ಗ್ರಾಹಕರ ವೈಯಕ್ತಿಕ ವಿವರ ಸೋರಿಕೆ ಆತಂಕ
ಟೊಯೋಟಾ ಕಿರ್ಲೋಸ್ಕರ್ ಮೋಟರ್
Follow us on

ನವದೆಹಲಿ: ಭಾರತದಲ್ಲಿ ಟೊಯೋಟಾ (Toyota Motor) ಗ್ರಾಹಕರ ವೈಯಕ್ತಿಕ ವಿವರಗಳು ಸೋರಿಕೆಯಾಗಿರುವ ಆತಂಕ ವ್ಯಕ್ತವಾಗಿದೆ ಎಂದು ಕಂಪನಿ ತಿಳಿಸಿರುವುದಾಗಿ ವರದಿಯಾಗಿದೆ. ಟೊಯೋಟಾ ಕಿರ್ಲೋಸ್ಕರ್ ಮೋಟರ್​​ನಲ್ಲಿ (Toyota Kirloskar Motor) ದತ್ತಾಂಶ ಸೋರಿಕೆಯಾಗಿರುವ ಆತಂಕವಿದ್ದು, ಈ ಕುರಿತು ಎಚ್ಚರವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ‘ಟೊಯೋಟಾ ಇಂಡಿಯಾ (Toyota India)’ ಪ್ರಕಟಣೆ ತಿಳಿಸಿದೆ. ‘ಟೊಯೋಟಾ ಕಿರ್ಲೋಸ್ಕರ್ ಮೋಟರ್​ ಗ್ರಾಹಕರ ವೈಯಕ್ತಿಕ ವಿವರಗಳು ಅಂತರ್ಜಾಲದಲ್ಲಿ ಸೋರಿಕೆಯಾಗಿರುವ ಸಾಧ್ಯತೆ ಬಗ್ಗೆ ಸೇವಾ ಪೂರೈಕೆದಾರರು ಕಂಪನಿಗೆ ಮಾಹಿತಿ ನೀಡಿದ್ದಾರೆ’ ಎಂದು ಟೊಯೋಟಾ ಕಿರ್ಲೋಸ್ಕರ್ ಮೋಟರ್ ಇ-ಮೇಲ್ ಪ್ರಕಟಣೆಯಲ್ಲಿ ತಿಳಿಸಿದೆ. ಆದರೆ, ಯಾವ ಮಟ್ಟದಲ್ಲಿ ವೈಯಕ್ತಿಕ ವಿವರ ಸೋರಿಕೆಯಾಗಿದೆ, ಎಷ್ಟು ಮಂದಿ ಗ್ರಾಹಕರಿಗೆ ಇದರಿಂದ ತೊಂದರೆಯಾಗಬಹುದು ಎಂಬಿತ್ಯಾದಿ ಹೆಚ್ಚಿನ ವಿವರ ನೀಡಿಲ್ಲ.

ಟೊಯೋಟಾ ಮೋಟರ್ಸ್​​ನ ‘ಟಿ-ಕನೆಕ್ಟ್’ ಸೇವೆಯಿಂದ 2,96,000 ಗ್ರಾಹಕರ ಮಾಹಿತಿ ಸೋರಿಕೆಯಾಗಿದೆ ಎಂದು ಅಕ್ಟೋಬರ್​​ನಲ್ಲಿ ವರದಿಯಾಗಿತ್ತು.

ದೇಶದಲ್ಲಿ ಅತಿಹೆಚ್ಚು ಕಾರುಗಳನ್ನು ಮಾರಾಟ ಮಾಡುವ ಕಂಪನಿಗಳ ಪೈಕಿ ಟೊಯೋಟಾ ಕೂಡ ಮುಂಚೂಣಿಯಲ್ಲಿದೆ. 2022ರ ಡಿಸೆಂಬರ್​ ತಿಂಗಳೊಂದರಲ್ಲೇ ಕಂಪನಿಯು ಭಾರತದಲ್ಲಿ 10,421 ಕಾರುಗಳನ್ನು ಮಾರಾಟ ಮಾಡಿರುವುದಾಗಿ ಇತ್ತೀಚೆಗೆ ತಿಳಿಸಿತ್ತು. ಜಪಾನ್ ಮೂಲದ ಕಂಪನಿಯಾಗಿರುವ ಟೊಯೋಟಾ ಭಾರತದಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟರ್ ಜತೆ ಜಂಟಿ ಉದ್ಯಮ ನಡೆಸುತ್ತಿದೆ.

ಇದನ್ನೂ ಓದಿ: Flipkart: ಬೆಂಗಳೂರು; ಮೊಬೈಲ್ ಫೋನ್ ನೀಡದ ಫ್ಲಿಪ್​ಕಾರ್ಟ್​ಗೆ 42 ಸಾವಿರ ರೂ. ದಂಡ

ಇತ್ತೀಚೆಗಷ್ಟೇ ಕಂಪನಿಯು ಹೊಸ ತಲೆಮಾರಿನ ಇನೋವಾ ಹೈಕ್ರಾಸ್ ಎಂಪಿವಿ ಕಾರು ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿತ್ತು. ಈ ಹೊಸ ಕಾರು ವಿವಿಧ ವೆರಿಯೆಂಟ್ ಗಳೊಂದಿಗೆ ಪೆಟ್ರೋಲ್ ಮತ್ತು ಹೈಬ್ರಿಡ್ ಮಾದರಿಗಳಲ್ಲಿ ಮಾರುಕಟ್ಟೆ ಪ್ರವೇಶಿಸಿದೆ. ಟಿಎನ್ ಜಿಸಿ-ಎ ಪ್ಲ್ಯಾಟ್ ಫಾರ್ಮ್ ಅಡಿ ನಿರ್ಮಾಣವಾಗಿರುವ ಹೊಸ ಇನೋವಾ ಹೈಕ್ರಾಸ್ ಹೊಸ ಕಾರು ಮೂರನೇ ತಲೆಮಾರಿನ ವೈಶಿಷ್ಟ್ಯತೆಗಳನ್ನು ಹೊಂದಿದ್ದು, ವಿನೂತನ ವಿನ್ಯಾಸದ ಜೊತೆಗೆ ಹಲವಾರು ಪ್ರೀಮಿಯಂ ಫೀಚರ್ಸ್ ಪಡೆದುಕೊಂಡಿದೆ. ಹೊಸ ಕಾರನ್ನು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಇನೋವಾ ಕ್ರಿಸ್ಟಾ ಕಾರಿಗಿಂತಲೂ ಹೆಚ್ಚಿನ ಮಟ್ಟದ ಫೀಚರ್ಸ್ ಮತ್ತು ಸುಧಾರಿತ ಎಂಜಿನ್ ಆಯ್ಕೆಯೊಂದಿಗೆ ಅಭಿವೃದ್ದಿಗೊಳಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:45 am, Wed, 4 January 23