Trai New Guidelines: ಟಿವಿ ಚಾನೆಲ್​ಗಳ​ ದರ ಮಿತಿ ಪರಿಷ್ಕರಿಸಿದ ಟ್ರಾಯ್; ಫೆಬ್ರವರಿಯಿಂದ ಜಾರಿ

| Updated By: Ganapathi Sharma

Updated on: Nov 24, 2022 | 1:47 PM

‘ನ್ಯೂ ಟಾರಿಫ್ ಆರ್ಡರ್ 2.0’ ಅನ್ನು ಟ್ರಾಯ್ ಪ್ರಕಟಿಸಿದ್ದು, ಇದರ ಅನ್ವಯ ಟಿವಿ ಚಾನೆಲ್​ಗಳ ದರ ಮಿತಿಯನ್ನು ಈ ಹಿಂದಿನ 12 ರೂ.ಗೆ ಬದಲಾಗಿ 19 ರೂ.ಗೆ ನಿಗದಿಪಡಿಸಿದೆ. ಪರಿಷ್ಕೃತ ನಿಯಮ 2023ರ ಫೆಬ್ರವರಿ 1ರಿಂದ ಜಾರಿಗೆ ಬರಲಿದೆ.

Trai New Guidelines: ಟಿವಿ ಚಾನೆಲ್​ಗಳ​ ದರ ಮಿತಿ ಪರಿಷ್ಕರಿಸಿದ ಟ್ರಾಯ್; ಫೆಬ್ರವರಿಯಿಂದ ಜಾರಿ
ಪ್ರಾತಿನಿಧಿಕ ಚಿತ್ರ
Follow us on

ನವದೆಹಲಿ: ಟಿವಿ ಚಾನೆಲ್​ಗಳ ಸಮೂಹದ (Bouquet of Channels) ದರಕ್ಕೆ ಸಂಬಂಧಿಸಿದ ಮಾರ್ಗಸೂಚಿಯಲ್ಲಿ ಭಾರತೀಯ ದೂರಸಂಪರ್ಕ ಪ್ರಾಧಿಕಾರ (Trai) ತಿದ್ದುಪಡಿ ಮಾಡಿದೆ. ‘ನ್ಯೂ ಟಾರಿಫ್ ಆರ್ಡರ್ 2.0 (NTO)’ ಅನ್ನು ಟ್ರಾಯ್ ಪ್ರಕಟಿಸಿದ್ದು, ಇದರ ಅನ್ವಯ ಟಿವಿ ಚಾನೆಲ್​ಗಳ ದರ ಮಿತಿಯನ್ನು (ಉಚಿತವಾಗಿ ದೊರೆಯುವ ಚಾನೆಲ್​ಗಳನ್ನು ಹೊರತುಪಡಿಸಿ) ಈ ಹಿಂದಿನ 12 ರೂ.ಗೆ ಬದಲಾಗಿ 19 ರೂ.ಗೆ ನಿಗದಿಪಡಿಸಿದೆ. ಪರಿಷ್ಕೃತ ನಿಯಮ 2023ರ ಫೆಬ್ರವರಿ 1ರಿಂದ ಜಾರಿಗೆ ಬರಲಿದೆ. ಇದರಿಂದ ಕೇಬಲ್, ಡಿಟಿಎಚ್ ಮತ್ತಿತರ ಸಾಧನಗಳ ಮೂಲಕ ದೊರೆಯುವ ಟಿವಿ ಚಾನೆಲ್​ಗಳ ಗುಚ್ಛಗಳ ದರ ಹೆಚ್ಚಾಗುವ ಸಾಧ್ಯತೆ ಇದೆ.

‘ನ್ಯೂ ಟಾರಿಫ್ ಆರ್ಡರ್ 2.0’ ಬಗ್ಗೆ 2020ರ ಜನವರಿಯಲ್ಲಿ ಮೊದಲು ಪ್ರಸ್ತಾಪಿಸಲಾಗಿತ್ತು. ಅದಾದ ಮೂರು ವರ್ಷಗಳ ಬಳಿಕ ನಿಯಮಗಳನ್ನು ಟ್ರಾಯ್ ಅಂತಿಮಗೊಳಿಸಿದೆ. ಆರಂಭದಲ್ಲಿ ಚಾನೆಲ್​ಗಳಿಗೆ 12 ರೂ. ದರ ನಿಗದಿಪಡಿಸುವ ಬಗ್ಗೆ ಚರ್ಚೆಯಾಗಿತ್ತು. ಆದರೆ, ಇದಕ್ಕೆ ಪ್ರಸಾರಕರಿಂದ ಮತ್ತು ಆಪರೇಟರ್​ಗಳಿಂದ ವಿರೋಧ ವ್ಯಕ್ತವಾಗಿತ್ತು. ಪರಿಣಾಮವಾಗಿ ನೂತನ ನಿಯಮಗಳ ಅನುಷ್ಠಾನವನ್ನು ಹಲವು ಬಾರಿ ಮುಂದೂಡಲಾಗಿತ್ತು. ಇದೀಗ ಟ್ರಾಯ್ ಮಾಡಿರುವ ತಿದ್ದುಪಡಿಯನ್ನು ಭಾರತೀಯ ಪ್ರಸಾರಕರ ಹಾಗೂ ಡಿಜಿಟಲ್ ಫೌಂಡೇಷನ್​ನ (IBDF) ಅಧ್ಯಕ್ಷ ಕೆ. ಮಾಧವನ್ ಸ್ವಾಗತಿಸಿದ್ದಾರೆ. ಇದು ಉದ್ಯಮ ಮತ್ತು ನಿಯಂತ್ರಕರ ನಡುವಿನ ರಚನಾತ್ಮಕ ಸಂಭಾಷಣೆಯ ಫಲಿತಾಂಶವಾಗಿದೆ ಎಂದು ಅವರು ಬಣ್ಣಿಸಿದ್ದಾರೆ.

ಉದ್ಯಮ ಮತ್ತು ಟ್ರಾಯ್ ನಡುವಣ ಪ್ರಬಲ ಸಹಕಾರದಿಂದ ‘ನ್ಯೂ ಟಾರಿಫ್ ಆರ್ಡರ್ 2.0’ ಸಿದ್ಧವಾಗಿದೆ. ಬೇಡಿಕೆಗಳನ್ನು ಈಡೇರಿಸುವ ವಿಚಾರದಲ್ಲಿ ದಾವೆ ಹೂಡುವ ಬದಲು, ರಚನಾತ್ಮಕ ಸಂವಾದ ನಡೆಸಲಾಗಿದೆ. ಈ ವಿಧಾನವು ಬೆಲೆಯ ವಿಚಾರದಲ್ಲಿ ಉದ್ಯಮಕ್ಕೆ ಹೆಚ್ಚು ಅನುಕೂಲಕರ ವಾತಾವರಣವನ್ನು ಸೃಷ್ಟಿಸುವಲ್ಲಿ ಮತ್ತು ಉತ್ತಮ ಪ್ರಗತಿಯನ್ನು ಸಾಧಿಸಲು ಅವಕಾಶ ಮಾಡಿಕೊಡಲಿದೆ ಎಂದು ಅವರು ಹೇಳಿದ್ದಾರೆ.

ರಿಯಾಯಿತಿಗೆ ಶೇಕಡಾ 45ರ ಮಿತಿ

ನಿರ್ದಿಷ್ಟ ಪ್ರಸಾರಕರ ಸಮೂಹದಲ್ಲಿ ಬರುವ ಟಿವಿ ಚಾನೆಲ್​ಗಳು ನೀಡುವ ರಿಯಾಯಿತಿಗಳಿಗೆ ಶೇಕಡಾ 45ರ ಮಿತಿಯನ್ನು ನಿಗದಿಪಡಿಸಲಾಗಿದೆ ಎಂದೂ ಟ್ರಾಯ್ ತಿಳಿಸಿದೆ. ಇದರಿಂದ ಸ್ಟ್ಯಾಂಡ್​ ಅಲೋನ್ ಚಾನೆಲ್​ಗಳಿಗೆ ಸ್ವತಂತ್ರವಾಗಿ ದರ ನಿಗದಿಪಡಿಸುವ ಅವಕಾಶವೂ ದೊರೆಯಲಿದೆ ಎನ್ನಲಾಗಿದೆ.

ಡಿಸೆಂಬರ್ 16ರ ಒಳಗೆ ಪ್ರಸಾರಕರು ದರ ವಿವರ ಸಲ್ಲಿಸಬೇಕು

ಇದೀಗ ಪ್ರಸಾರಕರು ತಮ್ಮ ಚಾನೆಲ್​ಗಳ ದರ, ಪ್ರಸಾರಕರ ಗುಂಪಿನ ಹಾಗೂ ಅದರಲ್ಲಿ ಒಳಗೊಂಡಿರುವ ಚಾನೆಲ್​ಗಳ ವಿವರವನ್ನು ಡಿಸೆಂಬರ್ 16ರ ಒಳಗೆ ಟ್ರಾಯ್​​ಗೆ ಸಲ್ಲಿಸಬೇಕಿದೆ. ಡಿಟಿಎಚ್ ಹಾಗೂ ಮಲ್ಟಿ ಸಿಸ್ಟಂ ಆಪರೇಟರ್​ಗಳು ತಿದ್ದುಪಡಿ ಮಾಡಿರುವ ವಿತರಕರ ಚಿಲ್ಲರೆ ಬೆಲೆ (Distributors Retail Price) ವಿವರವನ್ನು ಜನವರಿ 1ರ ಒಳಗೆ ಸಲ್ಲಿಸಬೇಕಿದೆ.

2023ರ ಫೆಬ್ರವರಿ 1ರಿಂದ ಎಲ್ಲ ವಿತರಕರು ಮತ್ತು ಟಿವಿ ಚಾನೆಲ್​ಗಳು ಪರಿಷ್ಕೃತ ನಿಯಮಗಳಿಗೆ ಅನುಗುಣವಾಗಿಯೇ ಕಾರ್ಯನಿರ್ವಹಿಸಬೇಕು. ತಾವು ಗುರುತಿಸಿಕೊಂಡಿರುವ ಟಿವಿ ಚಾನೆಲ್​ಗಳ ಗುಚ್ಛಗಳ ದರ ಪಟ್ಟಿಗೆ ಅನುಗುಣವಾಗಿಯೇ ಸೇವೆ ಒದಗಿಸಬೇಕು ಎಂದು ಟ್ರಾಯ್ ತಿಳಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:14 pm, Thu, 24 November 22