ಕೊನೆಗೂ ಜೀವ ಪಡೆದ ಬ್ರಿಟನ್ ಆರ್ಥಿಕತೆ; ತಾಂತ್ರಿಕ ಹಿನ್ನಡೆಯಿಂದ ಹೊರ ಬಂದ ಯುಕೆ

|

Updated on: May 10, 2024 | 5:12 PM

Britain economy grows by 0.6pc in 2024 Jan-March Quarter: ಬ್ರಿಟನ್ ಆರ್ಥಿಕತೆ 2024ರ ಜನವರಿಯಿಂದ ಮಾರ್ಚ್​ವರೆಗಿನ ಕ್ವಾರ್ಟರ್​ನಲ್ಲಿ ಶೇ. 0.6ರಷ್ಟು ಬೆಳವಣಿಗೆ ದಾಖಲಿಸಿದೆ. 2021ರ ನಾಲ್ಕನೇ ಕ್ವಾರ್ಟರ್ ಬಳಿಕ ತೋರಿದ ಅತಿ ಹೆಚ್ಚಿನ ವೃದ್ಧಿ ಇದು. ಆರ್ಥಿಕ ತಜ್ಞರು ಈ ಜಿಡಿಪಿ ವೃದ್ಧಿ ಆಗಬಹುದು ಎಂದು ನಿರೀಕ್ಷಿಸಿದ್ದರಾದರೂ ಇಷ್ಟು ಹೆಚ್ಚು ಬೆಳೆಯುತ್ತದೆ ಎಂದು ಭಾವಿಸಿರಲಿಲ್ಲ. ನಿರೀಕ್ಷೆಮೀರಿ ಬೆಳವಣಿಗೆ ತೋರಿದೆ. ಸೋಲಿನ ಸಾಧ್ಯತೆಯಲ್ಲಿರುವ ಆಡಳಿತಾರೂಢ ರಿಷಿ ಸುನಕ್ ಅವರ ಕನ್ಸರ್ವೇಟಿವ್ ಪಕ್ಷಕ್ಕೆ ಈ ಜಿಡಿಪಿ ದರ ಒಂದಷ್ಟು ನಿರಾಳತೆ ತರಬಹುದು.

ಕೊನೆಗೂ ಜೀವ ಪಡೆದ ಬ್ರಿಟನ್ ಆರ್ಥಿಕತೆ; ತಾಂತ್ರಿಕ ಹಿನ್ನಡೆಯಿಂದ ಹೊರ ಬಂದ ಯುಕೆ
ಬ್ರಿಟನ್
Follow us on

ಲಂಡನ್, ಮೇ 10: ನೆಗಟಿವ್ ರೇಖೆಯಲ್ಲಿದ್ದ ಬ್ರಿಟನ್ ದೇಶದ ಆರ್ಥಿಕತೆ (Britain economy) ಈ ಕ್ಯಾಲಂಡರ್ ವರ್ಷದ ಮೊದಲ ಕ್ವಾರ್ಟರ್​ನಲ್ಲಿ ಜೀವ ಪಡೆದಿದೆ. ಜನವರಿಯಿಂದ ಮಾರ್ಚ್​ವರೆಗಿನ ಕ್ವಾರ್ಟರ್​ನಲ್ಲಿ ಯುಕೆ ಆರ್ಥಿಕತೆ ಶೇ. 0.6ರಷ್ಟು ಬೆಳೆದಿದೆ. ಹಿಂದಿನ ಕ್ವಾರ್ಟರ್​ಗೆ ಹೋಲಿಸಿದರೆ ಈ ಮಟ್ಟಿಗೆ ಬೆಳವಣಿಗೆ ಆಗಿದೆ. 2021ರ ಕೊನೆಯ ಕ್ವಾರ್ಟರ್ ಬಳಿಕ ಆರ್ಥಿಕತೆ ತೋರಿದ ಅತಿ ಶಕ್ತಿಯುತ ಪ್ರದರ್ಶನ ಇದು. ವಿವಿಧ ಆರ್ಥಿಕ ತಜ್ಞರು ನಿರೀಕ್ಷಿಸಿದ್ದಕ್ಕಿಂತಲೂ ಹೆಚ್ಚಿನ ವೃದ್ಧಿ ಕಂಡಿದೆ. ಶೇ. 0.4ರಷ್ಟು ಬೆಳೆಯಬಹುದು ಎಂಬುದು ಆರ್ಥಿಕ ತಜ್ಞರ ಅಂದಾಜಾಗಿತ್ತು. ಕೋವಿಡ್ ಸಾಂಕ್ರಾಮಿಕ ಬಿಕ್ಕಟ್ಟಿನ ಬಳಿಕ ಬ್ರಿಟನ್ ಆರ್ಥಿಕತೆಯ ಅತಿದೊಡ್ಡ ಕಂಬ್ಯಾಕ್ ಇದಾಗಿದೆ.

ಇದಕ್ಕೆ ಮುನ್ನ ಬ್ರಿಟನ್ ಆರ್ಥಿಕ ತಾಂತ್ರಿಕವಾಗಿ ರಿಸಿಶನ್​ನಲ್ಲಿ ಇತ್ತು. ಸತತ ಎರಡು ಕ್ವಾರ್ಟರ್ ಅವಧಿಗಳಲ್ಲಿ ಆರ್ಥಿಕತೆ ಬೆಳವಣಿಗೆ ತೋರುವ ಬದಲು ಕುಂಠಿತಗೊಂಡಿತ್ತು. ಅಂದರೆ ನೆಗಟಿವ್ ಬೆಳವಣಿಗೆ ಹೊಂದಿತ್ತು. ಇದನ್ನು ತಾಂತ್ರಿಕವಾಗಿ ರಿಸಿಶನ್ ಸ್ಥಿತಿ ಎಂದು ಪರಿಗಣಿಸಲಾಗುತ್ತದೆ. ಕಳೆದ ಒಂದು ವರ್ಷದಲ್ಲಿ ಬ್ರಿಟನ್​ನ ಆರ್ಥಿಕ ಬೆಳವಣಿಗೆ ಹೆಚ್ಚೂಕಡಿಮೆ ಶೂನ್ಯವೇ ಇದೆ.

ಬ್ರಿಟನ್ ಆರ್ಥಿಕ ಹಿನ್ನಡೆಗೆ ಹಲವು ಕಾರಣಗಳನ್ನು ಭಾವಿಸಲಾಗಿದೆ. ಅಧಿಕ ಹಣದುಬ್ಬರ, ಅಧಿಕ ಬಡ್ಡಿದರ ಎರಡು ಪ್ರಮುಖವಾಗಿ ಜಿಡಿಪಿ ವೃದ್ಧಿಗೆ ಅಡ್ಡಿಯಾಗಿವೆ. ಹಣದುಬ್ಬರವನ್ನು ನಿಯಂತ್ರಿಸಲೆಂದು ಬಡ್ಡಿದರ ಹೆಚ್ಚಿಸಿದ್ದು ಆರ್ಥಿಕತೆಯನ್ನು ಮಂದಗೊಳಿಸಿದೆ. ಅದೊಂದು ರೀತಿಯಲ್ಲಿ ಅನಿವಾರ್ಯ ಭೂತ ಇದ್ದಂತೆ. ಈಗ ಹಣದುಬ್ಬರ ಅಥವಾ ಬೆಲೆ ಏರಿಕೆ ಕಡಿಮೆ ಆಗಲಿ ಎಂದು ಬ್ಯಾಂಕ್ ಆಫ್ ಇಂಗ್ಲೆಂಡ್ ಕಾಯುತ್ತಿದೆ. ಈ ಇಳಿಕೆ ಟ್ರೆಂಡ್ ಬಂದು ಬಿಟ್ಟರೆ ಬಡ್ಡಿದರವನ್ನು ಇಳಿಸುವ ಸನ್ನಾಹವಂತೂ ಇದೆ. ಬಡ್ಡಿದರವನ್ನು ಇಳಿಸಿದರೆ ಆರ್ಥಿಕ ಬೆಳವಣಿಗೆ ಇನ್ನಷ್ಟು ಚುರುಕು ಪಡೆಯಬಹುದು.

ಇದನ್ನೂ ಓದಿ: ಏರ್ ಇಂಡಿಯಾ ಎಕ್ಸ್​ಪ್ರೆಸ್ ಕ್ಯಾಬಿನ್ ಸಿಬ್ಬಂದಿಯ ಮುಷ್ಕರ ಅಂತ್ಯ; ಫ್ಲೈಟ್ ಸೇವೆ ಸಹಜ ಸ್ಥಿತಿಗೆ

ಪ್ರಧಾನಿ ರಿಷಿ ಸುನಕ್ ನೇತೃತ್ವದ ಬ್ರಿಟನ್​ನ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ಜನಪ್ರಿಯತೆ ಕುಂದಿರುವ ಕಾಲಘಟ್ಟದಲ್ಲೇ ಈ ಆರ್ಥಿಕ ಬೆಳವಣಿಗೆಯ ಅಂಕಿ ಅಂಶ ಬಂದಿದೆ. ಇದು ಒಂದಷ್ಟು ಜನಾಭಿಪ್ರಾಯ ಬದಲಿಸಬಹುದು ಎಂಬುದು ಪಕ್ಷದ ನಿರೀಕ್ಷೆ. ಈಗ ಚಿಗುರಲು ಆರಂಭವಾಗಿರುವ ಆರ್ಥಿಕತೆ ಚುನಾವಣೆಯ ಹೊಸ್ತಿಲಿಗೆ ಬರುವಷ್ಟರಲ್ಲಿ ಇನ್ನಷ್ಟು ಉತ್ತಮವಾಗಿ ಚೇತರಿಕೆ ಕಂಡರೆ ಎರಡನೇ ಬಾರಿ ಗದ್ದುಗೆ ಪಡೆಯಲು ನೆರವಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ