Phishing Scam: ಕೆವೈಸಿ ಲಿಂಕ್ ಕ್ಲಿಕ್ ಮಾಡಿ ಬ್ಯಾಂಕ್ ಖಾತೆಯಿಂದ ಹಣ ಕಳೆದುಕೊಂಡ ಟಿವಿ ನಿರೂಪಕಿ ಮತ್ತಿತರ 40 ಮಂದಿ

TV Anchor Shwetha Memon Lost Money: ಕೆವೈಸಿ ಮತ್ತು ಪಾನ್ ವಿವರಗಳನ್ನು ಅಪ್​ಡೇಟ್ ಮಾಡಿ ಎಂದು ಹೇಳಿ ವಂಚಕರು ಕಳುಹಿಸಿದ ಲಿಂಕ್​ಗಳನ್ನು ಅಮಾಯಕ ಜನರು ಕ್ಲಿಕ್ ಮಾಡಿ ಹಣ ಕಳೆದುಕೊಂಡಿದ್ದಾರೆ. ಹೀಗೆ ಯಾಮಾರಿದ 40 ಜನರ ಪೈಕಿ ಟಿವಿ ನಿರೂಪಕಿ ಶ್ವೇತಾ ಮೆಮೋನ್ ಕೂಡ ಒಬ್ಬರು.

Phishing Scam: ಕೆವೈಸಿ ಲಿಂಕ್ ಕ್ಲಿಕ್ ಮಾಡಿ ಬ್ಯಾಂಕ್ ಖಾತೆಯಿಂದ ಹಣ ಕಳೆದುಕೊಂಡ ಟಿವಿ ನಿರೂಪಕಿ ಮತ್ತಿತರ 40 ಮಂದಿ
ಫಿಶಿಂಗ್ ಸ್ಕ್ಯಾಮ್

Updated on: Mar 06, 2023 | 12:23 PM

ಮುಂಬೈ: ಹಿಂದೆಲ್ಲಾ ವಂಚಕರು ರಸ್ತೆಗಳಲ್ಲಿ ಸಿಕ್ಕು ಬಾಯಿ ಮಾತಿನಿಂದ ಮರುಳು ಮಾಡಿ ಅಮಾಯಕ ಜನರನ್ನು ಯಾಮಾರಿಸುತ್ತಿ ಪ್ರಕರಣಗಳು ಹಲವಿದ್ದವು. ಈಗ ಆನ್​ಲೈನ್ ಕಾಲದಲ್ಲಿ ವಂಚಕರು ಆನ್​ಲೈನ್​ನಲ್ಲಿಯೇ ಜನರನ್ನು ವಂಚಿಸುವ (Cheating Online) ಹಲವು ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. ವಿವಿಧ ಗುಪ್ತ ಸಂದೇಶಗಳ ಮೂಲಕ ಗ್ರಾಹಕರನ್ನು ವಂಚಿಸುವ ಕೆಲಸ ಆಗುತ್ತಿದೆ. ಇಂಥ ಹಲವು ಫಿಶಿಂಗ್ ಕ್ರೈಮ್ ಘಟನೆಗಳು (Phishing Scams) ವಿವಿಧೆಡೆ ವರದಿಯಾಗುತ್ತಲೇ ಇವೆ. ಇಂಥ ವಂಚಕರ ಬಗ್ಗೆ ಜಾಗ್ರತೆಯಿಂದ ಇರಿ ಎಂದು ಸರ್ಕಾರ ಪದೇಪದೇ ಎಚ್ಚರಿಸುತ್ತಲೇ ಇದ್ದರೂ ಜನರು ಯಾಮಾರುವುದು ಮುಂದುವರಿಯುತ್ತಿದೆ. ಮಹಾರಾಷ್ಟ್ರದಲ್ಲಿ ಇಂಥದ್ದೊಂದು ಆನ್​ಲೈನ್ ಫಿಶಿಂಗ್ ಜಾಲಕ್ಕೆ ಸಿಕ್ಕು ಹಲವು ಜನರು ಲಕ್ಷಾಂತರ ರೂ ಕಳೆದುಕೊಂಡ ಘಟನೆಗಳು ವರದಿಯಾಗಿವೆ.

ಮೂರೇ ದಿನದಲ್ಲಿ 40 ಬ್ಯಾಂಕ್ ಗ್ರಾಹಕರು ಲಕ್ಷಗಟ್ಟಲೆ ಹಣ ಕಳೆದುಕೊಂಡಿದ್ದಾರೆ. ಕೆವೈಸಿ ಮತ್ತು ಪಾನ್ ವಿವರಗಳನ್ನು ಅಪ್​ಡೇಟ್ ಮಾಡಿ ಎಂದು ಹೇಳಿ ವಂಚಕರು ಕಳುಹಿಸಿದ ಲಿಂಕ್​ಗಳನ್ನು ಅಮಾಯಕ ಜನರು ಕ್ಲಿಕ್ ಮಾಡಿ ಹಣ ಕಳೆದುಕೊಂಡಿದ್ದಾರೆ. ಹೀಗೆ ಯಾಮಾರಿದ 40 ಜನರ ಪೈಕಿ ಟಿವಿ ನಿರೂಪಕಿ ಶ್ವೇತಾ ಮೆಮೋನ್ (TV Anchor Shweta Memon) ಕೂಡ ಒಬ್ಬರು.

ವಂಚನೆ ಹೇಗೆ?

ಈ ವಂಚಕರು ಕಳುಹಿಸುವ ಲಿಂಕ್ ಕ್ಲಿಕ್ ಮಾಡಿದರೆ ಅದು ನಕಲಿ ಬ್ಯಾಂಕ್ ವೆಬ್​ಸೈಟ್​ಗೆ ಹೋಗುತ್ತದೆ. ಮೂಲ ವೆಬ್​ಸೈಟ್ ರೀತಿಯಲ್ಲೇ ನಕಲಿ ಜಾಲತಾಣಗಳನ್ನು ರೂಪಿಸಲಾಗಿರುತ್ತದೆ. ಗ್ರಾಹಕರು ಜಾಗ್ರತೆಯಿಂದ ನೋಡದೇ ಹೋದರೆ ಸುಲಭವಾಗಿ ಮೋಸಗೊಳ್ಳುತ್ತಾರೆ. ಕಿರುತೆರೆ ನಿರೂಪಕಿ ಶ್ವೇತಾ ಮೆಮೋನ್ ಇಂಥದ್ದೊಂದು ಸಂದೇಶದಲ್ಲಿದ್ದ ಲಿಂಕ್ ಕ್ಲಿಕ್ ಮಾಡಿದಾಗ ಆಕೆಯ ಬ್ಯಾಂಕ್​ನ ನಕಲಿ ವೆಬ್​ಸೈಟ್ ತೆರೆದುಕೊಳ್ಳುತ್ತದೆ. ಅದರಲ್ಲಿ ಆಕೆಯ ಬ್ಯಾಂಕಿನ ಕಸ್ಟಮರ್ ಐಡಿ, ಪಾಸ್​ವರ್ಡ್, ಒಟಿಪಿ ಇತ್ಯಾದಿ ನಮೂದಿಸುವಂತೆ ಕೇಳಲಾಗಿದೆ.

ಇದನ್ನೂ ಓದಿAirbnb Layoffs: ಶೇ. 30ರಷ್ಟು ಹೆಚ್​ಆರ್ ಸಿಬ್ಬಂದಿ ಮನೆಗೆ ಕಳುಹಿಸಿದ ಏರ್​ಬಿಎನ್​ಬಿ

ಇದಾದ ಬಳಿಕ ವಂಚಕರು ಈ ಐಡಿ, ಪಾಸ್​ವರ್ಡ್ ಬಳಸಿ ಮೂಲ ವೆಬ್​ಸೈಟ್​ಗೆ ಹೋಗಿ ಲಾಗಿನ್ ಆಗಿದ್ದಾರೆ. ನಂತರ ಮಹಿಳೆಯೊಬ್ಬಳು ಶ್ವೇತಾಗೆ ಕರೆ ಮಾಡಿ ಮತ್ತೊಂದು ಒಟಿಪಿ ತಿಳಿಸುವಂತೆ ಕೋರಿದ್ದಾರೆ. ಈ ಸಂಖ್ಯೆ ನೀಡಿದ ಬಳಿಕ ಶ್ವೇತಾ ಬ್ಯಾಂಕ್ ಖಾತೆಯಿಂದ 57,636 ರೂ ಡೆಬಿಟ್ ಆಗಿಹೋಗಿದೆ. ಇದಾದ ಬಳಿಕ ಶ್ವೇತಾಗೆ ತಾನು ವಂಚನೆಗೊಳಗಾಗಿರುವುದು ಅರಿವಾಗಿದೆ. ಆ ಬಳಿಕ ಈಕೆ ಪೊಲೀಸ್​ಗೆ ದೂರು ಕೊಟ್ಟಿದ್ದಾರೆ.

ಇದೇ ಅವಧಿಯಲ್ಲಿ ಇನ್ನಷ್ಟು 40 ಮಂದಿ ಇಂಥದ್ದೇ ವಂಚನೆಗೆ ಒಳಗಾಗಿರುವುದು ಪೊಲೀಸರಿಗೆ ಗೊತ್ತಾಗಿದೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ