ಟ್ರ್ಯೂಕಾಲರ್ ಸಿಇಒ ಮತ್ತು ನಾರಾಯಣಮೂರ್ತಿ ಮೊದಲ ಭೇಟಿ; ಇನ್ಫೋಸಿಸ್ ಸಂಸ್ಥಾಪಕರೆಂದು ಗೊತ್ತಾಗದೇ ನಡೆದ ಚರ್ಚೆಯಲ್ಲಿ ಆಗಿದ್ದೇನು?

|

Updated on: Nov 05, 2023 | 1:51 PM

True Caller CEO Talks About NR Narayana Murthy: ಎಂಟು ವರ್ಷದ ಹಿಂದೆ ಅವರು ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್ ಕೆ ನಾರಾಯಣಮೂರ್ತಿ ಅವರನ್ನು ಭೇಟಿ ಮಾಡಿದ ಘಟನೆಯನ್ನು ಸ್ಮರಿಸಿಕೊಂಡಿದ್ದು ಎಕ್ಸ್ ಖಾತೆಯಲ್ಲಿ ಆ ಅನುಭವ ಹಂಚಿಕೊಂಡಿದ್ದಾರೆ. ಕುತೂಹಲವೆಂದರೆ ನಾರಾಯಣಮೂರ್ತಿ ಇನ್ಫೋಸಿಸ್ ಸಂಸ್ಥಾಪಕರು ಎಂಬ ವಿಚಾರ ಅಲನ್ ಮಮೇದಿಯವರಿಗೆ ಗೊತ್ತಿರಲಿಲ್ಲವಂತೆ.

ಟ್ರ್ಯೂಕಾಲರ್ ಸಿಇಒ ಮತ್ತು ನಾರಾಯಣಮೂರ್ತಿ ಮೊದಲ ಭೇಟಿ; ಇನ್ಫೋಸಿಸ್ ಸಂಸ್ಥಾಪಕರೆಂದು ಗೊತ್ತಾಗದೇ ನಡೆದ ಚರ್ಚೆಯಲ್ಲಿ ಆಗಿದ್ದೇನು?
ಅಲನ್ ಮಾಮೇದಿ, ನಾರಾಯಣಮೂರ್ತಿ
Follow us on

ಬೆಂಗಳೂರು, ನವೆಂಬರ್ 5: ಬದುಕಿನಲ್ಲಿ ನಾವು ಬೇರೆ ಬೇರೆ ಸಂದರ್ಭಗಳಲ್ಲಿ ಬಹಳಷ್ಟು ಜನರನ್ನು ಭೇಟಿ ಮಾಡುತ್ತೇವೆ. ನಾವು ಭೇಟಿ ಮಾಡಿದ ಜನರು ಯಾರೆಂದು ತಿಳಿಯದೇ ಸಾಕಷ್ಟು ವಿಚಾರಗಳನ್ನು ಚರ್ಚೆ ಮಾಡುವುದುಂಟು. ನಾವು ಭೇಟಿ ಮಾಡಿದ ವ್ಯಕ್ತಿ ಯಾರೋ ಗಣ್ಯ ವ್ಯಕ್ತಿ ಎಂಬುದು ಮುಂದೊಂದು ದಿನ ಗೊತ್ತಾದಾಗ ಸಖೇದಾಶ್ಚರ್ಯ ಆಗುತ್ತದೆ. ಅಂಥ ಘಟನೆಗಳು ಬಹಳ ಜನರ ಬದುಕಿನಲ್ಲಿ ನಡೆಯುವುದುಂಟು. ಟ್ರ್ಯೂಕಾಲರ್ ಕಂಪನಿಯ ಸಿಇಒ ಅಲನ್ ಮಮೇದಿ (Alan Mamedi) ಅವರಿಗೂ ಇಂಥದ್ದೊಂದು ಅನುಭವವಾಗಿದೆ. ಎಂಟು ವರ್ಷದ ಹಿಂದೆ ಅವರು ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ (NR Narayana Murthy) ಅವರನ್ನು ಭೇಟಿ ಮಾಡಿದ ಘಟನೆಯನ್ನು ಸ್ಮರಿಸಿಕೊಂಡಿದ್ದು ಎಕ್ಸ್ ಖಾತೆಯಲ್ಲಿ ಆ ಅನುಭವ ಹಂಚಿಕೊಂಡಿದ್ದಾರೆ. ಕುತೂಹಲವೆಂದರೆ ನಾರಾಯಣಮೂರ್ತಿ ಇನ್ಫೋಸಿಸ್ ಸಂಸ್ಥಾಪಕರು ಎಂಬ ವಿಚಾರ ಅಲನ್ ಮಮೇದಿಯವರಿಗೆ ಗೊತ್ತಿರಲಿಲ್ಲವಂತೆ.

ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ಅವರು ನಾರಾಯಣಮೂರ್ತಿ ಸಂದರ್ಶನವೊಂದರಲ್ಲಿ ಆಡಿದ ಒಂದು ಮಾತನ್ನು ಉಲ್ಲೇಖಿಸಿ ಮಾಡಿದ್ದ ಟ್ವೀಟ್​ಗೆ ಅಲನ್ ಮಮೇದಿ ಪ್ರತಿಕ್ರಿಯಿಸುತ್ತಾ ತಮ್ಮ ಹಾಗೂ ನಾರಾಯಣಮೂರ್ತಿ ನಡುವೆ ಎಂಟು ವರ್ಷದ ಹಿಂದೆ ಆದ ಭೇಟಿ ಘಟನೆಯನ್ನು ವಿವರಿಸಿದ್ದಾರೆ. ಏನು ಮಾಡುತ್ತೀರಿ ಎಂದು ನಾರಾಯಣಮೂರ್ತಿ ಅವರನ್ನು ಆಗ ಟ್ರೂಕಾಲರ್ ಸಿಇಒ ವಿಚಾರಿಸಿದರಂತೆ. ತಮ್ಮ ಜೀವನದಲ್ಲಿ ಎಷ್ಟೆಲ್ಲಾ ಸಿಕ್ಕಿದ್ದು ಅದನ್ನು ಸಮಾಜಕ್ಕೆ ಹಿಂದಿರುಗಿಸಬೇಕೆಂದು ತಮ್ಮ ಹೆಂಡತಿ ಹೇಳಿದ್ದಾರೆ. ಆ ಕೆಲಸವನ್ನೇ ಮಾಡುತ್ತಿದ್ದೇನೆ ಎಂದರು ಎಂದು ಅಲನ್ ಮಮೇದಿ ಹೇಳಿದ್ದಾರೆ.

ಇದನ್ನೂ ಓದಿ: ಇಲಾನ್ ಮಸ್ಕ್ ಮಗನನ್ನು ಶೇಖರ್ ಅಂತ ಕರೀತಾರಂತೆ; ಪುತ್ರನಿಗೆ ಭಾರತೀಯ ಹೆಸರು ಇಟ್ಟಿದ್ಯಾಕೆ ವಿಶ್ವದ ನಂ. 1 ಶ್ರೀಮಂತ?

‘ಮೊದಲ ಬಾರಿಗೆ ನಾರಾಯಣ ಅವರನ್ನು ನಾನು ಭೇಟಿ ಮಾಡಿದ್ದು ಎಂಟು ವರ್ಷದ ಹಿಂದೆ. ಅವರು ಯಾರೆಂದು ನನಗೆ ಗೊತ್ತಿರಲಿಲ್ಲ. ನಾನು ಏನು ಮಾಡುತ್ತಿದ್ದೇನೆ ಎಂದು ಅವರಿಗೆ ಗೊತ್ತಿರಲಿಲ್ಲ. ಒಂದು ಗಂಟೆ ಕಾಲ ಜೀವನ ಕುರಿತು ನಾವು ಚರ್ಚೆ ಮಾಡಿದವು. ಆ ಬಳಿಕ ನಾನು ಅವರನ್ನು ಏನು ಮಾಡುತ್ತಿದ್ದೀರೆಂದು ಕೇಳಿದೆ. ನನ್ನ ಜೀವನದಲ್ಲಿ ಅದೃಷ್ಟ ಇರುವುದರಿಂದ ಸಮಾಜಕ್ಕೆ ವಾಪಸ್ ಕೊಡಬೇಕು ಎಂದು ಹೆಂಡತಿ ಯಾವಾಗಲೂ ಹೇಳುತ್ತಾರೆ. ಆ ಕೆಲಸವನ್ನೇ ಇವತ್ತು ಮಾಡುತ್ತಿದ್ದೇನೆ ಎಂದರು.

ನಿಜಕ್ಕೂ ಅವರು ವಿನಮ್ರ ವ್ಯಕ್ತಿ. ನಂತರದ ಸಂದರ್ಭದಲ್ಲಿ ಅವರು ನನಗೆ ಇನ್ಫೋಸಿಸ್ ಬಗ್ಗೆ ತಿಳಿಸಿದರು. ನಾನು ಚಿಕ್ಕವನಿದ್ದಾಗ ಇನ್ಫೋಸಿಸ್​ನಲ್ಲಿ ಕೆಲಸ ಮಾಡುವ ಕನಸು ಹೊಂದಿದ್ದರ ಬಗ್ಗೆ ತಿಳಿಸಿದೆ. ನನ್ನ ಮನೆಯ ಕಂಪ್ಯೂಟರ್ ಹಾಳಾದಾಗ ಇನ್ಫೋಸಿಸ್​ನ ಒಬ್ಬ ಎಂಜಿನಿಯರು ಬಂದು ರಿಪೇರಿ ಮಾಡಿ ಹೋಗಿದ್ದರು. ಆಗ ನಾನೂ ಇನ್ಫೋಸಿಸ್​ನಲ್ಲಿ ಕೆಲಸ ಮಾಡುವ ಕನಸು ಕಂಡಿದ್ದೆ ಎಂಬುದನ್ನು ಅವರಿಗೆ ತಿಳಿಸಿದೆ. ಕೆಲವೊಮ್ಮೆ ಜೀವನ ಹೇಗೆ ಸಾಗುತ್ತದೆ ಎಂಬುದೇ ಒಂದು ಅಚ್ಚರಿ,’ ಎಂದು ಅಲನ್ ಮಮೇದಿ ತಮ್ಮ ಟ್ವೀಟ್​ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಇವರೇ ಸ್ಟಾರ್​​ಗಳು..! ದೀಪಾವಳಿ ಹಬ್ಬಕ್ಕೆ ಕಾರು, ಬುಲೆಟ್ ಬೈಕ್ ಉಡುಗೊರೆ; ಉದ್ಯೋಗಿಗಳಿಗೆ ಅಚ್ಚರಿ

ಮಮೇದಿ ಅವರು ಇನ್ಫೋಸಿಸ್ ಉದ್ಯೋಗಿ ಬಂದು ಕಂಪ್ಯೂಟರ್ ರಿಪೇರಿ ಮಾಡಿದ ಘಟನೆ ಬಗ್ಗೆ ಹಲವರು ಪ್ರತಿಕ್ರಿಯಿಸಿ ಪ್ರಶ್ನೆ ಕೂಡ ಮಾಡಿದ್ದಾರೆ. ಇದಕ್ಕೆ ಮಮೇದಿ ವಿವರಣೆ ನೀಡಿದ್ದು ಇದು:

‘ಇನ್ಫೋಸಿಸ್ ಜೊತೆ ಸರ್ವಿಸ್ ಒಪ್ಪಂದ ಇದ್ದ ಕಂಪನಿಯೊಂದರಿಂದ ನಾನು ಹಳೆಯ ಕಂಪ್ಯೂಟರ್ ಖರೀದಿಸಿದ್ದೆ. ಇನ್ಫೋಸಿಸ್​ನ ವಾರಂಟಿ ಇತ್ತು. ಯಾರದೋ ಮನೆಯ ಕಿಚನ್​ಗೆ ಹೋಗಿ ಕಂಪ್ಯೂಟರ್ ದುರಸ್ತಿ ಮಾಡಬೇಕಲ್ಲ ಎಂದು ಇನ್ಫೋಸಿಸ್​ನಿಂದ ಬಂದ ಸರ್ವಿಸ್ ಎಂಜಿನಿಯರ್​ಗೆ ಆಶ್ಚರ್ಯವಾಗಿತ್ತು,’ ಎಂದು ಅಲನ್ ಮಾಮೇದಿ ಉತ್ತರಿಸಿದ್ದಾರೆ.

ಅಲನ್ ಮಾಮೇದಿ ಅವರು ಟ್ರ್ಯೂಕಾಲರ್ ಸಂಸ್ಥೆಯ ಸಹ-ಸಂಸ್ಥಾಪಕರು. ಪಶ್ಚಿಮ ಏಷ್ಯನ್ ಮೂಲದವರಾದ ಅವರು ಕುರ್ದ್ ಜನಾಂಗದವರಾಗಿದ್ದು, ಸ್ವೀಡನ್​ನ ನಿರಾಶ್ರಿತರ ಶಿಬಿರದಲ್ಲಿ ಜನಿಸಿದವರು. ಎಂಬತ್ತರ ದಶಕದಲ್ಲಿ ಇವರ ಕುಟುಂಬ ಸ್ವೀಡನ್​ಗೆ ವಲಸಿಗರಾಗಿ ಬಂದಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ