ಅಕ್ಷಯ ತೃತೀಯ: ಬೆಂಗಳೂರಿನ ಆಭರಣದಂಗಡಿಗಳಲ್ಲಿ ಜನರ ನೂಕುನುಗ್ಗಲು; ರಾಮನ ನಾಣ್ಯ ಟ್ರೆಂಡಿಂಗ್ನಲ್ಲಿ
Bengaluru and Akshaya Tritiya: ಮೇ 10 ಅಕ್ಷಯ ತೃತೀಯ ದಿನವಾದ ಇಂದು ಬೆಂಗಳೂರಿನ ಆಭರಣ ಅಂಗಡಿಗಳ ಬಳಿ ಬೆಳಗ್ಗೆಯಿಂದಲೇ ಜನರು ಸೇರತೊಡಗಿದ್ದಾರೆ. ಚಿನ್ನದ ನಾಣ್ಯದ ಜೊತೆಗೆ ಈ ಬಾರಿ ಚಿನ್ನದ ಒಡವೆ ಖರೀದಿಗೆ ಬೇಡಿಕೆ ಹೆಚ್ಚಿದೆ. ಕಡಿಮೆ ಬಜೆಟ್ ಹೊಂದಿರುವವರು ಬೆಳ್ಳಿ ಖರೀದಿಸುತ್ತಿದ್ದಾರೆ. ವಜ್ರಾಭರಣ ಮತ್ತು ಪ್ಲಾಟಿನಂ ಆಭರಣಗಳೂ ಇವತ್ತು ಹೆಚ್ಚು ಮಾರಾಟ ಕಾಣುತ್ತವೆ.
ಬೆಂಗಳೂರು, ಮೇ 10: ಇವತ್ತು ಅಕ್ಷಯ ತೃತೀಯ (Akshaya Tritiya) ದಿನವಾಗಿದ್ದು ಚಿನ್ನ ಖರೀದಿಸುವುದು ಶುಭವೆಂದು ಭಾವಿಸಲಾಗಿದೆ. ಬೆಳಗ್ಗೆ 6:57ಕ್ಕೆ ಅಕ್ಷಯ ತೃತೀಯ ಶುಭ ಮುಹೂರ್ತ ಆರಂಭವಾಗಿದೆ. ಬೆಂಗಳೂರಿನಲ್ಲಿ ಆಭರಣ ಅಂಗಡಿಗಳಲ್ಲಿ ಬೆಳಗ್ಗೆಯಿಂದಲೇ ಜನರು ಸೇರುತ್ತಿದ್ದಾರೆ. ಬಸವನಗುಡಿಯಲ್ಲಿರುವ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ನಲ್ಲಿ ಹಬ್ಬದ ವಾತಾವರಣವೇ ಕಳೆಗಟ್ಟಿದೆ. ಹಲವು ಆಫರ್ಗಳನ್ನು ಇಲ್ಲಿ ನೀಡಲಾಗುತ್ತಿದೆ. ಸಾಯಿ ಗೋಲ್ಡ್ ಪ್ಯಾಲೇಸ್ ಮಾತ್ರವಲ್ಲ, ಹೆಚ್ಚಿನ ಒಡವೆ ಅಂಗಡಿಗಳಲ್ಲಿ ಅಕ್ಷಯ ತೃತೀಯ ದಿನವಾದ ಇಂದು ಡಿಸ್ಕೌಂಟ್ನಲ್ಲಿ ಚಿನ್ನ ಮಾರಲಾಗುತ್ತಿದೆ.
ಇದೇ ವೇಳೆ ಹಲವು ಆಭರಣ ಅಂಗಡಿಗಳು ಅಯೋಧ್ಯೆಯ ಬಾಲರಾಮನ ಚಿತ್ರ ಇರುವ ಚಿನ್ನ ಮತ್ತು ಬೆಳ್ಳಿ ನಾಣ್ಯಗಳನ್ನು ಮಾರುತ್ತಿವೆ. ಈ ನಾಣ್ಯಗಳಿಗೆ ಬೇಡಿಕೆ ಇದೆ. ಅಕ್ಷಯ ತೃತೀಯ ದಿನಕ್ಕಾಗಿ ಬುಧವಾರದಿಂದಲೇ ಬಹಳಷ್ಟು ಗ್ರಾಹಕರು ಆಭರಣ ಬುಕಿಂಗ್ ನಡೆಸಿದ್ದಾರೆ. ಈ ಶನಿವಾರ ಮತ್ತು ಭಾನುವಾರವೂ ಚಿನ್ನ, ಬೆಳ್ಳಿ ಖರೀದಿಯ ಭರಾಟೆ ಮುಂದುವರಿಯಬಹುದು ಎಂದು ಆಭರಣದಂಗಡಿ ಮಾಲೀಕರು ನಿರೀಕ್ಷಿಸುತ್ತಿದ್ದಾರೆ.
ಇದನ್ನೂ ಓದಿ: ಅಕ್ಷಯ ತೃತೀಯ ದಿನದಂದು ಚಿನ್ನವಲ್ಲದೇ ಈ ನಾಲ್ಕು ವಸ್ತುಗಳೂ ಕೂಡ ಶುಭಕರ; ಸಾಧ್ಯವಾದರೆ ಇವತ್ತೇ ಖರೀದಿಸಿ
‘ಅಕ್ಷಯ ತೃತೀಯ ದಿನದಂದು ಸಾಂಕೇತಿಕವಾಗಿ ಎಂಬಂತೆ ಚಿನ್ನದ ನಾಣ್ಯಗಳನ್ನು ಖರೀದಿಸುವ ಪರಿಪಾಟ ಇದೆ. ಆದರೆ ಈ ವರ್ಷ ಸಾಕಷ್ಟು ಜನರು ಚಿನ್ನದ ಒಡವೆಗಳನ್ನು ಖರೀದಿಸುತ್ತಿದ್ದಾರೆ,’ ಎಂದು ವಿಜಯನಗರದ ಶ್ರೀ ರಾಮ್ ಜ್ಯುವೆಲ್ಸ್ ಅಂಗಡಿಯರು ಹೇಳುತ್ತಾರೆ.
ಈ ಅಕ್ಷಯ ತೃತೀಯ ದಿನದಂದು ಚಿನ್ನ ಮಾತ್ರವಲ್ಲದೆ ಬೆಳ್ಳಿ, ವಜ್ರ, ಪ್ಲಾಟಿನಂ ವಸ್ತುಗಳಿಗೂ ಬೇಡಿಕೆ ಇದೆ. ಈ ದಿನದಂದು ಚಿನ್ನಾಭರಣದಷ್ಟೇ ಬೆಲೆ ಹೊಂದಿರುವ ವಜ್ರಾಭರಣವು ಗ್ರಾಹಕರಿಗೆ ಆಕರ್ಷಣೆ ಆಗಿದೆ. ಪ್ಲಾಟಿನಂ ಆಭರಣದ ಖರೀದಿಯೂ ಹೆಚ್ಚುತ್ತಿದೆಯಂತೆ.
ಇದನ್ನೂ ಓದಿ: ಭೌತಿಕ ಚಿನ್ನವಾ, ಬಾಂಡ್ಗಳಾ? ಅಕ್ಷಯ ತೃತೀಯ ದಿನದಂದು ಬಂಗಾರದಂಥ ತೀರ್ಮಾನ ಕೈಗೊಳ್ಳಿ
ಇವತ್ತು ಬೆಂಗಳೂರಿನಲ್ಲಿ 22 ಕ್ಯಾರಟ್ನ ಆಭರಣ ಚಿನ್ನದ ಬೆಲೆ ಗ್ರಾಮ್ಗೆ 6,700 ರೂ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ ಗ್ರಾಮ್ಗೆ 7,300 ರೂ ಇದೆ. ಬೆಳ್ಳಿ ಬೆಲೆ ಗ್ರಾಮ್ಗೆ 84.75 ರೂ ಇದೆ. ಪ್ಲಾಟಿನಂ ಬೆಲೆ ಬೆಂಗಳೂರಿನಲ್ಲಿ ಗ್ರಾಮ್ಗೆ 2,640 ರೂ ಆಗಿದೆ. ವಜ್ರದ ಬೆಲೆ ಪ್ರತೀ ಕ್ಯಾರಟ್ಗೆ 67,000 ರೂನಿಂದ 1.12 ಲಕ್ಷ ರೂವರೆಗೂ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ