ರಿಯಲ್ ಎಸ್ಟೇಟ್ ಮತ್ತು ತ್ಯಾಜ್ಯ ನಿರ್ವಹಣೆ ಉದ್ಯಮದಲ್ಲಿ ತೊಡಗಿರುವ ಹೈದ್ರಾಬಾದ್ ಮೂಲದ ಕಂಪೆನಿಯೊಂದರ ಮೇಲೆ ಆದಾಯ ತೆರಿಗೆ ಇಲಾಖೆಯು ದಾಳಿ ನಡೆಸಿದ ನಂತರ ಲೆಕ್ಕಕ್ಕೆ ನೀಡದ 300 ಕೋಟಿ ರೂಪಾಯಿ ಆದಾಯವನ್ನು ಪತ್ತೆ ಮಾಡಲಾಗಿದೆ ಎಂದು ಕೇಂದ್ರ ನೇರ ತೆರಿಗೆ ಮಂಡಳಿ ಶುಕ್ರವಾರ ತಿಳಿಸಿದೆ. ಜುಲೈ 6ರಂದು ಶೋಧ ಕಾರ್ಯಾಚರಣೆ ನಡೆದಿದ್ದು, “ಶೋಧ ಮತ್ತು ವಶಪಡಿಸಿಕೊಳ್ಳುವ ಕಾರ್ಯಾಚರಣೆಯ ಪರಿಣಾಮವಾಗಿ, ಮತ್ತು ವಿವಿಧ ದೋಷಾರೋಪ ದಾಖಲೆಗಳ ಆಧಾರದ ಮೇಲೆ ಸಂಸ್ಥೆಗಳು ಮತ್ತು ಸಹವರ್ತಿ ಸಂಸ್ಥೆಗಳು ಲೆಕ್ಕಕ್ಕೆ ನೀಡದ ಆದಾಯ 300 ಕೋಟಿ ರೂಪಾಯಿ ಇರುವುದಾಗಿ ಒಪ್ಪಿಕೊಂಡಿವೆ. ಜತೆಗೆ ಸರಿಯಾದ ತೆರಿಗೆ ಪಾವತಿಸಲು ಸಹ ಒಪ್ಪಿದ್ದಾರೆ,” ಎಂದು ಸಿಬಿಡಿಟಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ತೆರಿಗೆ ಇಲಾಖೆಯ ನೀತಿಯನ್ನು ರೂಪಿಸುತ್ತದೆ. ಅಂದಹಾಗೆ ಗುಂಪು ಯಾವುದು ಎಂಬುದನ್ನು ಗುರುತನ್ನು ಬಿಟ್ಟುಕೊಟ್ಟಿಲ್ಲ. ಆದರೆ ಅದು ರಿಯಲ್ ಎಸ್ಟೇಟ್, ನಿರ್ಮಾಣ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯ ಕ್ಷೇತ್ರದಲ್ಲಿ ತೊಡಗಿದೆ ಎಂದು ಹೇಳಲಾಗಿದೆ.
ತ್ಯಾಜ್ಯ ನಿರ್ವಹಣೆಯ ಚಟುವಟಿಕೆಗಳು ಭಾರತದಾದ್ಯಂತ ಹರಡಿವೆ. ಆದರೆ ರಿಯಲ್ ಎಸ್ಟೇಟ್ ಚಟುವಟಿಕೆಗಳು ಮುಖ್ಯವಾಗಿ ಹೈದ್ರಾಬಾದ್‌ನಲ್ಲಿ ಕೇಂದ್ರೀಕೃತವಾಗಿವೆ ಎಂದು ಸಿಬಿಡಿಟಿ ತಿಳಿಸಿದೆ. ಸಂಸ್ಥೆ ವಿರುದ್ಧ ತೆರಿಗೆ ವಂಚನೆ ಆರೋಪವನ್ನು ವಿವರಿಸಿದ ಸಿಬಿಡಿಟಿ, “ಈ ಗುಂಪು ಬಹು ಪಾಲನ್ನು ಸಿಂಗಾಪುರ ಮೂಲದ ಅನಿವಾಸಿ ಘಟಕಕ್ಕೆ ಮಾರಾಟ ಮಾಡಿದೆ ಎಂದು ಕಂಡುಬಂದಿದೆ. 2018-19ರ ಆರ್ಥಿಕ ವರ್ಷದಲ್ಲಿ ಅದರ ಒಂದು ಗುಂಪಿಗೆ ಸಂಬಂಧಿಸಿದಂತೆ ದೊಡ್ಡ ಬಂಡವಾಳ ಲಾಭಗಳನ್ನು (ಕ್ಯಾಪಿಟಲ್ ಗೇಯ್ನ್ಸ್) ಗಳಿಸಿದೆ. ಈ ಗುಂಪು ತರುವಾಯ ಷೇರು ಖರೀದಿ, ಮಾರಾಟ, ತನ್ನ ಕೈ ಅಳತೆಯನ್ನೂ ಮೀರಿದ ಚಂದಾದಾರಿಕೆ ಮತ್ತು ಬೋನಸ್ ವಿತರಣೆ ಇತ್ಯಾದಿಗಳ ಸರಣಿ ವ್ಯವಹಾರ ನಡೆಸಿದೆ. ಆ ನಂತರ ತಾವು ಗಳಿಸಿದ ಬಂಡವಾಳ ಲಾಭಗಳಿಗೆ ವಿರುದ್ಧವಾಗಿ ನಷ್ಟವನ್ನು ಸೃಷ್ಟಿಸಿದೆ,” ಎಂದು ಸಿಬಿಡಿಟಿ ಆರೋಪಿಸಿದೆ.
ದಾಳಿಯ ಸಮಯದಲ್ಲಿ ದೋಷಾರೋಪಕ್ಕೆ ಪೂರಕವಾದ ಸಾಕ್ಷ್ಯಗಳು ಮತ್ತು ದಾಖಲೆಗಳನ್ನು ಪಡೆಯಲಾಗಿದೆ ಎಂದು ಸಿಬಿಡಿಟಿ ಹೇಳಿಕೊಂಡಿದ್ದು, ಇದು ಆಯಾ ಬಂಡವಾಳ ಲಾಭಗಳನ್ನು ಹೊಂದಾಣಿಕೆ ಮಾಡುವ ಸಲುವಾಗಿ ನಷ್ಟವನ್ನು “ಕೃತಕವಾಗಿ ಸೃಷ್ಟಿಸಲಾಗಿದೆ” ಎಂದು ಸೂಚಿಸುತ್ತದೆ. “ಶೋಧ ಕಾರ್ಯಾಚರಣೆಯು ಸುಮಾರು 1,200 ಕೋಟಿ ರೂಪಾಯಿಗಳಷ್ಟು ಕೃತಕ ನಷ್ಟವನ್ನು ಪತ್ತೆಹಚ್ಚಲು ಕಾರಣವಾಯಿತು. ಅವುಗಳಿಗೆ ಆಯಾ ಮೌಲ್ಯಮಾಪಕರಿಂದ ತೆರಿಗೆ ವಿಧಿಸಲಾಗುವುದು,” ಎಂದು ಹೇಳಿಕೆಯಲ್ಲಿ ತಿಳಿಸಿದೆ. ಸಂಬಂಧಿತರ ವಹಿವಾಟಿನ ಕಾರಣದಿಂದಾಗಿ ಮೌಲ್ಯಮಾಪಕನು 288 ಕೋಟಿಗಳಷ್ಟು ಬ್ಯಾಡ್ ಡೆಟ್ಸ್ ಅನ್ನು ತಪ್ಪಾಗಿ ಹೇಳಿಕೊಂಡಿದ್ದಾನೆ ಎಂದು ತಿಳಿದುಬಂದಿದೆ, ಇದು ಮೇಲೆ ತಿಳಿಸಿದ ಲಾಭದ ವಿರುದ್ಧ ಹೊಂದಿಸಲು ಹೀಗೆ ಮಾಡಲಾಗಿದೆ ಎಂದು ಸಿಬಿಡಿಟಿ ಸೇರಿಸಿದೆ.”ಹುಡುಕಾಟದ ಸಮಯದಲ್ಲಿ ಗುಂಪಿನ ಸಹವರ್ತಿ ಸಂಸ್ಥೆಗಳ ಲೆಕ್ಕಕ್ಕೆ ತೋರಿಸದ ನಗದು ವಹಿವಾಟುಗಳು ಸಹ ಪತ್ತೆಯಾಗಿವೆ ಮತ್ತು ಅದರ ಪ್ರಮಾಣ ಹಾಗೂ ಲೆಕ್ಕ ತಪ್ಪಿಸಲು ಅನುಸರಿಸಿದ ಕ್ರಮಗಳ ಪರೀಕ್ಷೆ ನಡೆಯುತ್ತಿದೆ,” ಎಂದು ಹೇಳಲಾಗಿದೆ.
ಇದನ್ನೂ ಓದಿ: ಯಾವುದೇ ಠೇವಣಿ ಮೇಲೆ ಎಷ್ಟೇ ಬಡ್ಡಿ ಬರಲಿ ಮಾಹಿತಿ ನೀಡುವಂತೆ ಆದಾಯ ತೆರಿಗೆ ಇಲಾಖೆಯಿಂದ ಬ್ಯಾಂಕ್ಗಳಿಗೆ ಸುತ್ತೋಲೆ
( Unaccounted Rs 300 crore found in IT raid on Hyderabad based company. Here is the details)
Published On - 9:22 pm, Fri, 9 July 21