ಸ್ಯಾನ್ ಫ್ರಾನ್ಸಿಸ್ಕೊ: ಎಲಾನ್ ಮಸ್ಕ್ (Elon Musk) ಜತೆ ಮಾರಾಟ ಒಪ್ಪಂದದ ಹಿನ್ನೆಲೆಯಲ್ಲಿ ಸಾಮೂಹಿಕ ಉದ್ಯೋಗ ಕಡಿತಕ್ಕೆ (Laying Off) ಚಿಂತನೆ ನಡೆಸಿಲ್ಲ ಎಂದು ಟ್ವಿಟರ್ (Twitter Inc) ಸ್ಪಷ್ಟಪಡಿಸಿದೆ. ಶೇಕಡಾ 75ರಷ್ಟು ಉದ್ಯೋಗಿಗಳ ವಜಾಕ್ಕೆ ಟ್ವಿಟರ್ ಚಿಂತನೆ ನಡೆಸಿದೆ ಎಂಬ ಮಾಧ್ಯಮ ವರದಿಗಳ ಬೆನ್ನಲ್ಲೇ ಕಂಪನಿಯು ಸ್ಪಷ್ಟೀಕರಣ ನೀಡಿದೆ. ಉದ್ಯೋಗ ಕಡಿತದ ಉದ್ದೇಶ ಹೊಂದಿಲ್ಲ ಎಂದು ಟ್ವಿಟರ್ನ ಜನರಲ್ ಕೌನ್ಸೆಲ್ ಸೀನ್ ಎಡ್ಜೆಟ್ ಅವರು ಉದ್ಯೋಗಿಗಳಿಗೆ ಇ-ಮೇಲ್ ಸಂದೇಶ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಮೂಲಕ ಉದ್ಯೋಗಿಗಳ ಆತಂಕವನ್ನು ಟ್ವಿಟರ್ ದೂರ ಮಾಡಿದೆ.
ಟ್ವಿಟರ್ನ ಮಾಲೀಕರಾದರೆ ಶೇಕಡಾ 75ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುವ ಬಗ್ಗೆ ಎಲಾನ್ ಮಸ್ಕ್ ಚಿಂತನೆ ನಡೆಸಿದ್ದಾರೆ ಎಂದು ‘ದಿ ವಾಷಿಂಗ್ಟನ್ ಪೋಸ್ಟ್’ನಲ್ಲಿ ಗುರುವಾರ ವರದಿ ಪ್ರಕಟವಾಗಿತ್ತು. ಮುಂಬರುವ ತಿಂಗಳುಗಳಲ್ಲಿ ಉದ್ಯೋಗ ಕಡಿತ ಪ್ರಕ್ರಿಯೆ ನಡೆಯಲಿದೆ ಎಂದು ವರದಿ ಹೇಳಿತ್ತು.
ಮುಂದಿನ ವರ್ಷದ ಕೊನೆಯ ವೇಳೆಗೆ ವೇತನ ನಿರ್ವಹಣೆ ಮೊತ್ತವನ್ನು 80 ಕೋಟಿ ರೂ.ಗೆ ಸರಿಹೊಂದಿಸಲು ಟ್ವಿಟರ್ ಯೋಜಿಸಿದೆ. ಸುಮಾರು ಕಾಲುಭಾಗದಷ್ಟು ಉದ್ಯೋಗಿಗಳನ್ನು ವಜಾಗೊಳಿಸುವ ಸಾಧ್ಯತೆಯನ್ನು ಇದು ಸೂಚಿಸಿದೆ ಎಂದು ವರದಿ ಉಲ್ಲೇಖಿಸಿತ್ತು. ಈ ಕುರಿತು ‘ರಾಯಿಟರ್ಸ್’ ಸುದ್ದಿಸಂಸ್ಥೆ ಟ್ವಿಟರ್ನ ಪ್ರತಿಕ್ರಿಯೆ ಕೋರಿದೆ. ತಕ್ಷಣಕ್ಕೆ ಯಾವುದೇ ಉತ್ತರ ಬಂದಿಲ್ಲ.
ಇದನ್ನೂ ಓದಿ: Elon Musk: ಎಲಾನ್ ಮಸ್ಕ್ ಮಾಲೀಕರಾದರೆ ಟ್ವಿಟರ್ನ 75% ಉದ್ಯೋಗಿಗಳ ವಜಾ; ವರದಿ
ಉದ್ಯೋಗಿಗಳನ್ನು ಸಾಮೂಹಿಕವಾಗಿ ವಜಾಗೊಳಿಸುವ ಬಗ್ಗೆ ಚಿಂತನೆ ನಡೆಸಿಲ್ಲ ಎಂದು ಟ್ವಿಟರ್ನ ಮಾನವ ಸಂಪನ್ಮೂಲ ವಿಭಾಗವು ಉದ್ಯೋಗಿಗಳಿಗೆ ತಿಳಿಸಿದೆ. ಆದರೆ ಮಸ್ಕ್ ಅವರು ಕಂಪನಿಯನ್ನು ಖರೀದಿಸಲು ಮುಂದಾಗುವ ಮೊದಲು ಸಿಬ್ಬಂದಿಯನ್ನು ಹೊರಹಾಕಲು ಮತ್ತು ಮೂಲಸೌಕರ್ಯ ವೆಚ್ಚವನ್ನು ಕಡಿತಗೊಳಿಸಲು ಅನೇಕ ಯೋಜನೆಗಳನ್ನು ಹಾಕಿಕೊಂಡಿರುವುದು ದಾಖಲೆಗಳಿಂದ ಗೊತ್ತಾಗಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಹೇಳಿತ್ತು.
ಮಾರಾಟ ಒಪ್ಪಂದದ ಹೊರತಾಗಿಯೂ ಟ್ವಿಟರ್ ಉದ್ಯೋಗ ಕಡಿತಕ್ಕೆ ಚಿಂತನೆ ನಡೆಸಿತ್ತು. ಆದರೆ, ಮಸ್ಕ್ ಚಿಂತನೆ ಮಾಡಿರುವ ಪ್ರಮಾಣವು ಟ್ವಿಟರ್ ಯೋಜಿಸಿದ್ದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿದೆ ಎಂದೂ ವರದಿ ಹೇಳಿತ್ತು.
ಇತ್ತೀಚೆಗಷ್ಟೇ ಎಲಾನ್ ಮಸ್ಕ್ ಮತ್ತೊಮ್ಮೆ ಟ್ವಿಟರ್ ಖರೀದಿಗೆ ಪ್ರಸ್ತಾವ ಮುಂದಿಟ್ಟಿದ್ದರು. ಈ ಮೊದಲು ಒಪ್ಪಿಕೊಂಡಿದ್ದ ದರಕ್ಕೇ ಕಂಪನಿಯನ್ನು ಖರೀದಿಸುವುದಾಗಿ ಮಸ್ಕ್ ಸ್ಪಷ್ಟಪಡಿಸಿದ್ದರು. ಇದಕ್ಕೂ ಮುನ್ನ ಟ್ವಿಟರ್ ಮತ್ತು ಮಸ್ಕ್ ನಡುವೆ ಹೇಳಿಕೆ-ಪ್ರತಿ ಹೇಳಿಕೆಗಳ ಸಮರ ನಡೆದಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ