Airbnb Layoffs: ಶೇ. 30ರಷ್ಟು ಹೆಚ್ಆರ್ ಸಿಬ್ಬಂದಿ ಮನೆಗೆ ಕಳುಹಿಸಿದ ಏರ್ಬಿಎನ್ಬಿ
Airbnb Recruitment Team Face Heat: ಏರ್ಬಿಎನ್ಬಿಯ 6,800 ಉದ್ಯೋಗಿಗಳ ಪೈಕಿ 30 ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಇವರೆಲ್ಲರೂ ಈ ಕಂಪನಿಯ ರೆಕ್ರುಟ್ಮೆಂಟ್ ತಂಡದಲ್ಲಿದ್ದವರು. ಆದರೆ, ಮುಂದಿನ ದಿನಗಳಲ್ಲಿ ಉದ್ಯೋಗಿಗಳ ಸಂಖ್ಯೆ ಹೆಚ್ಚಿಸುವುದಾಗಿ ಕಂಪನಿ ಹೇಳಿಕೊಂಡಿದೆ.
ನವದೆಹಲಿ: ಅಮೆರಿಕ ಮೂಲದ ಮನೆಗಳ ಬಾಡಿಗೆ ಬ್ರೋಕರ್ ಸಂಸ್ಥೆ ಏರ್ಬಿಎನ್ಬಿ (Airbnb) ತನ್ನ ನೇಮಕಾತಿ ವಿಭಾಗದ ಶೇ. 30ರಷ್ಟು ಸಿಬ್ಬಂದಿಯನ್ನು ಲೇ ಆಫ್ (Layoffs) ಮಾಡಿದೆ. ಕೆಲಸ ಕಳೆದುಕೊಂಡವರ ಸಂಖ್ಯೆ ಸುಮಾರು 30 ಎನ್ನಲಾಗಿದೆ. ಈ ಸಂಸ್ಥೆಯಲ್ಲಿ 6,800 ಮಂದಿ ಉದ್ಯೋಗಿಗಳಿದ್ದು, ಕೆಲಸ ಹೋದವರ ಪ್ರಮಾಣ ಶೇ. 0.4ರಷ್ಟಿರಬಹುದು ಎಂದು ಬ್ಲೂಮ್ಬರ್ಗ್ನಲ್ಲಿ ಪ್ರಕಟವಾದ ವರದಿಯಿಂದ ತಿಳಿದುಬರುತ್ತದೆ.
ಆದರೆ, ಏರ್ಬಿಎನ್ಬಿ ಈ ವರ್ಷ ತನ್ನ ಸಿಬ್ಬಂದಿ ಸಂಖ್ಯೆ ಹೆಚ್ಚಿಸುವ ಸನ್ನಾಹದಲ್ಲಿದೆ. ಸಂಸ್ಥೆಯ ಮಾರುಕಟ್ಟೆ ತಂತ್ರಗಾರಿಕೆ ತುಸು ಬದಲಾಗಿದೆ. ಈ ನಿಟ್ಟಿನಲ್ಲಿ ಇದಕ್ಕೆ ಪೂರಕವಾಗಿ ರೆಕ್ರೂಟಿಂಗ್ ಟೀಮ್ ಅನ್ನು ಪರಿಷ್ಕರಿಸಲಾಗುತ್ತಿದ್ದು, ಅದರ ಭಾಗವಾಗಿಯೇ 30ಮಂದಿಯನ್ನು ಕೈಬಿಡಲು ನಿರ್ಧರಿಸಲಾಗಿದೆ.
ಕಳೆದ ವರ್ಷ ಏರ್ಬಿಎನ್ಬಿಯ ವ್ಯವಹಾರ ಶೇ. 11ರಷ್ಟು ವೃದ್ಧಿಸಿತ್ತು. ಈ ವರ್ಷ ಸಂಸ್ಥೆ ಶೇ. 2ರಿಂದ 4ರಷ್ಟು ಹೊಸಬರನ್ನು ನೇಮಕಾತಿ ಮಾಡಿಕೊಳ್ಳಲು ಯೋಜಿಸಿದೆ. ಹೀಗಾಗಿ, ಕಂಪನಿಯ ಇತರ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
2008ರಲ್ಲಿ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಆರಂಭವಾದ ಏರ್ಬಿಎನ್ಬಿ ಲಕ್ಸುರಿ ಮನೆ, ರಿಸಾರ್ಟ್, ಹೋಮ್ಸ್ಟೇ, ಹೋಟೆಲ್ಗಳ ಬುಕಿಂಗ್ ಮಾಡುವ ಆನ್ಲೈನ್ ಮಾರುಕಟ್ಟೆಯಾಗಿದೆ. ಇದು ಬ್ರೋಕರ್ ಕಂಪನಿಯಾಗಿದ್ದು ಪ್ರತೀ ಬುಕಿಂಗ್ಗೆ ಕಮಿಷನ್ ಪಡೆಯುವ ಮೂಲಕ ಆದಾಯ ಗಳಿಸುತ್ತದೆ. ಇಲ್ಲಿ ಏರ್ಬಿಎನ್ಬಿ ಎಂದರೆ ಏರ್ ಬೆಡ್ ಅಂಡ್ ಬ್ರೇಕ್ ಫಾಸ್ಟ್ ಡಾಟ್ ಕಾಮ್ ಎಂಬುದು ಮೂಲ ಹೆಸರು ಎಂದು ವಿಕಿಪೀಡಿಯಾದಲ್ಲಿ ಮಾಹಿತಿ ಇದೆ. ಬ್ರಯಾನ್ ಚೆಸ್ಕಿ ಇದರ ಸಹ–ಸಂಸ್ಥಾಪಕರು.
ಇದನ್ನೂ ಓದಿ: Gold Bond: ಕಡಿಮೆ ಬೆಲೆಗೆ ಸರ್ಕಾರದಿಂದ ಚಿನ್ನ; ಮಾರ್ಚ್ 10ರವರೆಗೆ ಹೂಡಿಕೆ ಅವಕಾಶ
ಕಳೆದ ವರ್ಷ ಏರ್ಬಿಎನ್ಬಿ ಮೊದಲ ಬಾರಿಗೆ ಲಾಭ ತೋರಿಸಿದೆ. ಡಿಸೆಂಬರ್ ಅಂತ್ಯದ ಕೊನೆಯ ತ್ರೈಮಾಸಿಕದಲ್ಲಿ 2 ಬಿಲಿಯನ್ ಡಾಲರ್ನಷ್ಟು ಆದಾಯ ಗಳಿಸಿದೆ. ಅದರಲ್ಲಿ 319 ಮಿಲಿಯನ್ ಡಾಲರ್ನಷ್ಟು ಲಾಭ ಕೂಡ ಬಂದಿದೆಯಂತೆ.
ಎರಡು ಮೂರು ವರ್ಷಗಳ ಹಿಂದೆ ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಜಾಗತಿಕವಾಗಿ ಪ್ರವಾಸ, ಪ್ರಯಾಣಗಳಿಗೆ ನಿರ್ಬಂಧಗಳಿದ್ದುದು ಏರ್ಬಿಎನ್ಬಿ ವ್ಯವಹಾರಕ್ಕೆ ಭಾರೀ ನಷ್ಟವಾಗಿತ್ತು. ಆಗ 1,900 ಉದ್ಯೋಗಿಗಳನ್ನು ಕೆಲಸದಿಂದ ಕಿತ್ತುಹಾಕಲಾಗಿತ್ತು. ಅಂದರೆ ಶೇ. 25ರಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದರು. ಅದು ಆ ಸಂದರ್ಭದ ಅನಿವಾರ್ಯತೆಯೂ ಆಗಿತ್ತು.