Aadhaar: ಬರಲಿದೆ ಹೊಸ ಆಧಾರ್; ಹೆಸರು, ನಂಬರ್, ವಿಳಾಸ ಮರೆಮಾಚಿರುವ ಕಾರ್ಡ್ ಸದ್ಯದಲ್ಲೇ

New Aadhaar card will have display of only person's photo and QR code: ಆಧಾರ್ ಕಾರ್ಡ್ ಹಾಗೂ ಅದರಲ್ಲಿರುವ ಮಾಹಿತಿಯನ್ನು ದುರುಪಯೋಗಪಡಿಸಿಕೊಳ್ಳುವುದನ್ನು ತಪ್ಪಿಸಲು ಯುಐಡಿಎಐ ಹೊಸ ಯೋಜನೆ ಹಾಕಿದೆ. ವ್ಯಕ್ತಿಯ ಆಧಾರ್ ನಂಬರ್, ಹೆಸರು, ವಿಳಾಸ ಮಾಹಿತಿ ಕಾಣದ, ಹಾಗೂ ಫೋಟೋ ಹಾಗೂ ಕ್ಯುಆರ್ ಕೋಡ್ ಮಾತ್ರ ಕಾಣುವ ಕಾರ್ಡ್ ತರಲಿದೆ. ಡಿಸೆಂಬರ್ ತಿಂಗಳಲ್ಲೇ ಯುಐಡಿಎಐ ಹೊಸ ಆಧಾರ್ ಕಾರ್ಡ್​ಗಳ ವಿತರಣೆ ಆರಂಭಿಸಬಹುದು.

Aadhaar: ಬರಲಿದೆ ಹೊಸ ಆಧಾರ್; ಹೆಸರು, ನಂಬರ್, ವಿಳಾಸ ಮರೆಮಾಚಿರುವ ಕಾರ್ಡ್ ಸದ್ಯದಲ್ಲೇ
ಆಧಾರ್

Updated on: Nov 19, 2025 | 12:53 PM

ನವದೆಹಲಿ, ನವೆಂಬರ್ 19: ಆಧಾರ್ ಕಾರ್ಡ್​ನಲ್ಲಿರುವ ಮಾಹಿತಿಯನ್ನು ದುರುಪಯೋಗಿಸಿಕೊಳ್ಳುವ ಸಾಧ್ಯತೆ ಬಗ್ಗೆ ಸಾಕಷ್ಟು ಕಡೆ ಭೀತಿ ಇದೆ. ಈ ಹಿನ್ನೆಲೆಯಲ್ಲಿ ಆಧಾರ್ ಭದ್ರತೆಯನ್ನು ಹೆಚ್ಚಿಸಲು, ಮತ್ತು ವೈಯಕ್ತಿಕ ಮಾಹಿತಿ ದುರ್ಬಳಕೆಯಾಗಬಹುದು ಎನ್ನುವ ಭಯ ಹೋಗಲಾಡಿಸಲು ಸರ್ಕಾರ ಹೊಸ ಕ್ರಮ ತೆಗೆದುಕೊಳ್ಳುತ್ತಿದೆ. ಆಧಾರ್ ಕಾರ್ಡ್​ನ (Aadhaar card) ಸ್ವರೂಪದಲ್ಲಿ ಬದಲಾವಣೆ ಮಾಡಲು ಯೋಜಿಸಿದೆ. ಸರ್ಕಾರ ಮಾಡಿರುವ ಪ್ರಸ್ತಾಪದ ಪ್ರಕಾರ ಆಧಾರ್ ಕಾರ್ಡ್​ನಲ್ಲಿ ವ್ಯಕ್ತಿಯ ಹೆಸರು, ವಿಳಾಸ ಕಾಣದಂತೆ ಮಾಡಲಾಗುತ್ತದೆ. ಆಧಾರ್ ನಂಬರ್ ಕೂಡ ಕಾರ್ಡ್​ನಲ್ಲಿ ಕಾಣೋದಿಲ್ಲ. ಆ ಕಾರ್ಡ್​ನಲ್ಲಿ ಕೇವಲ ವ್ಯಕ್ತಿಯ ಫೋಟೋ ಮತ್ತು ಕ್ಯುಆರ್ ಕೋಡ್ ಮಾತ್ರ ಕಾಣುವಂತೆ ಇರುತ್ತದೆ. ಇಂಥದ್ದೊಂದು ಕ್ರಮ ಜಾರಿಗೆ ತರಲು ಯುಐಡಿಎಐ ಚಿಂತಿಸಿದೆ.

ಹೆಸರು, ವಿಳಾಸ ಮರೆಮಾಚಿದ ಆಧಾರ್ ಕಾರ್ಡ್​ನಿಂದ ಏನು ಉಪಯೋಗ?

ಆಧಾರ್ ಕಾರ್ಡ್​ನಲ್ಲಿ ಹೆಸರು, ವಿಳಾಸ, ಜನ್ಮದಿನಾಂಕ ವಿವರ ಇರುತ್ತದೆ. ಇದನ್ನು ದುರುಪಯೋಗಪಡಿಸುವ ಅವಕಾಶ ಇಲ್ಲದಿಲ್ಲ. ಇದನ್ನು ತಪ್ಪಿಸಲು ಯುಐಡಿಎಐ ಈ ಪ್ಲಾನ್ ಮಾಡಿದೆ. ವರದಿಗಳ ಪ್ರಕಾರ ಮುಂದಿನ ತಿಂಗಳೇ (ಡಿಸೆಂಬರ್) ಹೊಸ ಆಧಾರ್ ಕಾರ್ಡ್ ವಿತರಣೆ ಕಾರ್ಯ ಶುರುವಾಗಬಹುದು.

ಈ ಹೊಸ ಆಧಾರ್ ಕಾರ್ಡ್ ಜಾರಿ ಬಂದ ಬಳಿಕ ಆಫ್​ಲೈನ್ ಆಧಾರ್ ವರಿಫಿಕೇಶನ್ ಅನ್ನು ತಪ್ಪಿಸಬಹುದು. ಹಲವೆಡೆ ಗುರುತಿನ ದಾಖಲೆಯಾಗಿ ಆಧಾರ್ ಅನ್ನು ಪಡೆಯಲಾಗುತ್ತದೆ. ಇನ್ಮುಂದೆ ಅಂಥದ್ದು ಸಾಧ್ಯವಾಗುವುದಿಲ್ಲ. ಆನ್​ಲೈನ್​ನಲ್ಲೇ ಆಧಾರ್ ವೆರಿಫಿಕೇಶನ್ ಮಾಡಲು ಅವಕಾಶ ಇರುತ್ತದೆ. ಸರ್ಕಾರದಿಂದ ಅನುಮತಿ ಪಡೆದಿರುವ ಸಂಸ್ಥೆಗಳು ಮಾತ್ರವೇ ಆನ್​ಲೈನ್​ನಲ್ಲಿ ಆಧಾರ್ ವೆರಿಫಿಕೇಶನ್ ಮಾಡಬಹುದು. ಹೀಗಾಗಿ, ಹೊಸ ಆಧಾರ್ ಅನ್ನು ದುರ್ಬಳಕೆ ಮಾಡುವ ಸಾಧ್ಯತೆ ಕಡಿಮೆ ಇರುತ್ತದೆ.

ಇದನ್ನೂ ಓದಿ: ಟೆಕ್ ಸಮಿಟ್​ನಲ್ಲಿ ಕರ್ನಾಟಕದ ಕಿಯೋ ಪಿಸಿ ಆಕರ್ಷಣೆ; ಅಗ್ಗದ ಬೆಲೆಗೆ ಎಐ ಕಂಪ್ಯೂಟರ್

ಹೊಸ ಆಧಾರ್ ಕಾರ್ಡ್ ಹೇಗಿರುತ್ತೆ?

ಪ್ರಸ್ತಾಪಿಸಲಾಗಿರುವ ಹೊಸ ಆಧಾರ್ ಕಾರ್ಡ್ ನೋಡಲು ಸರಳವಾಗಿರುತ್ತದೆ. ವ್ಯಕ್ತಿಯ ಫೋಟೋ ಮತ್ತು ಕ್ಯುಆರ್ ಕೋಡ್ ಮಾತ್ರವೇ ಇರುತ್ತದೆ. ಹೆಸರು, ವಿಳಾಸ, ಆಧಾರ್ ನಂಬರ್ ಇವೆಲ್ಲವೂ ಆಧಾರ್ ಡಾಟಾಬೇಸ್​ನಲ್ಲಿ ಇರುತ್ತದೆ. ಮಾನ್ಯತೆ ಪಡೆದ ಸಂಸ್ಥೆಗಳು ಈ ಕ್ಯುಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದರೆ ಡಾಟಾಬೇಸ್​ನಲ್ಲಿರುವ ವ್ಯಕ್ತಿಯ ಎಲ್ಲಾ ಮಾಹಿತಿಯನ್ನು ಪಡೆಯಬಹುದು. ಹೀಗಾಗಿ, ಒಬ್ಬ ವ್ಯಕ್ತಿಯ ಸೂಕ್ಷ್ಮ ಮಾಹಿತಿಯು ಅನಧಿಕೃತ ವ್ಯಕ್ತಿಗಳ ಕೈಗೆ ಸಿಗುವುದು ತಪ್ಪಿದಂತಾಗುತ್ತದೆ.

ಯುಐಡಿಎಐ ಜಾರಿ ತರಲಿರುವ ಈ ಕ್ರಮವು ಆಧಾರ್ ಕಾಯ್ದೆಗೆ ಪೂರಕವಾಗಿದೆ. ಒಬ್ಬ ವ್ಯಕ್ತಿಯ ಆಧಾರ್ ನಂಬರ್, ಬಯೋಮೆಟ್ರಿಕ್ ಡಾಟಾ ಪಡೆಯುವುದು, ಸಂಗ್ರಹಿಸುವುದು ಮಾಡಬಾರದು ಎಂದು ಆಧಾರ್ ಕಾಯ್ದೆ ಹೇಳುತ್ತದೆ. ಹೀಗಾಗಿ, ಕ್ಯೂಆರ್ ಕೋಡ್ ಮತ್ತು ಫೋಟೋ ಮಾತ್ರವೇ ಇರುವ ಆಧಾರ್ ಕಾರ್ಡ್ ಅನ್ನು ತರಲಾಗುತ್ತಿದೆ.

ಇದನ್ನೂ ಓದಿ: ವಾರಕ್ಕೆ 72 ಗಂಟೆ ಕೆಲಸ: ಚೀನಾದ ನಿದರ್ಶನ ನೀಡಿದ ನಾರಾಯಣಮೂರ್ತಿ

ವೆರಿಫಿಕೇಶನ್​ಗೆ ವ್ಯಕ್ತಿಯ ಅನುಮತಿ ಅಗತ್ಯ

ಅಧಾರ್ ವೆರಿಫಿಕೇಶನ್ ಮಾಡುವಾಗ ವ್ಯಕ್ತಿಯ ಅನುಮತಿ ಪಡೆಯುವುದು ಕಡ್ಡಾಯ. ಇಲ್ಲದಿದ್ದರೆ 1 ಕೋಟಿ ರೂವರೆಗೆ ದಂಡ ಕಕ್ಕಬೇಕಾಗಬಹುದು. ಒಟಿಪಿ, ಫಿಂಗರ್ ಪ್ರಿಂಟ್, ಐರಿಸ್ ಸ್ಕ್ಯಾನ್ ಇತ್ಯಾದಿ ವಿಧಾನಗಳಿಂದ ಸಮ್ಮತಿ ಪಡೆದೇ ಆಧಾರ್ ವೆರಿಫಿಕೇಶನ್ ಮಾಡಬೇಕು ಎನ್ನುವ ನಿಯಮ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ