Trade Deficit: ಭಾರತದ ಟ್ರೇಡ್ ಡೆಫಿಸಿಟ್ 15.24 ಬಿಲಿಯನ್ ಡಾಲರ್ಗೆ ಇಳಿಕೆ; ಇದು 21 ತಿಂಗಳಲ್ಲೇ ಅತಿ ಕಡಿಮೆ
India's Trade Deficit At 21-Month Lowest: ಭಾರತದಲ್ಲಿ ಏಪ್ರಿಲ್ ತಿಂಗಳಲ್ಲಿ ಆಮದು ಮತ್ತು ರಫ್ತು ನಡುವಿನ ಅಗಾಧ ಅಂತರ ತುಸು ತಗ್ಗಿ 15.24 ಬಿಲಿಯನ್ ಡಾಲರ್ ತಲುಪಿದೆ. ಇದು ಕಳೆದ 21 ತಿಂಗಳಲ್ಲಿ ಅತ್ಯಂತ ಕಡಿಮೆ ಟ್ರೇಡ್ ಡೆಫಿಸಿಟ್ ಎನ್ನಲಾಗಿದೆ.
ನವದೆಹಲಿ: ಏಪ್ರಿಲ್ ತಿಂಗಳಲ್ಲಿ ಭಾರತದ ವ್ಯಾಪಾರ ಅಂತರ ಅಥವಾ ವ್ಯಾಪಾರ ಕೊರತೆ (Trade Deficit) ಗಣನೀಯವಾಗಿ ಇಳಿಕೆಯಾಗಿದೆ. ಆ ತಿಂಗಳು ಟ್ರೇಡ್ ಡೆಫಿಸಿಟ್ ಪ್ರಮಾಣ 15.24 ಬಿಲಿಯನ್ ಡಾಲರ್ನಷ್ಟು (ಸುಮಾರು 1.25 ಲಕ್ಷ ಕೋಟಿ ರೂ) ಇದೆ. ಕಳೆದ 21 ತಿಂಗಳಲ್ಲಿ ಯಾವ ತಿಂಗಳು ಕೂಡ ಟ್ರೇಡ್ ಡೆಫಿಸಿಟ್ ಇಷ್ಟು ಕಡಿಮೆ ಇರಲಿಲ್ಲ. ಕಚ್ಛಾ ವಸ್ತು, ಆಹಾರ ಪದಾರ್ಥಗಳ ಬೆಲೆ ಇಳಿಮುಖವಾಗಿದ್ದು, ಆಂತರಿಕವಾಗಿ ಬೇಡಿಕೆ ತುಸು ತಗ್ಗಿದ್ದರಿಂದ ಏಪ್ರಿಲ್ ತಿಂಗಳಲ್ಲಿ ಹೆಚ್ಚು ಆಮದು ಆಗಲಿಲ್ಲ. ಈ ಕಾರಣಕ್ಕೆ ಟ್ರೇಡ್ ಡೆಫಿಸಿಟ್ ಕಡಿಮೆ ಆಗಿದೆ.
ಟ್ರೇಡ್ ಡೆಫಿಸಿಟ್ ಎಂದರೆ ಏನು?
ಟ್ರೇಡ್ ಡೆಫಿಸಿಟ್ ಅಥವಾ ವ್ಯಾಪಾರ ಅಂತರ/ಕೊರತೆ ಎಂದರೆ ಬಹಳ ಸರಳವಾಗಿ ಹೇಳುವುದಾದರೆ ರಫ್ತು ಮತ್ತು ಆಮದು ನಡುವಿನ ಅಂತರ. ರಫ್ತಿಗಿಂತ ಆಮದು ಹೆಚ್ಚಾದರೆ ಅದು ಡೆಫಿಸಿಟ್ ಎನಿಸುತ್ತದೆ. ಆಮದಿಗಿಂತ ರಫ್ತು ಹೆಚ್ಚಾದರೆ ಅದು ಟ್ರೇಡ್ ಸರ್ಪ್ಲಸ್ ಎನಿಸುತ್ತದೆ.
ಇದನ್ನೂ ಓದಿ: Infosys: ಇನ್ಫೋಸಿಸ್ ಉದ್ಯೋಗಿಗಳಿಗೆ ಷೇರುಭಾಗ್ಯ; ಬೋನಸ್ ಜೊತೆಗೆ ಸಿಕ್ಕಿದೆ ಕಂಪನಿ ಷೇರು
ಮಾರ್ಚ್ ತಿಂಗಳಲ್ಲಿ ಭಾರತದಲ್ಲಿ ಟ್ರೇಡ್ ಡೆಫಿಸಿಟ್ 19.73 ಬಿಲಿಯನ್ ಡಾಲರ್ ಇತ್ತು. ಏಪ್ರಿಲ್ ತಿಂಗಳಲ್ಲಿ ಇದು 19.73 ಬಿಲಿಯನ್ ಡಾಲರ್ಗೆ ಇಳಿದಿದೆ. ಹಣಕಾಸು ವಿಶ್ಲೇಷಣಾ ಸಂಸ್ಥೆ ಬ್ಲೂಮ್ಬರ್ಗ್ ವಿವಿಧ ಆರ್ಥಿಕ ತಜ್ಞರ ಸಮೀಕ್ಷೆ ನಡೆಸಿದಾಗ ಏಪ್ರಿಲ್ನಲ್ಲಿ ಸರಾಸರಿ 19.04 ಬಿಲಿಯನ್ ಡಾಲರ್ನಷ್ಟು ವ್ಯಾಪಾರ ಕೊರತೆ ಎದುರಾಗಬಹುದು ಎಂಬ ಅಭಿಪ್ರಾಯ ಬಂದಿತು. ಆದರೆ, ಈ ಅನಿಸಿಕೆಗೆಯನ್ನು ಸುಳ್ಳಾಗಿಸುವ ರೀತಿಯಲ್ಲಿ ಆಮದು ಪ್ರಮಾಣ ಕಡಿಮೆ ಆಗಿ ಟ್ರೇಡ್ ಡೆಫಿಸಿಟ್ ಕಡಿಮೆ ಆಗುವಂತಾಗಿದೆ.
ಮಾರ್ಚ್ ತಿಂಗಳಿಗೆ ಹೋಲಿಸಿದರೆ ಏಪ್ರಿಲ್ ತಿಂಗಳಲ್ಲಿ ರಫ್ತು ಪ್ರಮಾಣ ಶೇ. 12.7ರಷ್ಟು ಇಳಿದರೆ, ಆಮದು ಪ್ರಮಾಣ ಶೇ. 14.1ರಷ್ಟು ತಗ್ಗಿದೆ. ಏಪ್ರಿಲ್ನಲ್ಲಿ 49.9 ಬಿಲಿಯನ್ ಡಾಲರ್ನಷ್ಟು ಆಮದಾಗಿದೆ. 34.66 ಬಿಲಿಯನ್ ಡಾಲರ್ನಷ್ಟು ರಫ್ತಾಗಿದೆ. ಒಟ್ಟು ವ್ಯಾಪಾರ ಅಂತರ 15.24ಬಿಲಿಯನ್ ಡಾಲರ್ ಇದೆ.